• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರು : ಮರೆತೇನೆಂದರೆ ಮರೆಯಲಿ ಹ್ಯಾಂಗ?

By * ಅಂಜಲಿ ರಾಮಣ್ಣ, ಬೆಂಗಳೂರು
|

ದಸರೆಯಲ್ಲಿ ಪ್ರತೀ ಬಾರಿಯೂ ಯುಗಾದಿಯಂತೆ ಕಂಗೊಳಿಸುವ ಮೈಸೂರಿಗೆ ಹೋಗಿಬನ್ನಿ ಎಂದು ನಿಮಗೆ ಹೇಳಲು ನನ್ನ 'ಜ್ಞಾಪಕ ಚಿತ್ರ ಶಾಲೆ"ಯ ದರ್ಶನ ಮಾಡಿಕೊಡುತ್ತಿದ್ದೇನೆ! ನೀವು ನನ್ನೂರಿಗೆ ಹಿಂದೆಯೂ ಅನೇಕ ಬಾರಿ ಹೋಗಿರುವಿರಿ, ಆದರೆ ಈ ಬಾರಿ ಹೋದಾಗ ಮೈಸೂರಿಗೆ ಹೇಳಿ; ನೀವು ನನ್ನ ಹಳೆಯ ಕೊಂಡಿಗಳ ಹೊಸಲಿಂಕ್‌ ಎಂದು!

ಆತ್ಮ ಈ ದೇಹವನ್ನು ಸೇರಿಕೊಂಡಾದ ನಂತರ ನಾನು ನೋಡಿದ ಮೊದಲ ಭೂಮಿ ಮೈಸೂರು. ಸಂಸ್ಕಾರ ಕೊಟ್ಟ ಅಪ್ಪನನ್ನು, ವ್ಯಕ್ತಿತ್ವ ಕೊಟ್ಟ ಅಮ್ಮನನ್ನು ನೀಡಿದ್ದು ಮೈಸೂರು. ಯೋಚನೆ ಇಲ್ಲದೆ ನನ್ನನ್ನು ಆಲೋಚನೆಗೆ ಹಚ್ಚಿದ್ದು ಮೈಸೂರು. ಚಿಂತೆ ಇರಬಾರದ ಅಚಿಂತ್ಯ ಚಿಂತನೆಗೆ ನನ್ನನ್ನು ಒಡ್ಡಿಕೊಳ್ಳುವಂತೆ ಮಾಡಿದ್ದು ಮೈಸೂರು.

ಮೊದಲ ಅಳು, ಮೊದಲ ನಗು, ಮೊದಲ ಸ್ಪರ್ಶ, ಮೊದಲ ಮಮತೆ, ಮೊದಲ ಪ್ರೀತಿ, ಮೊದಲ ನಡಿಗೆ, ಮೊದಲ ಪ್ರೇಮ, ಮೊದಲ ವಿರಹ ವೇದನೆ, ಮೊದಲ ಮೈ ಬಿಸಿಯ ಕಲ್ಪನೆ ಹೀಗೆ ನನ್ನೆಲ್ಲಾ ಮೊದಲುಗಳಿಗೆ ಮೊದಲು ಮೈಸೂರು. ಪ್ರಪಂಚದ ನಾನಾ ಮುಖಗಳನ್ನು ಪರಿಚಯಮಾಡಿಕೊಳ್ಳುವಂತೆ ನನ್ನನ್ನು ಪ್ರೇರೇಪಿಸಿದ್ದು ಮೈಸೂರು. ಈಗಲೂ ಎಷ್ಟೆಲ್ಲಾ ಅಲ್ಲೇ ಇದ್ದೇನೆ ನಾನು... ನನ್ನನ್ನು ನನ್ನತನವನ್ನು ಅಷ್ಟಿಷ್ಟು ಅಲ್ಲಿಯೇ ಬಿಟ್ಟುಬಂದಿದ್ದೇನೆ ಅನ್ನಿಸುತ್ತಲೇ ಇರುತ್ತದೆ...

ಒಟ್ಟು ಕುಟುಂಬದಲ್ಲಿದ್ದರೂ ಬೇರೆ ಮಕ್ಕಳಿಗೆ ಕಾಣದಂತೆ ತಾತ ಕಾಗದದ ಚೂರಿನಲ್ಲಿ ಮುಚ್ಚಿಟ್ಟುಕೊಂಡು ತಂದು ಮೆಲ್ಲನೆ ಗುಟ್ಟಾಗಿ ನನ್ನೊಬ್ಬಳನ್ನೇ 'ಪುಟಾಂಜಲಿ" ಎಂದು ಕರೆದು ತಿನ್ನಿಸುತ್ತಿದ್ದ ಓಂ ಬಿಸ್ಕತ್ತುಗಳ ಚೂರುಗಳನ್ನು ಅಲ್ಲೆ ಮರೆತುಬಂದಿದ್ದೇನೆಯೆ? ಬೆತ್ತದ ಕುರ್ಚಿಯ ತುಂಬಾ ಹತ್ತಿ ಮೂಟೆಯಂತೆ ಕುಳಿತಿರುತ್ತಿದ್ದ ಅಜ್ಜಿಯ ಎದೆಯ ಮೇಲೆ ಧೊಪ್ಪೆಂದು ಹತ್ತಿ ನಿದ್ದೆಗೆ ಜಾರುತ್ತಿದ್ದ ನನ್ನ ನಿದ್ರೆಯನ್ನೇ ಅಲ್ಲಿ ಬಿಟ್ಟು ಬಂದಿದ್ದೇನಾ... ಹೇಳಿದ ಟೈಂಗೆ ಪಾಠ ಓದದೇ, ಊಟ ಮಾಡದೆ ತುಂಟಾಟ ಮಾಡುತ್ತಿದ್ದಾಗ ಬೈಯುತ್ತಿದ್ದ ಅಮ್ಮನ ಬೈಗುಳದ echo ಇನ್ನೂ ನನ್ನ ಕಿವಿಯಲ್ಲೇ ಇದೆಯಾ? ಒಂದು ದಿನವೂ ಬೈಯ್ಯದೆ, ನನ್ನೆಲ್ಲ ಪುಂಡಾಟಗಳಿಗೆ 'ಕರೀಲಾ ನಿಮ್ಮ ಅಮ್ಮನ್ನಾ?' ಎನ್ನುತ್ತಿದ್ದ ಅಪ್ಪನ ಮೃದುತ್ವ ಇನ್ನೂ ಫೀಲ್‌ ಮಾಡಿಕೊಳ್ಳುತ್ತಿದ್ದೇನೆ ಅಲ್ಲ್ವಾ...

ಹೊಸ ಬಳೆಗಳನ್ನು ಮಾಡುತ್ತೇನೆ ಎಂದು ರಸ್ತೆಯಲ್ಲಿ ಬಿದ್ದಿರುತ್ತಿದ ಗಾಜಿನ ಬಳೆಗಳ ಚೂರುಗಳ ಸಣ್ಣದೊಂದು ಗುಡ್ಡೆಯನ್ನು ನನ್ನ ಮನೆಯ ಮೂಲೆಯಲ್ಲೇ ಇಟ್ಟು ಬಂದ್ದಿದ್ದೇನೆ... ಪುಷ್ಪಳ ಜೊತೆ ಸೈಕಲ್‌ ಕಲಿಯುವಾಗ ತರಚಿದ ಮಂಡಿಗಾಯ ಹಸಿಯಾಗಿ ಇನ್ನು ಹಾಗೆ ಅಲ್ಲಿಯೇ ಉಳಿದಿದೆ... ಪುಟ್ಟಣ್ಣ್ನನ ಮನೆಯ ದನದ ಕೊಟ್ಟಿಗೆಯಲ್ಲಿ ಹೊಸ ಕರುಗಳೊಂದಿಗೆ ಆಡಲು ಹೋದಾಗ ಮೈಗೆ ಅಂಟಿಕೊಂಡ ಸಗಣಿಯ ಘಮ ಎಷ್ಟು ಸ್ನಾನ ಮಾಡಿದರೂ ಇನ್ನು ಹೋಗುತ್ತಿಲ್ಲ...

ಬಾಲಿ, ಗಣೇಶಿಯೊಡನೆ ಆಡಿದ ಬುಗುರಿಯಾಟ ಇನ್ನೂ ನನ್ನ ಸುತ್ತಲೂ ಬುಗುರಿಯಂತೆ ಸುತ್ತುತ್ತಲೇ ಇದೆ.... ನನ್ನನ್ನು ಗುಂಡಮ್ಮ ಎಂತಲೇ ಕರೆಯುತ್ತಿದ್ದ ಆ ಪೆದ್ದ ದಿನೇಶ ಈಗ ಎಲ್ಲಿಹೋದನೋ? ಎದುರುಮನೆ ಟೀನೇಜರ್‌ ವಾಣಿ ಅವಳ ಜೊತೆಗೆ ಯಾರು ಇಲ್ಲ ಎಂದು, ನನಗೆ ಚಾಕಲೇಟು ತಿನ್ನುವ ವಯಸ್ಸು, ಅಲ್ಲಲ್ಲಾ ಮನಸ್ಸು ಇದ್ದಾಗ, ಇಜಾಜತ್‌, ಘರ್‌, ಸಾಗರ ಸಂಗಮಗಳಂತಹ ಸಿನೆಮ ತೋರಿಸಿ ನನ್ನನ್ನು ಸೆನ್ಸಿಟೀವ್‌ ಆಗಿ ಮಾಡಿದ ಒಂದು ಕೊಂಡಿಯನ್ನು ಅಲ್ಲೇ ಬಿಟ್ಟು ಬಂದಿದ್ದೇನೆ...

ಸ್ಟೇಜ್‌ ಮೇಲೆ ಹತ್ತಿ ಬಹುಮಾನಗಳನ್ನು ಗಿಟ್ಟಿಸುವಾಗ ಬೀಳುತ್ತಿದ್ದ ಚಪ್ಪಾಳೆಗಳ ಸದ್ದು ಇನ್ನೂ nostalgic ಆಗಿ ನನ್ನನ್ನು ಕಾಡಿತ್ತಿದೆ. ನಾಟಕಗಳ ರಿಹರ್ಸಲ್ಗೆ ಹೋಗಿ ರಾತ್ರಿ ಎರಡಾದರೂ ಬಿಡದೆ ಕೂಡಿಡುತ್ತಿದ್ದ ಬಿ.ವಿ.ಕಾರಂತರ ಕಮಿಟ್‌ಮೆಂಟ್‌ ಅಲ್ಲಿಯೇ ಉಳಿದುಕೊಂಡಿರಬೇಕು... ಅಷ್ಟು ರಾತ್ರಿಯಲ್ಲೂ, ಆ ಗುಂಪಿನಲ್ಲೂ ನನ್ನ ಕೇರ್‌ ತೆಗೆದುಕೊಳ್ಳುತ್ತಿದ್ದ ಅಮರಕಲಾ ಸಂಘದ ವಾಸು ಸರ್‌ರ ಕಾಳಜಿಯ ಸ್ವಲ್ಪ ಭಾಗ ಇನ್ನೂ ಅವರಲ್ಲಿಯೇ ಇಟ್ಟು ಬಂದಿದ್ದೇನೆ...

ಕಂಬಾರರ ಜೈಸಿದ ನಾಯ್ಕದಲ್ಲಿ ನನ್ನನ್ನು ನೋಡಿದ ಕುರ್ತುಕೋಟಿ 'ನೀನು ಧಾರವಾಡದವಳೇನು?' ಎಂದು ಕೇಳಿದ್ದು ನಾನು ಮೈಸೂರಿನವಳಾಗಿ ಅಲ್ಲಿಯೇ ಬಿಟ್ಟು ಬಂದಿದ್ದೇನೆ... ವೈಸ್‌ ಛಾನ್ಸಲರ್‌ ಮಾದಪ್ಪ A great lawyer in making ಎಂದದ್ದು ನಾನ್ಯಾಕೆ ಮರೆತುಬಿಟ್ಟೆ? Human Chain ಮಾಡಿದ್ದಾಗ ನನ್ನ ಕೈ ಹಿಡಿದುಕೊಂಡಿದ್ದ ಸಲೀಂ ಕೊನೆಯಲ್ಲಿ 'ನಿನ್ನ ಕೈ ಬಿಡಲೇಬಾರದೆಂದೆನಿಸುತ್ತಿದೆ' ಎಂದಾಗ ಎಲ್ಲರೆದುರು kiddish ಎಂದು ಅವಮಾನ ಮಾಡಿಬಿಟ್ಟೆನಲ್ಲಾ, ಏಕೆ ಹಾಗೆ ಮಾಡಿದೆ ಎಂದು ಈಗಲೂ ನನ್ನನ್ನು ಕಾಡುವ ಪ್ರಶ್ನೆಗೆ ಉತ್ತರವನ್ನು ಅಲ್ಲಿಯೇ ಹುಡುಕುತ್ತಿದ್ದೇನೆ...

ಮದುವೆಯಾಗಿ ಆ ಮನೆಯ ಕೊಂಡಿಯನ್ನು ಈ ಮನೆಯ ಲಿಂಕ್‌ ಮಾಡಲು ಬಂದಾಗ ಅಪ್ಪ ಬಿಕ್ಕಳಿಸಿದ ಧ್ವನಿ ಈ ನೀರವತೆಯಲ್ಲಿ ಇನ್ನೂ ಪ್ರತಿಧ್ವನಿಸುತ್ತಿದೆ... ಅಮ್ಮ ಮುಸುಮುಸು ಅಳುತ್ತಿದ್ದಳಲ್ಲ, ಅವಳ ಕಣ್ಣೀರ ಹನಿಯ ಶಾಖ ಇನ್ನೂ ಆರಿರಲಾರದು... ನನ್ನ ಚೊಚ್ಚಲ ಸೀಮಂತದ ಹೊಸತನ ಅಲ್ಲಿ ಹೊಸದಾಗೇ ಉಳಿದು ಬಿಟ್ಟಿದೆ... ಓಹ್‌, ನನ್ನ ಕಂದ ಮೊದಲು ನೋಡಿದ ಭೂಮಿ ಮೈಸೂರು, ಅದೂ ಅಲ್ಲಿಯೇ ಇದೆ....

ಹೀಗೆ ನನ್ನನ್ನು ನನ್ನತನವನ್ನೂ ಬರವಣಿಗೆಯಲ್ಲಿ ಲಿಮಿಟ್‌ ಮಾಡಿಕೊಳ್ಳಲಾರದೆ, ತನ್ನ ಮಣ್ಣಿನಲ್ಲಿ ಬೇರಾಗಿಸಿಕೊಂಡ ಮೈಸೂರು, ಗಾಳಿಯಲ್ಲಿ ಗಂಧವಾಗಿಸಿಕೊಂಡ ಮೈಸೂರು, ಕಾವೇರಿಯಲ್ಲಿ ನೀರಾಗಿಸಿಕೊಂಡ ಮೈಸೂರು... ಮೈಸೂರಿನ ದಸರಾ...

ದಸರೆಯಲ್ಲಿ ಪ್ರತೀ ಬಾರಿಯೂ ಯುಗಾದಿಯಂತೆ ಕಂಗೊಳಿಸುವ ಮೈಸೂರಿಗೆ ಹೋಗಿಬನ್ನಿ ಎಂದು ನಿಮಗೆ ಹೇಳಲು ನನ್ನ 'ಜ್ಞಾಪಕ ಚಿತ್ರ ಶಾಲೆ' ಯ ದರ್ಶನ ಮಾಡಿಕೊಟ್ಟೆ! ನೀವು ನನ್ನೂರಿಗೆ ಹಿಂದೆಯೂ ಅನೇಕ ಬಾರಿ ಹೋಗಿರುತ್ತೀರ, ಆದರೆ ಈ ಬಾರಿ ಹೋದಾಗ ಮೈಸೂರಿಗೆ ಹೇಳಿ ನೀವು ನನ್ನ ಹಳೆಯ ಕೊಂಡಿಗಳ ಹೊಸಲಿಂಕ್‌ ಎಂದು!!!

ಹೊಸದಾಗಿ ಮದುವೆಯಾಗಿದ್ದ ಅಕ್ಕ-ಭಾವನ ಜೊತೆಯಲ್ಲಿ ಕಾರಂಜೀ ಕೆರೆಯ ಹೂದೋಟದಲ್ಲಿ ಫೋಟೊಗೆ ನಾನು ಕೊಟ್ಟ ಪೋಸ್‌ಗಳು, ಅರಮನೆಯ ದೀಪ ಝಗ್‌ ಎಂದು ಹತ್ತಿದೊಡನೆ ನೆರೆದಿದ್ದ ಜನರಿಂದ ಹೊರಡುವ ಉದ್ಗಾರದಲ್ಲಿನ 'ಓಂ"ಕಾರದ ಅಂಚು, ಕೆಆರೆಸ್‌ನ ಬಣ್ಣದ ಕಾರಂಜಿಯ ಪಕ್ಕದಲ್ಲಿ ನಿಂತಾಗ ಹಿತವೆನಿಸುವ ತುಂತುರು ನೀರಿನ ಸ್ಪರ್ಶ, ವಸ್ತುಪ್ರದರ್ಶನದ ಮಳಿಗೆಗಳಲ್ಲಿ ಸುತ್ತೀ ಸುತ್ತೀ ಮಾಡಿದ ಷಾಪ್ಪಿಂಗ್‌ ನಂತರ ಕಾಲುನೋವೆಂದು ಕಟ್ಟೆಯ ಮೇಲೆ ಕುಳಿತುಕೊಂಡಾಗ ಅಲ್ಲೇ ಪಕ್ಕದ ಅಂಗಡಿಯಲ್ಲಿ ಒಂದು ಕಾಟನ್‌ ಕ್ಯಾಂಡಿ... ಹಿಂತಿರುಗಿ ಬರುವಾಗ ಶ್ರೀರಂಗನಾಥನ ಪಾದ ಧೂಳು, ನಿಮಿಷಾಂಬಳ ಅಭಯ... ನನಗಾಗಿ ಹೆಚ್ಚಿನದೇನೂ ಬೇಡ ಇಷ್ಟು ತನ್ನಿ ಸಾಕು.

ಆ ಹೋಟೆಲ್ಲಿನ ದೋಸೆಗೆ ಎಣ್ಣೆ ಜಾಸ್ತಿ, ಸ್ವೀಟ್‌ ಮಾರ್ಟ್ನ ಮೈಸೂರುಪಾಕು ಹಳತಾಯ್ತು, ಈ ಬಾರಿ ನನ್ನ ಅಮ್ಮನ ಕೈನ ಬಿಸಿಬೇಳೆ ಬಾತ್‌ ಸವಿದುಬನ್ನಿ. ಈರುಳ್ಳಿ ಗೊಜ್ಜಿನ ರುಚಿ ನೋಡಿ ಬನ್ನಿ. ನಿಮಗಾಗಿ ಅಕ್ಕಿ ಹಪ್ಪಳ ಮಾಡಲು ಅಮ್ಮನಿಗೆ ಹೇಳಿರುತ್ತೇನೆ! ನನ್ನ ಅಪ್ಪನ ಒಳ್ಳೆಯತನಕ್ಕೆ ಮರುಳಾಗಿಬನ್ನಿ. ಅವರ ವ್ಯವಹಾರ ಚತುರತೆಗೆ Hats off! ಎಂದು ಬನ್ನಿ.

ಮೈಸೂರಿಗೆ... ನನ್ನೂರಿಗೆ ಖಂಡಿತಾ ಹೋಗಿಬನ್ನಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Anjali Ramanna, Bangalore, recalls her childhood and shares sweet memories in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more