Year End Special 2024: ಈ ವರ್ಷ ಝೊಮ್ಯಾಟೊದಲ್ಲಿ 9,13,99,110 ಬಿರಿಯಾನಿ ಆರ್ಡರ್
2024ನೇ ವರ್ಷ ಮುಗಿಯುತ್ತಾ ಬಂದಿದೆ. ಸ್ವಿಗ್ಗಿ, ಝೊಮ್ಯಾಟೊ ಸೇರಿದಂತೆ ವಿವಿಧ ಅಪ್ಲಿಕೇಶನ್ ಆಧಾರಿತ ಆಹಾರ ಡೆಲಿವರಿ ನೀಡುವ ಕಂಪನಿಗಳು ವಾರ್ಷಿಕ ವರದಿ ಬಿಡುಗಡೆ ಮಾಡಿವೆ. ಈ ವರ್ಷವೂ ಸಹ ಝೊಮ್ಯಾಟೊದಲ್ಲಿ ಅತಿ ಹೆಚ್ಚು ಆರ್ಡರ್ ಮಾಡಲಾದ ಖಾದ್ಯ ಬಿರಿಯಾನಿ. ಕಳೆದ ವರ್ಷವೂ ಬಿರಿಯಾನಿ ಝೊಮ್ಯಾಟೊದ ಅತಿ ಹೆಚ್ಚು ಆರ್ಡರ್ ಮಾಡಲಾದ ಖಾದ್ಯದಲ್ಲಿ ಮೊದಲ ಸ್ಥಾನವನ್ನು ಪಡೆದಿತ್ತು.
ಭಾರತದಲ್ಲಿ ಬಿರಿಯಾನಿಗೆ ಅಪಾರ ಅಭಿಮಾನಿಗಳಿದ್ದಾರೆ ಎಂಬುದು ಈ ವರ್ಷ ಮತ್ತೊಮ್ಮೆ ಸಾಬೀತಾಗಿದೆ. ಝೊಮ್ಯಾಟೊ ವರದಿಗಳ ಪ್ರಕಾರ ಈ ವರ್ಷ ಅದು 9,13,99,110 ಪ್ಲೇಟ್ ಬಿರಿಯಾನಿಯನ್ನು ಮನೆ ಮನೆಗೆ ತಲುಪಿದೆ. ಅಂದರೆ ಪ್ರತಿ ಸೆಕೆಂಡ್‌ಗೆ ಮೂರಕ್ಕಿಂತ ಹೆಚ್ಚು ಬಿರಿಯಾನಿ ಆರ್ಡರ್ ಮಾಡಲಾಗಿದೆ. ಅಲ್ಲದೇ ಸ್ವಿಗ್ಗಿಯಲ್ಲಿ ಕೂಡಾ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯ ಸಹ ಬಿರಿಯಾನಿ.

2ನೇ ಸ್ಥಾನದಲ್ಲಿ ಪಿಜ್ಜಾ: ಝೊಮ್ಯಾಟೊದಲ್ಲಿ ಆರ್ಡರ್ ಮಾಡಲಾದ ಖಾದ್ಯದಲ್ಲಿ 2ನೇ ಸ್ಥಾನದಲ್ಲಿ ಪಿಜ್ಜಾ ಇದೆ. ಈ ವರ್ಷ 5,84,46,908 ವಿವಿಧ ಮಾದರಿಯ ಪಿಜ್ಜಾಗಳನ್ನು ಮನೆ ಮನೆಗೆ ತಲುಪಿಸಲಾಗಿದೆ.
ಭಾರತದಲ್ಲಿ ಕಾಫಿ ಮತ್ತು ಟೀಗಳಿಗೆ ಅವುಗಳದ್ದೇ ಆದ ಫ್ಯಾನ್ ಬೇಸ್ ಇದೆ. ಝೊಮ್ಯಾಟೊದಲ್ಲಿ ಅತಿ ಹೆಚ್ಚು ಆರ್ಡರ್ ಮಾಡಲಾದ ಪಾನೀಯಗಳಲ್ಲಿ ಕಾಫಿ ಮತ್ತು ಟೀ ಮೊದಲೆರಡು ಸ್ಥಾನದಲ್ಲಿವೆ. ಈ ವರ್ಷ 77,76,725 ಕಪ್ ಟೀ ಮತ್ತು 74,32,856 ಕಪ್ ಕಾಫಿಯನ್ನು ಆರ್ಡರ್ ಮಾಡಲಾಗಿದೆ.
5 ಲಕ್ಷ ವ್ಯಯಿಸಿದ ಬೆಂಗಳೂರು ವ್ಯಕ್ತಿ: ಝೊಮ್ಯಾಟೊದ ವರದಿಯಲ್ಲಿ ಆಸಕ್ತಿಕರ ಅಂಶವೊಂದಿದೆ. ಉದ್ಯಾನ ನಗರಿ ಬೆಂಗಳೂರಿನ ವ್ಯಕ್ತಿಯೊಬ್ಬರು ಒಂದು ಹೊತ್ತಿನ ಊಟವನ್ನು ಝೊಮ್ಯಾಟೊದಲ್ಲಿ 5 ಲಕ್ಷ ರೂ. ವ್ಯಯಿಸಿ ಆರ್ಡರ್ ಮಾಡಿದ್ದಾರೆ. ಈ ಊಟವನ್ನು ಅವರು ಒಂದೇ ರೆಸ್ಟೋರೆಂಟ್‌ನಿಂದ ಆರ್ಡರ್ ಮಾಡಿದ್ದಾರೆ ಎಂದು ವರದಿ ಹೇಳಿದೆ.
ಝೊಮ್ಯಾಟೊದ ವರದಿ ಪ್ರಕಾರ ಈ ವರ್ಷ ಅತಿ ಹೆಚ್ಚು ಆರ್ಡರ್ ಸ್ವೀಕಾರವಾಗಿರುವುದು ದೆಹಲಿಯಲ್ಲಿ. ನಂತರದ ಸ್ಥಾನದಲ್ಲಿ ಬೆಂಗಳೂರು, ಮುಂಬೈ ಇದೆ. ಝೊಮ್ಯಾಟೊ ಮೂಲಕ ಜನವರಿ 1 ರಿಂದ ಡಿಸೆಂಬರ್ 6ರ ತನಕ 1 ಕೋಟಿ ಟೇಬಲ್‌ಗಳನ್ನು ಬುಕ್ ಮಾಡಲಾಗಿದೆ.
ಅಪ್ಪಂದಿರ ದಿನದಂದು 84,866 ಜನರು ಝೊಮ್ಯಾಟೊ ಮೂಲಕ ಟೇಬಲ್ ಬುಕ್ ಮಾಡಿಕೊಂಡು ತಂದೆಯನ್ನು ಹೊರಗೆ ಊಟಕ್ಕೆ ಕರೆದುಕೊಂಡು ಹೋಗಿದ್ದಾರೆ.
2024ರ ಮಾರ್ಚ್‌ನಲ್ಲಿ ಸಸ್ಯಾಹಾರಿಗಳು ಸುಲಭವಾಗಿ ತಮ್ಮ ನೆಚ್ಚಿನ ಹೋಟೆಲ್, ರೆಸ್ಟೋರೆಂಟ್ ಗುರುತಿಸಲು ಅನುಕೂಲವಾಗುವಂತೆ ಝೊಮ್ಯಾಟೊ ಪ್ಯೂರ್ ವೆಜ್ ಎಂಬ ಆಯ್ಕೆಯನ್ನು ಪರಿಚಯಿಸಿತು. ಅಪ್ಲಿಕೇಶನ್‌ನಲ್ಲಿ ಈ ಆಯ್ಕೆಯನ್ನು ಎನೇಬಲ್ ಮಾಡಿಕೊಂಡಲ್ಲಿ ಗ್ರಾಹಕರಿಗೆ ಕೇವಲ ವೆಜ್ ಹೋಟೆಲ್‌ಗಳ ಪಟ್ಟಿಯನ್ನು ಮಾತ್ರ ಕಾಣುವಂತೆ ವ್ಯವಸ್ಥೆ ಮಾಡಲಾಗಿದೆ.
ಈ ವಿಶೇಷ ವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ದಿನ ಚರ್ಚೆಗಳು ಜೋರಾಗಿತ್ತು. ಸಸ್ಯಹಾರಿಗಳನ್ನು ಟ್ರೋಲ್ ಮಾಡಲಾಗುತ್ತಿತ್ತು. ಬಳಿಕ ಜನರು ಸಹ ಈ ಆಯ್ಕೆಗೆ ಹೊಂದಿಕೊಂಡಿದ್ದು, ಚರ್ಚೆಗಳು ತಣ್ಣಗಾಗಿವೆ.












Click it and Unblock the Notifications