ಹಿನ್ನೋಟ; ಸುಯೆಜ್ ಕಾಲುವೆಯಲ್ಲಿ ಸಿಲುಕಿ ತಲ್ಲಣಗೊಳಿಸಿದ ಹಡಗು
2021ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಹಲವು ಘಟನೆಗಳು ಜಾಗತಿಕವಾಗಿ ತಲ್ಲಣ ಮೂಡಿಸಿದವು. ವಿಶ್ವದ ಪ್ರಮುಖ ವ್ಯಾಪಾರಿ ಮಾರ್ಗವಾದ ಈಜಿಪ್ಟ್‌ನ ಸುಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡ ಹಡಗು ವಿಶ್ವದ ವಾಣಿಜ್ಯ ಚಟುವಟಿಕೆಗಳ ಮೇಲೆ ಪ್ರಭಾವ ಬೀರಿತು. ಆರ್ಥಿಕ ನಷ್ಟವನ್ನು ಉಂಟು ಮಾಡಿತು.
ತೈವಾನ್‌ನ ಎವರ್ ಗ್ರೀನ್ ಮರೈನ್ ಕಂಪನಿ ನಿರ್ವಹಣೆ ಮಾಡುವ ಜಪಾನ್ ಒಡೆತನದ ಎವರ್ ಗಿವನ್ ಹಡಗು 2021ರ ಮಾರ್ಚ್ ತಿಂಗಳಿನಲ್ಲಿ ಸುಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿತು. ಸುಮಾರು 2 ಲಕ್ಷ ಟನ್ ತೂಕದ ಹಡಗನ್ನು ತೆರವು ಮಾಡಲು ಹರಸಾಹಸ ಪಡಬೇಕಾಯಿತು. ಸುಮಾರು 6 ದಿನಗಳ ಕಾಲ ಈ ಕಾರ್ಯಾಚರಣೆ ನಡೆಯಿತು.
ಸುಯೆಜ್ ಕಾಲುವೆಯಲ್ಲಿ ಎವರ್ ಗಿವನ್ ಹಡಗು ಸಿಲುಕಿ ಕಾಲುವೆ ಬಂದ್ ಆಯಿತು. ಇದರಿಂದಾಗಿ ಭಾರೀ ಸಂಖ್ಯೆಯಲ್ಲಿ ಇತರ ಹಡಗುಗಳು ಸಾಲಗಟ್ಟಿ ನಿಂತವು. ಇದು ವಿಶ್ವದ ವಿವಿಧ ದೇಶಗಳ ವ್ಯಾಪಾರ ವಹಿವಾಟಿನ ಮೇಲೆ ಭಾರೀ ಪರಿಣಾಮ ಬೀರಿತು, ನಷ್ಟ ಉಂಟಾಯಿತು.

ಕಾಲುವೆಯಲ್ಲಿ ಎವರ್ ಗಿವನ್ ಹಡಗು ಸಿಲುಕುತ್ತಿದ್ದಂತೆಯೇ ಅದರಲ್ಲಿನ ಸಿಬ್ಬಂದಿಗಳ ಬಗ್ಗೆ ಕಾಳಜಿ ವಹಿಸಲಾಯಿತು. 25 ಸಿಬ್ಬಂದಿಗಳನ್ನು ಚಿಕ್ಕ ಬೋಟ್‌ಗಳ ಮೂಲಕ ರಕ್ಷಣೆ ಮಾಡಲಾಯಿತು. ಹಡಗಿನಲ್ಲಿದ್ದ ಸರಕುಗಳನ್ನು ಖಾಲಿ ಮಾಡಿ ಹಡಗಿನ ಭಾರ ಇಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಎಲ್ಲಿದೆ ಸುಯೆಜ್ ಕಾಲುವೆ?; ಕೆಂಪು ಸಮುದ್ರದ ಸುಯೆಜ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಯೀದ್ ಬಂದರು ನಡುವೆ ಸಂಪರ್ಕ ಕಲ್ಪಿಸುವ ಸುಯೆಜ್ ಕಾಲುವೆ ಈಜಿಪ್ಟ್ ಸೈನಾಯಿ ಜಂಬೂ ದ್ವೀಪದ ಪಶ್ಚಿಮಕ್ಕಿರುವ ಮಾನವ ನಿರ್ಮಿತ ಕಾಲುವೆಯಾಗಿದೆ.
ಏಪ್ಯಾ ಮತ್ತು ಯುರೋಪ್ ಖಂಡಗಳ ನಡುವೆ ಸಂಚಾರ ನಡೆಸುವ ಹಡಗುಗಳು 163 ಕಿ. ಮೀ. ಉದ್ದವಿರುವ ಸುಯೆಜ್ ಕಾಲುವೆ ಮೂಲಕ ಸಂಚಾರ ನಡೆಸುತ್ತವೆ. ಇದರಿಂದಾಗಿ ಹಡಗುಗಳು ಆಫ್ರಿಕಾ ಖಂಡವನ್ನು ಸುತ್ತದೇ ನೆರವಾಗಿ ಸಂಚಾರ ನಡೆಸಬಹುದಾಗಿದೆ.
1869ರಲ್ಲಿ ಸುಯೆಜ್ ಕಾಲುವೆ ನಿರ್ಮಾಣ ಮಾಡಲಾಯಿತು. 2015ರಲ್ಲಿ ಈಜಿಪ್ಟ್ ದುಬಾರಿ ವೆಚ್ಚ ಮಾಡಿ ಕಾಲುವೆ ನವೀಕರಣ ಮಾಡಿತು. ಹಡಗುಗಳು ಈ ಕಾಲುವೆ ಮೂಲಕ ಸಂಚಾರ ನಡೆಸಲು ಈಜಿಪ್ಟ್‌ಗೆ ಹಣ ನೀಡಬೇಕು. ಜಾಗತಿಕ ವ್ಯಾಪಾರದ ಶೇ 12ರಷ್ಟು ಭಾಗ ಸುಯೆಜ್ ಕಾಲುವೆಯಿಂದಲೇ ನಡೆಯುತ್ತದೆ.
ಜಾಗತಿಕವಾಗಿ ತಲ್ಲಣ; ಸುಯೆಜ್ ಕಾಲುವೆಯಲ್ಲಿ ಎವರ್ ಗಿವನ್ ಹಡಗು ಸಿಲುಕಿದ್ದು ಜಾಗತಿಕ ತಲ್ಲಣಕ್ಕೆ ಕಾರಣವಾಯಿತು. ಹಡಗುಗಳ ಸಂಚಾರ ಸ್ಥಗಿತಗೊಂಡು ಸಾಗಾಣಿಕೆ ವೆಚ್ಚ ಅಧಿಕವಾಯಿತು. ವಿವಿಧ ವಸ್ತುಗಳ ಬೆಲೆಗಳು ದುಬರಿಯಾಗುವ ಆತಂಕ ಎದುರಾಯಿತು. ಹಡಗು ತೆರವು ಮಾಡಲು ಈಜಿಪ್ಟ್ ಹಿರಿಯ ಇಂಜಿಜಿಯರ್‌ಗಳ ವಿಶೇಷ ತಂಡವನ್ನು ರಚನೆ ಮಾಡಿತು.
ಮೂರು ದಿನಗಳ ಬಳಿಕ ಸುಯೆಜ್ ಪ್ರಾಧಿಕಾರದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಒಸಾಮಾ ರಬೀ ಹಡಗು ತೆರವು ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದರು. ಪುಲ್ ಅಂಡ್ ಪುಶ್ ಪ್ರಯತ್ನ ಯಶಸ್ವಿಯಾಗಿದ್ದು, ಹಡಗನ್ನು ಭಾಗಶಃ ತೇಲಿಸಲು ಸಾಧ್ಯವಾಗಿದೆ. ಕಾಲುವೆ ದಂಡೆಯಿಂದ 102 ಮೀಟರ್ ಚಲಿಸುವಂತೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಕಾಲುವೆ ಬಂದ್ ಆದ ಪರಿಣಾಮ ಕಚ್ಚಾ ತೈಲ ಸಾಗಣೆ ಮಾಡುವ ಹಡಗು ಸೇರಿದಂತೆ 367 ಹಡಗುಗಳು ಕಾಲುವೆ ಮೂಲಕ ಹಾದು ಹೋಗಲು ಕಾದು ನಿಂತಿದ್ದವು. 12 ಹಡಗುಗಳು ದಕ್ಷಿಣ ಆಫ್ರಿಕಾದ ಕೇಪ ಆಫ್ ಗುಡ್ ಹೋಪ್ ಮೂಲಕ ಸಂಚಾರ ನಡೆಸಿದವು.
ಎಸ್‌ಸಿಎ ವರದಿ ಪ್ರಕಾರ 2020ರಲ್ಲಿ ಸುಮಾರು 19,000 ಹಡಗುಗಳು ಸುಯೆಜ್ ಕಾಲುವೆ ಮೂಲಕ ಸಂಚಾರ ನಡೆಸಿವೆ. ಒಂದು ಶತಕೋಟಿ ಟನ್‌ಗಿಂತಲೂ ಹೆಚ್ಚಿನ ಸರಕುಗಳನ್ನು ಸಾಗಣೆ ಮಾಡಿದ್ದವು. ಈಜಿಪ್ಟ್ 5.61 ಬಿಲಿಯನ್ ಅಮೆರಿಕನ್ ಡಾಲರ್ ಆದಾಯ ಸಂಗ್ರಹ ಮಾಡಿತ್ತು.












Click it and Unblock the Notifications