Liz Truss : ಒಂದು ಕಾಲದಲ್ಲಿ ಬ್ರಿಟನ್ ರಾಣಿ ಆಡಳಿತ ತೊಲಗಬೇಕೆನ್ನುತ್ತಿದ್ದ ಲಿಜ್ ಟ್ರುಸ್ ಈಗ ಪ್ರಧಾನಿ

ಲಿಜ್ ಟ್ರುಸ್ ನೂತನ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಕನ್ಸರ್ವೇಟಿವ್ ಪಕ್ಷದ ನಾಯಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಿಷಿ ಸುನಕ್ ವಿರುದ್ಧ ಲಿಜ್ ಟ್ರುಸ್ 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

2015ರಿಂದ ಕನ್ಸರ್ವೇಟಿವ್ ಪಕ್ಷದಿಂದ ಪ್ರಧಾನಿಯಾದ ಐದನೆಯ ವ್ಯಕ್ತಿ ಲಿಜ್ ಟ್ರುಸ್. ಚುನಾವಣೆಯಲ್ಲಿ ಲಿಜ್ ಟ್ರುಸ್ ಗೆಲುವಿನ ಸಾಧ್ಯತೆಯನ್ನು ಬಹುತೇಕರು ಅಂದಾಜು ಮಾಡಿದ್ದರು. ಭಾರತೀಯ ಮೂಲದ ರಿಷಿ ಸುನಕ್ ವಿರುದ್ಧ ನಾನಾ ಕಾರಣಕ್ಕೆ ಪಕ್ಷದ ಸಾಮಾನ್ಯ ಸದಸ್ಯರಲ್ಲಿ ಅಸಮಾಧಾನ ಇತ್ತು. ಈ ಕಾರಣಕ್ಕೆ ಲಿಜ್ ಟ್ರುಸ್ ಗೆದ್ದರು ಎಂದು ಕೆಲವರು ವಿಶ್ಲೇಷಿಸುತ್ತಾರೆ.

ಆದರೆ, ಲಿಜ್ ಟ್ರುಸ್ ಬಹಳ ಗಟ್ಟಿ ವಿಚಾರಧಾರೆ ಹೊಂದಿರುವ ಮತ್ತು ದೃಢಮನಸಿನ ವ್ಯಕ್ತಿತ್ವದವರೆಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬ್ರಿಟನ್ ದೇಶದಲ್ಲಿ ತೆರಿಗೆ ಕಡಿತ ಮಾಡುವುದಾಗಿ ಅವರು ಮೊದಲಿಂದಲೂ ನೀಡುತ್ತಾ ಬಂದಿದ್ದ ಭರವಸೆ ಈಗ ಅವರ ಗೆಲುವಿಗೆ ದಾರಿ ಮಾಡಿಕೊಟ್ಟಿತು ಎನ್ನುವವರಿದ್ದಾರೆ.

ಬೋರಿಸ್ ಜಾನ್ಸನ್ ಅವರಷ್ಟು ಜನಪ್ರಿಯತೆ ಹೊಂದಿಲ್ಲದಿದ್ದರೂ ಕನ್ಸರ್ವೇಟಿವ್ ಪಕ್ಷದ ವಿಚಾರಧಾರೆಗೆ ಬದ್ಧವಾಗಿ ಲಿಜ್ ಟ್ರುಸ್ ನಿಂತಿದ್ದಾರೆ. ಇನ್ನೊಂದೆಡೆ, ತೆರಿಗೆ ಕಡಿತ ಮಾಡಬಾರದು ಎನ್ನುವ ನಿಲುವಿಗೆ ಬದ್ಧರಾಗಿದ್ದವರು ರಿಷಿ ಸುನಕ್. ಇದು ಲಿಜ್ ಟ್ರುಸ್ ಗೆಲುವನ್ನು ಸುಗಮಗೊಳಿಸಿತು ಎನ್ನಲಾಗುತ್ತದೆ.

ಲಿಬರಲ್ ಡೆಮಾಕ್ರಾಟ್ ಬೆಂಬಲಿಗಳಾಗಿದ್ದ ಲಿಜ್

ಲಿಬರಲ್ ಡೆಮಾಕ್ರಾಟ್ ಬೆಂಬಲಿಗಳಾಗಿದ್ದ ಲಿಜ್

ಮೇರಿ ಎಲಿಜಬೆತ್ ಟ್ರುಸ್ ಅಕಾ ಲಿಜ್ ಟ್ರುಸ್ ಜೀವನ ಬಹಳ ಕುತೂಹಲಕಾರಿ ಎನಿಸಿದೆ. ಒಂದು ಕಾಲದಲ್ಲಿ ಅವರು ಲಿಬರಲ್ ಡೆಮಾಕ್ರಾಟ್ ಪಕ್ಷದ ಕಾರ್ಯಕರ್ತೆಯಾಗಿದ್ದರು. ಆ ಸಿದ್ಧಾಂತದ ಕಟ್ಟರ್ ಬೆಂಬಲಿಗಳಾಗಿದ್ದವರು. ಇದು ಒಂದು ರೀತಿಯಲ್ಲಿ ಭಾರತದಲ್ಲಿ ಕಾಂಗ್ರೆಸ್ ನಾಯಕರಾದವರು ಪಕ್ಷ ಬಿಟ್ಟು ಬಿಜೆಪಿ ಸೇರಿ ಪ್ರಧಾನಿ ಆದಂತೆ.

ಲಿಬರಲ್ ಡೆಮಾಕ್ರಾಟ್ ಪಕ್ಷದ ಕಾರ್ಯಕರ್ತೆಯಾಗಿದ್ದಾಗ ಲಿಜ್ ಟ್ರುಸ್ ಬಹಳ ಹೋರಾಟಗಳನ್ನು ಮಾಡಿದ್ದಾರೆ. ಎಂಬತ್ತರ ದಶಕದಲ್ಲಿ ಅಂದಿನ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ವಿರುದ್ಧ ಮೆರವಣಿಗೆ ನಡೆಸಿದ್ದ ಇಂದು ಅದೇ ಥ್ಯಾಚರ್ ಪ್ರತಿನಿಧಿಸುತ್ತಿದ್ದ ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿದ್ದಾರೆ. ಥ್ಯಾಚರ್ ಸ್ಥಾನವನ್ನು ತುಂಬಿದ್ದಾರೆ.

ಬ್ರಿಟನ್ ರಾಣಿ ಆಡಳಿತ

ಬ್ರಿಟನ್ ರಾಣಿ ಆಡಳಿತ

ಬ್ರಿಟನ್‌ನಲ್ಲಿ ಈಗಲೂ ರಾಣಿ ಆಡಳಿತವೇ ಇರುವುದು. ರಾಜಾಡಳಿತವನ್ನು ಅಂತ್ಯಗೊಳಿಸಬೇಕೆಂಬ ಕೂಗು ಬ್ರಿಟನ್‌ನಲ್ಲಿದೆ. ಆ ಕೂಗಿಗೆ ಧ್ವನಿಯಾಗಿದ್ದವರು ಲಿಜ್ ಟ್ರುಸ್. "ಲಿಬರಲ್ ಡೆಮಾಕ್ರಾಟ್‌ಗಳಾದ ನಾವು ಎಲ್ಲರಿಗೂ ಅವಕಾಶ ಇರಬೇಕೆಂಬ ತತ್ವವನ್ನು ನಂಬುತ್ತೇವೆ. ಆಡಳಿತ ನಡೆಸುವುದು ಜನ್ಮಸಿದ್ಧ ಹಕ್ಕು ಎಂಬುದನ್ನು ನಾವು ಒಪ್ಪುವುದಿಲ್ಲ" ಎಂದು 1994ರಲ್ಲಿ ಪಕ್ಷದ ಸಮಾವೇಶದಲ್ಲಿ ಲಿಜ್ ಟ್ರುಸ್ ಗುಡುಗಿದ್ದರು. ಆಗ ಅವರು ವಿದ್ಯಾರ್ಥಿ ನಾಯಕಿಯಾಗಿದ್ದರು. ಅವರ ಅಂದಿನ ವಿಚಾರಧಾರೆಯನ್ನು ಅವರ ಸಹಪಾಠಿಗಳು ಈಗಲೂ ಮೆಲುಕು ಹಾಕುತ್ತಾರೆ. ಈಗ ಅದೇ ರಾಣಿಗಾಗಿ ಲಿಜ್ ಟ್ರುಸ್ ಕೆಲಸ ಮಾಡುತ್ತಿದ್ದಾರೆ.

ಲಿಜ್ ಟ್ರುಸ್ 1996ರವರೆಗೂ ಲಿಬರಲ್ ಡೆಮಾಕ್ರಾಟ್‌ನ ಕಾರ್ಯಕರ್ತೆಯಾಗಿದ್ದರು. ಅಂದರೆ, ವಿದ್ಯಾರ್ಥಿ ಕಾಲಘಟ್ಟದವರೆಗೂ ಅವರದ್ದು ಹೋರಾಟದ ಜೀವನ. 1996ರಿಂದ ಅವರು ಕನ್ಸರ್ವೇಟಿವ್ ಪಕ್ಷದ ಸಿದ್ಧಾಂತ ಒಪ್ಪಿಕೊಂಡರು.

ಲಿಜ್ ಬಾಲ್ಯ

ಲಿಜ್ ಬಾಲ್ಯ

ಲಿಜ್ ಟ್ರುಸ್ 1975ರಲ್ಲಿ ಬ್ರಿಟನ್‌ನ ಆಕ್ಸ್‌ಫರ್ಡ್‌ನಲ್ಲಿ ಹುಟ್ಟಿ ಬೆಳೆದವರು. ಅರ ತಂದೆ ಗಣಿತ ಪ್ರೊಫೆಸರ್, ತಾಯಿ ನರ್ಸ್. ಇಬ್ಬರೂ ಕೂಡ ಎಡಪಂಥೀಯ ವಿಚಾರಧಾರೆಯವರು. ಇದೇ ಕಾರಣಕ್ಕೆ ಲಿಜ್ ಟ್ರುಸ್ ತಮ್ಮ ಬಾಲ್ಯದಿಂದಲೇ ಲಿಬರಲ್ ಡೆಮಾಕ್ರಾಟ್ ಸಂಘಟನೆಯ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರೆನ್ನಲಾಗಿದೆ.

ವಿದ್ಯಾರ್ಥಿಯಾಗಿದ್ದಾಗಲೂ ಅವರು ಬಹಳ ಗಂಭೀರವಾಗಿದ್ದರು. ಬಲವಾದ ಸಾಮಾಜಿಕ ಚಿಂತನೆ ಉಳ್ಳವರಾಗಿದ್ದರು. ಪರಿಸರ ರಕ್ಷಣೆ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಗುಂಪಿನಲ್ಲಿ ಅವರಿದ್ದರು ಎಂದು ಅವರ ಜೊತೆ ಓದಿದ ಸಹಪಾಠಿಗಳು ಹೇಳುತ್ತಾರೆ.

"ಅವರ ಬದ್ಧತೆ ಬಹಳ ಗಮನ ಸೆಳೆಯುವಂತಿತ್ತು. ಅವರು ಎಲ್ಲಾ ವಿಚಾರವನ್ನೂ ಬಹಳ ಬೇಗ ಗ್ರಹಿಸುತ್ತಿದ್ದರು. ಕಾಲೇಜಿನಲ್ಲಿ ಚುರುಕಾಗಿ ಪ್ರತಿಯೊಂದರಲ್ಲೂ ಭಾಗಿಯಾಗುತ್ತಿದ್ದರು" ಎಂದು ಲಿಜ್ ಟ್ರುಸ್‌ಗೆ ಕಾಲೇಜಿನಲ್ಲಿ ಸೀನಿಯರ್ ವಿದ್ಯಾರ್ಥಿಯಾಗಿದ್ದವರೊಬ್ಬರು ಹೇಳಿದ್ದಾರೆ.

ಲಿಜ್ ಟ್ರುಸ್ ಅವರು ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಲಿಬರಲ್ ಡೆಮಾಕ್ರಾಟ್ಸ್ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆಯಾಗುವ ಹಂತಕ್ಕೆ ಹೋಗಿದ್ದರು.

ಕನ್ಸರ್ವೇಟಿವ್ ಸೇರಿಕೊಂಡಿದ್ದು

ಕನ್ಸರ್ವೇಟಿವ್ ಸೇರಿಕೊಂಡಿದ್ದು

ಕಾಲೇಜು ಹಂತದವರೆಗೂ ಲಿಬರಲ್ ಡೆಮಾಕ್ರಾಟ್ ಕಾರ್ಯಕರ್ತೆಯಾಗಿದ್ದ ಲಿಜ್ ಟ್ರುಸ್, ದಿಢೀರನೇ ಕನ್ಸರ್ವೇಟಿವ್ ಪಕ್ಷ ಸೇರಿಕೊಂಡಿದ್ದು ಬಹಳ ಅಚ್ಚರಿ ಮೂಡಿಸುತ್ತದೆ. ಅವರ ಈ ನಿರ್ಧಾರಕ್ಕೆ ಕಾರಣ ಏನೆಂದು ತಿಳಿದಬಂದಿಲ್ಲ. "ರಾಜಕೀಯದಲ್ಲಿ ಯಶಸ್ಸು ಸಾಧಿಸುವ ಗುರಿಯೊಂದಿಗೆ ಅವರು ಕನ್ಸರ್ವೇಟಿವ್ ಪಕ್ಷವನ್ನು ಸೇರಿಕೊಂಡಿದ್ದಿರಬಹುದು," ಎಂದು ಆಕ್ಸ್‌ಫರ್ಡ್ ವಿವಿಯಲ್ಲಿ ಅವರ ಜೊತೆ ಓದಿದರೊಬ್ಬರು ಹೇಳಿದ್ದಾರೆ.

ಪ್ರಧಾನಿ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ಅವರಿಗೆ ಈ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಅವರು ಕೊಟ್ಟ ಉತ್ತರ ಹೀಗಿತ್ತು: "ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ. ಹದಿಹರೆಯದ ವಯಸ್ಸಿನಲ್ಲಿ ದುಸ್ಸಾಹಸಗಳನ್ನು ಮಾಡಿರುತ್ತೇವೆ. ನಾನೂ ಆ ಕೆಲಸ ಮಾಡಿದ್ದೆ... ಕೆಲ ಜನರು ಸೆಕ್ಸ್, ಡ್ರಗ್ಸ್, ರಾಕ್ ಅಂಡ್ ರೋಲ್ ಮಾಡುತ್ತಾರೆ. ನಾನು ಲಿಬರಲ್ ಡೆಮಾಕ್ರಾಟ್‌ನಲ್ಲಿದ್ದೆ. ನನ್ನನ್ನು ಕ್ಷಮಿಸಿ," ಎಂದು ಲಿಜ್ ಟ್ರುಸ್ ಜಾಣತನದಿಂದ ಉತ್ತರಿಸಿದ್ದರು.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+