• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರಸು ಕಾಲದಲ್ಲಿ ಕಟ್ಟಿದ್ದ ಅಹಿಂದ ಸೈನ್ಯವೆಲ್ಲಿ? ರಾಹುಲ್ ಗಾಂಧಿ ಕೇಳುತ್ತಿದ್ದಾರೆ!

By ಆರ್ ಟಿ ವಿಠ್ಠಲಮೂರ್ತಿ
|

ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ರೂಪುಗೊಂಡ ಅಹಿಂದ ವರ್ಗಗಳ ಸೈನ್ಯ ಈಗೆಲ್ಲಿದೆ?
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಕೆ.ಸಿ.ವೇಣುಗೋಪಾಲ್ ಅವರ ಬಳಿ ಇತ್ತೀಚೆಗೆ ಮೇಲಿಂದ ಮೇಲೆ ಕೇಳುತ್ತಿರುವ ಪ್ರಶ್ನೆ.
ರಾಹುಲ್ ಗಾಂಧಿಯವರ ಈ ಪ್ರಶ್ನೆಗೆ ಇದುವರೆಗೆ ಉತ್ತರ ಸಿಕ್ಕಿಲ್ಲ. ಅದೇ ರೀತಿ ಉತ್ತರ ನೀಡಲು ಕೆ.ಸಿ.ವೇಣುಗೋಪಾಲ್ ಅವರಿಗೆ ಸಾಧ್ಯವಾಗುತ್ತಿಲ್ಲ.

ದೇವರಾಜ ಅರಸರ ಕಾಲದಲ್ಲಿ ರೂಪುಗೊಂಡ ಅಹಿಂದ ಸೈನ್ಯದ ಕುರಿತ ವಿವರವನ್ನು ರಾಹುಲ್ ಗಾಂಧಿ ಕೇಳುವುದು ಸಹಜ. ಯಾಕೆಂದರೆ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲಿನ ನಂತರ ರಾಜ್ಯದ ಹಲವು ನಾಯಕರು ಈ ಕುರಿತು ರಾಹುಲ್ ಗಾಂಧಿ ಅವರಿಗೆ ವಿವರ ನೀಡಿದ್ದಾರೆ. ಈ ಪ್ರಶ್ನೆಗೆ ಉತ್ತರ ಕಂಡು ಹಿಡಿದರೆ, ಮುಂದಿನ ದಿನಗಳಲ್ಲಿ ಯಾವ ರೀತಿ ಸೈನ್ಯವನ್ನು ಕಟ್ಟಬಹುದು ಅನ್ನುವುದು ಗೊತ್ತಾಗುತ್ತದೆ ಎಂದಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಈ ಪ್ರಶ್ನೆಯನ್ನು ಕೆ.ಸಿ.ವೇಣುಗೋಪಾಲ್ ಅವರಿಗೆ ಕೇಳುತ್ತಿದ್ದಾರೆ. ಉತ್ತರ ನೀಡಲಾಗದೆ ಕೆ.ಸಿ.ವೇಣುಗೋಪಾಲ್ ತಡಬಡಾಯಿಸುತ್ತಿದ್ದಾರೆ.

ಮೋದಿಯನ್ನು ಸದೆಬಡಿಯಲು ಹೆಗಡೆ ತಂತ್ರಕ್ಕೆ ಕಾಂಗ್ರೆಸ್ ಮೊರೆ!

ದೇವರಾಜ ಅರಸರು ಕಟ್ಟಿದ ಅಹಿಂದ ಸೈನ್ಯದ ಬಗ್ಗೆ ವಿವರವಾಗಿ ನೋಡೋಣ. 1969ರಲ್ಲಿ ಅಖಿಲ ಭಾರತ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಯಾಗುವವರೆಗೆ ಕರ್ನಾಟಕದಲ್ಲಿ ಅದು ತನ್ನದೇ ಪ್ರತ್ಯೇಕ ಸೈನ್ಯವನ್ನು ಹೊಂದುವ ಅಗತ್ಯವೇ ಇರಲಿಲ್ಲ. ಯಾಕೆಂದರೆ ಕರ್ನಾಟಕದ ಎಲ್ಲ ಸಮುದಾಯಗಳು ಕಾಂಗ್ರೆಸ್ ಜತೆ ದೊಡ್ಡ ಮಟ್ಟದಲ್ಲಿ ನಿಂತಿದ್ದವು. ಆದರೆ ಯಾವಾಗ 1969ರಲ್ಲಿ ಕಾಂಗ್ರೆಸ್ ವಿಭಜನೆಯಾಯಿತೋ? ಈ ವಿಭಜನೆಯ ಮೂಲಕ ಮೊದಲು ಘಾಸಿಗೊಳಗಾದವರು ಲಿಂಗಾಯತರು. ಯಾಕೆಂದರೆ ಅವತ್ತಿನ ಮಟ್ಟಿಗೆ ಅವರ ನಾಯಕರಾಗಿದ್ದವರು ನಿಜಲಿಂಗಪ್ಪ. ಅವರು ಇಂದಿರಾ ವಿರೋಧಿ ಸಿಂಡಿಕೇಟ್ ನಲ್ಲಿದ್ದರು. ಹೀಗಾಗಿ ಕಾಂಗ್ರೆಸ್ ವಿಭಜನೆಯಾದಾಗ ಸಹಜವಾಗಿಯೇ ಅವರು ಮೂಲೆಗುಂಪಾದರು. ಇಲ್ಲಿ ಮುಖ್ಯಮಂತ್ರಿಯಾಗಿದ್ದ ಅವರ ಶಿಷ್ಯ ವೀರೇಂದ್ರಪಾಟೀಲರೂ ರಾಜೀನಾಮೆ ಕೊಡಬೇಕಾಯಿತು.

ಯಾವಾಗ ಈ ಬೆಳವಣಿಗೆ ನಡೆಯಿತೋ? ಇದಾದ ನಂತರ ರಾಜ್ಯ ಕಾಂಗ್ರೆಸ್ ನಲ್ಲಿ ಪ್ರವರ್ಧಮಾನಕ್ಕೆ ಬಂದ ದೇವರಾಜ ಅರಸರಿಗೆ ಒಂದು ವಿಷಯ ಸ್ಪಷ್ಟವಾಯಿತು. ಅದೆಂದರೆ, ಮುಂದಿನ ದಿನಗಳಲ್ಲಿ ಲಿಂಗಾಯತ ಸಮುದಾಯ ಕಾಂಗ್ರೆಸ್ ವಿರುದ್ಧ ನಿಲ್ಲುತ್ತದೆ ಎಂಬುದು. ಹೀಗಾಗಿ ಅವರು 1972ರಲ್ಲಿ ಮುಖ್ಯಮಂತ್ರಿಯಾದ ನಂತರ ಅಹಿಂದ ವರ್ಗಗಳ ಸೈನ್ಯವನ್ನು ರೂಪಿಸಲು ಸ್ಕೆಚ್ ಹಾಕತೊಡಗಿದರು. ಶೋಷಿತ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರೆ ಆರ್ಥಿಕವಾಗಿ, ರಾಜಕೀಯವಾಗಿ ಬಲಿಷ್ಠವಾಗಬೇಕು ಎಂದು ಮೇಲಿಂದ ಮೇಲೆ ಹೇಳತೊಡಗಿದರು.

ಭೂ ಸುಧಾರಣೆಯ ಹರಿಕಾರ ಅರಸು

ಭೂ ಸುಧಾರಣೆಯ ಹರಿಕಾರ ಅರಸು

ಭೂ ಸುಧಾರಣೆ ಕಾಯ್ದೆಯ ಮೂಲಕ ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ನಿರ್ಧಾರವನ್ನು ಅರಸರು ಜಾರಿಗೆ ತಂದಿದ್ದೇ ಈ ಹಿನ್ನೆಲೆಯಲ್ಲಿ. ಅವತ್ತಿನ ಸ್ಥಿತಿಯಲ್ಲಿ ಕರ್ನಾಟಕದ ಬಹುತೇಕ ಭೂಮಿಯ ಮಾಲೀಕರಾಗಿದ್ದವರು ಲಿಂಗಾಯತರು, ಒಕ್ಕಲಿಗರು ಹಾಗೂ ಒಂದಷ್ಟು ಪ್ರಮಾಣದಲ್ಲಿ ಬ್ರಾಹ್ಮಣರು. ಯಾವಾಗ ಅವರ ಕೈಯಿಂದ ಭೂಮಿಯನ್ನು ಕಿತ್ತು ಅಹಿಂದ ಸಮುದಾಯಗಳಿಗೆ ನೀಡುವ ದೇವರಾಜ ಅರಸರ ಉದ್ದೇಶ ಕಾನೂನು ರೀತಿಯಲ್ಲಿ ಅಸ್ತಿತ್ವಕ್ಕೆ ಬಂತೋ? ಇದಾದ ನಂತರ ಕರ್ನಾಟಕದ ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು ದೇವರಾಜ ಅರಸರ, ಆ ಮೂಲಕ ಕಾಂಗ್ರೆಸ್ ವಿರುದ್ದ ತಿರುಗಿ ಬಿದ್ದರು.

ವರ್ಕೌಟ್ ಆದ ಅರಸರ ತಂತ್ರಗಾರಿಕೆ

ವರ್ಕೌಟ್ ಆದ ಅರಸರ ತಂತ್ರಗಾರಿಕೆ

ಮುಂದೆ ರಾಷ್ಟ್ರದಲ್ಲಿ ಜನತಾ ಪಕ್ಷ ತಲೆ ಮೇಲೆತ್ತಿ ನಿಂತು ಅಧಿಕಾರ ಹಿಡಿಯುವಂತಾದರೂ ಕರ್ನಾಟಕದಲ್ಲಿ ಮಾತ್ರ ದೇವರಾಜ ಅರಸರು ಕಟ್ಟಿದ ಅಹಿಂದ ಸೈನ್ಯ ದೊಡ್ಡ ಮಟ್ಟದಲ್ಲಿ ವರ್ಕ್ ಔಟ್ ಆಯಿತು. 1978ರ ವಿಧಾನಸಭಾ ಚುನಾವಣೆಯಲ್ಲಿ ನೂರಾ ನಲವತ್ತಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವಂತಾಯಿತು. ಈ ಕಾರಣಕ್ಕಾಗಿಯೇ ಅರಸರು 1972ರಿಂದ ನಿರಂತರವಾಗಿ ಅಹಿಂದ ಸಮುದಾಯಗಳ ತಳದಿಂದ ಗುರುತಿಸಿ, ಗುರುತಿಸಿ ನಾಯಕರನ್ನು ಸೃಷ್ಟಿಸಿದರು. ಆ ಸಮುದಾಯಗಳಲ್ಲಿ ಭರವಸೆ ತುಂಬುವಲ್ಲಿ ಯಶಸ್ವಿಯಾದರು. ಹೀಗಾಗಿ 1978ರಲ್ಲಿ ಬಲಿಷ್ಠ ಸಮುದಾಯಗಳ ವಿರೋಧದ ನಡುವೆಯೂ ಕಾಂಗ್ರೆಸ್ ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬಂತು.

ಮುಂದೆ ಅದೇ ದೇವರಾಜ ಅರಸರನ್ನು ಚಾಡಿ ಮಾತು ಕೇಳಿ ಇಂದಿರಾಗಾಂಧಿ ಪದಚ್ಯುತಗೊಳಿಸಿದರು. ಪರಿಣಾಮವಾಗಿ ಜನತಾರಂಗ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೆ ಅದು ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಅಹಿಂದ ಸೈನ್ಯದಲ್ಲಿ ಸ್ವಲ್ಪ ಮಟ್ಟಿನ ಗೊಂದಲ ಮೂಡಿಸುವಲ್ಲಿ ಸಫಲವಾಗಿದ್ದು ನಿಜ. ಆದರೆ ಇಂತಹ ಗೊಂದಲಗಳು ಕಾಲದಿಂದ ಕಾಲಕ್ಕೆ ಕಾಣಿಸಿದರೂ ಅಹಿಂದ ಸೈನ್ಯ ಎಂಬುದು ಕಾಂಗ್ರೆಸ್ ಜತೆ ಇದ್ದೇ ಇತ್ತು. 1989 ಹಾಗೂ 1999ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ನಂತರದ ಚುನಾವಣೆಗಳಲ್ಲಿ ಸೋತಿದ್ದರೆ ಅದಕ್ಕೆ ಆಡಳಿತ ವಿರೋಧಿ ಅಲೆ ಕಾರಣ ಮತ್ತು ಆಡಳಿತ ವಿರೋಧಿ ಅಲೆಯನ್ನು ಜನತಾ ಪರಿವಾರ ಎನ್ ಕ್ಯಾಶ್ ಮಾಡಿಕೊಳ್ಳುವಲ್ಲಿ ಸಫಲವಾಗಿದ್ದು ಮುಖ್ಯ ಕಾರಣ.

ಬಿಜೆಪಿಗೆ ಬೆಂಬಲವಾಗಿ ನಿಂತ ಎಡಗೈ ಸಮುದಾಯ

ಬಿಜೆಪಿಗೆ ಬೆಂಬಲವಾಗಿ ನಿಂತ ಎಡಗೈ ಸಮುದಾಯ

ಆದರೆ ಮೊದಲ ಬಾರಿ ಅಹಿಂದ ಸೈನ್ಯಕ್ಕೆ ಗುನ್ನ ಬಿದ್ದಿದ್ದು ಬಿಜೆಪಿ ಶಕ್ತಿಯುತವಾಗಿ ಮೇಲೆದ್ದು ನಿಂತ ಮೇಲೆ. ಅಹಿಂದ ವರ್ಗಗಳ ಸೈನ್ಯ ಹೇಗಿದ್ದರೂ ತನ್ನ ಫಿಕ್ಸೆಡ್ ಡೆಪಾಸಿಟ್ ಆಗಿರುವುದರಿಂದ ಬರುವ ಬಡ್ಡಿಯಲ್ಲಿ ಕೊರತೆ ಏನಾಗುವುದಿಲ್ಲ ಎಂದು ಕಾಂಗ್ರೆಸ್ ಪಕ್ಷ ನಂಬಿತ್ತು. ಆದರೆ ಅದರ ನಂಬಿಕೆಗೆ ಮೊದಲ ಹೊಡೆತ ಕೊಟ್ಟವರು ದಲಿತ ವರ್ಗದ ಎಡಗೈ ಸಮುದಾಯದವರು. ದಲಿತರಿಗೆ ಒಳಮೀಸಲಾತಿಯನ್ನು ಕಲ್ಪಿಸಿಕೊಡಿ ಎಂಬ ತನ್ನ ಮಾತಿಗೆ ಕಾಂಗ್ರೆಸ್ ಮಾನ್ಯತೆ ನೀಡದ ಪರಿಣಾಮವಾಗಿ ಅದು ಬಿಜೆಪಿಯ ಜತೆ ನಿಂತುಕೊಂಡಿತು. ಈ ಬೆಳವಣಿಗೆಯ ನಂತರವಾದರೂ ಕಾಂಗ್ರೆಸ್ ಪಕ್ಷ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಕೈ ಪಾಳೆಯ ಅಹಿಂದ ಸೈನ್ಯ ಯಾವ ಕಾರಣಕ್ಕೂ ತನ್ನನ್ನು ಬಿಟ್ಟು ಬೇರೆ ಕಡೆ ಹೋಗುವುದಿಲ್ಲ ಎಂಬ ಭ್ರಮೆಯಲ್ಲಿ ಕಾಲ ಕಳೆಯತೊಡಗಿತು.

ಅಹಿಂದ ಕಟ್ಟುವ ಗೋಜಿಗೇ ಹೋಗಲಿಲ್ಲ ಸಿದ್ದು

ಅಹಿಂದ ಕಟ್ಟುವ ಗೋಜಿಗೇ ಹೋಗಲಿಲ್ಲ ಸಿದ್ದು

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ 2013ರಲ್ಲಿ ಅಧಿಕಾರಕ್ಕೆ ಬಂದ ಮೇಲಾದರೂ ಅಹಿಂದ ಸೈನ್ಯವನ್ನು ಪುನರ್ರಚಿಸುವ, ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕಿತ್ತು. ಆದರೆ ಆಗಲೂ ಅದೂ ಸಾಧ್ಯವಾಗಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ನೀತಿಗಳ ವಿರುದ್ದ ಬಡ, ಮಧ್ಯಮ ವರ್ಗದ ರಕ್ಷಣೆಗಾಗಿ ಸಿದ್ದರಾಮಯ್ಯ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು ನಿಜ. ಆದರೆ ಅಹಿಂದ ಸೈನ್ಯದ ಆಳದಲ್ಲಿದ್ದ ಗೊಂದಲವನ್ನು ನಿವಾರಿಸಲು ಅವರೂ ಮುಂದಾಗಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅವರ ಕಾಲದಲ್ಲಿ ಅಹಿಂದ ಸೈನ್ಯ ನಿರಂತರವಾಗಿ ಕಾಂಗ್ರೆಸ್ ಪಕ್ಷದ ಬಗ್ಗೆ ಭರವಸೆ ಕಳೆದುಕೊಳ್ಳತೊಡಗಿತು. ಉದಾಹರಣೆಗೇ ತೆಗೆದುಕೊಳ್ಳಿ. ದಲಿತ ವರ್ಗದ ಎಡಗೈ ಸಮುದಾಯಕ್ಕೆ ಅನುಕೂಲವಾಗುವಂತೆ ಒಳಮೀಸಲಾತಿ ಸೌಲಭ್ಯ ಕಲ್ಪಿಸಿಕೊಡುವ ವಿಷಯದಲ್ಲಿ ಎಷ್ಟೇ ಒತ್ತಾಯ ಬಂದರೂ ಸಿದ್ದರಾಮಯ್ಯ ಅದನ್ನು ಪರಿಹರಿಸುವ ಆಸಕ್ತಿ ತೋರಲಿಲ್ಲ. ದಲಿತರಿಗೆ ಒಳಮೀಸಲಾತಿ ಕಲ್ಪಿಸಿಕೊಡುವ ವಿಷಯ ಸಿದ್ದರಾಮಯ್ಯ ಅವರ ಕೈಲಿರಲಿಲ್ಲವಾದರೂ, ಒಳಮೀಸಲಾತಿ ಸೌಲಭ್ಯವನ್ನು ಕಲ್ಪಿಸಿಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಶಕ್ತಿ ಅವರಿಗಿತ್ತು. ಆದರೆ ಅವರು ಆ ಕೆಲಸ ಮಾಡಲಿಲ್ಲ.

ದಲಿತ ನಾಯಕನಿಗೆ ಸಿಎಂ ಪಟ್ಟ ದಕ್ಕಬೇಕಿತ್ತು

ದಲಿತ ನಾಯಕನಿಗೆ ಸಿಎಂ ಪಟ್ಟ ದಕ್ಕಬೇಕಿತ್ತು

ಈ ಮಧ್ಯೆ ದಲಿತ ಸಮುದಾಯ, ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿ ತಮ್ಮವರಿಗೆ ಸಿಎಂ ಪದವಿ ದಕ್ಕಬೇಕಿತ್ತು. ಆದರೆ ದಲಿತ ನಾಯಕ ಪರಮೇಶ್ವರ್ 2013ರ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವುದರಿಂದ ಕನಿಷ್ಠ ಪಕ್ಷ ಅವರನ್ನು ಉಪಮುಖ್ಯಮಂತ್ರಿ ಪದವಿಗೆ ಏರಿಸಬೇಕು ಎಂಬ ಬೇಡಿಕೆಯನ್ನು ಪುನರುಚ್ಚರಿಸತೊಡಗಿತು. ಆದರೆ ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡುವುದು ಎಂದರೆ ಮುಖ್ಯಮಂತ್ರಿ ಪದವಿಗೆ ಪರ್ಯಾಯವಾದ ಶಕ್ತಿ ಕೇಂದ್ರವನ್ನು ಸೃಷ್ಟಿಸಿದಂತೆ ಅಂತ ಬಾವಿಸಿ, ಸಿದ್ದರಾಮಯ್ಯ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಸಾಲದು ಎಂಬಂತೆ ಹಳೆ ಮೈಸೂರು ಭಾಗದಲ್ಲಿ ಪ್ರಭಾವಿಯಾಗಿದ್ದ ದಲಿತ ನಾಯಕ ವಿ. ಶ್ರೀನಿವಾಸ ಪ್ರಸಾದ್ ಅವರನ್ನು ಸಂಪುಟದಿಂದ ಕಿತ್ತು ಹಾಕಿದರು.
ಈ ಎಲ್ಲ ಅಂಶಗಳು ಇತ್ತೀಚಿನ ಚುನಾವಣೆಯಲ್ಲಿ ದಲಿತ ವರ್ಗದ ಬಲಗೈ ಸಮುದಾಯ ಕೂಡಾ ಗಣನೀಯ ಪ್ರಮಾಣದಲ್ಲಿ ಕಾಂಗ್ರೆಸ್ ಗೆ ಉಲ್ಟಾ ಹೊಡೆಯುವಂತೆ ಮಾಡಿತು.

ಮುಸ್ಲಿಂ ಸಮುದಾಯ ರಕ್ಷಿಸಬಲ್ಲ ನಾಯಕ

ಮುಸ್ಲಿಂ ಸಮುದಾಯ ರಕ್ಷಿಸಬಲ್ಲ ನಾಯಕ

ಇನ್ನು ಹಿಂದುಳಿದವರ ವಿಷಯ ಬಂದರೆ, ಹಿಂದುಳಿದ ವರ್ಗಗಳ ಅಣ್ಣ ಅನ್ನಿಸಿಕೊಂಡ ಸಮುದಾಯಕ್ಕೇ ಸಿದ್ದರಾಮಯ್ಯ ಹೆಚ್ಚಿನ ಶಕ್ತಿ ತುಂಬಿದರು. ಹೀಗಾಗಿ ಬಹುತೇಕ ಹಿಂದುಳಿದ ಜಾತಿಗಳು ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ನ ಕೈ ಬಿಟ್ಟವು. ಹೀಗಾಗಿ ಉಳಿದಿದ್ದು ಅಲ್ಪಸಂಖ್ಯಾತರು ಮಾತ್ರ.ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ನೀತಿಗಳ ವಿರುದ್ದ ನಿಂತ ಸಿದ್ದರಾಮಯ್ಯ ಅವರು ಸಹಜವಾಗಿಯೇ ಅಲ್ಪಸಂಖ್ಯಾತ ಸಮುದಾಯಕ್ಕೆ, ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಸಮುದಾಯಕ್ಕೆ ತಮ್ಮನ್ನು ರಕ್ಷಿಸಬಲ್ಲ ನಾಯಕರಂತೆ ಕಂಡರು.ಹೀಗಾಗಿ ಏನೇ ಒತ್ತಡಗಳಿದ್ದರೂ 2018ರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರು ಸಾಲಿಡ್ಡಾಗಿ ಕಾಂಗ್ರೆಸ್ ಪಕ್ಷದ ಜತೆ ನಿಂತರು. ರಾಜ್ಯದ ಯಾವ್ಯಾವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಐದರಿಂದ ಹತ್ತು ಸಾವಿರ ಮತಗಳ ಅಂತರದಿಂದ ಗೆದ್ದಿದೆಯೋ? ಅವು ಮುಸ್ಲಿಮರು ಗಣನೀಯ ಶಕ್ತಿಯನ್ನು ಹೊಂದಿರುವ ಕ್ಷೇತ್ರಗಳು ಎಂಬುದು ರಹಸ್ಯವೇನಲ್ಲ. ಹೀಗೆ ಮುಸ್ಲಿಮರು ಬೆಂಬಲ ಸಾಲಿಡ್ಡಾಗಿ ದಕ್ಕಿದ ಪರಿಣಾಮವಾಗಿ ಕಾಂಗ್ರೆಸ್ ಪಕ್ಷ ಎಂಭತ್ತು ಸೀಟುಗಳ ಗಡಿಗೆ ಬಂದು ನಿಲ್ಲುವಂತೆ ಮಾಡಿತು.

ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿಯೂ ಗೆದ್ದು ಬೀಗಿದ ಬಿಜೆಪಿ

ಕರ್ನಾಟಕದಲ್ಲಿ ಮುಸ್ಲಿಮರು ಏಕಾಂಗಿ

ಕರ್ನಾಟಕದಲ್ಲಿ ಮುಸ್ಲಿಮರು ಏಕಾಂಗಿ

ಕಾಂಗ್ರೆಸ್ ಗೆ ಈ ರೀತಿ ಬೆಂಬಲ ನೀಡಿದ ಮುಸ್ಲಿಮರು ಕರ್ನಾಟಕದ ಮಟ್ಟಿಗೆ ಏಕಾಂಗಿಗಳಾದ ಭಾವ ಅನುಭವಿಸುತ್ತಿದ್ದಾರೆ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ತಾನು ಮಂಡಿಸಿದ ಬಜೆಟ್ ನಲ್ಲಿ ಔಪಚಾರಿಕವಾಗಿಯಾದರೂ ಮುಸ್ಲಿಮರ ಕಲ್ಯಾಣದ ಬಗ್ಗೆ ಮಾತನಾಡಲಿಲ್ಲ. ಅವರು ಮಾತನಾಡುವಂತೆ ಮಾಡುವಲ್ಲಿ ಕಾಂಗ್ರೆಸ್ ಪಕ್ಷ ಸಫಲವಾಗಲಿಲ್ಲ. ಪರಿಣಾಮ? ಮುಸ್ಲಿಂ ಸಮುದಾಯವೀಗ ಒಂಟಿತನವನ್ನು ಅನುಭವಿಸುತ್ತಿದೆ. ಹಾಗಂತ ಕಾಂಗ್ರೆಸ್ ಪಕ್ಷಕ್ಕೆ ಬೇರೆಯವರು ಮತವನ್ನೇ ಹಾಕಿಲ್ಲವೇ? ಹಾಕಿದ್ದಾರೆ. ಆದರೆ ಈ ಮುಂಚೆ ನಿಂತಷ್ಟು ಪ್ರಬಲವಾಗಿ ಅವರು ಕಾಂಗ್ರೆಸ್ ಜತೆ ನಿಂತಿಲ್ಲ. ಮುಖ್ಯವಾಗಿ ಹಿಂದ ಸಮುದಾಯಗಳು.

ಎಲ್ಲ ಸಮುದಾಯಗಳಿಗಾಗಿ ಕಾಂಗ್ರೆಸ್

ಎಲ್ಲ ಸಮುದಾಯಗಳಿಗಾಗಿ ಕಾಂಗ್ರೆಸ್

ಹೀಗಾಗಿ ಏಕಾಏಕಿಯಾಗಿ ಕಾಂಗ್ರೆಸ್ ಪಕ್ಷ ಅಹಿಂದ ಸೈನ್ಯದ ಗೊಡವೆ ಬಿಟ್ಟು, ಎಲ್ಲ ಸಮುದಾಯಗಳಿಗಾಗಿ ಕಾಂಗ್ರೆಸ್ ಎಂಬ ಸೂತ್ರವನ್ನು ಅಳವಡಿಸಿಕೊಂಡಿದೆ. ಅದಕ್ಕೀಗ ಬ್ರಾಹ್ಮಣ ಸಮುದಾಯದ ದಿನೇಶ್ ಗುಂಡೂರಾವ್ ಅಧ್ಯಕ್ಷ, ಲಿಂಗಾಯತ ಸಮುದಾಯದ ಈಶ್ವರ್ ಖಂಡ್ರೆ ಕಾರ್ಯಾಧ್ಯಕ್ಷ, ದಲಿತ ನಾಯಕ ಪರಮೇಶ್ವರ್ ಅವರು ಸರ್ಕಾರದಲ್ಲಿ ಉಪಮುಖ್ಯಮಂತ್ರಿ, ಹಿಂದುಳಿದ ಸಮುದಾದ ನಾಯಕ ಸಿದ್ದರಾಮಯ್ಯ ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ. ಆದರೆ ಇವರ ಬೆನ್ನ ಹಿಂದಿದ್ದ ಮತದಾರರು ಕಾಂಗ್ರೆಸ್ ಗಿನ್ನು ಸಾಲಿಡ್ಡು ಬೆಂಬಲ ನೀಡುತ್ತಾರೆ ಅನ್ನುವ ಕುರುಹುಗಳೇ ಕಾಣುತ್ತಿಲ್ಲ. ಹಾಗೆ ಬೆಂಬಲ ನೀಡಿದ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಯಾವ ಸ್ಥಾನಮಾನ ನೀಡಿದೆ ಅನ್ನುವುದು ಗೊತ್ತಾಗುತ್ತಿಲ್ಲ.

ರಾಹುಲ್ ಪ್ರಶ್ನೆಗೆ ವೇಣುಗೋಪಾಲ್ ನಿರುತ್ತರ

ರಾಹುಲ್ ಪ್ರಶ್ನೆಗೆ ವೇಣುಗೋಪಾಲ್ ನಿರುತ್ತರ

ಇದೆಲ್ಲದರ ಪರಿಣಾಮವಾಗಿ ದೇವರಾಜ ಅರಸರ ಕಾಲದಲ್ಲಿ ಕಟ್ಟಿದ್ದ ಅಹಿಂದ ಸೈನ್ಯ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿದೆ. ಅಷ್ಟೇ ಅಲ್ಲ, ಧರ್ಮದ ಹೆಸರಿನಲ್ಲಿ ಬಿಜೆಪಿ ಹಿಂದ ಸಮುದಾಯಗಳ ಗಣನೀಯ ಪ್ರಮಾಣದ ಮತಗಳನ್ನು ಸೆಳೆದುಕೊಂಡಿದೆ. ಇದ್ದುದರಲ್ಲಿ ಒಕ್ಕಲಿಗ ಮತದಾರರ ಮೇಲೆ ದೇವೇಗೌಡ ಮತ್ತು ಕುಮಾರಸ್ವಾಮಿ ಹಿಡಿತ ಇರಿಸಿಕೊಂಡು ಫುಟ್ ಬಾಲ್ ಆಟಕ್ಕಿಳಿದಿದ್ದಾರೆ. ನೋಡಲು ಆಟದಲ್ಲಿ ಅವರ ಎದುರಾಳಿ ಬಿಜೆಪಿಯಾದರೂ, ಕಾಂಗ್ರೆಸ್ ಪಕ್ಷ ಮಾತ್ರ ಚೆಂಡಿನ ರೂಪದಲ್ಲಿದೆ. ಹೀಗಾಗಿ ರಾಹುಲ್ ಗಾಂಧಿಯವರು ಮೇಲಿಂದ ಮೇಲೆ ರಾಜ್ಯ ಕಾಂಗ್ರೆಸ್ ನ ಉಸ್ತುವಾರಿ ಹೊಣೆ ಹೊತ್ತ ಕೆ.ಸಿ.ವೇಣುಗೋಪಾಲ್ ಅವರಿಗೆ ದೇವರಾಜ ಅರಸರ ಕಾಲದಲ್ಲಿ ಕಟ್ಟಿದ ಅಹಿಂದ ಸೈನ್ಯವೆಲ್ಲಿ? ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಉತ್ತರಿಸಲಾಗದ ಹತಾಶ ಸ್ಥಿತಿಯಲ್ಲಿ ವೇಣುಗೋಪಾಲ್ ನಿಂತಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Where has the ahinda built earlier by Devaraj Urs gone in Karnataka? Rahul Gandhi is asking KC Venugopal, as Lok Sabha Elections 2019 is appearing. Siddaramaiah also neglected ahinda furing Karnataka Assembly Elections 2018. Political analysis by RT Vittal Murthy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more