World Gratitude Day 2022: ಕೃತಜ್ಞತೆಗೂ ಒಂದು ದಿನ ಮುಡಿಪು; ಸಂತೋಷ, ನೆಮ್ಮದಿಗೆ ಇದು ಮೂಲ
ಕೃತಜ್ಞತೆಗೂ ಕೃತಘ್ನತೆಗೂ ಒಂದೇ ಅಕ್ಷರದ ವ್ಯತ್ಯಾಸ. ಆದರೆ, ನಿಜಾರ್ಥದಲ್ಲಿ ತದ್ವಿರುದ್ಧ. ಕೃತಘ್ನತೆ ದ್ರೋಹವಾದರೆ, ಕೃತಜ್ಞತೆ ವಿಶ್ವಾಸ. ಕೃತಜ್ಞನಾದ ಒಬ್ಬ ವ್ಯಕ್ತಿ ಬಡವನಾದರೂ ತನ್ನ ಜೀವನದಲ್ಲಿ ಸುಖ, ನೆಮ್ಮದಿ, ಸಂತೋಷ ಕಾಣುತ್ತಾನೆ. ಕೃತಘ್ನನಾದ ವ್ಯಕ್ತಿ ಎಷ್ಟೇ ಶ್ರೀಮಂತನಾದರೂ ನೆಮ್ಮದಿ ಇಲ್ಲದ ಜೀವನ ಕಾಣುತ್ತಾನೆ. ಇದು ಜೀವನ ಸತ್ಯ.
ಕೃತಜ್ಞತೆಗೆ ಒಂದು ಅಂತಾರಾಷ್ಟ್ರೀಯ ದಿನವನ್ನು ನಿಗದಿ ಮಾಡಲಾಗಿದೆ. ಪ್ರತೀ ವರ್ಷ ಸೆಪ್ಟೆಂಬರ್ 21 ವಿಶ್ವ ಕೃತಜ್ಞತಾ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ನಾವೆಷ್ಟು ಅದೃಷ್ಟಶಾಲಿಗಳು ಎಂಬುದನ್ನು ಸ್ಮರಿಸಿಕೊಳ್ಳುವ ದಿನ.
ಪ್ರತಿಯೊಬ್ಬರಿಂದಲೂ ನಾನು ಏನಾದರೂ ಕಲಿಯುತ್ತೇವೆ. ನಮಗೆ ತಿಳಿವಳಿಕೆ ನೀಡಿದ, ಜ್ಞಾನ ವೃದ್ಧಿ ಮಾಡಲು ಸಹಾಯ ಮಾಡಿದ ಯಾವುದೇ ವ್ಯಕ್ತಿಗಾದರೂ ನಾವು ಗೌರವ ತೋರುವುದೇ ಕೃತಜ್ಞತೆ. ನಾವು ಮಾಡುವ ಒಂದು ಸಣ್ಣ ಪ್ರಶಂಸೆ ಮತ್ತು ಕೃತಜ್ಞತೆ ನಮ್ಮಿಡೀ ವ್ಯಕ್ತಿತ್ವದ ಸ್ವರೂಪವನ್ನೇ ಬದಲಿಸಬಹುದು, ಜೊತೆಗೆ ಬೇರೆಯವರ ವ್ಯಕ್ತಿತ್ವವನ್ನೂ ಬದಲಿಸಬಹುದು.

ಸ್ವಾಮಿ ಚಿನ್ಮಯಾನಂದರಿಂದ ಶುರು
ವಿಶ್ವ ಕೃತಜ್ಞತಾ ದಿನ 1966ರಲ್ಲಿ ಆರಂಭವಾಯಿತು. 1965ರಲ್ಲಿ ವಿಶ್ವಸಂಸ್ಥೆಯ ಧ್ಯಾನ ಕೊಠಡಿಯಲ್ಲಿ ನಡೆದ ಥ್ಯಾಂಕ್ಸ್‌ಗಿವಿಂಗ್ ಡಿನ್ನರ್ ವೇಳೆ ಇದರ ಐಡಿಯಾ ಮೊದಲ ಬಾರಿಗೆ ಕುಡಿಯೊಡೆದಿತ್ತು. ಆ ಔತಣಕೂಟದಲ್ಲಿದ್ದ ಸ್ವಾಮಿ ಚಿನ್ಮಯಾನಂದ ಅವರು ಕೃತಜ್ಞತೆಗೆ ಒಂದು ಅಂತಾರಾಷ್ಟ್ರೀಯ ದಿನ ನಿಗದಿ ಮಾಡುವ ಸಲಹೆ ಮುಂದಿಟ್ಟರು. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬ ವ್ಯಕ್ತಿ ಕೂಡ ಪ್ರತೀ ವರ್ಷ ತಮ್ಮ ದೇಶಗಳಲ್ಲಿ ಕೃತಜ್ಞತಾ ದಿನವನ್ನು ಆಚರಿಸಲು ಪ್ರಮಾಣ ಮಾಡಿದರು.
1966ರಲ್ಲಿ ವಿವಿಧ ದೇಶಗಳಲ್ಲಿ ಸೆಪ್ಟೆಂಬರ್ 21ರಂದು ಕೃತಜ್ಞತಾ ದಿನವನ್ನು ಆಚರಿಸಲಾಯಿತು. ಆಗಿನಿಂದ ಪ್ರತೀ ವರ್ಷವೂ ಈ ದಿನದ ಆಚರಣೆ ನಡೆಯುತ್ತಾ ಬಂದಿದೆ.

ಕೃತಜ್ಞತಾ ದಿನದಂದು ಹೀಗೆ ಮಾಡಿ
ನಿಮ್ಮ ಜನ್ಮಕ್ಕೆ ಕಾರಣರಾದ ಮತ್ತು ನಿಮ್ಮನ್ನು ಸಾಕಿ ಸಲುಹಿದ ಅಪ್ಪ ಅಮ್ಮನಿಗೆ ನೀವು ಎಷ್ಟು ಕೃತಜ್ಞರಾದರೂ ಕಡಿಮೆಯೇ. ಅವರಿದ ನೀವು ಅದೆಷ್ಟು ಲಾಭ ಗಳಿಸಿದ್ದೀರಿ, ಜೀವನ ಎದುರಿಸುವ ಅದೆಷ್ಟು ಶಕ್ತಿ ಪಡೆದಿದ್ದೀರಿ ಎಲ್ಲವನ್ನೂ ಸ್ಮರಿಸಿ ಅವರಿಗೆ ಧನ್ಯವಾದ ಹೇಳುವುದನ್ನು ಮರೆಯಬೇಡಿ.
ನಿಮ್ಮ ಸಹೋದರ, ಸಹೋದರಿಯರು, ಮುಖ್ಯ ಸ್ನೇಹಿತರು ಅವರ ಉಪಕಾರ ಸ್ಮರಣೆ ಮಾಡಿರಿ. ಮುಖತಃ ಭೇಟಿ ಮಾಡಿ ಭಾವನೆಗಳನ್ನು ಹಂಚಿಕೊಳ್ಳಿ. ಸ್ನೇಹಿತರ ವಾಟ್ಸಾಪ್ ಗ್ರೂಪ್‌ನಲ್ಲಿ ಒಬ್ಬೊಬ್ಬರಿಗೂ ನಿಮ್ಮ ಕೃತಜ್ಞತೆಯನ್ನು ಸಲ್ಲಿಸಿ.
ಹಾಗೇ, ಕೆಲ ಹೊತ್ತು ಕಣ್ಮುಚ್ಚಿ, ನಿಮ್ಮ ಜೀವನದಲ್ಲಿ ನಿಮ್ಮಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾದ ಎಲ್ಲಾ ವ್ಯಕ್ತಿಗಳು ಮತ್ತು ಸಂದರ್ಭಗಳನ್ನು ಸ್ಮರಿಸಿಕೊಳ್ಳಿ. ನಿಮಗೇ ಗೊತ್ತಿಲ್ಲದಂತೆ ಅದೆಷ್ಟು ಜನರು ನಿಮ್ಮ ಜೀವನದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂಬುದು ನಿಮಗೆ ಅರಿವಾಗಿ ನಿಮ್ಮನ್ನು ವಿನಮ್ರರನ್ನಾಗಿಸುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಒಳ್ಳೆಯ ಗುಣಗಳನ್ನು ಪಟ್ಟಿ ಮಾಡಿ, ನೀವು ಅದೆಷ್ಟು ಪುಣ್ಯಾತ್ಮ ಎಂಬುದನ್ನು ಕಂಡುಕೊಳ್ಳಿ. ನಿಮ್ಮಲ್ಲಿ ಅತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ.

ಕೃತಜ್ಞತೆಯಿಂದ ಆಗುವ ಲಾಭಗಳು
ನಮಗೆ ಉಪಕಾರ ಮಾಡಿದವರನ್ನು ನಿತ್ಯವೂ ಒಂದೈದು ನಿಮಿಷ ಸ್ಮರಿಸಿ ಕೃತಜ್ಞರಾದರೂ ಸಾಕು ನಮ್ಮ ಸಂತೋಷ ಹೆಚ್ಚುತ್ತದೆ. ನಮ್ಮ ರಕ್ತದೊತ್ತಡ ಕಡಿಮೆ ಆಗುತ್ತದೆ.
ಕೃತಜ್ಞತಾ ಭಾವನೆ ಇದ್ದರೆ ಇನ್ನೊಬ್ಬರ ಬಗ್ಗೆ ಹೊಟ್ಟೆಯುರಿ ಪಡುವ ಪ್ರಮೇಯ ಕಡಿಮೆ. ಕಷ್ಟಕಾಲದಿಂದ ಬೇಗನೇ ಚೇತರಿಸಿಕೊಳ್ಳುವ ಸ್ವಭಾವ ಗಟ್ಟಿಗೊಳ್ಳುತ್ತದೆ.
ಕೃತಜ್ಞತಾ ಭಾವನೆ ಇರುವ ಜನರು ಬಹುತೇಕ ಎಲ್ಲರಿಗೂ ಇಷ್ಟವಾಗುತ್ತಾರೆ. ಸಮಾಜದಲ್ಲಿ ಇವರಿಗೆ ಸ್ನೇಹಿತರಿರುತ್ತಾರೆ, ಸಂಬಂಧಗಳಲ್ಲಿ ಕಿತ್ತಾಟ ಬರುವುದು ತೀರಾ ಅಪರೂಪ.
ಕೃತಜ್ಞತೆಯು ನಮ್ಮಲ್ಲಿ ವಿನಮ್ರತೆಯನ್ನು ಕಲಿಸುತ್ತದೆ. ತೃಪ್ತಿಭಾವ ಮೂಡಿಸುತ್ತದೆ. ಅಸಮಾಧಾನ ಕಡಿಮೆ ಮಾಡುತ್ತದೆ.

ಹೇಗೆಲ್ಲಾ ಕೃತಜ್ಞತೆ?
ನೀವು ಊಟ ಸೇವಿಸುವ ಮುನ್ನ ಅಕ್ಕಿ ಬರಲು ಕಾರಣನಾದ ಆ ರೈತರನ್ನು ನೆನೆಸಿ ಕೃತಜ್ಞತೆ ತೋರಿರಿ.
ನಮಗೆ ಬದುಕು ಕೊಟ್ಟ ತಂದೆ ತಾಯಿಯ ಋಣ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ.
ನಿಮ್ಮ ಸಂಸಾರದ ನಿರ್ವಹಣೆಗೆ ಕಾರಣವಾಗಿರುವ ನಿಮ್ಮ ಉದ್ಯೋಗದ ಬಗ್ಗೆ ಕೃತಜ್ಞತೆ ಇರಲಿ
ನೀವು ಬದಕಲು ಸಾಧ್ಯ ಮಾಡಿರುವ ಆರೋಗ್ಯದ ಬಗ್ಗೆ ಕೃತಜ್ಞತೆ ಇರಲಿ
ಹಲವರಿಗೆ ವಾಸಿಸಲು ಸೂರಿಲ್ಲ. ಆದರೆ, ನಮಗೆ ಮನೆ ಇದೆಯಲ್ಲ ಎಂಬ ಕೃತಜ್ಞತೆ ನಮಗಿರಲಿ.
ನಮ್ಮ ಸಂತೋಷಕ್ಕೆ ಕಾರಣವಾಗಿರುವ ಸಾಕು ಪ್ರಾಣಿಗಳ ಬಗ್ಗೆಯೂ ಕೃತಜ್ಞತೆ ಇರಲಿ.
(ಒನ್ಇಂಡಿಯಾ ಸುದ್ದಿ)












Click it and Unblock the Notifications