Love Marriage: ಪ್ರೀತಿಸಿ ಮದುವೆಯಾಗುವ ಮುನ್ನ ಈ ವಿಚಾರಗಳ ಬಗ್ಗೆ ಇರಲಿ ಗಮನ!
ಇಂದಿನ ಯುವಜನತೆ ಪ್ರೇಮ ವಿವಾಹದ ಕಡೆಗೆ ಒಲವು ತೋರುವುದೇನೊ ಸರಿ. ಆದರೆ, ನೂರಾರು ಜಾತಿ, ಹತ್ತಾರು ಧರ್ಮಗಳಿರುವ ಭಾರತದಂತಹ ದೇಶದಲ್ಲಿ ಲವ್ ಮ್ಯಾರೆಜ್ ಆದ ದಂಪತಿಗಳಿಗೆ ಸಾಕಷ್ಟು ಜವಾಬ್ದಾರಿಗಳಿರುತ್ತವೆ ಎಂಬುದನ್ನು ಮರೆಯಬಾರದು.
ಯೌವನದಲ್ಲಿ ಹುಡುಗ-ಹುಡುಗಿಯರ ನಡುವೆ ಪ್ರೇಮ, ಪ್ರಣಯ ಆಗುವುದು ಸಹಜ. ಪ್ರೇಮ ಗಾಢವಾದರೆ ಮದುವೆಯ ಹಂತಕ್ಕೆ ಮುಟ್ಟುತ್ತದೆ. ಹೆಚ್ಚಿನ ಲವ್ ಮ್ಯಾರೆಜ್ ಗಳು ತಂದೆ, ತಾಯಿ, ಬಂಧುಬಳಗದವರ ವಿರೋಧದ ನಡುವೆ ಆಗುತ್ತದೆ. ಹೀಗಾಗಿ ಸಂಸಾರವೆಂಬ ಭಾರವನ್ನು ದಿಢೀರನೆ ಹೊರಬೇಕಾಗುತ್ತದೆ. ಈ ಸಂದರ್ಭದಲ್ಲಿ ಪ್ರೇಮ, ಪ್ರಣಯ ಎಂಬುದು ಸಂಸಾರದಲ್ಲಿ ಅದು ಒಂದು ಭಾಗವೇ ಹೊರತು, ಅದುವೇ ಎಲ್ಲವೂ ಅಲ್ಲ ಎಂಬ ವಾಸ್ತವ ನಿಧಾನವಾಗಿ ಅರಿವಿಗೆ ಬರುತ್ತದೆ.

ವಾಸ್ತವವನ್ನು ಮರೆಯಬೇಡಿ!
ಪ್ರೀತಿಸುವ ಪ್ರಾರಂಭದಲ್ಲಿ ದೈಹಿಕ ಆಕರ್ಷಣೆ, ಸುತ್ತಾಟ, ಒಬ್ಬರು ಮತ್ತೊಬ್ಬರನ್ನು ಮೆಚ್ಚಿಸಲು ಹೊಗಳಿಕೆ, ಚೆಂದದ ಮಾತುಗಳೆ ವಿನಿಮಯ ಆಗುತ್ತಿರುತ್ತವೆ. ತಮ್ಮ ಪ್ರೇಮಿಗೆ ಸ್ವಲ್ಪವೂ ಬೇಸರ ಆಗದ ರೀತಿಯಲ್ಲಿ ಎಲ್ಲವನ್ನು ಸರಿದೂಗಿಸಿಕೊಂಡು ಹೋಗಲು ಪ್ರಯತ್ನ ಮಾಡುತ್ತಾರೆ.
ಸಾಲ ಮಾಡಿಯಾದರು ತನ್ನ ಹುಡುಗಿಗೆ ಬೇಕಾದನ್ನು ಕೊಡಿಸುವುದು, ಬೇಕಾದ ಕಡೆಗೆ ತಿರುಗಾಡಿಸುತ್ತಿರುತ್ತಾನೆ. ಆದರೆ, ಮದುವೆಯ ನಂತರ ಆಕರ್ಷಣೆಗಳು, ಚೆಂದದ ಮಾತುಗಳ ಜಾಗದಲ್ಲಿ ವಾಸ್ತವದ ಬದುಕು ಎದುರಾಗುತ್ತದೆ.
ಮದುವೆಗೆ ಮುನ್ನ ತಮ್ಮ ಪ್ರೇಮಿಗಳ ಜೊತೆ ದಿನದಲ್ಲಿ ಫೋನಿನಲ್ಲೋ, ಪಾರ್ಕಿನಲ್ಲೋ, ಸಿನೆಮಾ ಮಂದಿರದಲ್ಲೋ ಕಳೆದಿರುತ್ತೇವೆ. ಆದರೆ, ಮದುವೆಯ ನಂತರ ದಿನದ ಬಹುತೇಕ ಸಮಯ, ಅದರಲ್ಲೂ ತಮ್ಮ ಖಾಸಗಿ ಕ್ಷಣಗಳನ್ನು ಕಳೆಯುತ್ತೇವೆ. ಈ ಸಂದರ್ಭದಲ್ಲಿ ಹೆಂಡತಿ, ಗಂಡನ ತೀರ ಸಣ್ಣ ಸಣ್ಣ ನಡುವಳಿಕೆಗಳು ನಮಗೆ ಕಾಣಿಸುತ್ತದೆ.
ಈ ನಡುವಳಿಕೆಗಳಲ್ಲಿ ಕೆಲವೊಂದು ಇಷ್ಟವಾಗದೆ ಹೋಗಬಹುದು. ಈ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದರ ಆಧಾರದ ಮೇಲೆ ನಮ್ಮ ಸಂಬಂಧ ಆಧರಿಸಿರುತ್ತದೆ. ಅದರಲ್ಲೂ ಲವ್ ಮ್ಯಾರೆಜ್ ಆದ ದಂಪತಿಗಳ ನಡುವೆ ನಿರೀಕ್ಷೆ ಹೆಚ್ಚಾಗಿರುತ್ತದೆ. ತಮ್ಮ ಬಂಧುಬಳಗದವರನ್ನು ಧಿಕ್ಕರಿಸಿ ಇವಳ-ಇವನ ಜೊತೆ ಬಂದಿದ್ದೇನೆ ಎನ್ನುವ ಮನಃಸ್ಥಿತಿಯಿಂದ ಎಲ್ಲವನ್ನು ನಮಗೆ ಬೇಕಾದ ರೀತಿಯಲ್ಲಿ ವರ್ತಿಸುತ್ತಾರೆ.
ಆರ್ಥಿಕ ಸ್ವಾವಲಂಬನೆ ಮುಖ್ಯ
ಪ್ರೀತಿಸಿ ಮನೆಯವರ ವಿರೋಧದ ನಡುವೆ ಮದುವೆಯಾಗುವ ಬಹುತೇಕ ಪ್ರೇಮಿಗಳ ಮೊದಲ ಸಮಸ್ಯೆ ಹಣಕಾಸಿನದ್ದೇ ಆಗಿರುತ್ತದೆ. ಇಬ್ಬರೂ ಸಂಪಾದನೆ ಮಾಡುತ್ತಿದ್ದು, ಆರ್ಥಿಕವಾಗಿ ಸ್ವಾವಲಂಬನೆ ಹೊಂದಿದ್ದರೆ ಈ ಸಮಸ್ಯೆ ಬಾರದು. ಆದರೆ ಓದುವ ಸಂದರ್ಭದಲ್ಲೇ ಪ್ರೀತಿ ಮಾಡಿ, ಕೆಲಸ ಸಿಗುವ ಮುನ್ನವೋ, ಅಥವಾ ಕೆಲಸಕ್ಕೆ ಸೇರಿದ ತಕ್ಷಣವೋ ಮದುವೆಯಾದವರಿಗೆ ಹಣಕಾಸಿನ ತೊಂದರೆ ಉಂಟಾಗುತ್ತದೆ.
ನೀವು ಪ್ರೀತಿಸಿ ಮದುವೆಯಾಗುವ ಮುನ್ನ ನಿಮ್ಮ ಸಂಗಾತಿಯ ಹಣಕಾಸಿನ ಬಗ್ಗೆ ಸರಿಯಾಗಿ ತಿಳಿಯಿರಿ. ಹೊಂದಾಣಿಕೆ ಬಹಳ ಮುಖ್ಯವಾಗುತ್ತದೆ. ಆರ್ಥಿಕ ಸ್ಥಿತಿಗತಿ ಬಗ್ಗೆ ಇಬ್ಬರೂ ಮುಕ್ತವಾಗಿ ಚರ್ಚಿಸಿ, ಪರಿಹಾರ ಹುಡುಕಿಕೊಳ್ಳಿ.
ಪರಸ್ಪರ ಗೌರವ ಇರಲಿ
ನಿಮ್ಮ ಸಂಗಾತಿಯ ಜಾತಿ, ಧರ್ಮ, ಆಚಾರ, ವಿಚಾರ ಸಂಪೂರ್ಣ ಭಿನ್ನವಾಗಿರುತ್ತದೆ. ಊಟ, ಸಂಪ್ರದಾಯಗಳು ಕೂಡ ಭಿನ್ನವಾಗಿರುತ್ತವೆ. ಇಬ್ಬರೂ ಇದಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಇಬ್ಬರು ಕೂಡ ಪರಸ್ಪರ ಆಚಾರ ವಿಚಾರಗಳ ಬಗ್ಗೆ ಗೌರವ ಹೊಂದುವುದು ಮುಖ್ಯವಾಗುತ್ತದೆ. ಪರಸ್ಪರರ ಆಹಾರ ಪದ್ಧತಿಯನ್ನು ಗೌರವಿಸಿ. ಆಚಾರ ವಿಚಾರಗಳ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಅವರ ನಂಬಿಕೆ ಅವರಿಗೆ ದೊಡ್ಡದಾಗಿರುತ್ತದೆ. ಹಾಗೆಯೇ ನಿಮ್ಮ ನಂಬಿಕೆ, ಆಚಾರ, ವಿಚಾರ, ಆಹಾರ ಪದ್ಧತಿಯನ್ನು ಸಂಗಾತಿ ಮೇಲೆ ಬಲವಂತವಾಗಿ ಹೇರಬೇಡಿ.












Click it and Unblock the Notifications