• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂದು ಗಾಲಿ ಜನಾರ್ದನ ರೆಡ್ಡಿ ಹಾಕಿದ್ದ ಸ್ಕೆಚ್ ಯಾವುದು?

By ಆರ್ ಟಿ ವಿಠ್ಠಲಮೂರ್ತಿ
|

ಒಂದು ಕಾಲದಲ್ಲಿ ಕರ್ನಾಟಕದ ರಾಜಕಾರಣದಲ್ಲಿ ಸುನಾಮಿಯಂತೆ ಅಬ್ಬರಿಸಿದ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜೋಡಿ ದೂರವಿಟ್ಟಿರಲು ಕಾರಣವೇನು?

ಈ ಪ್ರಶ್ನೆ ಬಂದಾಗ ಬಹಳ ಮಂದಿ ಹಿಂದಿನ ಅಕ್ರಮ ಗಣಿಗಾರಿಕೆ ಪ್ರಕರಣವನ್ನೇ ಎತ್ತಿ ತೋರಿಸಿ, ಇದೇ ಕಾರಣಕ್ಕಾಗಿ ಮೋದಿ ಹಾಗೂ ಅಮಿತ್ ಶಾ ಜೋಡಿ ಜನಾರ್ದನ ರೆಡ್ಡಿ ಅವರನ್ನು ದೂರವಿಟ್ಟಿದೆ ಎನ್ನುತ್ತಿದ್ದಾರೆ.

ಬಳ್ಳಾರಿಯಲ್ಲಿ ರೆಡ್ಡಿ ಬ್ರದರ್ಸ್ ಓಲೈಕೆ ಬಿಜೆಪಿಗೆ ಅನಿವಾರ್ಯವೇ?!

ಆದರೆ ಜನಾರ್ದನ ರೆಡ್ಡಿ ಅವರನ್ನು ದೂರವಿಡಲು ಆಕ್ರಮ ಗಣಿಗಾರಿಕೆಯ ಆರೋಪ ಕಾರಣವಲ್ಲ. ಯಾಕೆಂದರೆ ಜಾಗತೀಕರಣ ಶುರುವಾದ ನಂತರದ ದಿನಗಳಲ್ಲಿ ಚುನಾವಣೆ ಎಂಬುದು ದುಬಾರಿ ವ್ಯವಹಾರವಾಗಿ ಪರಿವರ್ತನೆಯಾಗಿದೆ. ಇವತ್ತು ಒಂದು ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಎದುರಿಸಲು ಕ್ಷೇತ್ರಗಳಿಗೆ ಅನುಗುಣವಾಗಿ ಐದರಿಂದ ಐವತ್ತು ಕೋಟಿ ರು.ಗಳ ತನಕ ವೆಚ್ಚ ಮಾಡುವ ಸ್ಥಿತಿ ಇದೆ.

ಜನಾರ್ದನ ರೆಡ್ಡಿ ಜತೆ ಸೇರಿ ಬಿಜೆಪಿ ಹೆಣೆದಿರುವ ತ್ರಿಶೂಲ ವ್ಯೂಹ ಏನದು?

ಗಣಿರೆಡ್ಡಿ ಪಡೆಯ ದಂಡನಾಯಕ ಜನಾರ್ದನ ರೆಡ್ಡಿ ಕರ್ನಾಟಕದ ರಾಜಕಾರಣದಲ್ಲಿ ಮಿಂಚಿನಂತೆ ಬಂದಿದ್ದೇ 2008 ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ. ಆಗವರಿಗೆ ಶಕ್ತಿ ತುಂಬಿದ್ದು ಆರ್ಥಿಕ ಶಕ್ತಿಯೇ ಹೊರತು ಜನಪ್ರಿಯತೆ ಅಲ್ಲ.ವಸ್ತುಸ್ಥಿತಿ ಎಂದರೆ 2008ರ ವಿಧಾನಸಭಾ ಚುನಾವಣೆಗೂ ಮುನ್ನ ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ಹೋರಾಡಲು ಬಿಜೆಪಿಗೆ ಅಗತ್ಯದ ಶಸ್ತ್ರಾಸ್ತ್ರ ಒದಗಿಸಿದ್ದ ಜನಾರ್ದನ ರೆಡ್ಡಿ, ಇದೇ ಕಾರಣಕ್ಕಾಗಿ ಎಮ್ಮೆಲ್ಸಿ ಪದವಿಯನ್ನು ಬಯಸಿದ್ದರು. ಅವರ ಬಯಕೆಯನ್ನು ಬಿಜೆಪಿ ಈಡೇರಿಸಿತು ಕೂಡಾ.

ರೆಡ್ಡಿ ಕೊಟ್ಟೇಟಿಗೆ ಕಣ್ಣೀರಾಗಿದ್ದ ಯಡಿಯೂರಪ್ಪ

ರೆಡ್ಡಿ ಕೊಟ್ಟೇಟಿಗೆ ಕಣ್ಣೀರಾಗಿದ್ದ ಯಡಿಯೂರಪ್ಪ

ಆದರೆ 2008ರ ಚುನಾವಣೆಯ ನಂತರ ಅವರ ಖದರ್ ಬದಲಾಯಿತು. ಒಂದು ಕಡೆ ಗಣಿರೆಡ್ಡಿ ಪಡೆಯ ಕರುಣಾಕರ ರೆಡ್ಡಿ, ಬಿ. ಶ್ರೀರಾಮುಲು ಸೇರಿದಂತೆ ಹಲವರು ವಿಧಾನಸಭೆಗೆ ಆರಿಸಿ ಬಂದರೆ ಮತ್ತೊಂದು ಕಡೆಯಿಂದ ಗಣಿ ವ್ಯವಹಾರ ದೊಡ್ಡ ಮಟ್ಟದಲ್ಲಿ ಅವರ ಶಕ್ತಿಯನ್ನು ಹೆಚ್ಚಿಸಿತು.

ಪರಿಣಾಮವಾಗಿಯೇ ಅವರು ಅವತ್ತು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ವಿರುದ್ಧ ಬಂಡಾಯ ಹೂಡಿ, ಪಕ್ಷದ ಶಾಸಕರ ಬೆಂಬಲವನ್ನು ಪಡೆದು ದೊಡ್ಡ ಮಟ್ಟದಲ್ಲಿ ಆಟ ಆಡಿದ್ದು. ಆ ಆಟದ ಪರಿಣಾಮವಾಗಿ ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವ ಷರತ್ತಿಗೆ ಒಪ್ಪಿ ಕಣ್ಣೀರು ಸುರಿಸಬೇಕಾಯಿತು. ಅದೇ ರೀತಿ ಗಣಿರೆಡ್ಡಿ ಪಡೆಯ ಒತ್ತಾಯಕ್ಕೆ ಮಣಿದು ತಮಗೆ ಇಷ್ಟವಿಲ್ಲದಿದ್ದರೂ ಜಗದೀಶ್ ಶೆಟ್ಟರ್ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕಾಯಿತು.

ಸ್ವರಾಜ್ ಅವರನ್ನು ಪ್ರಧಾನಿ ಹುದ್ದೆಗೇರಿಸಬೇಕು

ಸ್ವರಾಜ್ ಅವರನ್ನು ಪ್ರಧಾನಿ ಹುದ್ದೆಗೇರಿಸಬೇಕು

ಹೀಗೆ ದಿನದಿಂದ ದಿನಕ್ಕೆ ಪ್ರಬಲವಾಗುತ್ತಾ ಹೋದ ಗಣಿರೆಡ್ಡಿ ಪಡೆ ಅದೇ ರೀತಿ ಮುಂದುವರಿದಿದ್ದರೆ ಏನಾಗುತ್ತಿತ್ತೋ? ಗೊತ್ತಿಲ್ಲ. ಆದರೆ ಈ ಟೈಮಿನಲ್ಲೇ ಗಾಲಿ ಜನಾರ್ದನ ರೆಡ್ಡಿ ಒಂದು ಸ್ಕೆಚ್ ಹಾಕಿದರು. 2014ರ ಲೋಕಸಭಾ ಚುನಾವಣೆಯ ನಂತರ ತಮ್ಮ ಗಾಡ್ ಮದರ್ ಶ್ರೀಮತಿ ಸುಷ್ಮಾ ಸ್ವರಾಜ್ ಅವರನ್ನು ಪ್ರಧಾನಮಂತ್ರಿ ಹುದ್ದೆಗೇರಿಸಬೇಕು ಎಂಬುದು ಈ ಸ್ಕೆಚ್ಚಿನ ಪ್ರಮುಖ ಅಂಶ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಿಜೆಪಿ ವತಿಯಿಂದ ಗೆಲ್ಲಬಲ್ಲವರು ಅಂತ ನೂರೈವತ್ತಕ್ಕೂ ಹೆಚ್ಚು ಮಂದಿಯನ್ನು ಗುರುತಿಸಿ ಅವರಿಗೆ ಶಕ್ತಿ ತುಂಬುವುದು ಈ ಸ್ಕೆಚ್ಚಿನ ಭಾಗವಾಗಿತ್ತು.

ಹೀಗೆ ತಮ್ಮನ್ನು ಬೆಂಬಲಿಸುವ ಗಣನೀಯ ಸಂಖ್ಯೆಯ ಸಂಸದರು ರೆಡಿ ಆದರೆ, ಪಕ್ಷದ ಸಂಸದೀಯ ಸಭೆಯಲ್ಲಿ ಸುಷ್ಮಾ ಸ್ವರಾಜ್ ಅವರ ಬಲ ಹೆಚ್ಚಾಗುತ್ತದೆ. ಆ ಮೂಲಕ ಅವರು ಪ್ರಧಾನಿ ಹುದ್ದೆಯ ಮೇಲೆ ಬಂದು ಕೂರುವಂತೆ ಮಾಡುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿತ್ತು.

ಬಳ್ಳಾರಿಯಲ್ಲಿ ರೆಡ್ಡಿ ಮಾಸ್ಟರ್ ಪ್ಲಾನ್, ಒಂದೇ ಕಲ್ಲಿಗೆ ಮೂರು ಹಕ್ಕಿ

ರೆಡ್ಡಿ ಕನಸಿಗೆ ಅಡ್ಡಗಾಲು ಹಾಕಿದ್ದ ಉಗ್ರಪ್ಪ

ರೆಡ್ಡಿ ಕನಸಿಗೆ ಅಡ್ಡಗಾಲು ಹಾಕಿದ್ದ ಉಗ್ರಪ್ಪ

ಇದರ ಸುಳಿವು ಪಡೆದವರು ಅಂದು ವಿರೋಧ ಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್ ನಾಯಕರಾದ ವಿ.ಎಸ್.ಉಗ್ರಪ್ಪ ಹಾಗೂ ಕೆ.ಸಿ. ಕೊಂಡಯ್ಯ. ತಕ್ಷಣವೇ ಅವರು ದೆಹಲಿಗೆ ಹೋಗಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದರು. ಮುಂದಿನ ಲೋಕಸಭಾ ಚುನಾವಣೆಯ ನಂತರ ಸುಷ್ಮಾ ಸ್ವರಾಜ್ ಅವರನ್ನು ಪ್ರಧಾನಿ ಹುದ್ದೆಗೇರಿಸಲು ಗಣಿರೆಡ್ಡಿಗಳ ಪಡೆ ಮೂರೂವರೆ ಸಾವಿರ ಕೋಟಿ ರೂಗಳಷ್ಟು ಬಂಡವಾಳ ಹೂಡಲು ಸಜ್ಜಾಗಿರುವ ಕುರಿತು ನಮಗೆ ಮಾಹಿತಿ ಲಭ್ಯವಾಗಿದೆ ಎಂದು ವಿವರಿಸಿದರು.

ಅದಾಗಲೇ ಕೇಂದ್ರದಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಹೆಸರಿಗೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೂ, ಸೋನಿಯಾ ಗಾಂಧಿ ಸೂಪರ್ ಪಿ.ಎಂ. ಆಗಿ ಪರಿವರ್ತನೆಯಾಗಿದ್ದರು. ಇಂತಹ ಟೈಮಿನಲ್ಲೇ ವಿ.ಎಸ್.ಉಗ್ರಪ್ಪ ಹಾಗೂ ಕೆ.ಸಿ.ಕೊಂಡಯ್ಯ ತಮ್ಮ ಬಳಿ ತೆಗೆದುಕೊಂಡು ಬಂದ ವಿವರ ಸಹಜವಾಗಿಯೇ ಅವರ ಕೆಂಗಣ್ಣಿಗೆ ಗುರಿಯಾಯಿತು.

ಸೋನಿಯಾ ಪ್ರಧಾನಿಯಾದ್ರೆ ತಲೆ ಬೋಳು

ಸೋನಿಯಾ ಪ್ರಧಾನಿಯಾದ್ರೆ ತಲೆ ಬೋಳು

ಎಷ್ಟೇ ಆದರೂ ಸುಷ್ಮಾ ಸ್ವರಾಜ್ ಅವರ ವಿಷಯದಲ್ಲಿ ಸೋನಿಯಾಗಾಂಧಿ ಅವರಿಗೆ ಒಂದು ಆಕ್ರೋಶ ಇದ್ದೇ ಇತ್ತು. ಅದೆಂದರೆ, 2004ರ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿ ಕೂಟ ಸರ್ಕಾರ ರಚನೆಯಾಗುವುದು ಖಚಿತವಾಯಿತಲ್ಲ? ಆ ಸಂದರ್ಭದಲ್ಲಿ ಪ್ರಧಾನಿ ಹುದ್ದೆಗೆ ಕೇಳಿ ಬಂದಿದ್ದು ಸೋನಿಯಾ ಗಾಂಧಿ ಅವರ ಹೆಸರು.

ಆದರೆ ಪ್ರಧಾನಿ ಹುದ್ದೆಗೆ ಸೋನಿಯಾ ಗಾಂಧಿ ಅವರ ಹೆಸರು ಕೇಳಿ ಬಂದ ಕೂಡಲೇ ಬಿಜೆಪಿ ಅದನ್ನು ಯಾವ ಮಟ್ಟದಲ್ಲಿ ವಿರೋಧಿಸಿತು ಎಂದರೆ ಭಾರತವನ್ನು ಒಬ್ಬ ವಿದೇಶಿ ಪ್ರಜೆ ಆಳುವುದು ಬೇಡವೇ ಬೇಡ ಎಂದು ಕೂಗೆಬ್ಬಿಸಿತು. ಆ ಸಂದರ್ಭದಲ್ಲಿ ಇಡೀ ದೇಶದ ಕಣ್ಣಿಗೆ ಬಿದ್ದವರು ಸುಷ್ಮಾ ಸ್ವರಾಜ್.

ಸೋನಿಯಾ ಗಾಂಧಿ ಅವರೇನಾದರೂ ಪ್ರಧಾನಿ ಹುದ್ದೆಯ ಮೇಲೆ ಕೂತರೆ ನಾನು ತಲೆ ಬೋಳಿಸಿಕೊಳ್ಳುತ್ತೇನೆ ಎಂಬ ಲೆವೆಲ್ಲಿಗೆ ಹೋದ ಸುಷ್ಮಾ ಸ್ವರಾಜ್ ನಡವಳಿಕೆ ಸ್ವತ: ಸೋನಿಯಾಗಾಂಧಿ ಅವರು ದಿಗ್ಭ್ರಮೆಗೊಳ್ಳುವಂತೆ ಮಾಡಿತು. ಅಷ್ಟೇ ಅಲ್ಲ, ಪ್ರಧಾನಿ ಹುದ್ದೆಯ ಮೇಲಿನ ಆಸೆಯಿಂದ ಅವರು ವಿಮುಖರಾಗುವಂತೆ ಮಾಡಿತು.

ರೆಡ್ಡಿ ಸ್ಕೆಚ್ಚಿಗೆ ಸೋನಿಯಾ ಕಣ್ಣು ಕೆಂಪು

ರೆಡ್ಡಿ ಸ್ಕೆಚ್ಚಿಗೆ ಸೋನಿಯಾ ಕಣ್ಣು ಕೆಂಪು

ಅಂತಹ ಸುಷ್ಮಾ ಸ್ವರಾಜ್ ಅವರು ಗಣಿರೆಡ್ಡಿ ಪಡೆಯ ಗಾಡ್ ಮದರ್ ತರಹ ಇರುವ ಕುರಿತು, ಮತ್ತು ಅವರನ್ನು ಪ್ರಧಾನಿ ಹುದ್ದೆಗೇರಿಸಲು ಜನಾರ್ದನ ರೆಡ್ಡಿ ನೇತೃತ್ವದ ಪಡೆ ಸ್ಕೆಚ್ ಹಾಕಿರುವುದು ಸೋನಿಯಾ ಗಾಂಧಿ ಅವರ ಕಣ್ಣು ಕೆಂಪಗಾಗುವಂತೆ ಮಾಡಿದ್ದು ಅಸಹಜವೇನಲ್ಲ.

ಆದರೂ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಇದ್ದ ಒಂದು ಅಲಿಖಿತ ನಿಯಮವನ್ನು ಪಾಲಿಸಲು ಸೋನಿಯಾ ಗಾಂಧಿ ನಿರ್ಧರಿಸಿದರು. ಅದೆಂದರೆ, ಪಕ್ಷ ಯಾವುದೇ ಇರಲಿ, ಟಾಪ್ ಲೆವೆಲ್ಲಿನ ನಾಯಕರು ಪರಸ್ಪರ ವೈಯಕ್ತಿಕ ಹಿತಾಸಕ್ತಿಗೆ ಗಂಡಾಂತರ ಉಂಟು ಮಾಡಬಾರದು ಎಂಬುದು..

ಹೀಗಾಗಿಯೇ ಸುಷ್ಮಾ ಸ್ವರಾಜ್ ವಿರುದ್ಧ ಏನೇ ಕಹಿ ಬಾವನೆಗಳಿರಲಿ, ಆದರೆ ಅದನ್ನೆಲ್ಲ ಒಂದು ಮಟ್ಟಕ್ಕೆ ಸೀಮಿತಗೊಳಿಸಿದ ಸೋನಿಯಾ ಗಾಂಧಿ, ಗಣಿರೆಡ್ಡಿ ಪಡೆಯಿಂದ ದೂರ ಇರುವಂತೆ ಸುಷ್ಮಾ ಸ್ವರಾಜ್ ಅವರಿಗೆ ಸೂಚಿಸಿದರು. ಇಲ್ಲದಿದ್ದರೆ ಗಣಿರೆಡ್ಡಿಗಳು ಎದುರಿಸುವ ಸಂಕಷ್ಟದಲ್ಲಿ ನೀವು ಜತೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು ಅನ್ನುವ ಮಾತು ಅವತ್ತು ದೆಹಲಿಯ ರಾಜಕೀಯ ವಲಯಗಳಿಂದ ಕೇಳಿ ಬಂತು.

ಗಾಡ್ ಮದರ್ರೂ ಅಲ್ಲ, ಸಂಬಂಧವೂ ಇಲ್ಲ

ಗಾಡ್ ಮದರ್ರೂ ಅಲ್ಲ, ಸಂಬಂಧವೂ ಇಲ್ಲ

ಕಾಕತಾಳೀಯವೋ ಎಂಬಂತೆ ಸುಷ್ಮಾ ಸ್ವರಾಜ್ ಕೂಡಾ ಇಂಗ್ಲೀಷ್ ವಾರ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ, ತಮಗೆ ಗಣಿರೆಡ್ಡಿಗಳ ಪರಿಚಯ ಮಾತ್ರ ಇದೆ. ಬಳ್ಳಾರಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಅವರು ಪರಿಚಯವಾಗಿದ್ದರೇ ಹೊರತು ನಾನು ಅವರ ಗಾಡ್ ಮದರ್ರೂ ಅಲ್ಲ, ವ್ಯಾವಹಾರಿಕ ಸಂಬಂಧವನ್ನೂ ಇರಿಸಿಕೊಂಡಿಲ್ಲ ಎಂದಿದ್ದರು.

ಆ ಮೂಲಕ ಸುಷ್ಮಾ ಸ್ವರಾಜ್ ಹಾಗೂ ಗಣಿರೆಡ್ಡಿ ಪಡೆಯ ವಿಶ್ವಾಸ ಮಸುಕಾಗುತ್ತಾ ಹೋಯಿತು. ಆದರೆ ಈ ಬೆಳವಣಿಗೆ ಬಿಜೆಪಿಯ ಒಂದು ಗುಂಪಿಗೆ ಎಚ್ಚರಿಕೆಯ ಗಂಟೆಯಂತೆ ಕೇಳಿಸಿತು.

ಸುಷ್ಮಾ ನಖರಾ ತೋರಿದ್ದು ರಹಸ್ಯವೇನೂ ಅಲ್ಲ

ಸುಷ್ಮಾ ನಖರಾ ತೋರಿದ್ದು ರಹಸ್ಯವೇನೂ ಅಲ್ಲ

ಅದು ನರೇಂದ್ರ ಮೋದಿ ಅವರ ಗ್ಯಾಂಗ್. ಆ ವೇಳೆಗಾಗಲೇ ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದ ಮೋದಿ ಗ್ಯಾಂಗು, ಮುಂದಿನ ದಿನಗಳಲ್ಲಿ ತಮಗೆ ಲಾಲ್ ಕೃಷ್ಣ ಅಡ್ವಾಣಿಯವರಂತೆಯೇ ಸುಷ್ಮಾ ಸ್ವರಾಜ್ ಕೂಡಾ ಅಡ್ಡಿಯಾಗಬಹುದು ಎಂದು ಭಾವಿಸಿತು.

ಅದೇ ರೀತಿ ಸುಷ್ಮಾ ಸ್ವರಾಜ್ ಕೂಡಾ ಬಿಜೆಪಿಯಲ್ಲಿ ಮೋದಿ ಗ್ಯಾಂಗಿನ ಏಳಿಗೆಯನ್ನು ಸಹಿಸಿಕೊಳ್ಳಲಿಲ್ಲ. ಮುಂದೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಮೋದಿ ಪ್ರಚಾರಕ್ಕೆ ಹೋದ ಕಡೆ ನಾನು ಹೋಗುವುದಿಲ್ಲ ಎಂಬುದರಿಂದ ಹಿಡಿದು ಹಲವು ವಿಷಯಗಳಲ್ಲಿ ಸುಷ್ಮಾ ಸ್ವರಾಜ್ ನಖರಾ ತೋರಿಸಿದ್ದು ರಹಸ್ಯವೂ ಅಲ್ಲ. ಇದರಿಂದಾಗಿ ಮೋದಿ ಗ್ಯಾಂಗು ಮತ್ತಷ್ಟು ಕೆರಳಿದ್ದೂ ಸುಳ್ಳಲ್ಲ. ಪರಿಣಾಮವೇನಾಯಿತು? ಎಂಬುದು ಎಲ್ಲರಿಗೂ ಗೊತ್ತೇ ಇದೆ.

ಸುಷ್ಮಾರನ್ನು ತಣ್ಣಗಾಗಿಸಿದ ವಿದೇಶಾಂಗ ಖಾತೆ

ಸುಷ್ಮಾರನ್ನು ತಣ್ಣಗಾಗಿಸಿದ ವಿದೇಶಾಂಗ ಖಾತೆ

2014ರ ಲೋಕಸಭಾ ಚುನಾವಣೆಯ ನಂತರ ಮೋದಿ ಗ್ಯಾಂಗು ಅಡ್ವಾಣಿ, ಸುಷ್ಮಾ ಸ್ವರಾಜ್ ಸೇರಿದಂತೆ ಹಲ ಪ್ರಮುಖರನ್ನು ತಮ್ಮ ನಂಬಿಕಸ್ಥ ವಲಯದಿಂದ ದೂರ ಇಟ್ಟಿತು. ಸುಷ್ಮಾ ಸ್ವರಾಜ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡು ವಿದೇಶಾಂಗ ಖಾತೆ ನೀಡಲಾಯಿತಾದರೂ, ಅದು ಅಡ್ವಾಣಿ ಗ್ಯಾಂಗು ದೊಡ್ಡ ಮಟ್ಟದಲ್ಲಿ ಕೂಗು ಹಾಕದಿರಲಿ ಎಂಬ ಕಾರಣಕ್ಕಾಗಿಯೇ ಹೊರತು ಇನ್ನೇನಲ್ಲ.

ಇವತ್ತು ಸುಷ್ಮಾ ಸ್ವರಾಜ್ ಹೆಸರಿಗೆ ವಿದೇಶಾಂಗ ಮಂತ್ರಿಯಾದರೂ, ವಿದೇಶಗಳ ಜತೆಗಿನ ಭಾರತದ ವ್ಯವಹಾರ ಸಂಪೂರ್ಣವಾಗಿ ಪ್ರಧಾನಿ ಮೋದಿಯವರ ನಿಗಾದಲ್ಲಿಯೇ ಇದೆ. ಪರಿಸ್ಥಿತಿ ಹೀಗಿರುವಾಗ ಒಂದು ಕಾಲದಲ್ಲಿ ಸುಷ್ಮಾ ಸ್ವರಾಜ್ ಅವರನ್ನು ಪ್ರಧಾನ ಮಂತ್ರಿ ಹುದ್ದೆಗೇರಿಸಬೇಕು ಎಂಬ ಕನಸು ಕಂಡಿದ್ದ ಗಾಲಿ ಜನಾರ್ದನ ರೆಡ್ಡಿ ಅವರು ಮೇಲೇಳಲು ಮೋದಿ-ಅಮಿತ್ ಶಾ ಗ್ಯಾಂಗು ಅವಕಾಶ ಮಾಡಿಕೊಡುತ್ತದೆಯೇ? ನಿಶ್ಚಿತವಾಗಿಯೂ ಇಲ್ಲ.

ಉಪಮುಖ್ಯಮಂತ್ರಿಯಾಗಿ ರಾಮುಲು : ರೆಡ್ಡಿ ಕನಸು

ಉಪಮುಖ್ಯಮಂತ್ರಿಯಾಗಿ ರಾಮುಲು : ರೆಡ್ಡಿ ಕನಸು

ಇದರ ವಿರುದ್ಧ ಗಾಲಿ ಜನಾರ್ದನ ರೆಡ್ಡಿ ಅವರೇನು ಮಾಡಬಹುದು? ತೀರಾ ಉಲ್ಟಾ ಹೊಡೆಯಲು ಸಾಧ್ಯವಿಲ್ಲ. ಯಾಕೆಂದರೆ ಕೇಂದ್ರದಲ್ಲಿರುವುದು ಮೋದಿ ನೇತೃತ್ವದ ಸರ್ಕಾರ. ತಾವು ದುಡುಕಿ ಬಿಜೆಪಿ ವಿರುದ್ಧದ ನಿಲುವು ತೆಗೆದುಕೊಂಡರೆ ಎಂತಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬುದು ಜನಾರ್ದನ ರೆಡ್ಡಿ ಅವರಿಗೂ ಗೊತ್ತಿದೆ.

ಹೀಗಾಗಿ ಸದ್ಯಕ್ಕವರು ತಮಗಿಂತ ಮುಖ್ಯವಾಗಿ ತಮ್ಮ ಜೀವದ ಗೆಳೆಯ ಬಿ. ಶ್ರೀರಾಮುಲು ಅವರನ್ನ ಉಪಮುಖ್ಯಮಂತ್ರಿ ಮಾಡುವ ಕನಸು ಕಾಣುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ? ಎಂಬುದು ಬೇರೆ ವಿಷಯ. ಆದರೆ ಸುಷ್ಮಾ ಸ್ವರಾಜ್ ಅವರನ್ನು ಪ್ರಧಾನಿ ಮಾಡಬೇಕು ಎಂದು ಅವರು ಕಂಡಿದ್ದ ಕನಸೇ ಅವರಿಗೆ ದುಬಾರಿಯಾಗಿ ಹೋಗಿದೆ, ದುಃಖಿಸುವಂತೆ ಮಾಡಿದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
What was the sketch chalked out by Gali Janardhana Reddy before Lok Sabha Elections 2014? Why Reddy could not make Sushma Swaraj as prime minister? What plan did Modi and Amit Shah play to sideline Sushma Swaraj? Interesting political analysis by Vittal Murthy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more