Year end 2022; ಕರ್ನಾಟಕಕ್ಕೆ ಬಂತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು
2022-23 ಸಾಲಿನಲ್ಲಿ ಕರ್ನಾಟಕದ ರೈಲು ಯೋಜನೆಗಳಿಗೆ 6091 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಹೌದು, ರಾಜ್ಯದ ರೈಲ್ವೆ ಯೋಜನೆಗಳು ಈಗ ಚುರುಕುಗೊಂಡಿವೆ. ಹಲವು ಹೊಸ ಮಾರ್ಗಗಳು ನಿರ್ಮಾಣಗೊಳ್ಳುತ್ತಿವೆ.
ಭಾರತದಲ್ಲಿ ಅತಿ ವೇಗದಲ್ಲಿ ಸಂಚಾರ ನಡೆಸುವ ರೈಲುಗಳು ಎಂದರೆ 'ಶತಾಬ್ದಿ'ಯಾಗಿತ್ತು. ಈಗ ಆ ಸ್ಥಾನಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ಬಂದಿದೆ. ದೇಶದಲ್ಲಿ ಈ ರೈಲುಗಳ ಸಂಚಾರ ಆರಂಭವಾದ ಬಳಿಕ ಕರ್ನಾಟಕಕ್ಕೆ ಯಾವಾಗ ರೈಲು ಬರಲಿದೆ? ಎಂಬ ಚರ್ಚೆ ನಡೆದಿತ್ತು.
ದೇಶದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದು 2019ರ ಫೆಬ್ರವರಿ 15 ರಂದು. 2022ನೇ ವರ್ಷದಲ್ಲಿ ಕರ್ನಾಟಕಕ್ಕೆ ವಂದೇ ಭಾರತ್ ರೈಲು ಬಂದಿದೆ. ಈ ಮೂಲಕ ಜನರ ಕಾಯುವಿಕೆ ಅಂತ್ಯವಾಗಿದೆ. ಇದು ಕರ್ನಾಟಕಕ್ಕೆ ಮಾತ್ರ ಸೇರಿದ ರೈಲಲ್ಲ. ದಕ್ಷಿಣ ಭಾರತದ ಮೊದಲ ರೈಲಾಗಿದೆ.

ರೈಲಿಗೆ ಚಾಲನೆ ನೀಡಿದ ಮೋದಿ; ಭಾರತದ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 12ರಂದು ಮೈಸೂರು-ಬೆಂಗಳೂರು-ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು.
ರೈಲು ಮೈಸೂರು-ಚೆನ್ನೈ ನಡುವೆ ಸಂಚಾರ ನಡೆಸುತ್ತದೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರು ನಗರದ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ರೈಲು ಸಂಚಾರ ಆರಂಭಿಸಿದರು. ಇದು ದೇಶದ 5ನೇ ಮತ್ತು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಾಗಿದೆ.
ಮೇಕ್ ಇನ್ ಇಂಡಿಯಾ; ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಘೋಷಣೆಗೆ ವಂದೇ ಭಾರತ್ ರೈಲು ಸಾಕ್ಷಿಯಾಗಿದೆ. ಈ ರೈಲುಗಳನ್ನು ಚೆನ್ನೈನ ಪೆರಂಬೂರ್‌ನ ಸಮಗ್ರ ಕೋಚ್ ಫ್ಯಾಕ್ಟರಿಯಲ್ಲಿ ದೇಶೀಯವಾಗಿ ತಯಾರು ಮಾಡಲಾಗುತ್ತಿದೆ. ನಮ್ಮ ಭಾರತೀಯ ಇಂಜಿನಿಯರ್‌ಗಳ ಸಾಮರ್ಥ್ಯಕ್ಕೆ ಇದು ನಿದರ್ಶನವಾಗಿದೆ.
ಮೈಸೂರು-ಬೆಂಗಳೂರು-ಚೆನ್ನೈ ನಡುವಿನ ವಂದೇ ಭಾರತ್ ರೈಲು ಕಟಪಾಡಿಯಲ್ಲಿ ಒಂದು ನಿಲ್ದಾಣವನ್ನು ಹೊಂದಿದೆ. ಕೈಗಾರಿಕಾ ತಾಣವಾದ ಚೆನ್ನೈ ಮತ್ತು ಸಾಫ್ಟ್‌ವೇರ್, ಸ್ಟಾರ್ಟ್ ಅಪ್‌ಗಳ ತಾಣ ಬೆಂಗಳೂರು ಹಾಗೂ ಪ್ರಮುಖ ಪ್ರವಾಸಿ ತಾಣ ಮೈಸೂರು ನಡುವೆ ಸಂಪರ್ಕ ಕಲ್ಪಿಸುತ್ತದೆ.
ದೇಶದ 5ನೇ, ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಿನಿಂದಾಗಿ ಸಾಫ್ಟ್‌ವೇರ್ ವೃತ್ತಿಪರರು, ವ್ಯಾಪಾರಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮೂರು ನಗರಗಳ ನಡುವೆ ಸಂಚಾರ ನಡೆಸಲು ಸಹಾಯಕವಾಗಿದೆ. ಈ ರೈಲು ಸೇವೆ ವಿಮಾನ ಸಂಚಾರದಂತೆ ಆರಾಮದಾಯಕ ಅನುಭವ ನೀಡುವುದರಿಂದ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ವಂದೇ ಭಾರತ್ ರೈಲುಗಳು; ಭಾರತೀಯ ರೈಲ್ವೆಯ ಭಾರತದ ಮೊದಲ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ 2019ರ ಫೆಬ್ರವರಿ 15ರಿಂದ ಕಾನ್ಪುರ-ಅಲಹಾಬಾದ್-ವಾರಣಸಿ ಮಾರ್ಗದಲ್ಲಿ ಸಂಚಾರ ನಡೆಸುತ್ತಿದೆ.
ಬಳಿಕ ನವದೆಹಲಿ-ವೈಷ್ಣೋದೇವಿ-ಕತ್ರಾ, ಗಾಂಧಿನಗರ-ಅಹ್ಮದಾಬಾದ್-ಮುಂಬೈ ಸೆಂಟ್ರಲ್ ನಡುವೆ ಆರಂಭವಾಯಿತು. ಮತ್ತೊಂದು ರೈಲು ಅಂದೂರು - ನವದೆಹಲಿ ಮಾರ್ಗಗಳಲ್ಲಿ ಆರಂಭವಾಯಿತು. 5ನೇ ರೈಲು ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಓಡುತ್ತಿದೆ. 6ನೇ ರೈಲು ಮಹಾರಾಷ್ಟ್ರದ ನಾಗ್ಪುರ-ಛತ್ತೀಸ್‌ಗಢದ ಬಿಸ್ಲಾಪುರ ನಡುವೆ ಸಂಚಾರ ಆರಂಭಿಸಿದೆ.
ರೈಲಿನ ದರದ ಮಾಹಿತಿ; ಕರ್ನಾಟಕದ ಮೈಸೂರು, ತಮಿಳುನಾಡಿನ ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದ ನಡುವೆ ಸಂಚಾರ ನಡೆಸುವ ರೈಲಿನ ದರ ಹೀಗಿದೆ. ರೈಲು ಸಂಖ್ಯೆ 20607ರ ದರ ಚೇರ್ ಕಾರ್ 1,200 ರೂಪಾಯಿ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ದರ 2295 ರೂಪಾಯಿ. ಮೈಸೂರು-ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣಕ್ಕೆ ತೆರಳುವ ರೈಲು ಸಂಖ್ಯೆ 20608 ದರ ಚೇರ್ ಕಾರ್ 1,365 ರೂಪಾಯಿ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ದರ 2,485 ರೂಪಾಯಿ ಆಗಿದೆ.
ಈ ರೈಲುಗಳಲ್ಲಿ ಮಕ್ಕಳಿಗೆ ಟಿಕೆಟ್ ಇಲ್ಲ ಮತ್ತು ಯಾವುದೇ ರಿಯಾಯಿತಿಗೆ ಅವಕಾಶ ನೀಡಿಲ್ಲ. ವಯಸ್ಕರಿಗೆ ಇರುವಂತೆ ಪೂರ್ಣ ಟಿಕೆಟ್ ಎಲ್ಲರಿಗೂ ಅನ್ವಯವಾಗಲಿದೆ. ಶತಾಬ್ದಿ ರೈಲುಗಳಲ್ಲಿರುವಂತೆ ಮುಂಗಡ ಕಾಯ್ದಿರಿಸುವ, ರದ್ದುಪಡಿಸುವ, ರೀಫಂಡ್ ಮಾಡುವ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗುತ್ತವೆ ಎಂದು ರೈಲ್ವೆ ಇಲಾಖೆ ಹೇಳಿದೆ.
ರೈಲಿನ ವಿಶೇಷತೆಗಳು; ವಂದೇ ಭಾರತ್ ರೈಲುಗಳು ಹಲವಾರು ವಿಶೇಷತೆಗಳನ್ನು ಹೊಂದಿದೆ. ಸಂಚಾರದ ಸಮಯದಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಕವಚ (ರೈಲು ಅವಘಡ ತಪ್ಪಿಸುವ ವ್ಯವಸ್ಥೆ)ಯನ್ನು ಇದು ಹೊಂದಿದೆ. ಪ್ರತಿಯೊಂದು ಕೋಚ್‌ನಲ್ಲಿ 4 ತುರ್ತು ಕಿಟಕಿಗಳಿವೆ. ಕೋಚ್‌ನ ಹೊರಗಡೆ ಹಿಂಭಾಗದಿಂದ ವೀಕ್ಷಣೆಯ ಕ್ಯಾಮರಾಗಳು ಸೇರಿದಂತೆ 4 ಪ್ಲಾಟ್ ಫಾರ್ಮ್‌ಗಳ ಬದಿಯಲ್ಲಿ ಕ್ಯಾಮರಾಗಳಿವೆ. ನಿಲ್ದಾಣಗಳೊಂದಿಗೆ ಸಂಕೇತಗಳ ವಿನಿಮಯಕ್ಕಾಗಿ ಬೋಗಿಗಳಲ್ಲಿ ಎರಡು ಸಂಕೇತ ವಿನಿಮಯ ದೀಪಗಳಿವೆ.
ಈ ರೈಲಿನ ಕೋಚ್‌ಗಳಲ್ಲಿ ಆಸನಗಳು 180 ಡಿಗ್ರಿ ತಿರುಗುವ ವಿಶೇಷತೆ ಹೊಂದಿವೆ. ಜೈವಿಕವಾಗಿ ಸ್ವಚ್ಛವಾಗುವ ಟಚ್ ಫ್ರೀ ಸೌಲಭ್ಯವಿರುವ ಶೌಚಾಲಯಗಳು ಮತ್ತು ಬೇಡಿಕೆಗೆ ಅನುಗುಣವಾಗಿ ವೈ-ಫೈ ವ್ಯವಸ್ಥೆ ಈ ರೈಲು ಬೋಗಿಗಳ ವಿಶೇಷತೆಗಳಲ್ಲಿ ಸೇರಿವೆ.
2023ರಲ್ಲಿ ಮತ್ತೊಂದು ರೈಲು; ಹೊಸ ವರ್ಷದಲ್ಲಿ ಮತ್ತೊಂದು ವಂದೇ ಭಾರತ್ ರೈಲು ಕರ್ನಾಟಕದಲ್ಲಿ ಸಂಚಾರ ಆರಂಭಿಸಲಿದೆ. ಬೆಂಗಳೂರು-ಹುಬ್ಬಳ್ಳಿ ನಡುವೆ 2023ರ ಮಾರ್ಚ್‌ನಲ್ಲಿ ರೈಲು ಸಂಚಾರ ಆರಂಭಿಸುತ್ತೇವೆ ಎಂದು ರೈಲ್ವೆ ಇಲಾಖೆ ಈಗಾಗಲೇ ಘೋಷಣೆ ಮಾಡಿದೆ. ಇದಕ್ಕಾಗಿ ಬೇಕಾದ ಕಾಮಗಾರಿಯನ್ನು ಸಹ ಕೈಗೊಳ್ಳಲಾಗಿದೆ.
ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಆರಂಭವಾದರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಸಹಕಾರಿಯಾಗಲಿದೆ. ಅಲ್ಲದೇ ಬೆಂಗಳೂರು-ಬೆಳಗಾವಿ ನಡುವೆ ಸಹ ಇದೇ ಮಾದರಿಯ ರೈಲು ಓಡಿಸಬೇಕು ಎಂದು ಬೇಡಿಕೆ ಇಡಲಾಗಿದೆ.











Click it and Unblock the Notifications