ನಾಡಹಬ್ಬ ದಸರಾಕ್ಕೆ ಸಂಭ್ರಮದ ತೆರೆ ; ಮರುಕಳಿಸಿದ ವೈಭವ
ಮುಂದಿನ ವರ್ಷ ದಸರಾ ಮತ್ತಷ್ಟು ಅದ್ದೂರಿ -ಕೃಷ್ಣ
ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಯಶಸ್ವಿಯಾಗಿ ನೆರವೇರುವುದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಕಳೆಗುಂದಿದ್ದ ದಸರಾ ಉತ್ಸವ ಮತ್ತೆ ಗರಿ ಕಟ್ಟಿಕೊಂಡಿತು.
ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ, ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಹೊತ್ತು ಮೈಸೂರಿನ ರಾಜ ಬೀದಿಗಳಲ್ಲಿ ಠೀವಿಯಿಂದ ನಡೆದ ಗಜರಾಜ ಬಲರಾಮನನ್ನು ಕಣ್ತುಂಬಿಕೊಂಡರು. ಇದಕ್ಕೂ ಮುನ್ನ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರು ಭಾನುವಾರ ಮಧ್ಯಾಹ್ನ 3.15ರ ಸುಮಾರಿಗೆ ಅಂಬಾರಿಯಲ್ಲಿ ಅಲಂಕೃತಳಾಗಿದ್ದ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಜಂಬೂ ಸವಾರಿಗೆ ಚಾಲನೆ ನೀಡಿದರು.
ನವರಾತ್ರಿ ಆರಂಭವಾದಾಗಿನಿಂದಲೂ ರಾಜ್ಯದ ವಿವಿಧೆಡೆಗಳಲ್ಲಿ ಉತ್ತಮ ಮಳೆ ಬೀಳುತ್ತಿದೆ. ತಾಯಿ ಚಾಮುಂಡೇಶ್ವರಿ ನಾಡನ್ನು ಬರ ಪರಿಸ್ಥಿತಿಯಿಂದ ಪಾರು ಮಾಡಲಿ ಎಂದು ಮುಖ್ಯಮಂತ್ರಿ ಕೃಷ್ಣ ಪ್ರಾರ್ಥಿಸಿದರು.
ಜಂಬೂ ಸವಾರಿಯ ಮುಖ್ಯಾಂಶಗಳು :
- ನಿರೀಕ್ಷೆಗೂ ಮೀರಿದ ಜನ ಸಂದಣಿಯಿಂದಾಗಿ ಮೈಸೂರು ದಸರಾದ ಹಳೆಯ ವೈಭವ ಮರುಕಳಿಸಿತು.
- ಇದೇ ಮೊದಲ ಬಾರಿಗೆ ಜಂಬೂ ಸವಾರಿ ಉತ್ಸವ ಸಾಗುವ ದಾರಿಯಲ್ಲಿ ಕೆಲವೆಡೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು .
- ಅಸರ್ಮಪಕ ಆಸನ ವ್ಯವಸ್ಥೆಯಿಂದಾಗಿ ಆಹ್ವಾನಿತರು ಹಾಗೂ ಗಣ್ಯರು ಕುಳಿತುಕೊಳ್ಳಲು ತೊಂದರೆಯುಂಟಾಯಿತು. ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ತಮ್ಮ ಆಸನದಿಂದ ಎದ್ದುಬಂದು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.
- ಚಿತ್ರನಟ ಪುನೀತ್ ರಾಜ್‌ಕುಮಾರ್ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಘಟನೆಯಿಂದಾಗಿ, ಪತ್ರಕರ್ತರು ಕೆಲಕಾಲ ಧರಣಿ ನಡೆಸಿದರು. ಪತ್ರಕರ್ತರನ್ನು ಸಮಾಧಾನಗೊಳಿಸಲು ಮುಖ್ಯಮಂತ್ರಿ ಕೃಷ್ಣ ಮಧ್ಯ ಪ್ರವೇಶಿಸಬೇಕಾಯಿತು.
- ಮೆರವಣಿಗೆ ಆರಂಭಗೊಂಡ ಕೆಲಕ್ಷಣಗಳಲ್ಲೆ ಮಂತ್ರಾಕ್ಷತೆಯ ರೂಪದಲ್ಲಿ ಬಿದ್ದ ಮಳೆಯ ತುಂತುರು ಜನತೆಯ ಹರ್ಷಕ್ಕೆ ಕಾರಣವಾಯಿತು.
- ನಾಡಿನ ಪರಂಪರೆ ಹಾಗೂ ಸಂಸ್ಕೃತಿಯನ್ನು ಸಾರುವ ಸ್ತಬ್ಧಚಿತ್ರಗಳು ನೋಡುಗರ ಗಮನ ಸೆಳೆದವು. ಒನಕೆ ಓಬವ್ವ , ಗುಬ್ಬಿವೀರಣ್ಣ , ನೇಗಿಲಯೋಗಿ, ರೈತರ ಜೀವನಾಡಿ ಕಾವೇರಿ, ಪುಣ್ಯಕೋಟಿ, ಗೊರವರ ಕುಣಿತ, ಟಿಪ್ಪು ಬೇಸಿಗೆ ಅರಮನೆ ಮುಂತಾದ ಸ್ತಬ್ಧಚಿತ್ರಗಳ ಜೊತೆಗೆ- ಅಕ್ಷರ ದಾಸೋಹ ಹಾಗೂ ಸ್ತ್ರೀಶಕ್ತಿಯಂಥ ಸ್ತಬ್ಧಚಿತ್ರಗಳು ವರ್ತಮಾನಕ್ಕೆ ಸ್ಪಂದಿಸುವಂತಿದ್ದವು. ಉಪೇಂದ್ರ, ರವಿಚಂದ್ರನ್, ಅನು ಪ್ರಭಾಕರ್, ಸುಂದರ್‌ರಾಜ್, ಪ್ರಮೀಳಾ ಜೋಷಾಯ್, ಶ್ರೀರಕ್ಷಾ ಮುಂತಾದ ಚಲನಚಿತ್ರ ನಟನಟಿಯರು ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications