Year End Special 2024: ಈ ವರ್ಷ ಭಾರತದಲ್ಲಿ ನಡೆದ ರೈಲು ಅಪಘಾತಗಳು
2024ನೇ ವರ್ಷದಲ್ಲಿ ಜನರಿಗೆ ಸಿಹಿ-ಕಹಿ ಎರಡರ ಅನುಭವವೂ ಆಗಿದೆ. ಈ ವರ್ಷ ಹಲವು ನೆನಪಿನಲ್ಲಿಟ್ಟುಕೊಳ್ಳುವ ಸಂಭ್ರಮದ ಘಟನೆಗಳು ನಡೆದಿವೆ. ಹೀಗಾಯಿತಲ್ಲ ಎಂದು ಸಂಕಟ ಪಡುವ, ಚಿಂತೆಗೆ ಕಾರಣವಾದ ಘಟನೆಗಳು ದೇಶದಲ್ಲಿ ಆಗಿ ಹೋಗಿವೆ. ಭಾರತೀಯ ರೈಲ್ವೆ ದೇಶದ ಜನರ ಜೀವನಾಡಿ. ಪ್ರತಿನಿತ್ಯ ಕೋಟ್ಯಾಂತರ ಜನರು ರೈಲಿನಲ್ಲಿ ಸಂಚಾರ ನಡೆಸುತ್ತಾರೆ. ಸುರಕ್ಷಿ, ಐಷಾರಾಮಿ ಸಂಚಾರ ವ್ಯವಸ್ಥೆಗೆ ಭಾರತೀಯ ರೈಲ್ವೆ ಪ್ರಸಿದ್ಧಿಯನ್ನು ಪಡೆದಿದೆ. ಈ ವರ್ಷ ಹಲವು ರೈಲು ಅಪಘಾತಗಳು ನಡೆದಿದ್ದು, ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ.
ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸತ್ ಕಲಾಪದಲ್ಲಿ ನೀಡಿದ ಮಾಹಿತಿಯಂತೆ ನವೆಂಬರ್ 26ರ ತನಕ ಈ ವರ್ಷ 29 ರೈಲು ಅಪಘಾತಗಳು ನಡೆದಿವೆ. ಇವುಗಳಲ್ಲಿ ರೈಲು ಹಳಿ ತಪ್ಪಿರುವುದು, ಪರಸ್ಪರ ಡಿಕ್ಕಿಯಾಗಿರುವುದು ಎಲ್ಲವೂ ಸೇರಿವೆ. 17 ಪ್ರಯಾಣಿಕರು ಜೀವ ಕಳೆದುಕೊಂಡಿದ್ದು, 71 ಜನರು ಗಾಯಗೊಂಡಿದ್ದಾರೆ. ಈ ಅಪಘಾತಗಳಿಗೆ ತಾಂತ್ರಿಕ ಸೇರಿದಂತೆ ವಿವಿಧ ಕಾರಣಗಳು ಸಹ ಇವೆ. ಈ ವರ್ಷ ನಡೆದ ಪ್ರಮುಖ ರೈಲು ಅಪಘಾತಗಳ ಮಾಹಿತಿ ಇಲ್ಲಿದೆ.

ಈ ವರ್ಷದ ಮಾರ್ಚ್ 18ರಂದು ರಾಜಸ್ಥಾನದಲ್ಲಿ ರೈಲು ಅಪಘಾತವೊಂದು ನಡೆಯಿತು. ಅಜ್ಮೀರ್ ಜಿಲ್ಲೆಯ ಮದರ್ ರೈಲು ನಿಲ್ದಾಣದ ಬಳಿ 4 ಸಾಮಾನ್ಯ ಬೋಗಿಗಳು ಮತ್ತು ಸಾಬರಮತಿ-ಆಗ್ರಾ ಸೂಪರ್‌ಫಾಸ್ಟ್ ರೈಲಿನ ಇಂಜಿನ್ ಹಳಿತಪ್ಪಿತು. ಅದೃಷ್ಟವಷಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳಾಗಿಲ್ಲ. ಕೆಂಪು ಸಿಗ್ನಲ್ ಅನ್ನು ಸರಿಯಾಗಿ ಗಮನಿಸದೇ ಇರುವುದು ಘಟನೆಗೆ ಕಾರಣ ಎಂದು ತನಿಖೆಯ ಬಳಿಕ ತಿಳಿಯಿತು.
ಜೂನ್ 17ರಂದು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಅಪಘಾತ ನಡೆಯಿತು. ಈ ಅಪಘಾತದಲ್ಲಿ 10 ಜನರು ಮೃತಪಟ್ಟರು ಮತ್ತು 41 ಜನರು ಗಾಯಗೊಂಡರು. ರೈಲ್ವೆ ಸುರಕ್ಷತಾ ಆಯುಕ್ತರ ತಂಡ ನಡೆಸಿದ ತನಿಖೆಯಲ್ಲಿ ಸಿಗ್ನಲಿಂಗ್ ದೋಷದ ಕಾರಣ ಅಪಘಾತ ಸಂಭವಿಸಿತು ಎಂದು ತಿಳಿದುಬಂದಿತು. ಸ್ವಯಂ ಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಕೈ ಕೊಟ್ಟ ಪರಿಣಾಮ ಈ ಅಪಘಾತವಾಯಿತು.
ಜುಲೈ 18ರಂದು ಉತ್ತರ ಪ್ರದೇಶ ರಾಜ್ಯದ ಗೊಂಡಾ ಜಿಲ್ಲೆಯಲ್ಲಿ ಚಂಡೀಗಢ- ದಿಬ್ರೂಗಢ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿತು. ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 4. ಗಾಯಗೊಂಡವರ ಸಂಖ್ಯೆ 31. ಈ ಅಪಘಾತದಿಂದ ಹಲವಾರು ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಬೇಕಾಯಿತು. ರೈಲು ಹಳಿಗಳನ್ನು ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತಗೊಳಿಸುವ ತನಕ ಹಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿತ್ತು.
ಜುಲೈ 30ರಂದು ಜಾಖಂಡ್ ರಾಜ್ಯದ ಸೆರೈಕೆಲಾ-ಖಾರ್ಸಾವಾನ್ ಜಿಲ್ಲೆಯಲ್ಲಿ ಮುಂಬೈ-ಹೌರಾ ಮೇಲ್ ರೈಲಿನ 18 ಬೋಗಿಗಳು ಹಳಿತಪ್ಪಿದವು. ಈ ಅಪಘಾತದ ಪರಿಣಾಮ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದರು ಮತ್ತು 20 ಮಂದಿ ಗಾಯಗೊಂಡರು. ಗೂಡ್ಸ್ ರೈಲಿನ ಪ್ರಯಾಣಿಕರ ರೈಲು ಡಿಕ್ಕಿಯಾದ ಪರಿಣಾಮ ಉಳಿದ ಬೋಗಿಗಳು ಹಳಿ ತಪ್ಪಿದ್ದವು.
ಅಕ್ಟೋಬರ್ 11ರಂದು ತಮಿಳುನಾಡು ರಾಜ್ಯದ ಕವರೈಪೆಟ್ಟೆ ರೈಲು ನಿಲ್ದಾಣದಲ್ಲಿ ಮೈಸೂರು -ದರ್ಭಾಂಗ ಬಾಗ್‌ಮತಿ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೀಡಾಯಿತು. ಸುಮಾರು 1,360 ಪ್ರಯಾಣಿಕರಿದ್ದ ರೈಲು 75 ಕಿ. ಮೀ. ವೇಗದಲ್ಲಿ ಸಾಗುವಾಗ ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿಯಾಗಿತ್ತು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ 19 ಮಂದಿ ಗಾಯಗೊಂಡರು. ಈ ಅಪಘಾತದ ಪರಿಣಾಮ ಹಳಿ ಸರಿಯಾಗುವ ತನಕ ಬೆಂಗಳೂರು ನಗರದಿಂದ ಹೊರಡುವ ಹಲವು ರೈಲುಗಳ ಸಂಚಾರ ರದ್ದಾಗಿ, ಪ್ರಯಾಣಿಕರು ನಿಲ್ದಾಣದಲ್ಲಿಯೇ ಕಾಲ ಕಳೆಯ ಬೇಕಾಯಿತು.
ರೈಲು ಅಪಘಾತಗಳ ಹೊರತಾಗಿಯೂ ರೈಲು ಹಳಿ ತಪ್ಪಿಸುವ 24 ಪ್ರಕರಣಗಳು ಈ ವರ್ಷ ಪತ್ತೆಯಾದವು. ಹಳಿಗಳ ಮೇಲೆ ಸಿಲಿಂಡರ್, ಸಿಮೆಂಟ್ ಬ್ಯಾಗ್, ಸೈಕಲ್ ನಿಲ್ಲಿಸಿ ರೈಲು ಹಳಿತಪ್ಪಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಲೋಕೋ ಪೈಲೆಟ್‌ಗಳ ಸಮಯ ಪ್ರಜ್ಞೆಯಿಂದಾಗಿ ಈ ಪ್ರಯತ್ನಗಳನ್ನು ವಿಫಲಗೊಳಿಸಲಾಯಿತು.
ಭಾರತೀಯ ರೈಲ್ವೆ ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ರೈಲು ಅಪಘಾತಗಳನ್ನು ತಪ್ಪಿಸಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಬಜೆಟ್ ಜೊತೆ ರೈಲ್ವೆ ಬಜೆಟ್ ವಿಲೀನವಾಗಿರುವ ಕಾರಣ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ಪ್ರತ್ಯೇಕವಾದ ಅನುದಾನವನ್ನು ಮೀಸಲಾಗಿಡಲಾಗುತ್ತಿದೆ.












Click it and Unblock the Notifications