Viral: 50 ಲಕ್ಷ ಸಂಬಳದ ಕೆಲಸಕ್ಕೆ ವಿದಾಯ ಹೇಳಿ ಮೊಮೊಸ್ ಮಾರಿ ಕೋಟಿ ಗಳಿಸಿದ ಟೆಕ್ಕಿ
Viral: ಕೈ ತುಂಬಾ ಸಂಬಳ, ಐಷಾರಾಮಿ ಜೀವನ, ಎಸಿ ರೂಮಿನ ಕೆಲಸ... ಇವೆಲ್ಲವನ್ನೂ ಬಿಟ್ಟು ರಸ್ತೆ ಬದಿಯಲ್ಲಿ ನಿಂತು ಮೊಮೊಸ್ (Momos) ಮಾರಲು ಯಾರಾದರೂ ತಯಾರಾಗುತ್ತಾರೆಯೇ? "ಛೇ.. ಇದೇನಿದು ಹುಚ್ಚುತನ" ಎಂದು ನೀವು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬಹುದು. ಆದರೆ, ಗುರ್ಗಾಂವ್ ಮೂಲದ ಯುವಕನೊಬ್ಬ ಇಂತಹದೊಂದು ಸಾಹಸಕ್ಕೆ ಕೈಹಾಕಿ ಇಂದು ಕೋಟಿ ಕೋಟಿ ರೂಪಾಯಿಗಳ ಒಡೆಯನಾಗಿದ್ದಾರೆ. ಕಾರ್ಪೊರೇಟ್ ಜಗತ್ತಿನ ಲಕ್ಷಾಂತರ ರೂಪಾಯಿ ಸಂಬಳವನ್ನು ಧಿಕ್ಕರಿಸಿ, ಸ್ವಂತ ಉದ್ಯಮದಲ್ಲಿ ಯಶಸ್ಸು ಕಂಡ ಆ ಛಲಗಾರನೇ ಸಾಕೇತ್ ಸೌರಭ್ (Saketh Sowrabh).
50 ಲಕ್ಷ ಪ್ಯಾಕೇಜ್‌ಗೆ ರಾಜೀನಾಮೆ
ಸಾಕೇತ್ ಸೌರಭ್ ಸಾಮಾನ್ಯ ಉದ್ಯೋಗಿಯಲ್ಲ. ಅವರು ಪ್ರತಿಷ್ಠಿತ ಕಂಪನಿಯೊಂದರಲ್ಲಿ 'ಪ್ರಾಡಕ್ಟ್ ಮ್ಯಾನೇಜರ್' ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ವಾರ್ಷಿಕ ಬರೋಬ್ಬರಿ 50 ರಿಂದ 52 ಲಕ್ಷ ರೂಪಾಯಿಗಳ ಪ್ಯಾಕೇಜ್ ಇತ್ತು. ಆದರೆ 2023ರ ಸೆಪ್ಟೆಂಬರ್‌ನಲ್ಲಿ ಅವರು ತಮ್ಮ ಈ ಕೆಲಸಕ್ಕೆ ರಾಜೀನಾಮೆ ನೀಡಿದರು. ಅವರ ಈ ನಿರ್ಧಾರ ಅನೇಕರಿಗೆ ವಿಷಾದ ಎನಿಸಿತ್ತು. ಆದರೆ ಸಾಕೇತ್ ಅವರ ತಲೆಯಲ್ಲಿ ಬೇರೆಯದ್ದೇ ಆಲೋಚನೆ ಇತ್ತು. ಅವರ ಆಲೋಚನೆಯಿಂದ ಹುಟ್ಟಿಕೊಂಡಿದ್ದೇ 'ದಿ ಮೊಮೊಸ್ ಮಾಫಿಯಾ' (The Momos Mafia).

ಮೊಮೊಸ್ ಐಡಿಯಾ ಹೊಳೆದಿದ್ದು ಹೇಗೆ?
ಸಾಕೇತ್ ಹಿಂದೆ ತಮ್ಮ ಸಹೋದರಿ ಮತ್ತು ಭಾವ ನಡೆಸುತ್ತಿದ್ದ 'ಬ್ಯಾಂಬೂ ಕೆಫೆ'ಗೆ ಸಹಾಯ ಮಾಡುತ್ತಿದ್ದರು. ಅಲ್ಲಿ ಬಿರಿಯಾನಿಗಿಂತ ಹೆಚ್ಚಾಗಿ ಜನರು ಮೊಮೊಸ್ ಇಷ್ಟಪಟ್ಟು ತಿನ್ನುತ್ತಾರೆ ಎಂಬುದು ಅವರಿಗೆ ಅರಿವಾಯಿತು. ಇದನ್ನೇ ಬಂಡವಾಳವಾಗಿಸಿಕೊಂಡ ಅವರು, ಕೆಫೆಯ ಹೊರಗೆ ಒಂದು ಸಣ್ಣ ಕೆನೋಪಿ ಹಾಕಿ ಮೊಮೊಸ್ ಮಾರಾಟ ಮಾಡಲು ಆರಂಭಿಸಿದರು. ಬಳಿಕ ಗುರ್ಗಾಂವ್‌ನ ಇನ್ಫೋಟೆಕ್ ಬಳಿ ಒಂದು ಚಿಕ್ಕ ಕಾರ್ಟ್ (Cart) ಹಾಕಿದರು. ಆಶ್ಚರ್ಯವೆಂಬಂತೆ, ಈ ಚಿಕ್ಕ ಗಾಡಿಯಲ್ಲಿ ದಿನಕ್ಕೆ 10,000 ದಿಂದ 12,000 ರೂಪಾಯಿ ವ್ಯಾಪಾರವಾಗುತ್ತಿತ್ತು! ಇದು ಅವರಿಗೆ ದೊಡ್ಡ ಉದ್ಯಮ ಆರಂಭಿಸಲು ಸ್ಫೂರ್ತಿ ನೀಡಿತು.
ಇಂದು 'ದಿ ಮೊಮೊಸ್ ಮಾಫಿಯಾ' ಬೆಳೆದಿದೆ. ಏಕ್ತಾ ಕುಮಾರಿ, ಗೌತಮ್, ಸೂರ್ಯ ಪ್ರಕಾಶ್ ಮತ್ತು ಶುಭಮ್ ಠಾಕೂರ್ ಅವರಂತಹ ಪಾಲುದಾರರೊಂದಿಗೆ ಸೇರಿ, ಸಾಕೇತ್ ಅವರು 7 ರಾಜ್ಯಗಳಲ್ಲಿ ತಮ್ಮ ಜಾಲವನ್ನು ವಿಸ್ತರಿಸಿದ್ದಾರೆ. ಪ್ರಸ್ತುತ ಇವರ ಬಳಿ 40ಕ್ಕೂ ಹೆಚ್ಚು ಕಾರ್ಟ್‌ಗಳು, 20 ಔಟ್‌ಲೆಟ್‌ಗಳು ಮತ್ತು 2 ದೊಡ್ಡ ರೆಸ್ಟೋರೆಂಟ್‌ಗಳಿವೆ.
ಗಳಿಕೆ ಎಷ್ಟು ಗೊತ್ತಾ?
ಇವರ ಆದಾಯದ ಅಂಕಿಅಂಶಗಳನ್ನು ಕೇಳಿದರೆ ನೀವು ಬೆರಗಾಗುತ್ತೀರಿ. 2024ರ ಜನವರಿಯಿಂದ ಮಾರ್ಚ್‌ವರೆಗೆ ಕೇವಲ ಮೂರು ತಿಂಗಳಲ್ಲಿ 16 ಲಕ್ಷ ರೂ. ಗಳಿಸಿದ್ದರು. ಕಳೆದ ವರ್ಷ ಅವರ ಆದಾಯ 2.2 ಕೋಟಿ ರೂ. ಆಗಿತ್ತು. ಈ ವರ್ಷ ಇದು 3 ಕೋಟಿ ರೂ. ತಲುಪುವ ನಿರೀಕ್ಷೆಯಿದೆ. ಒಟ್ಟಾರೆಯಾಗಿ, ಕೇವಲ ಎರಡೂವರೆ ವರ್ಷಗಳಲ್ಲಿ ಇವರ ಕಂಪನಿ 5 ಕೋಟಿಗೂ ಹೆಚ್ಚು ಆದಾಯವನ್ನು ಗಳಿಸಿದೆ.
ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ "50 ಲಕ್ಷದ ಕೆಲಸ ಬಿಟ್ಟು ಮೊಮೊಸ್ ಮಾರಲು ಬಂದೆ" ಎಂಬ ಶೀರ್ಷಿಕೆಯೊಂದಿಗೆ ಹಾಕಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. "ದೊಡ್ಡ ಬ್ರ್ಯಾಂಡ್ ಮಾಡಬೇಕೆಂದರೆ ರಸ್ತೆ ಬದಿಯ ಗಾಡಿಯಿಂದಲ್ಲ, ಒಂದು ಪ್ರಾಪರ್ ಔಟ್‌ಲೆಟ್‌ನಿಂದ ಪ್ರಾರಂಭಿಸಿ," ಎಂದು ಅವರು ಉದಯೋನ್ಮುಖ ಉದ್ಯಮಿಗಳಿಗೆ ಸಲಹೆ ನೀಡುತ್ತಾರೆ.












Click it and Unblock the Notifications