256 ವರ್ಷಗಳ ಹಿಂದಿನ ದುರ್ಗಾ ದೇವಿ ವಿಗ್ರಹ: ಮಾಸದ ಹೊಳಪು; ಕಾರಣ ಗೊತ್ತೇ?
ಶಕ್ತಿ ಸ್ವರೂಪ ಮಾತೆ ದುರ್ಗೆಯ ಒಂಬತ್ತು ದಿನಗಳ ಆರಾಧನೆ ಆರಂಭವಾಗಿದೆ. ಪ್ರತಿದಿನ ಮಾತೆಯ ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ಕೆಲವೆಡೆ ವಿವಿಧ ಕಾರ್ಯಕ್ರಮಗಳು, ದಾಂಡಿಯಾ ಆಯೋಜಿಸುವ ಮೂಲಕ ಹಬ್ಬ ಆಚರಣೆ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಾತೆ ದುರ್ಗೆಗೆ ಸಂಬಂಧಿಸಿದ ಕುತೂಹಲಕಾರಿ ಸುದ್ದಿಗಳೂ ಲಭ್ಯವಾಗಿವೆ.
ಇಂತಹ ಒಂದು ಕುತೂಹಲಕಾರಿ ಸುದ್ದಿ ಏನೆಂದರೆ, ಇನ್ನೂರೈವತ್ತು ವರ್ಷಗಳ ಹಿಂದೆ ಜೇಡಿಮಣ್ಣಿನಿಂದ ಮಾಡಿದ ದುರ್ಗೆಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದ್ದು, ಅದರ ಹೊಳಪು ಇಂದಿಗೂ ಮಾಸದೆ ಹಾಗೆಯೇ ಉಳಿದುಕೊಂಡಿದೆ. ಇದು ಜನರನ್ನು ಬೆರಗುಗೊಳಿಸಿದೆ. ಹಾಗಾದರೆ ಈ ಮೂರ್ತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಈ ಪ್ರತಿಮೆ ಎಲ್ಲಿದೆ?
ಶಿವನ ನಗರವಾದ ಕಾಶಿ ಪ್ರಪಂಚದ ಅತ್ಯಂತ ಹಳೆಯ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಉತ್ತರ ಪ್ರದೇಶದ ಕಾಶಿಯನ್ನು ಮೊದಲು ಬನಾರಸ್ ಎಂದು ಕರೆಯಲಾಗುತ್ತಿತ್ತು. ಪುರಾಣ ದುರ್ಗ ಬರಿ ಎಂಬ ಸ್ಥಳದಲ್ಲಿ ಇನ್ನೂರೈವತ್ತು ವರ್ಷಗಳ ಹಿಂದೆ ಸ್ಥಾಪಿಸಲಾದ ಮಾತಾ ದುರ್ಗೆಯ ಜನಪ್ರಿಯ ವಿಗ್ರಹವಿದೆ.
ಈ ವಿಗ್ರಹದ ವಿಶೇಷತೆ ಏನೆಂದರೆ ಇಷ್ಟ ವರ್ಷಗಳು ಕಳೆದರು ಈ ವಿಗ್ರಹದ ಹೊಳಪು ಮಾತ್ರ ಮಾಸಿಲ್ಲ. ಜೇಡಿಮಣ್ಣು ಮತ್ತು ಒಣಹುಲ್ಲಿನಿಂದ ವಿಗ್ರಹವನ್ನು ಮಾಡಲಾಗಿದ್ದರೂ ಇನ್ನೂರೈವತ್ತು ವರ್ಷಗಳ ನಂತರವೂ ವಿಗ್ರಹವು ಹಾಗೆಯೇ ಇದೆ. ವಿಶೇಷವಾಗಿ ನವರಾತ್ರಿಯ ಸಮಯದಲ್ಲಿ ಇಲ್ಲಿ ಅಪಾರ ಸಂಖ್ಯೆಯ ಭಕ್ತರು, ಮಾತೃದೇವತೆಯ ದರ್ಶನ ಪಡೆಯಲು ಬರುತ್ತಾರೆ.
ಪ್ರತಿಮೆ ಯಾವಾಗ ಸ್ಥಾಪಿಸಲಾಯಿತು?
ಈ ಪ್ರತಿಮೆಯನ್ನು 1767 ರಲ್ಲಿ ಸ್ಥಾಪಿಸಲಾಯಿತು. ಕಥೆಯ ಪ್ರಕಾರ ತಾಯಿಯೇ ಈ ಸ್ಥಾನವನ್ನು ತೊರೆಯಲು ಬಯಸಿರಲಿಲ್ಲ ಎಂದು ಹೇಳಲಾಗುತ್ತದೆ. ತಾಯಿಗೆ ಶಿವನ ನಗರವಾದ ಕಾಶಿಯನ್ನು ಬಿಡಲು ಮನಸ್ಸಾಗುತ್ತಿಲ್ಲ. ಹೀಗಾಗಿ ಇಲ್ಲಿ ನೆಲೆಸಿದಳು ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಈವರೆಗೂ ಪ್ರತಿಮೆ ಗಟ್ಟಿಯಾಗಿದೆ ಎಮದು ಹೇಳಲಾಗುತ್ತದೆ.
ಮಣ್ಣಿನ ಸವಕಳಿ ತಡೆಯಲು ಯಾವುದೇ ರಾಸಾಯನಿಕ ಲೇಪನ ಮಾಡಿಲ್ಲ ಎಂಬುದು ಅತ್ಯಂತ ಅಚ್ಚರಿಯ ಸಂಗತಿ. ಆದರೂ ಇಲ್ಲಿಯವರೆಗೂ ಮಣ್ಣಿನ ಸವಕಳಿಯಾಗಿಲ್ಲ. ಈ ಅದ್ಭುತ ಕಲೆಯನ್ನು ನೋಡಲು ದೂರದೂರುಗಳಿಂದ ಜನ ಬರುತ್ತಿದ್ದಾರೆ.
ಈ ಪ್ರತಿಮೆಯನ್ನು ಯಾರು ಸ್ಥಾಪಿಸಿದರು?
ಈ ಪ್ರತಿಮೆಯನ್ನು ಮುಖರ್ಜಿ ಕುಟುಂಬದವರು ಸ್ಥಾಪಿಸಿದ್ದಾರೆ. ಪ್ರತಿಮೆಯನ್ನು ನಿಮಜ್ಜನಕ್ಕೆ ಎತ್ತುವ ಪ್ರಯತ್ನ ನಡೆಸಿದಾಗ ಅದು ಸ್ಥಳದಿಂದ ಕದಲಲಿಲ್ಲ. ಇದಾದ ಬಳಿಕ ಕೆಲವರಿಂದ ಸಹಾಯ ಪಡೆದರೂ ತಾಯಿ ಸ್ಥಳದಿಂದ ಕದಲಲಿಲ್ಲ. ಆಗ ಮುಖರ್ಜಿ ಕುಟುಂಬದ ಯಜಮಾನನ ಕನಸಿನಲ್ಲಿ ಮಾತೃದೇವತೆಯೇ ಕಾಣಿಸಿಕೊಂಡಳು ಮತ್ತು ಅವನ ಸೇವೆಯಿಂದ ನಾನು ತುಂಬಾ ಸಂತೋಷಪಟ್ಟಿದ್ದೇನೆ. ಹೀಗಾಗಿ ಇಲ್ಲಿಯೇ ಇರಲು ಬಯಸುತ್ತೇನೆ ಎಂದು ಹೇಳಿದಳಂತೆ. ಹೀಗಾಗಿ ಈ ದೇವಿಯನ್ನು ಇಲ್ಲಿ ಪೂಜಿಸುವುದನ್ನು ಮುಂದುವರೆಸಿಕೊಂಡು ಬರಲಾಗಿದೆ. ಪ್ರತಿ ವರ್ಷ ಪೂಜೆಯ ವೇಳೆ ದೂರದೂರುಗಳಿಂದ ಇಲ್ಲಿಗೆ ಬಂದು ದುರ್ಗೆಯ ದರ್ಶನ ಪಡೆಯುತ್ತಾರೆ.
(ಗಮನಿಸಿ: ಈ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ತಜ್ಞರ ಸಲಹೆಯನ್ನು ಪಡೆಯಿರಿ)












Click it and Unblock the Notifications