ಮಂಗಳದ ಅಂಗಳದಲ್ಲಿ ರೋವರ್: ಯೋಜನೆಯ ಹಿಂದಿನ ವಿಜ್ಞಾನಿ ಭಾರತ ಮೂಲದ ಸ್ವಾತಿ ಮೋಹನ್
ಅಮೆರಿಕದ ನಾಸಾದ ಪರ್ಸೆವೆರೆನ್ಸ್ ರೋವರ್ ನೌಕೆಯು ಮಂಗಳ ಗ್ರಹದಲ್ಲಿ ಇಳಿಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದು, ಜಗತ್ತು ಬೆರಗುಗಣ್ಣಿಂದ ನೋಡುತ್ತಿದೆ. ಕೆಂಪು ಗ್ರಹದ ಮೇಲಿನ ಜೀವಿಗಳ ಅಸ್ತಿತ್ವದ ಬಗ್ಗೆ ಅಧ್ಯಯನ ನಡೆಸಲು ಅಗತ್ಯವಾದ ಮಹತ್ವದ ಅಂಶಗಳನ್ನು ಈ ನೌಕೆ ಭೂಮಿಗೆ ರವಾನಿಸಲಿದೆ. ಹಾಗೆಯೇ ಜಗತ್ತು ಅಚ್ಚರಿಯಿಂದ ನೋಡುತ್ತಿರುವುದು ಈ ಇಡೀ ಯೋಜನೆಯ ನೇತೃತ್ವವಹಿಸಿದ್ದ ಮಹಿಳೆಯ ಬಗ್ಗೆ. ಅಂದಹಾಗೆ ಈ ಮಹಿಳೆಯ ಬೇರು ಭಾರತ ಮೂಲದ್ದು.
ಭಾರತದಿಂದ ವಿವಿಧ ಕಾರಣಕ್ಕೆ ವಿದೇಶಕ್ಕೆ ತೆರಳಿ ಅಲ್ಲಿಯೇ ನೆಲೆಯೂರಿದ ಅನೇಕ ಪ್ರತಿಭೆಗಳ ಬಗ್ಗೆ ಸದಾ ಚರ್ಚೆ ನಡೆಯುತ್ತಿರುತ್ತದೆ. ಅದರಲ್ಲಿಯೂ ಅಮೆರಿಕದ ರಾಜಕೀಯ, ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತೀಯರು ಪ್ರಮುಖವಾಗಿ ಕಾಣಿಸುತ್ತಾರೆ. ಅದಕ್ಕೆ ಮತ್ತೊಂದು ಸೇರ್ಪಡೆ ಭಾರತ ಮೂಲದ ಡಾ. ಸ್ವಾತಿ ಮೋಹನ್.
ಮಂಗಳ ಗ್ರಹಕ್ಕೆ ಪರ್ಸೆವೆರೆನ್ಸ್ ರೋವರ್ ಸುಗಮವಾಗಿ ಇಳಿದಿದ್ದನ್ನು ಇಡೀ ಜಗತ್ತಿಗೆ ಖಚಿತಪಡಿಸಿದ್ದೇ ಡಾ. ಸ್ವಾತಿ ಮೋಹನ್. 'ನೆಲಸ್ಪರ್ಶ ಖಚಿತವಾಗಿದೆ! ಪರ್ಸೆವೆರೆನ್ಸ್ ಮಂಗಳದ ಮೇಲ್ಮೈನಲ್ಲಿ ಸುರಕ್ಷಿತವಾಗಿದೆ. ಹಿಂದಿನ ಜೀವಗಳ ಕುರುಹುಗಳನ್ನು ಹುಡುಕುವ ಕಾರ್ಯ ಆರಂಭಿಸಲು ಸಿದ್ಧವಾಗಿದೆ' ಎಂದು ಸ್ವಾತಿ ಅವರು ಘೋಷಿಸುತ್ತಿದ್ದಂತೆಯೇ ಕ್ಯಾಲಿಫೋರ್ನಿಯಾದಲ್ಲಿನ ನಾಸಾ ಯೋಜನಾ ನಿಯಂತ್ರಣ ಕೊಠಡಿಯಲ್ಲಿ ಜೋರಾದ ಹರ್ಷೋದ್ಗಾರ ಕೇಳಿಬಂದಿತ್ತು.

ರೋವರ್ ನಿಯಂತ್ರಣದ ಮುಖ್ಯಸ್ಥೆ
ರೋವರ್‌ನ ಆಟಿಟ್ಯೂಡ್ ನಿಯಂತ್ರಣ ಅಭಿವೃದ್ಧಿ ಮತ್ತು ಲ್ಯಾಂಡಿಂಗ್ ವ್ಯವಸ್ಥೆಯ ನೇತೃತ್ವ ವಹಿಸಿದ್ದ ಸ್ವಾತಿ ಅವರು ಈ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಈ ಐತಿಹಾಸಿಕ ಯೋಜನೆಯ ಹಿಂದಿದ್ದ ಪ್ರಮುಖ ವಿಜ್ಞಾನಿಗಳ ತಂಡದಲ್ಲಿ ಸ್ವಾತಿ ಕೂಡ ಒಬ್ಬರು.

ಒಂದು ವರ್ಷದವರಿದ್ದಾಗ ಅಮೆರಿಕ ಪ್ರವೇಶ
ಡಾ. ಸ್ವಾತಿ ಮೋಹನ್ ಅವರು ನಾಸಾದ ಮಾರ್ಸ್ 2020 ಯೋಜನೆಯ ಮಾರ್ಗದರ್ಶನ, ನ್ಯಾವಿಗೇಷನ್ ಮತ್ತು ನಿಯಂತ್ರಣ (ಜಿಎನ್&ಸಿ) ಕಾರ್ಯಾಚರಣೆಯ ಮುಖ್ಯಸ್ಥೆಯಾಗಿದ್ದಾರೆ. ಭಾರತದಲ್ಲಿ ಜನಿಸಿದ ಸ್ವಾತಿ, ಅಮೆರಿಕಕ್ಕೆ ಬರುವಾಗ ಇನ್ನೂ ಪುಟ್ಟ ಕಂದಮ್ಮ. ಅವರು ತಮ್ಮ ಬಾಲ್ಯವನ್ನು ಕಳೆದಿದ್ದು ಉತ್ತರ ವರ್ಜೀನಿಯಾ-ವಾಷಿಂಗ್ಟನ್ ಡಿಸಿ ಮೆಟ್ರೋ ಪ್ರದೇಶದಲ್ಲಿ.

ಶಿಕ್ಷಣ ಅಭ್ಯಾಸ
ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದ ಅವರು, ಎಂಐಟಿಯಲ್ಲಿ ಏರೋನಾಟಿಕ್ಸ್/ಆಸ್ಟ್ರೋನಾಟಿಕ್ಸ್‌ನಲ್ಲಿ ಎಂಎಸ್ ಮತ್ತು ಪಿಎಚ್‌ಡಿ ಪೂರೈಸಿದ್ದಾರೆ. ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿಯಲ್ಲಿ ಮಾರ್ಸ್ ರೋವರ್ ಮಿಷನ್ ಸೇರಿಕೊಂಡ ಸಂದರ್ಭದಿಂದಲೂ ಸ್ವಾತಿ ಅದರ ಭಾಗವಾಗಿದ್ದಾರೆ.

ವಿವಿಧ ಯೋಜನೆಗಳಲ್ಲಿ ಭಾಗಿ
ವಿಜ್ಞಾನಿ ಸ್ವಾತಿ ಅವರು ಕ್ಯಾಸಿನಿ (ಶನಿ ಗ್ರಹ ಯೋಜನೆ) ಮತ್ತು ಜಿಆರ್ಎಐಎಲ್ (ಚಂದ್ರಯಾನ ಯೋಜನೆ) ಯೋಜನೆಗಳಲ್ಲಿ ಸಹ ಕೆಲಸ ಮಾಡಿದ್ದರು. 2013ರಿಂದಲೇ ಈ ಮಂಗಳಗ್ರಹದ ಯೋಜನೆ ಕೆಲಸ ಶುರುವಾಗಿತ್ತು. ಆಗಿನಿಂದಲೂ ಯೋಜನೆಯ ಪ್ರತಿ ವಿವರಗಳು ಸ್ವಾತಿಗೆ ಚಿರಪರಿಚಿತವಾಗಿತ್ತು. ನಾಸಾದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿನ ಯಶಸ್ಸು ಸ್ವಾತಿ ಅವರನ್ನು ಜಗತ್ತಿಗೆ ಪರಿಚಯಿಸಿದೆ. ಪ್ರಸ್ತುತ ಅವರು ಕ್ಯಾಲಿಫೋರ್ನಿಯಾದ ಪಸಡೆನಾದಲ್ಲಿನ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಶಿಕ್ಷಕರಿಂದಾಗಿ ಬದಲಾದ ಕನಸು
ಅನೇಕ ಮಕ್ಕಳಂತೆ ಸ್ವಾತಿ ಮೋಹನ್ ಕೂಡ ಬಾಲ್ಯದಲ್ಲಿ ತನ್ನ ಭವಿಷ್ಯದ ಬಗ್ಗೆ ಕನಸು ಕಂಡಿದ್ದರು. ಆದರೆ ಅದು ಆಗಾಗ ಬದಲಾಗುತ್ತಿತ್ತು. 9ನೇ ವಯಸ್ಸಿನಲ್ಲಿದ್ದಾಗ ಮೊದಲ ಬಾರಿಗೆ 'ಸ್ಟಾರ್ ಟೆಕ್' ನೋಡಿದ ಅವರಿಗೆ ತಾನು ವಿಜ್ಞಾನಿಯಾಗಿ ಜಗತ್ತಿನ ನಿಗೂಢಗಳನ್ನೆಲ್ಲ ಕಂಡುಹಿಡಿಯಬೇಕು. ಬ್ರಹ್ಮಾಡದಲ್ಲಿನ ಹೊಸ ಮತ್ತು ಸುಂದರವಾದ ಜಾಗಗಳನ್ನು ಪತ್ತೆಹಚ್ಚಬೇಕು ಆಸೆ ಮೂಡಿತ್ತು. ಆದರೆ 16ನೇ ವಯಸ್ಸಿನಲ್ಲಿ ಅವರಿಗೆ ಶಿಶುವೈದ್ಯೆಯಾಗಬೇಕೆಂಬ ಬಯಕೆ ಉಂಟಾಗಿತ್ತು. ಕೊನೆಗೆ ಭೌತಶಾಸ್ತ್ರದಲ್ಲಿ ಸಿಕ್ಕ ಮಹಾನ್ ಶಿಕ್ಷಕರೊಬ್ಬರು ಆಕೆಯ ಕನಸುಗಳನ್ನು ಬಾಹ್ಯಾಕಾಶದತ್ತ ಕಟ್ಟಿ ಬೆಳೆಸಿದರು.
ಈಗ ಸ್ವಾತಿ ಹೆಮ್ಮೆಯ ವಿಜ್ಞಾನಿಯಾಗಿ ರೂಪುಗೊಂಡಿದ್ದಾರೆ. ನಾಸಾದ ಭವಿಷ್ಯದ ಅನೇಕ ಹೊಸ ಯೋಜನೆಗಳಲ್ಲಿಯೂ ಸ್ವಾತಿ ಅವರ ಕೊಡುಗೆ ಇರಲಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications