• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೌರತ್ವ ತಿದ್ದುಪಡಿ ಮಸೂದೆ: ನಿಮಗೆ ತಿಳಿದಿರಬೇಕಾದ ಪ್ರಮುಖ ಮಾಹಿತಿ

|

ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆ ಹಾಗೂ ರಾಜ್ಯಸಭೆ ಎರಡೂ ಕಡೆ ಅನುಮೋದನೆಗೊಂಡು ರಾಷ್ಟ್ರಪತಿಗಳ ಅಂಕಿತವನ್ನು ಪಡೆದುಕೊಂಡಿದೆ. ಕಾಯ್ದೆ ರೂಪದಲ್ಲಿ ಅದು ಜಾರಿಯಾಗಲಿದೆ. ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು, ನೆರೆಯ ಇಸ್ಲಾಮಿಕ್ ದೇಶಗಳಾದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಿಂದ ಧಾರ್ಮಿಕ ಕಾರಣಗಳಿಂದ ಭಾರತಕ್ಕೆ ಅಕ್ರಮವಾಗಿ ಬಂದು ದಾಖಲೆಗಳಿಲ್ಲದೆ ನೆಲೆಸಿರುವ ಹಿಂದೂ, ಸಿಖ್, ಪಾರ್ಸಿ, ಬೌದ್ಧ, ಜೈನ ಮತ್ತು ಕ್ರೈಸ್ತ ಸಮುದಾಯದ ವಲಸಿಗರಿಗೆ ಭಾರತೀಯ ಪೌರತ್ವ ನೀಡಲು ಅನುವು ಮಾಡಿಕೊಡಲಾಗುತ್ತಿದೆ.

ಇದು ಈ ಎಲ್ಲ ಸಮುದಾಯಗಳ ವಲಸಿಗರಿಗೆ ಆರು ವರ್ಷಗಳಲ್ಲಿ ಭಾರತೀಯ ಪೌರತ್ವ ನೀಡಲಿದೆ. ಸಹಜವಾಗಿ ಪೌರತ್ವ ಸಿಗಲು 12 ವರ್ಷಗಳಿಂದ ಇಲ್ಲಿ ನೆಲೆಸಿರುವುದನ್ನು ಅರ್ಹತೆಯ ಮಾನದಂಡವನ್ನಾಗಿಸಲಾಗಿದೆ. 2014ರ ಡಿಸೆಂಬರ್ 31ರ ಒಳಗೆ ಭಾರತಕ್ಕೆ ಬಂದ ವಲಸಿಗರಿಗೆ ಹಂತ ಹಂತವಾಗಿ ಭಾರತದ ಪೌರತ್ವ ಸಿಗಲಿದೆ.

ಪೌರತ್ವ ಕಾಯ್ದೆಗೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ ಆಕ್ಷೇಪ

ಧಾರ್ಮಿಕ ಶೋಷಣೆಯ ಕಾರಣಕ್ಕೆ ಅನಿವಾರ್ಯವಾಗಿ ಭಾರತಕ್ಕೆ ಬಂದು ಆಶ್ರಯ ಕೋರಿರುವವರಿಗೆ ಪೌರತ್ವ ನೀಡಲಾಗುತ್ತದೆ ಎಂದು ಈ ಮಸೂದೆ ಹೇಳಿದೆ. ಅಂತಹ ಜನರನ್ನು ಅಕ್ರಮ ವಲಸಿಗರನ್ನು ಗುರುತಿಸಿ ಹೊರಹಾಕುವ ಪ್ರಕ್ರಿಯೆಯಿಂದ ರಕ್ಷಿಸಲಾಗುತ್ತದೆ. 2014ರ ಡಿಸೆಂಬರ್ 31ರ ಒಳಗೆ ಭಾರತಕ್ಕೆ ಬಂದವರಿಗೆ ಈ ಸೌಲಭ್ಯ ಸಿಗಲಿದೆ. ಇದಕ್ಕೂ ಮುಂಚಿನ ಕಾನೂನಿನ ಪ್ರಕಾರ ಭಾರತದಲ್ಲಿ ಜನಿಸಿದವರಿಗೆ ಅಥವಾ ಭಾರತದಲ್ಲಿ ಕನಿಷ್ಠ 11 ವರ್ಷಗಳಿಂದ ನೆಲೆಸಿರುವವರಿಗೆ ಮಾತ್ರ ಭಾರತದ ಪೌರತ್ವ ಸಿಗುತ್ತಿತ್ತು.

ಸೆಕ್ಷನ್ 7ಕ್ಕೆ ಉಪ ವಿಭಾಗ (ಡಿ) ಅಳವಡಿಸುವಂತೆ ಈ ಮಸೂದೆ ಪ್ರಸ್ತಾಪಿಸಿತ್ತು. ಇದರ ಅನ್ವಯ ಪೌರತ್ವ ಕಾಯ್ದೆಯ ಯಾವುದೇ ಸವಲತ್ತನ್ನು ಅಥವಾ ಇತರೆ ಯಾವುದೇ ಕಾನೂನನ್ನು ಉಲ್ಲಂಘಿಸಿದ ಓಸಿಐ (ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ) ಕಾರ್ಡ್ ಹೊಂದಿರುವ ವ್ಯಕ್ತಿಯ ಓಸಿಐ ನೋಂದಣಿಯನ್ನು ರದ್ದುಗೊಳಿಸಲು ಸಾಧ್ಯವಾಗುತ್ತದೆ.

ಈ ಮಸೂದೆ ಹಿಂದಿನ ಕೇಂದ್ರದ ತರ್ಕವೇನು?

ಈ ಮಸೂದೆ ಹಿಂದಿನ ಕೇಂದ್ರದ ತರ್ಕವೇನು?

ಈ ಅಲ್ಪಸಂಖ್ಯಾತರು ಮುಸ್ಲಿಂ ಬಾಹುಳ್ಯದ ನೆರೆಯ ದೇಶಗಳಿಂದ ತಪ್ಪಿಸಿಕೊಂಡು ಬಂದವರಾಗಿದ್ದಾರೆ ಎಂದು ಕೇಂದ್ರ ಹೇಳುತ್ತದೆ. ಆದರೆ, ಇದು ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವುದಿಲ್ಲ. ಜತೆಗೆ ಎಲ್ಲ ನೆರೆಯ ರಾಷ್ಟ್ರಗಳಿಗೂ ಅನ್ವಯಿಸುವುದಿಲ್ಲ. ಪಾಕಿಸ್ತಾನದಲ್ಲಿ ಅಹ್ಮದೀಯ ಮತ್ತು ಶಿಯಾ ಮುಸ್ಲಿಮರೂ ಶೋಷಣೆಗೆ ಒಳಗಾಗಿದ್ದಾರೆ. ಬರ್ಮಾದಲ್ಲಿ ರೊಹಿಂಗ್ಯಾ ಮುಸ್ಲಿಮರು ಮತ್ತು ಹಿಂದೂಗಳು ಕಿರುಕುಳ ಅನುಭವಿಸಿದ್ದಾರೆ. ನೆರೆಯ ಶ್ರೀಲಂಕಾದಿಂದ ಹಿಂದೂ ಮತ್ತು ಕ್ರೈಸ್ತರು ಭಾರತಕ್ಕೆ ಬಂದವರಿದ್ದಾರೆ. ಮುಸ್ಲಿಮರು ತಮ್ಮ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಆಶ್ರಯ ಪಡೆದುಕೊಳ್ಳಬಹುದು ಎಂದು ಸರ್ಕಾರ ಹೇಳುತ್ತದೆ. ಆದರೆ ಅದರ ಸುತ್ತಲಿನ ಉಳಿದೆಲ್ಲ ಪ್ರಶ್ನೆಗಳಿಗೆ ಅದರಿಂದ ಉತ್ತರವಿಲ್ಲ.

ಇದು ದೇಶ ವಿಭಜನೆಯಂತೆ ಇದೆಯೇ?

ಇದು ದೇಶ ವಿಭಜನೆಯಂತೆ ಇದೆಯೇ?

ಧರ್ಮದ ಆಧಾರದಲ್ಲಿ ಕಾಂಗ್ರೆಸ್ ದೇಶವನ್ನು ವಿಭಜನೆ ಮಾಡದೆ ಹೋಗಿದ್ದರೆ ಈ ಮಸೂದೆಯ ಅಗತ್ಯವೇ ಬೀಳುತ್ತಿರಲಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಅದರೆ ಭಾರತ ಮತ್ತು ಪಾಕಿಸ್ತಾನಗಳನ್ನು ಧರ್ಮದ ಆಧಾರದಲ್ಲಿ ಸೃಷ್ಟಿಸಿರುವುದಲ್ಲ. ಮುಸ್ಲಿಂ ಲೀಗ್ ಮತ್ತು ಹಿಂದೂ ಬಲಪಂಥೀಯ ಸಂಘಟನೆಗಳು ಹಿಂದೂ ಹಾಗೂ ಮುಸ್ಲಿಂ ದೇಶಗಳೆಂಬ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಹುಟ್ಟುಹಾಕಿದ್ದವು. ಇದೇ ವಿಭಜನೆಗೆ ಕಾರಣವಾಯಿತು. ಭಾರತದ ಎಲ್ಲ ನಾಯಕರೂ ಜಾತ್ಯತೀತ ದೇಶದ ಪ್ರತಿಪಾದನೆ ಮಾಡಿದ್ದರು. ಎಲ್ಲ ಧರ್ಮಗಳ ಎಲ್ಲ ನಾಗರಿಕರೂ ತಮ್ಮ ಪೌರತ್ವವನ್ನು ಅನುಭವಿಸುವ ಅವಕಾಶವಿದೆ ಎಂದು ಹೇಳಿದ್ದರು. ಅಮಿತ್ ಶಾ ವಾದದ ಹಿನ್ನೆಲೆಯಲ್ಲಿಯೇ ನೋಡಿದರೆ ಭಾರತ-ಪಾಕಿಸ್ತಾನ ವಿಭಜನೆಯ ವೇಳೆ ಅಫ್ಘಾನಿಸ್ತಾನ ಭಾರತದ ಭಾಗವಾಗಿಯೇ ಇರಲಿಲ್ಲ. ಹಾಗಾದಾಗ 'ಕ್ಯಾಬ್' ಕುರಿತಾದ ಮೂಲ ವಾದವೇ ಹುಸಿಯಾಗುತ್ತದೆ.

ಪೌರತ್ವ ಕಾಯ್ದೆಗೆ ಪಂಜಾಬ್ ಹಾಗೂ ಕೇರಳ ವಿರೋಧ

ಈಶಾನ್ಯ ರಾಜ್ಯಗಳಲ್ಲಿ ಮಸೂದೆ ಅನ್ವಯ ಹೇಗೆ?

ಈಶಾನ್ಯ ರಾಜ್ಯಗಳಲ್ಲಿ ಮಸೂದೆ ಅನ್ವಯ ಹೇಗೆ?

ಸಂವಿಧಾನದ ಆರನೇ ಕಲಂ ಅಡಿ 'ಕ್ಯಾಬ್', ಸ್ವಾಯತ್ತ ಬುಡಕಟ್ಟು ಸಮುದಾಯಗಳು ಹೆಚ್ಚಿರುವ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರಾ ಮತ್ತು ಮಿಜೋರಾಂಗಳಲ್ಲಿ ಅನ್ವಯವಾಗುತ್ತವೆ. ಒಳಭಾಗದಲ್ಲಿರುವ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಿಜೋರಾಂಗಳಿಗೆ ಅನ್ವಯವಾಗುವುದಿಲ್ಲ.

ಅಸ್ಸಾಂನಲ್ಲಿ ಪ್ರತಿಭಟನೆ ಏಕೆ?

ಅಸ್ಸಾಂನಲ್ಲಿ ಪ್ರತಿಭಟನೆ ಏಕೆ?

ಈಶಾನ್ಯ ರಾಜ್ಯಗಳ ಪೈಕಿ ಪೌರತ್ವ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿರುವುದು ಅಸ್ಸಾಂನಲ್ಲಿ. ಇಲ್ಲಿನ ಬಹುತೇಕ ಭಾಗ ಈ ಮಸೂದೆಯಿಂದ ಹೊರತಾಗಿದ್ದರೂ, ಅಸ್ಸಾಂನ ಹೆಚ್ಚಿನ ಭಾಗದಲ್ಲಿ ಅನ್ವಯವಾಗಲಿದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಒಳನುಸುಳಿರುವ ಬೆಂಗಾಲಿ ಹಿಂದೂಗಳು ತಮ್ಮ ರಾಜ್ಯದ ಸಾಂಸ್ಕೃತಿಕ ಮತ್ತು ಭಾಷಾ ಅಸ್ಮಿತೆಯನ್ನು ಕಿತ್ತುಕೊಳ್ಳುತ್ತಾರೆ ಎಂಬ ಭೀತಿ ಅವರಲ್ಲಿ ಮೂಡಿದೆ. ಅಸ್ಸಾಂನಲ್ಲಿ ಅವರಿಗೆ ನೆಲೆ ನೀಡಿದರೆ ಭೂ ಸಂಪನ್ಮೂಲ ಮತ್ತು ಉದ್ಯೋಗಾವಕಾಶಗಳ ಮೇಲೆ ಭಾರಿ ಒತ್ತಡ ಬೀಳಲಿದೆ. ಈ ಮಸೂದೆ 1985ರ ಅಸ್ಸಾಂ ರೆಕಾರ್ಡ್ಸ್‌ಅನ್ನು ಉಲ್ಲಂಘಿಸುತ್ತದೆ ಎಂದು ವಾದಿಸಲಾಗಿದೆ. ಅಸ್ಸಾಂ ರೆಕಾರ್ಡ್ಸ್ ಅನ್ವಯ ಭಾರತೀಯ ಪೌರತ್ವ ಪಡೆದುಕೊಳ್ಳಲು 1971ರ ಮಾರ್ಚ್ 24 ಕಟ್ ಆಫ್ ದಿನಾಂಕವಾಗಿದೆ. ಎನ್‌ಆರ್‌ಸಿಯಲ್ಲಿ (ರಾಷ್ಟ್ರೀಯ ಪೌರತ್ವ ನೋಂದಣಿ) ಕೂಡ ಇದನ್ನೇ ಅಂತಿಮ ದಿನವನ್ನಾಗಿ ಪರಿಗಣಿಸಲಾಗಿದೆ. ಅಸ್ಸಾಂನಲ್ಲಿನ ಪ್ರತಿಭಟನೆಗೂ ರಾಜಕೀಯ ಪಕ್ಷಗಳು ನಡೆಸುತ್ತಿರುವ ಇತರೆಡೆಗಿನ ಪ್ರತಿಭಟನೆಯ ಉದ್ದೇಶಗಳಿಗೂ ವ್ಯತ್ಯಾಸವಿದೆ.

ಪೌರತ್ವ ಕಾಯ್ದೆ ಬದಲಾಯಿಸುವ ಅಧಿಕಾರ ರಾಜ್ಯಗಳಿಗಿಲ್ಲ: ಕೇಂದ್ರ

ಎನ್‌ಆರ್‌ಸಿಗೂ ಇದಕ್ಕೂ ವ್ಯತ್ಯಾಸವೇನು?

ಎನ್‌ಆರ್‌ಸಿಗೂ ಇದಕ್ಕೂ ವ್ಯತ್ಯಾಸವೇನು?

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ), ಅಸ್ಸಾಂನಲ್ಲಿನ ಅಕ್ರಮ ವಲಸಿಗರನ್ನು ಗುರಿಯಾಗಿರಿಸಿದ್ದನ್ನು ನೋಡಬಹುದು. 1971ರ ಮಾರ್ಚ್ 24ಕ್ಕೂ ಮೊದಲು ತಾವು ಅಥವಾ ತಮ್ಮ ಪೂರ್ವಜರು ಅಸ್ಸಾಂನಲ್ಲಿ ಇದ್ದರು ಎಂಬುದನ್ನು ಅಲ್ಲಿನ ಜನರು ಸಾಬೀತುಪಡಿಸಬೇಕಿದೆ. ಎನ್‌ಆರ್‌ಸಿ ದೇಶದ ಇತರೆ ಭಾಗಗಳಿಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ. ಇದು ಪೌರತ್ವ ತಿದ್ದುಪಡಿ ಮಸೂದೆಯಂತೆ ಧರ್ಮಾಧಾರಿತವಾಗಿಲ್ಲ.

ವಿರೋಧಪಕ್ಷಗಳ ಆರೋಪವೇನು?

ವಿರೋಧಪಕ್ಷಗಳ ಆರೋಪವೇನು?

ಪೌರತ್ವ ತಿದ್ದುಪಡಿ ಮಸೂದೆಯು ಇತರೆ ಎಲ್ಲ ಧಾರ್ಮಿಕ ಸಮುದಾಯಗಳನ್ನು ಸ್ವಾಗತಿಸುವ ಮೂಲಕ ಮುಸ್ಲಿಂ ಸಮುದಾಯವನ್ನು ಮಾತ್ರ ಪ್ರತ್ಯೇಕಿಸುತ್ತದೆ. ಇತರೆ ಧರ್ಮಗಳ ವಲಸಿಗರನ್ನು ಪೋಷಣೆ ಮಾಡುವ ಮೂಲಕ ಮುಸ್ಲಿಮರನ್ನು ದ್ವಿತೀಯ ದರ್ಜೆಯ ಜನರಂತೆ ನಡೆಸಿಕೊಳ್ಳಲಾಗುತ್ತದೆ. ಇದು ಎಲ್ಲರೂ ಸಮಾನರು ಎಂಬ ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಸಂವಿಧಾನದ ಮೂಲ ರಚನೆಯನ್ನು ಯಾವುದೇ ಸಂಸತ್‌ನಿಂದ ಬದಲಿಸಲು ಸಾಧ್ಯವಿಲ್ಲ. ಆದರೆ ಸರ್ಕಾರವು ಭಾರತದ ಮೂಲ ನಾಗರಿಕರಾಗಿರುವ ಯಾವ ಮುಸ್ಲಿಮರಿಗೂ ಇದು ಅನ್ವಯಿಸುವುದಿಲ್ಲ. ಅವರು ಭಾರತೀಯ ಪ್ರಜೆಗಳಾಗಿಯೇ ಇರುತ್ತಾರೆ. ಹಾಗಾಗಿ ಇದು ಸಂವಿಧಾನದ ಅಡಿಯಲ್ಲಿನ ಸಮಾನತೆಯ ಹಕ್ಕಿಗೆ ಯಾವ ರೀತಿಯಲ್ಲಿಯೂ ಧಕ್ಕೆ ಉಂಟುಮಾಡುವುದಿಲ್ಲ ಎಂದು ಹೇಳಿದೆ.

ಅಸ್ಸಾಂ ರೆಕಾರ್ಡ್ಸ್

ಅಸ್ಸಾಂ ರೆಕಾರ್ಡ್ಸ್

ಸಂವಿಧಾನದ ಆರನೇ ವಿಧಿಯ ಪ್ರಕಾರ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶದ ಭಾಗ) ವಲಸಿಗ 1948ರ ಜುಲೈ 19ಕ್ಕೂ ಮುನ್ನ ಭಾರತ ಪ್ರವೇಶಿಸಿದ್ದರೆ ಅವರಿಗೆ ಭಾರತದ ಪೌರತ್ವ ನೀಡಬಹುದು. ಅಸ್ಸಾಂನಲ್ಲಿ ಪೂರ್ವ ಪಾಕಿಸ್ತಾನದಿಂದ (ಈಗಿನ ಬಾಂಗ್ಲಾದೇಶ) ಭಾರಿ ಪ್ರಮಾಣದಲ್ಲಿ ವಲಸೆ ಬಂದಿದ್ದರು. ಅಸ್ಸಾಂ ರೆಕಾರ್ಡ್ಸ್ ಅನ್ವಯ 1971ಕ್ಕಿಂತ ಮುಂಚೆ ಭಾರತಕ್ಕೆ ವಲಸೆ ಬಂದವರಿಗೆ ಭಾರತದ ಪೌರತ್ವ ಸಿಗುತ್ತದೆ.

ರಾಷ್ಟ್ರೀಯ ನೀತಿ ಇಲ್ಲ

ರಾಷ್ಟ್ರೀಯ ನೀತಿ ಇಲ್ಲ

ಅಕ್ರಮ ವಲಸಿಗರ ವಿಚಾರದಲ್ಲಿ, ಭಾರತವು ಇಂದಿಗೂ ಆಶ್ರಯ ಅಥವಾ ನಿರಾಶ್ರಿತ ಸ್ಥಾನಮಾನ ನೀಡುವುದಕ್ಕೆ ರಾಷ್ಟ್ರೀಯ ನೀತಿ ಹೊಂದಿಲ್ಲ. ಆದರೆ ನಿರಾಶ್ರಿತರು ಎಂದು ಹೇಳಿಕೊಳ್ಳುವ ವಿದೇಶಿ ಪ್ರಜೆಗಳ ವಿಚಾರದಲ್ಲಿ ಗೃಹ ಸಚಿವಾಲಯ ತನ್ನದೇ ಪ್ರಕ್ರಿಯೆ ಹೊಂದಿದೆ. ಸರ್ಕಾರವು ನಿರಾಶ್ರಿತರಿಗೆ ಪ್ರಕರಣಗಳಿಗೆ ಅನುಗುಣವಾಗಿ ಉದ್ಯೋಗ ಅನುಮತಿ ಅಥವಾ ದೀರ್ಘಾವಧಿ ವೀಸಾಗಳನ್ನು ನೀಡುವ ಮೂಲಕ ಆಶ್ರಯ ನೀಡುತ್ತದೆ. ಕಳೆದ ತಿದ್ದುಪಡಿಯವರೆಗೂ ನಿರ್ದಿಷ್ಟ ಸಮುದಾಯದ ಅಲ್ಪಸಂಖ್ಯಾತರಿಗೆ ಅಥವಾ ನಿರಾಶ್ರಿತರಿಗೆ ಪೌರತ್ವ ನೀಡುವ ಯಾವುದೇ ಅವಕಾಶ ಪೌರತ್ವ ಮಸೂದೆಯಲ್ಲಿ ಇರಲಿಲ್ಲ.

ಭಾರತದ ಪೌರತ್ವ ಪಡೆಯುವುದು ಹೇಗೆ?

ಭಾರತದ ಪೌರತ್ವ ಪಡೆಯುವುದು ಹೇಗೆ?

1955ರ ಪೌರತ್ವ ಕಾಯ್ದೆಯಡಿ ಪೌರತ್ವ ಪಡೆಯಲು ನಾಲ್ಕು ಮಾರ್ಗಗಳಿವೆ. ಮೊದಲನೆಯದು, ಹುಟ್ಟಿನಿಂದ ಭಾರತದ ಪ್ರಜೆಯಾಗುವುದು. 1955ರ ಪೌರತ್ವ ಕಾಯ್ದೆಯಂತೆ 1950ರ ಜನವರಿ 1ರ ನಂತರ ಭಾರತದಲ್ಲಿ ಜನಿಸಿದ ಎಲ್ಲರೂ ಸಹಜವಾಗಿಯೇ ಭಾರತದ ಪ್ರಜೆಯಾಗುತ್ತಾರೆ. ನಂತರ ಇದಕ್ಕೆ ತಿದ್ದುಪಡಿ ತಂದು 1950ರ ಜನವರಿ 1ರಿಂದ 1987ರ ಜನವರಿ 1ರ ಒಳಗೆ ಜನಿಸಿದವರಿಗೆ ಪೌರತ್ವ ಸಿಗುತ್ತದೆ ಎಂದು ಸೀಮಿತಗೊಳಿಸಲಾಯಿತು.

2003ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ 2004ರ ಡಿ.3ರ ಬಳಿಕ ಭಾರತದಲ್ಲಿ ಜನಿಸಿದ್ದರೆ, ಅವರ ಪೋಷಕರಲ್ಲಿ ಒಬ್ಬರು ಭಾರತೀಯರಾಗಿದ್ದು, ಇನ್ನೊಬ್ಬರು ಅಕ್ರಮ ವಲಸಿಗರಾಗಿರದೆ ಇದ್ದರೆ ಪೌರತ್ವ ಸಿಗುಲಿದೆ ಎಂದು ಬದಲಿಸಲಾಯಿತು. ಇದರಂತೆ ಪೋಷಕರಲ್ಲಿ ಒಬ್ಬರು ಅಕ್ರಮ ವಲಸಿಗರಾಗಿದ್ದರೆ, 2004ರ ಬಳಿಕ ಮಗು ಜನಿಸಿದ್ದರೆ, ಜನನದ ಕಾರಣದಿಂದಲೇ ಪೌರತ್ವ ಲಭಿಸುವ ಅವಕಾಶವಿಲ್ಲ. ಇತರೆ ವಿಧಾನಗಳ ಮೂಲಕ ಪೌರತ್ವ ಪಡೆಯಬೇಕು.

ಭಾರತದ ಹೊರಗೆ ಜನಿಸಿದ್ದರೂ, ಪೋಷಕರಲ್ಲಿ ಒಬ್ಬರಾದರೂ ಭಾರತದ ಪ್ರಜೆಯಾಗಿದ್ದರೆ ಆ ಮಗುವಿಗೆ ಭಾರತದ ಪೌರತ್ವ ಸಿಗುತ್ತದೆ. ಆದರೆ ಮಗು ಜನಿಸಿದ ಒಂದು ವರ್ಷದ ಒಳಗೆ ಆ ವ್ಯಾಪ್ತಿಯಲ್ಲಿನ ಭಾರತದ ರಾಯಭಾರ ಕಚೇರಿಯಲ್ಲಿ ಜನನ ನೋಂದಣಿ ಮಾಡಿಸಬೇಕು.

ಅಕ್ರಮ ವಲಸಿಗನಾಗದೆ, ಭಾರತದಲ್ಲಿ ನಿರಂತರ 12 ತಿಂಗಳವರೆಗೆ ನೆಲೆಸಿದ್ದವರು ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು. ಆ 12 ತಿಂಗಳಿಗೂ ಮುನ್ನ 14 ವರ್ಷಗಳಲ್ಲಿ ಕನಿಷ್ಠ 11 ವರ್ಷ ಭಾರತದಲ್ಲಿ ವಾಸಿಸಿರಬೇಕು. (ಈಗ ಅದಕ್ಕೆ ಐದು ವರ್ಷಗಳ ವಿನಾಯಿತಿ ನೀಡಲಾಗಿದೆ).

ಅರ್ಜಿದಾರನು ವಿಜ್ಞಾನ, ತತ್ವಶಾಸ್ತ್ರ, ಕಲೆ, ಸಾಹಿತ್ಯ, ವಿಶ್ವಶಾಂತಿ ಅಥವಾ ಮಾನವ ಪ್ರಗತಿಗಾಗಿ ಶ್ರಮಿಸಿದ್ದರೆ ಪೌರತ್ವ ಕಾಯ್ದೆಯ ಎಲ್ಲ ಷರತ್ತುಗಳನ್ನೂ ಮನ್ನಾ ಮಾಡಿ ಅವರಿಗೆ ಪೌರತ್ವ ನೀಡುವುದನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತದೆ. ಟೆಬೆಟ್ ಧರ್ಮಗುರು ದಲೈಲಾಮ, ಪಾಕಿಸ್ತಾನದ ಗಾಯಕ ಅದ್ನಾನ್ ಸಾಮಿ ಈ ರೀತಿಯಲ್ಲಿಯೇ ಭಾರತದ ಪೌರತ್ವ ಪಡೆದುಕೊಂಡಿದ್ದಾರೆ.

ಭಾರತದಲ್ಲಿ ಅಕ್ರಮ ವಲಸಿಗರು

ಭಾರತದಲ್ಲಿ ಅಕ್ರಮ ವಲಸಿಗರು

2014ರ ಡಿ.31ಕ್ಕೆ ಸರ್ಕಾರ ಗುರುತಿಸಿರುವಂತೆ ಭಾರತದಲ್ಲಿ 2,89,394 ಮಂದಿ ನಿರಾಶ್ರಿತರಿದ್ದಾರೆ ಎನ್ನುತ್ತದೆ 2016ರಲ್ಲಿ ಸಂಸತ್‌ನಲ್ಲಿ ಸರ್ಕಾರ ನೀಡಿರುವ ಮಾಹಿತಿ. ಇದರಲ್ಲಿ ಹೆಚ್ಚಿನವರು ಬಾಂಗ್ಲಾದೇಶದಿಂದ ಬಂದವರು- 1,03,817 ಮತ್ತು ಶ್ರೀಲಂಕಾದಿಂದ ವಲಸೆ ಬಂದವರು- 1,02,467. ಇನ್ನು ಟಿಬೆಟ್ (58,155), ಮಯನ್ಮಾರ್‌ (12,434), ಪಾಕಿಸ್ತಾನ (8,799) ಮತ್ತು ಅಫ್ಘಾನಿಸ್ತಾನ (3,469) ಮಂದಿ ಇದ್ದಾರೆ. ಇದು ಎಲ್ಲ ಧರ್ಮದವರನ್ನು ಒಳಗೊಂಡ ದಾಖಲೆಯಾಗಿದೆ.

2014ರ ನಂತರ ಭಾರತಕ್ಕೆ ಬಂದವರನ್ನು ಅಕ್ರಮ ವಲಸಿಗರು ಎಂದೇ ಪರಿಗಣಿಸಲಾಗುತ್ತದೆ. ಇದು ಕೂಡ ಎಲ್ಲ ಧರ್ಮದವರಿಗೂ ಅನ್ವಯಿಸುತ್ತದೆ. ಅವರು ಸ್ವಾಭಾವಿಕವಾಗಿ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಆಗುವುದಿಲ್ಲ. ಆದರೆ ಭಾರತದಲ್ಲಿ ಆಶ್ರಯ ಕೋರಿ ಇರುವ ನಿಯಮಗಳಂತೆ ಅರ್ಜಿ ಸಲ್ಲಿಸಬಹುದು.

English summary
What is Citizenship Amendment Bill? Few things you need to know around CAB and citizenship of India are explained here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X