ಸಂಸತ್‌ನಲ್ಲಿ ಅಸಂಸದೀಯ ಪದ ಬಳಸಿದರೆ ಏನಾಗುತ್ತದೆ?, ಯಾರು ನಿರ್ಧರಿಸುತ್ತಾರೆ?

ನವದೆಹಲಿ, ಜುಲೈ 15: ಸಂಸತ್‌ನಲ್ಲಿ ಮುಂಗಾರು ಅಧಿವೇಶನ ಶುರುವಾಗುವ ಕೆಲವೇ ದಿನಗಳ ಮೊದಲು ಅಸಂಸದೀಯ ಪದಗಳ ಪಟ್ಟಿಯನ್ನು ಅನಾವರಣಗೊಳಿಸಲಾಗಿದೆ.

ಲೋಕಸಭಾ ಕಾರ್ಯಾಲಯ ಗುರುವಾರದಂದು 50 ಪುಟಗಳ 'ಅಸಂಸದೀಯ ಅಭಿವ್ಯಕ್ತಿ' ಹೊತ್ತಿಗೆಯನ್ನು ಬಿಡುಗಡೆ ಮಾಡಿದೆ. ಈ ಹೊತ್ತಿಗೆಯಲ್ಲಿ ಅಸಂಸದೀಯವೆಂದು ಪರಿಗಣಿಸಲಾಗಿರುವ ಪದಗಳ ಪಟ್ಟಿ ಇದೆ.

ಕೇಂದ್ರ ಸರಕಾರದ ಈ ಕ್ರಮವನ್ನು ವಿಪಕ್ಷಗಳು ಟೀಕಿಸಿವೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯಹರಣ ಹಾಗು ವಿಪಕ್ಷಗಳ ಬಾಯಿ ಮುಚ್ಚಿಸುವ ಪ್ರಯತ್ನ ಎಂದು ಬಣ್ಣಿಸಿವೆ. ತನ್ನನ್ನು ಯಾರೂ ಟೀಕಿಸಬಾರದು, ವಿಮರ್ಶಿಸಬಾರದು. ತನ್ನ ಕೆಲಸವನ್ನೆಲ್ಲಾ ಒಪ್ಪಿಕೊಳ್ಳಬೇಕು ಎಂದು ಸರಕಾರ ವಿಪಕ್ಷಗಳಿಂದ ಬಯಸುತ್ತಿರುವಂತಿದೆ ಎಂದು ವಿವಿಧ ನಾಯಕರು ಕಿಡಿಕಾರಿದ್ದಾರೆ.

ಆದರೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿಪಕ್ಷಗಳ ಆಕ್ಷೇಪವನ್ನು ತಳ್ಳಿಹಾಕಿದ್ದಾರೆ. ಅಸಂಸದೀಯ ಅಭಿವ್ಯಕ್ತಿ ಪುಸ್ತಕದಲ್ಲಿರುವುದು ನಿಷೇಧಿತ ಪದಗಳ ಪಟ್ಟಿಯಲ್ಲ. ಅಸಂಸದೀಯ ಎನಿಸುವ ಪದಗಳ ಪಟ್ಟಿ ಅಲ್ಲಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಅಸಂಸದೀಯ ಪದ ಬಳಕೆ ಬಗ್ಗೆ ನಿಯಮಗಳೇನು?

ಅಸಂಸದೀಯ ಪದ ಬಳಕೆ ಬಗ್ಗೆ ನಿಯಮಗಳೇನು?

ಸಂಸತ್‌ನಲ್ಲಿ ಅಥವಾ ವಿಧಾನಸಭೆಯಲ್ಲಿ ಯಾವ ಸದಸ್ಯರೂ ಮಾನಹಾನಿ ಎನಿಸುವ ಅಥವಾ ಅಸಭ್ಯ ಎನಿಸುವ ಅಥವಾ ಅಗೌರವ ಸೂಚಕವಾಗಿರುವ ಅಥವಾ ಅಸಂಸದೀಯ ಎನಿಸುವ ಪದಗಳ ಬಳಕೆ ಮಾಡಬಾರದು.

ಲೋಕಸಭಾ ಕಲಾಪದ ವಿಧಾನ ಮತ್ತು ನಡಾವಳಿಯ 380ನೇ ನಿಯಮದಲ್ಲಿ ಇದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.

ಅಸಂಸದೀಯ ಪದ ಬಳಸಿದರೆ ಏನಾಗುತ್ತೆ?

ಅಸಂಸದೀಯ ಪದ ಬಳಸಿದರೆ ಏನಾಗುತ್ತೆ?

ಒಂದು ವೇಳೆ ಸದಸ್ಯರು ಕಲಾಪದ ವೇಳೆ ಅಸಂಸದೀಯ ಪದಗಳನ್ನು ಬಳಕೆ ಮಾಡಿದರೆ ಏನಾದರೂ ಶಿಕ್ಷೆ ಅಥವಾ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತಾ ಎಂಬುದು ಹಲವರ ಅನುಮಾನ. ಆದರೆ, ಯಾವುದೇ ಸದಸ್ಯನ ಮೇಲೆ ಯಾವ ರೀತಿಯಲ್ಲೂ ಕ್ರಮ ಜರುಗಿಸಲಾಗುವುದಿಲ್ಲ. ಆದರೆ, ಹಾಗಂತ ಸಂಸತ್‌ನೊಳಗೆ ಏನು ಬೇಕಾದರೂ ಮಾತನಾಡಬಹುದು, ವಾಚಾಮಗೋಚರವಾಗಿ ಮಾತನಾಡುವ ಸ್ವಾತಂತ್ರ್ಯ ಇರುವುದಿಲ್ಲ.

ಒಂದು ವೇಳೆ ಸದಸ್ಯನಿಂದ ಅಸಂಸದೀಯ ಪದ ಬಳಕೆಯಾದರೆ ಕಲಾಪದ ಕಡತಗಳಿಂದ ಆ ಪದಗಳನ್ನು ಅಳಿಸಿಹಾಕಲಾಗುತ್ತದೆಯೇ ಹೊರತು ಆ ಸದಸ್ಯನ ಮೇಲೆ ಬೇರಾವುದೇ ಕ್ರಮ ಜರುಗಿಸಲಾಗುವುದಿಲ್ಲ. ಕಡತದಲ್ಲಿ ದಾಖಲಾಗುವ ಸದಸ್ಯರ ವಾಕ್ಯಗಳಲ್ಲಿ ಅಸಂಸದೀಯ ಪದಗಳನ್ನು ತೆಗೆದುಹಾಕಿ ಆ ಜಾಗದಲ್ಲಿ ನಕ್ಷತ್ರ ಚಿಹ್ನೆಯನ್ನು ಹಾಕಲಾಗುತ್ತದೆ.

ಅಸಂಸದೀಯ ಪದ ನಿರ್ಧರಿಸುವುದು ಯಾರು?

ಅಸಂಸದೀಯ ಪದ ನಿರ್ಧರಿಸುವುದು ಯಾರು?

ಅಸಂಸದೀಯ ಪದಗಳ ಪಟ್ಟಿಯನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ. ಒಂದು ವೇಳೆ ಪಟ್ಟಿಯಲ್ಲಿ ಇಲ್ಲದ ಒಂದು ನಿಂದನಾತ್ಮಕ ಪದವನ್ನು ಕಲಾಪದ ವೇಳೆ ಸಂಸದ ಬಳಸಿದಾಗ ಅದನ್ನು ಕಡತದಿಂದ ತೆಗೆದುಹಾಕಬೇಕೋ ಇಲ್ಲವೋ ಎಂಬುದನ್ನು ಸಭಾ ಮುಖ್ಯಸ್ಥರು ನಿರ್ಧರಿಸುತ್ತಾರೆ.

ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ರಿಪೋರ್ಟಿಂಗ್ ವಿಭಾಗ ಇರುತ್ತದೆ. ಸಂಸದರು ಆಡುವ ಮಾತಿನಲ್ಲಿ ಅಸಂಸದೀಯ ಪದಬಳಕೆ ಆಗಿದೆ ಅಂತನಿಸಿದರೆ ರಿಪೋರ್ಟಿಂಗ್ ಸೆಕ್ಷನ್ ಮುಖ್ಯಸ್ಥರು ಆ ವಿಚಾರವನ್ನು ಸಭಾಧ್ಯಕ್ಷರ ಗಮನಕ್ಕೆ ತರುತ್ತಾರೆ. ಆ ಪದ ಯಾಕೆ ಅಸಂಸದೀಯ ಎಂಬುದಕ್ಕೆ ಕಾರಣ ಮತ್ತು ಆ ಸಂಬಂಧ ಇರುವ ನಿಯಮಗಳನ್ನು ಅವರು ಉಲ್ಲೇಖಿಸುತ್ತಾರೆ. ಅದರ ಆಧಾರದ ಮೇಲೆ ಸಂಸದರು ಬಳಸಿದ ಅ ಪದವನ್ನು ಕಡತದಿಂದ ತೆಗೆದುಹಾಕಬೇಕೋ ಬೇಡವೋ ಎಂಬುದನ್ನು ಸಭಾಧ್ಯಕ್ಷರು ನಿರ್ಧರಿಸುತ್ತಾರೆ.

ಈ ರೀತಿಯಾಗಿ ಲೋಕಸಭೆ, ರಾಜ್ಯಸಭೆ ಹಾಗೂ ದೇಶದ ವಿವಿಧ ವಿಧಾನಸಭೆ, ವಿಧಾನಪರಿಷತ್‌ಗಳಲ್ಲಿ ಈ ರೀತಿಯಾಗಿ ಅಸಂಸದೀಯ ಪದಗಳ ಬಳಕೆಯಾಗಿದ್ದರೆ ಅದೆಲ್ಲವನ್ನೂ ಸೇರಿಸಿ ಪಟ್ಟಿ ಮಾಡಲಾಗುತ್ತದೆ. ಆಗಾಗ್ಗೆ ಇದರ ಪರಿಷ್ಕರಣೆ ನಡೆಯುತ್ತಿರುತ್ತದೆ.

ಅಸಂಸದೀಯವೆಂದು ಪರಿಗಣಿಸಲಾದ ಪದಗಳು

ಅಸಂಸದೀಯವೆಂದು ಪರಿಗಣಿಸಲಾದ ಪದಗಳು

ಜುಮ್ಲಾ ಜೀವಿ, ಬಾಲ ಬುದ್ಧಿ, ಕೋವಿಡ್ ಸ್ಪ್ರೆಡರ್, ನಾಚಿಕೆಗೇಡು, ದುರುಪಯೋಗ, ಸ್ನೂಪ್ ಗೇಟ್, ಭ್ರಷ್ಟ, ವಂಚನೆ, ಆಷಾಢಭೂತಿತನ, ಶಕುನಿ, ಅರಾಜಕತೆ, ಹೇಡಿ, ವಿನಾಶ ಪುರುಷ್, ಖಲಿಸ್ತಾನಿ, ಖೂನ್ ಸೇ ಖೇತಿ, ಬಲೋನಿ, ಜೈಚಂದ್, ತಾನಾಶಾಹಹಿ, ಬೊಸಿ ಪ್ಯಾಂಟ್ಸ್, ಚಮಚ, ಛೋಕ್ರಾ, ಕಾಕ್ರೋಚ್, ಮೊಸಳೆ ಕಣ್ಣೀರು, ಸಾಕು ನಾಯಿ, ಗೂಂಡಾ, ಲಾಲಿಪಾಪ್, ಮಾಮಾ, ಪಿಗ್ಗಿಹೆಡ್, ಪಿಸ್, ವೇಶ್ಯೆ, ಪೋಸ್ಟರ್ ಬಾಯ್, ರೇಪಿಸ್ಟ್, ಸಕ್, ಸಂವೇದನಹೀನ, ಮೂರ್ಖತನ, ಲೈಂಗಿಕ ಕಿರುಕುಳ ಇತ್ಯಾದಿ ಪದಗಳು ಅಸಂಸದೀಯವೆಂದು ಪರಿಗಣಿಸಿ ಪಟ್ಟಿ ಮಾಡಲಾಗಿದೆ.

ಬ್ರಿಟಿಷರಿಂದ ಬಂದ ಬಳುವಳಿ

ಬ್ರಿಟಿಷರಿಂದ ಬಂದ ಬಳುವಳಿ

ಸ್ವತಂತ್ರ ಭಾರತದ ಅನೇಕ ವ್ಯವಸ್ಥೆಯನ್ನು ನಾವು ಬ್ರಿಟಿಷರಿಂದಲೇ ಎರವಲು ಪಡೆದಿದ್ದೇವೆ, ಅಥವಾ ಬ್ರಿಟಿಷರ ಕಾಲದಿಂದಲೂ ಒಂದಷ್ಟು ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ನಮ್ಮ ಸಂಸತ್‌ನ ನಡಾವಳಿ ಮತ್ತು ನಿಯಮಗಳು ಬಹುತೇಕ ಬ್ರಿಟಿಷರ ಅವಧಿಯಲ್ಲೇ ರೂಪಿತವಾಗಿರುವುದು.

ಅಸಂಸದೀಯ ಪದಗಳನ್ನು ತೆಗೆದುಹಾಕುವ ಪರಂಪರೆ ಬ್ರಿಟಿಷರೇ ಆರಂಭಿಸಿದ್ದು. 1604ರಲ್ಲಿ ಇದು ಮೊದಲುಗೊಂಡಿರಬಹುದು ಎಂದು ಭಾವಿಸಲಾಗಿದೆ. ಅದಕ್ಕಿಂತ ಮುಂಚೆಯೇ ಅಸಂಸದೀಯ ಪದಗಳನ್ನು ಸಂಸತ್‌ನಲ್ಲಿ ಆಡಬಾರದು ಎಂಬ ನಿಯಮ ಇತ್ತಾದರೂ ಕಡತಗಳಿಂದ ಪದಗಳನ್ನು ತೆಗೆದುಹಾಕುವ ಪದ್ಧತೆ 1604ರಲ್ಲಿ ಆರಂಭವಾಯಿತು ಎನ್ನುತ್ತಾರೆ ಕೆಲ ಇತಿಹಾಸತಜ್ಞರು.

ಈ ರೀತಿಯ ಅಸಂಸದೀಯ ಪದಗಳಿಗೆ ನಿರ್ಬಂಧ ಹೇರುವ ವ್ಯವಸ್ಥೆ ಬ್ರಿಟನ್ ಮತ್ತು ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಒಂದು ಕಾಲದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಬಹುತೇಕ ದೇಶಗಳಲ್ಲಿ (ಕಾಮನ್‌ವೆಲ್ತ್ ರಾಷ್ಟ್ರಗಳು) ಇಂಥ ಪರಂಪರೆ ಈಗಲೂ ಇದೆ. ಕಮ್ಯೂನಿಸ್ಟರನ್ನು ಅಪಹಾಸ್ಯ ಮಾಡಲು ಬಳಸುವ 'ಕಾಮೊ' ಪದ ಬಳಕೆ ನ್ಯೂಜಿಲೆಂಡ್ ಸಂಸತ್‌ನಲ್ಲಿ ಮಾಡುವಂತಿಲ್ಲ ಎಂಬ ನಿಯಮ ಇದೆ. ಆಸ್ಟ್ರೇಲಿಯಾದಲ್ಲಿ 'ಲಯರ್' (ಸುಳ್ಳುಗಾರ), 'ಡಂಬೋ' (ಮೂರ್ಖ) ಇತ್ಯಾದಿ ಪದಗಳು ಅಸಂಸದೀಯವೆನಿಸಿವೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+