ಕಾಂಗ್ರೆಸ್-ಜೆಡಿಎಸ್ ಸರಕಾರ ಬೀಳುವ ವಿಶ್ವಾಸ ಬಿಜೆಪಿಯಲ್ಲಿ ಕಾಣಲು ಕಾರಣ ಏನು?

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ನಿಶ್ಚಿತವಾ? ಹೀಗೊಂದು ವಿಶ್ವಾಸ ಬಿಜೆಪಿಯೊಳಗೆ ಖಂಡಿತಾ ಇದೆ. ಹಾಗಿದ್ದರೆ ಈಗ ಅಸ್ತಿತ್ವದಲ್ಲಿ ಇರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಕಥೆ ಏನು? ಮತ್ತು ಅಧಿಕಾರ ಹಿಡಿಯುತ್ತೇವೆ ಎಂಬ ಆ ಪರಿಯ ವಿಶ್ವಾಸ ಬಿಜೆಪಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಕಾರಣ ಏನು? ಎಂಬ ಪ್ರಶ್ನೆಗಳು ಸಹಜವಾಗಿ ಉದ್ಭವಿಸುತ್ತವೆ.
ಹಾಗೆ ನೋಡಿದರೆ ಬಿಜೆಪಿಯು ತನ್ನ ಲೆಕ್ಕಾಚಾರ ಹಾಗೂ ಆಟದ ವರಸೆಯನ್ನು ದೇಶದಾದ್ಯಂತ ಬದಲಿಸಿಕೊಂಡಿದೆ. ಪ್ರಾಥಮಿಕ ಪಾಠಗಳು ಕೆಲವಷ್ಟನ್ನು ಹಾಗೇ ಇಟ್ಟುಕೊಂಡು, ಅಂದರೆ ಅಯೋಧ್ಯಾ ಮಂದಿರ ವಿವಾದ, ಹಿಂದುತ್ವ, ರಾಷ್ಟ್ರೀಯ ವಾದ ಹೀಗೆ ಕೆಲ ಮಟ್ಟಿಗೆ ವಿಚಾರಗಳನ್ನು ಜತೆ ಮಾಡಿಕೊಂಡಿರುವುದು ಬಿಟ್ಟರೆ, ದೊಡ್ಡದಾಗಿ ಆರಂಭ ಮಾಡಿರುವುದು 'ದಲಿತ' ರಾಜಕಾರಣವನ್ನು. ಈ ಆಟವೇ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲಿದೆ ಎಂಬ ವಿಶ್ವಾಸ ಮೂಡಿಸಿದೆ.
ಅಂಧಾದುಂದಿ ಸರ್ಕಾರದ ಬಗ್ಗೆ ಬಿಜೆಪಿಯಿಂದಲೇ ಶ್ವೇತಪತ್ರ: ಯಡಿಯೂರಪ್ಪ ಗುಡುಗು
ವಿರೋಧ ಪಕ್ಷಗಳಿಗೆ ತಲೆ ನೋವಾಗಿರುವುದು ಇದೇ ವಿಚಾರ. ಬಿಜೆಪಿಯು ಮೇಲ್ವರ್ಗದ ಪರ, ಹಿಂದುಳಿದ-ಅಲ್ಪಸಂಖ್ಯಾತ ಹಾಗೂ ದಲಿತ ವಿರೋಧಿ ಎಂಬ ಲೇಬಲ್ ಅಂಟಿಸಲು ಈಗ ಮೊದಲಿನಂತೆ ಸಾಧ್ಯವಿಲ್ಲ. ಮುಸ್ಲಿಮರ ಓಲೈಕೆ ಮಾಡುವುದು ಬಿಜೆಪಿಗೂ ಬೇಡ. ಆದರೆ ದಲಿತರು ಹಾಗೂ ಹಿಂದುಳಿದವರ ಮತಗಳನ್ನು ಒಂದೋ ತಾನು ಪಡೆಯಬೇಕು ಅಥವಾ ವಿಪಕ್ಷಗಳ ಮಧ್ಯೆ ಹಂಚಿ ಹರಿದುಹೋಗುವಂತೆ ಮಾಡಬೇಕು ಎಂಬುದು ಲೆಕ್ಕಾಚಾರ.

ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಭವಿಷ್ಯದ ದಿಕ್ಸೂಚಿ
ಇರಲಿ, ಇದು ರಾಷ್ಟ್ರ ರಾಜಕಾರಣದ ಮಾತಾಯಿತು. ಕರ್ನಾಟಕದ ವಿಷಯಕ್ಕೆ ಬಂದರೆ, ಆರೆಸ್ಸೆಸ್ ನ ಕೆಲ ಮುಖಂಡರೂ ಒಳಗೊಂಡಂತೆ ಹೈ ಕಮಾಂಡ್ ಗೆ ಹತ್ತಿರದಲ್ಲಿರುವ ಹಲವು ನಾಯಕರು, ಜೆಡಿಎಸ್-ಕಾಂಗ್ರೆಸ್ ಸರಕಾರ ಪತನ ನಿಶ್ಚಿತ ಎಂಬ ದೃಢವಾದ ವಿಶ್ವಾಸದಲ್ಲೇ ಇದ್ದಾರೆ.
ಆದರೆ, ಇದಕ್ಕೆ ಎಷ್ಟು ಸಮಯ ಎಂಬ ಬಗ್ಗೆ ಮಾತನಾಡುವುದಿಲ್ಲ. ರಾಜಕೀಯ ಲೆಕ್ಕಾಚಾರದ ಪ್ರಕಾರ ನೋಡುವುದಾದರೆ, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಕರ್ನಾಟಕದಲ್ಲಿರುವ ಮೈತ್ರಿ ಸರಕಾರದ ಪಾಲಿಗೆ ಭವಿಷ್ಯದ ದಿಕ್ಸೂಚಿ.
ಒಂದು ವೇಳೆ ಬಿಜೆಪಿ ಪ್ರಚಂಡ ಜಯ ಸಾಧಿಸಿದರೆ ಜೆಡಿಎಸ್ ಗೆ ಇನ್ನು ಮುಂದೆ ಸರಕಾರದಲ್ಲಿ ಮುಂದುವರಿಯುವ ಆಸಕ್ತಿ ಹೆಚ್ಚಾಗಬಹುದು. ಏಕೆಂದರೆ ಆ ಗೆಲುವು ಪ್ರಾದೇಶಿಕ ಪಕ್ಷಗಳ ಪಾಲಿಗೆ ಎಚ್ಚರಿಕೆ ಆಗಲಿದೆ. ಇನ್ನು ಕಾಂಗ್ರೆಸ್ ಗೆ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಸರಕಾರದಲ್ಲಿ ಮುಂದುವರಿಯುವ ಅನಿವಾರ್ಯ ಸೃಷ್ಟಿ ಆಗುತ್ತದೆ. ಆಗ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕಡೆ ಗಂಭೀರ ಪ್ರಯತ್ನ ಆರಂಭವಾಗುತ್ತದೆ.

ಶಾಸಕರಿಗೆ ಅನಿವಾರ್ಯವನ್ನು ತಿಳಿಸಿಕೊಡಲಿದೆ ಕಾಂಗ್ರೆಸ್
ಒಂದು ವೇಳೆ ಈಗಿರುವ ಅಂದಾಜಿನಂತೆ ರಾಜಸ್ತಾನದಲ್ಲಿ ಕಾಂಗ್ರೆಸ್ ಗೆದ್ದು, ಮಧ್ಯಪ್ರದೇಶ, ಛತ್ತೀಸ್ ಗಢದಲ್ಲೂ ಭರ್ಜರಿ ಫಸಲಾದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಖದರ್ ಬದಲಾಗುತ್ತದೆ.
ಮಿಜೋರಾಂನಲ್ಲಿ ಈಗಾಗಲೇ ಕಾಂಗ್ರೆಸ್ ಅಧಿಕಾರದಲ್ಲಿ ಇದೆ. ಅಲ್ಲಿ ಚುನಾವಣೆಯ ಫಲಿತಾಂಶ ಹಾಗೂ ತೆಲಂಗಾಣದಲ್ಲಿ ಏನಾಗಬಹುದು ಎಂಬ ಕುತೂಹಲ ಕೂಡ ಇದೆ. ಆದರೆ ರಾಜಸ್ತಾನ ಹಾಗೂ ಮಧ್ಯಪ್ರದೇಶ ವಿಧಾನಸಭಾ ಫಲಿತಾಂಶಕ್ಕೆ ಮಹತ್ವ ಇದೆ. ಅಲ್ಲೆಲ್ಲ ಬಿಜೆಪಿ ಗೆದ್ದುಬಿಟ್ಟರೆ ಆಗ ಕಾಂಗ್ರೆಸ್ ಪಾಲಿಗೆ ಆತ್ಮ ವಿಶ್ವಾಸ ಕಳೆದು ಹೋಗುತ್ತದೆ.
ಅಂಥ ಸನ್ನಿವೇಶದಲ್ಲಿ ಪಕ್ಷದ ಶಾಸಕರಿಗೆ ಕರ್ನಾಟಕದಲ್ಲಿ ಮೈತ್ರಿ ಸರಕಾರವನ್ನು ಮುಂದುವರಿಸಿಕೊಂಡು ಹೋಗಬೇಕಾದ ಅನಿವಾರ್ಯವನ್ನು ಕಾಂಗ್ರೆಸ್ ತಿಳಿಸುತ್ತದೆ. ಹೊಡೆದಾಟವೋ- ಅಸಮಾಧಾನವೋ ಅಧಿಕಾರ ಉಳಿಸಿಕೊಂಡರೆ ಸಾಕು ಎಂಬ ಸ್ಥಿತಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳದಾಗುತ್ತದೆ.
ಮಧ್ಯಪ್ರದೇಶದಲ್ಲಿ ಮತ್ತೆ ಬಿಜೆಪಿ ಹವಾ..? ಕಾಂಗ್ರೆಸ್ ಜಸ್ಟ್ ಮಿಸ್?! NDTV ವಿಶ್ಲೇಷಣೆ

ಮೂಗಿಗೆ ತುಪ್ಪ ಹಚ್ಚುವ ಕೆಲಸ ಆಗಬಹುದು
ಇನ್ನು ಲೋಕಸಭೆ ಚುನಾವಣೆ ನಡೆದು, ಅದರಲ್ಲಿ ಕಾಂಗ್ರೆಸ್ ಮಿತ್ರ ಪಕ್ಷಗಳು ಅಥವಾ ತೃತೀಯ ರಂಗ ರಚಿಸಲು ಪೂರಕವಾದ ವಾತಾವರಣ ನಿರ್ಮಾಣ ಆದರೂ ಕರ್ನಾಟಕದಲ್ಲಿನ ಮೈತ್ರಿ ಸರಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಕರ್ನಾಟಕದಲ್ಲಿ ಮಿತ್ರ ಪಕ್ಷಗಳು ಎರಡೂ ಸೇರಿ ಎಷ್ಟು ಸ್ಥಾನಗಳು ಗಳಿಸಿದವು ಎಂಬ ಲೆಕ್ಕಾಚಾರದ ಹೊರತಾಗಿಯೂ ಮೈತ್ರಿ ಸರಕಾರ ಮುಂದುವರಿಸಿಕೊಂಡು ಹೋಗುವ ನಿರ್ಧಾರಕ್ಕೆ ಬರಬಹುದು.
ಆದರೆ, ಈಗಿನ ಸ್ಥಿತಿಯಲ್ಲಿ ನೋಡಿದರೆ ಮುಂದಿನ ಲೋಕಸಭೆ ಚುನಾವಣೆ ಹೊತ್ತಿಗೆ ಒಂದು ಸುತ್ತಿನ ಸಂಪುಟ ವಿಸ್ತರಣೆ ಹಾಗೂ ಆ ನಂತರ ಇನ್ನೊಂದು ಕಂತಿನ ವಿಸ್ತರಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಏಕೆಂದರೆ, ಈಗಿನ ಪರಿಸ್ಥಿತಿಯಲ್ಲಿ ಸಂಪುಟ ವಿಸ್ತರಣೆ ಮಾಡದಿದ್ದರೆ ಅಸಮಾಧಾನಗೊಂಡಿರುವ ಶಾಸಕರು ಪಕ್ಷ ಬಿಡದಿದ್ದರೂ ಲೋಕಸಭೆ ಚುನಾವಣೆಯಲ್ಲಿ ಮಿತ್ರ ಪಕ್ಷಗಳ ಅಭ್ಯರ್ಥಿ ಸೋಲಿಗೆ ಕೆಲಸ ಮಾಡಬಹುದು. ಆದ್ದರಿಂದ ಒಂದು ಕಂತಿನಲ್ಲಿ ಸಂಪುಟ ವಿಸ್ತರಣೆ ಮಾಡಿ, ಇನ್ನೊಂದಿಷ್ಟು ಜನರನ್ನು ಮತ್ತೊಂದು ಕಂತಿನಲ್ಲಿ ಸಚಿವರನ್ನಾಗಿ ಮಾಡ್ತೀವಿ ಎಂದು ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುವ ಸಾಧ್ಯತೆ ಇದೆ.
ಸಮ್ಮಿಶ್ರ ಸರ್ಕಾರಕ್ಕೆ ತಿಂಗಳು ಆರು: ಸಾಧನೆ-ಗುರಿಗಳು ಹತ್ತಾರು!

ಬಿಜೆಪಿಯಲ್ಲಿನ ವಿಶ್ವಾಸಕ್ಕೆ ಕಾರಣ ಏನು?
ಆದರೆ, ಬಿಜೆಪಿಯಲ್ಲಿ ಇರುವ ಸರಕಾರ ರಚನೆಯ ವಿಶ್ವಾಸ ಏನೆಂದರೆ, ಕೇಂದ್ರದಲ್ಲಿ ಮತ್ತೊಂದು ಅವಧಿಗೆ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದುಬಿಟ್ಟರೆ ಕರ್ನಾಟಕದಲ್ಲಿ ಸುಲಭವಾಗಿ ಮೈತ್ರಿ ಸರಕಾರವನ್ನು ಕೆಡವಬಹುದು.
ಹೇಗಿದ್ದರೂ ಐಟಿ-ಇಡಿ ಅಸ್ತ್ರ ಬಳಸಿ, ವಿಪಕ್ಷಗಳ ನಾಯಕರನ್ನು ಹಣ್ಣುಗಾಯಿ- ನೀರುಗಾಯಿ ಮಾಡಬಹುದು. ಅದೇ ಒಂದು ವೇಳೆ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಾರದಿದ್ದರೆ ಎಂಬ ಅಳಕು ಜೆಡಿಎಸ್-ಕಾಂಗ್ರೆಸ್ ನ ಭಿನ್ನಮತೀಯ ಶಾಸಕರಲ್ಲಿ ಇದೆ. ಆದ್ದರಿಂದ ಆತುರ ಪಡುವುದು ಬೇಡ. ಲೋಕಸಭೆ ಚುನಾವಣೆ ಫಲಿತಾಂಶ ಬಂದು ಬಿಡಲಿ. ಆ ನಂತರವೇ ತೀರ್ಮಾನ ಮಾಡೋಣ. ಅಲ್ಲಿಯವರೆಗೆ ಒತ್ತಡ ಹೇರುತ್ತಾ ಇದ್ದರೆ ಪಕ್ಷದಲ್ಲಿ ತಮ್ಮ ಬಗ್ಗೆ ಒಂದು ಆತಂಕ ಇದ್ದೇ ಇರುತ್ತದೆ ಎಂಬ ಲೆಕ್ಕಾಚಾರ ಭಿನ್ನಮತೀಯ ಶಾಸಕರ ಗುಂಪಿನದಾಗಿದೆ.
ಆ ಕಾರಣಕ್ಕೆ ಈ ಮೈತ್ರಿ ಸರಕಾರವನ್ನು ಉರುಳಿಸುವುದು ಹಾಗೂ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.
ಬಿಜೆಪಿ ಫೇಲ್, ಆದ್ರೂ ಮೋದಿ ಪಾಸ್! ಬಿಜೆಪಿ ಸಮೀಕ್ಷೆ ಹೇಳಿದ ಸತ್ಯಸಂಗತಿ!