ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ್ ದಿವಸ್: ಭಾರತ-ಪಾಕ್ ಯುದ್ಧದ ಬಗ್ಗೆ ತಿಳಿದಿರಬೇಕಾದ 22 ಅಂಶಗಳು

|
Google Oneindia Kannada News

ಬಾಂಗ್ಲಾದೇಶ ವಿಮೋಚನೆಗಾಗಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆದ ಸಮರದಲ್ಲಿ ಭಾರತ ವಿಜಯದ ಪತಾಕೆ ಹಾರಿಸಿ 48 ವರ್ಷ ಕಳೆದಿದೆ. 1971ರ ಡಿ. 3ರಂದು ಆರಂಭವಾದ ಇಂಡೋ-ಪಾಕಿಸ್ತಾನ್ ಯುದ್ಧ 13 ದಿನಗಳವರೆಗೂ ನಡೆಯಿತು. ಬಳಿಕ ಭಾರತೀಯ ಸೇನೆಯ ಪ್ರಾಬಲ್ಯಕ್ಕೆ ಸೋತ ಪಾಕಿಸ್ತಾನ, ಭಾರತ ಮತ್ತು ಬಾಂಗ್ಲಾದೇಶಕ್ಕೆ ಶರಣಾಯಿತು.

ಭಾರತದ 11 ವಾಯುನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸುವುದರೊಂದಿಗೆ ಈ ಯುದ್ಧ ಆರಂಭವಾಯಿತು. ಪೂರ್ವಪಾಕಿಸ್ತಾನದಲ್ಲಿನ ಬಂಗಾಳಿ ಜನರ ಮೇಲೆ ಪಾಕಿಸ್ತಾನ ನಡೆಸುತ್ತಿದ್ದ ಹತ್ಯಾಕಾಂಡವನ್ನು ನಿಲ್ಲಿಸಲು ನಡೆದ ಈ ಯುದ್ಧದಲ್ಲಿ ಭಾರತ ಮತ್ತು ಪಾಕಿಸ್ತಾನಗಳು 3,800ಕ್ಕೂ ಅಧಿಕ ಸೈನಿಕರನ್ನು ಕಳೆದುಕೊಂಡವು.

ಈ ಯುದ್ಧ ಹೇಗೆ ಆರಂಭವಾಯಿತು? 13 ದಿನಗಳಲ್ಲಿ ಏನೇನು ನಡೆಯಿತು? ಪಾಕಿಸ್ತಾನ ಹೇಗೆ ಮತ್ತು ಏಕೆ ಭಾರತಕ್ಕೆ ಶರಣಾಯಿತು ಎಂಬ ಕುತೂಹಲಕಾರಿ ಮಾಹಿತಿಯ 22 ಅಂಶಗಳು ಇಲ್ಲಿವೆ.

ಬಾಂಗ್ಲಾದೇಶದಲ್ಲಿ ಹತ್ಯಾಕಾಂಡ

ಬಾಂಗ್ಲಾದೇಶದಲ್ಲಿ ಹತ್ಯಾಕಾಂಡ

* ಬಾಂಗ್ಲಾದೇಶದ ವಿಮೋಚನೆಗಾಗಿ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಯುದ್ಧವು ರಾಜಕೀಯವಾಗಿ 1971ರ ಮಾರ್ಚ್‌ನಿಂದಲೇ ಆರಂಭವಾಗಿತ್ತು.

* ಸಾಂಪ್ರದಾಯಿಕ ಶಕ್ತಿಶಾಲಿ ಪಶ್ಚಿಮ ಪಾಕಿಸ್ತಾನ ಮತ್ತು ಬಹುತೇಕ ಪೂರ್ವ ಪಾಕಿಸ್ತಾನಗಳ ನಡುವಿನ ಸಂಘರ್ಷವಾದ ಬಾಂಗ್ಲಾದೇಶ ವಿಮೋಚನಾ ಯುದ್ಧದ ಪರಿಣಾಮವೇ ಭಾರತ-ಪಾಕಿಸ್ತಾನ ಯುದ್ಧ.

* ಪೂರ್ವ ಪಾಕಿಸ್ತಾನದಲ್ಲಿ (ಇಂದಿನ ಬಾಂಗ್ಲಾದೇಶ) ನಿರಂತರವಾಗಿ ನಡೆಯುತ್ತಿದ್ದ ಅತ್ಯಾಚಾರ, ಹಿಂಸಾಚಾರ, ಕೊಲೆ ಮತ್ತು ಕಲಹಗಳ ಪರಿಣಾಮ ಭಾರತದೊಳಗೆ ಒಂಬತ್ತು ಮಿಲಿಯನ್ ನಿರಾಶ್ರಿತರು ನುಸುಳುವಂತೆ ಮಾಡಿತು. ಮುಖ್ಯವಾಗಿ ಅಲ್ಪಸಂಖ್ಯಾತ ಹಿಂದೂ ಜನರನ್ನು ಗುರಿಯನ್ನಾಗಿರಿಸಿಕೊಂಡ, ಬೆಂಗಾಳಿಗಳ ಮೇಲೆ ಪಾಕಿಸ್ತಾನವು ವ್ಯಾಪಕ ಹತ್ಯಾಕಾಂಡ ನಡೆಸಿತ್ತು.

* ಬಾಂಗ್ಲಾದೇಶದಾದ್ಯಂತ ಯಾವ ಕರುಣೆಯೂ ಇಲ್ಲದೆ ಕ್ರೌರ್ಯ ಮೆರೆದ ಪಾಕಿಸ್ತಾನದ ಜನರಲ್ ಟಿಕ್ಕಾ ಖಾನ್‌ ಸಾಲು ಸಾಲು ಹತ್ಯೆಗಳನ್ನು ನಡೆಸಿದ. ಆತನಿಗೆ 'ಬಂಗಾಳದ ಕಟುಕ' ಎಂದೇ ಕರೆಯಲಾಯಿತು. ಇದೇ ವ್ಯಕ್ತಿ ಬಲೂಚಿಸ್ತಾನದಲ್ಲಿಯೂ ಭೀಕರ ಹತ್ಯಾಕಾಂಡ ನಡೆಸಿ, 'ಬಲೂಚಿಸ್ತಾನದ ಕಟುಕ' ಎಂದು ಮತ್ತೊಂದು ಕುಖ್ಯಾತಿಯನ್ನು ಪಡೆದ.

ಪಾಕಿಸ್ತಾನದಿಂದ ದಾಳಿ ಆರಂಭ

ಪಾಕಿಸ್ತಾನದಿಂದ ದಾಳಿ ಆರಂಭ

* ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಹಿಂಸಾಚಾರ, ಹತ್ಯಾಕಾಂಡ ಅನಾಹುತಗಳು ನಿಲ್ಲುವ ಲಕ್ಷಣ ಕಾಣಿಸಲಿಲ್ಲ. ಇದರಿಂದ ಭಾರತಕ್ಕೆ ನುಸುಳುತ್ತಿದ್ದ ನಿರಾಶ್ರಿತರ ಸಂಖ್ಯೆಯೂ ಹೆಚ್ಚುತ್ತಿತ್ತು. ಬಂದವರಿಗೆಲ್ಲ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ನೀಡುವ ಬದಲು ಆ ಹತ್ಯಾಕಾಂಡವನ್ನೇ ತಡೆಯುವ ಹೋರಾಟ ಸೂಕ್ತ ಎಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ನಿರ್ಧರಿಸಿದರು.

* 1971ರ ಡಿ. 3ರಂದು ಪಾಕಿಸ್ತಾನದ ವಾಯು ಪಡೆಯು (ಪಿಎಎಫ್) ಭಾರತ-ಪಾಕ್ ಗಡಿಯಿಂದ 480 ಕಿ.ಮೀ. ದೂರದ ಆಗ್ರಾದಲ್ಲಿರುವ ಭಾರತದ ವಾಯುನೆಲೆ ಸೇರಿದಂತೆ ವಾಯವ್ಯ ಭಾಗದ 11 ವಾಯುನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿತು.

* ಪಾಕಿಸ್ತಾನವು ಸಂಜೆ 5.40ರ ವೇಳೆಗೆ ನಡೆಸಿದ ದಾಳಿಯು 1971ರ ಇಂಡೋ ಪಾಕಿಸ್ತಾನ್ ಯುದ್ಧಕ್ಕೆ ಅಧಿಕೃತ ನಾಂದಿ ಹಾಡಿತು. ಭಾರತೀಯ ವಾಯುನೆಲೆಯನ್ನು ವಶಪಡಿಸಿಕೊಳ್ಳಲು ಯಧ್ಯಾ ಖಾನ್ ನೇತೃತ್ವದಲ್ಲಿ ಪಾಕ್ ದಾಳಿ ನಡೆಸಿತ್ತು. 1967ರಲ್ಲಿ ಇಸ್ರೇಲ್ ಅನುಸರಿಸಿದ ತಂತ್ರ ಅನುಸರಿಸಿದರೆ ಭಾರತದ ಪ್ರಬಲ ವಾಯುಪಡೆಯನ್ನು ಮೊದಲು ನಾಶಪಡಿಸಬಹುದು ಎನ್ನುವುದು ಪಾಕ್ ಸಂಚಾಗಿತ್ತು. ಆದರೆ ಮೊದಲೇ ಜಾಗ್ರತಗೊಂಡಿದ್ದ ಭಾರತ ಅದಕ್ಕೆ ತಕ್ಕ ಉತ್ತರ ನೀಡಿತು.

* ದಾಳಿಯ ಮಾಹಿತಿ ದೊರಕುತ್ತಿದ್ದಂತೆಯೇ ಭಾರತೀಯ ಸೇನಾ ಪಡೆಗಳಿಗೆ ಸನ್ನದ್ಧರಾಗುವಂತೆ ಪ್ರಧಾನಿ ಇಂದಿರಾ ಗಾಂಧಿ ಸೂಚನೆ ನೀಡಿದರು.

ಪಾಕಿಸ್ತಾನಕ್ಕೆ ಲಂಕಾ ನೆರವು

ಪಾಕಿಸ್ತಾನಕ್ಕೆ ಲಂಕಾ ನೆರವು

* ಭಾರತದ ಪಶ್ಚಿಮ ಭಾಗದ ಗಡಿಯಲ್ಲಿನ ಅನೇಕ ಸ್ಥಳಗಳ ಮೇಲೆ ಪಾಕಿಸ್ತಾನ ಸೇನೆ ದಾಳಿ ನಡೆಸಿತು. ಆದರೆ ಭಾರತೀಯ ಸೇನೆಯು ಎದುರಾಳಿಗಳನ್ನು ಸಮರ್ಥವಾಗಿ ಬಗ್ಗುಬಡಿಯಿತು.

* ಆಗ್ರಾದ ಮೇಲೆ ದಾಳಿ ನಡೆದಾಗ ತಾಜ್ ಮಹಲ್‌ಗೆ ಧಕ್ಕೆಯಾಗದಂತೆ ತಡೆಯಲು ಅದನ್ನು ಎಲೆಗಳು ಹಾಗೂ ಮರದ ಕೊಂಬೆಗಳಿಂದ ಮುಚ್ಚಲಾಯಿತು. ಅದರ ಮಾರ್ಬಲ್‌ಗಳು ಕೆಡದಂತೆ ಗೋಣಿಚೀಲಗಳನ್ನು ಹಾಸಲಾಗಿತ್ತು.

* ಡಿ. 4-5ರ ರಾತ್ರಿ ಭಾರತದ ನೌಕಾಪಡೆ ಕರಾಚಿ ಬಂದರಿನ ಮೇಲೆ ದಾಳಿ ನಡೆಸಿತು. ಪಾಕಿಸ್ತಾನದ ಪಿಎನ್ಎಸ್ ಖೈಬರ್ ಮತ್ತು ಪಿಎನ್ಎಸ್ ಮುಹಾಫಿಜ್ ನೌಕೆಗಳು ಸಂಪೂರ್ಣ ನಾಶವಾದರೆ, ಪಿಎನ್ಎಸ್ ಷಾಜಹಾನ್ ಬಹುತೇಕ ಹಾನಿಗೊಳಲಾಗಿತ್ತು.

* ಪಾಕಿಸ್ತಾನದ ಯುದ್ಧವಿಮಾನಕ್ಕೆ ಕೊಲಂಬೋದ ಬಂಡಾರನಾಯಿಕೆ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಿಕೊಳ್ಳಲು ಅವಕಾಶ ನೀಡುವ ಮೂಲಕ ಶ್ರೀಲಂಕಾವು ಪಾಕಿಸ್ತಾನಕ್ಕೆ ಸಹಾಯ ಮಾಡಿತ್ತು. ಮಾತ್ರವಲ್ಲ, ಡಿ. 9ರಂದು ಅಮೆರಿಕದ ಅಧ್ಯಕ್ಷ ನಿಕ್ಸನ್, ಭಾರತಕ್ಕೆ ಬೆದರಿಕೆಯೊಡ್ಡಲು ಬಂಗಾಳ ಕೊಲ್ಲಿಗೆ ತಮ್ಮ ಯುದ್ಧ ವಿಮಾನ ಕಳುಹಿಸಲು ನಿರ್ಧರಿಸಿದ್ದರು. ಭಾರತವನ್ನು ನಾಲ್ಕೂ ದಿಕ್ಕುಗಳಿಂದ ಸುತ್ತವರಿದು ಅದು ಪೂರ್ವ ಪಾಕಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಒತ್ತಡ ಹೇರುವುದು ಅವರ ಉದ್ದೇಶವಾಗಿತ್ತು.

ಚೀನಾಕ್ಕೆ ಕುಮ್ಮಕ್ಕಿ ನೀಡಿದ ಅಮೆರಿಕ

ಚೀನಾಕ್ಕೆ ಕುಮ್ಮಕ್ಕಿ ನೀಡಿದ ಅಮೆರಿಕ

* ಬಾಂಗ್ಲಾದೇಶದ ಬಗ್ಗೆ ಅನುಕಂಪ ವ್ಯಕ್ತಪಡಿಸಿದ ಸೋವಿಯತ್ ರಷ್ಯಾ, ಭಾರತದ ವಿರುದ್ಧ ಅಮೆರಿಕಾ ಅಥವಾ ಚೀನಾ ಹಸ್ತಕ್ಷೇಪ ಮಾಡಿದರೆ, ಭಾರತದ ಪರವಾಗಿ ನಿಲ್ಲಬೇಕಾಗುತ್ತದೆ ಎಂದು ತಿಳಿಸಿತು.

* ಪಾಕಿಸ್ತಾನದ ದೀರ್ಘಕಾಲದ ಮಿತ್ರ ಚೀನಾವು ಭಾರತದ ಜತೆಗಿನ ತನ್ನ ಗಡಿಯಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜನೆ ಮಾಡುವಂತೆ ಅಮೆರಿಕವು ಚೀನಾಕ್ಕೆ ಉತ್ತೇಜನ ನೀಡಿತು. ಆದರೆ ಭಾರತ-ಚೀನಾ ಗಡಿಯಲ್ಲಿ ಸೂಕ್ತ ನೆಲೆ ದೊರಕದ ಕಾರಣ ಚೀನಾ, ಕೂಡಲೇ ಕದನವಿರಾಮ ಘೋಷಿಸುವಂತೆ ಒತ್ತಾಯಿಸಿತು.

* ಐಎನ್ಎಸ್ ವಿಕ್ರಾಂತ್ ಸಮುದ್ರ ಮಾರ್ಗದ ಮೂಲಕ ಯುದ್ಧ ಬಾಂಬರ್‌ಗಳ ಮೂಲಕ ಚಿತ್ತಗಾಂಗ್ ಮತ್ತು ಕಾಕ್ಸ್ ಬಜಾರ್ ಸೇರಿದಂತೆ ಪೂರ್ವ ಪಾಕಿಸ್ತಾನದ ಅನೇಕ ಕರಾವಳಿ ಪಟ್ಟಣಗಳ ಮೇಲೆ ದಾಳಿ ನಡೆಸಿತು.

* ಇದಕ್ಕೆ ಪ್ರತಿ ದಾಳಿ ನಡೆಸಲು ಪಾಕಿಸ್ತಾನವು ತನ್ನ ಪಿಎನ್ಎಸ್ ಘಾಜಿ ಸಬ್‌ಮೆರಿನ್‌ಅನ್ನು ರವಾನಿಸಿತು. ಆದರೆ ಅದು ವಿಶಾಖಪಟ್ಟಣಂ ಕರಾವಳಿಯಲ್ಲಿ ನಿಗೂಢ ರೀತಿಯಲ್ಲಿ ಮುಳುಗಿತು.

ಭಾರತ-ಪಾಕಿಸ್ತಾನಕ್ಕೆ ತೀವ್ರ ನಷ್ಟ

ಭಾರತ-ಪಾಕಿಸ್ತಾನಕ್ಕೆ ತೀವ್ರ ನಷ್ಟ

* ಡಿ. 9ರಂದು ಭಾರತದ ಐಎನ್ಎಸ್ ಖುಕ್ರಿಯನ್ನು ಪಾಕಿಸ್ತಾನದ ಪಿಎನ್ಎಸ್ ಹ್ಯಾಂಗೋರ್ ಅರೇಬಿಯನ್ ಸಮುದ್ರದಲ್ಲಿ ಮುಳುಗುವಂತೆ ಮಾಡಿತು. ಇದು ಭಾರತಕ್ಕಾದ ಬಹುದೊಡ್ಡ ನಷ್ಟ. ಇದರಿಂದ 18 ಅಧಿಕಾರಿಗಳು ಮತ್ತು 176 ನಾವಿಕರು ಮೃತಪಟ್ಟರು.

* 1971ರ ಯುದ್ಧದಲ್ಲಿ ಪಾಕಿಸ್ತಾದ ನೌಕಾಪಡೆ ತನ್ನ ಮೂರನೇ ಒಂದರಷ್ಟು ಶಕ್ತಿಯನ್ನು ಕಳೆದುಕೊಂಡಿತು. ಭಾರತವು ತನ್ನ ಕ್ಷಿಪ್ರ ಮತ್ತು ಅಚ್ಚರಿಯ ದಾಳಿಗಳ ಮೂಲಕ ಪಾಕಿಸ್ತಾನದ ಪಡೆಗಳ ಗೋಡೆಯನ್ನು ಭೇದಿಸಿತು.

* ಈ ಯುದ್ಧ ಸುಮಾರು 13 ದಿನಗಳವರೆಗೆ ಮುಂದುವರಿಯಿತು. ಇದರಿಂದ ಪಾಕಿಸ್ತಾನವು ಅಪಾರ ಪ್ರಮಾಣದಲ್ಲಿ ತನ್ನ ನಾಗರಿಕರನ್ನು ಹಾಗೂ ಸೈನಿಕರನ್ನು ಕಳೆದುಕೊಂಡಿತು. ಕೊನೆಗೆ ಡಿ. 16ರಂದು ಪಾಕಿಸ್ತಾನದ ಸೇನೆಯ ಮುಖ್ಯಸ್ಥ ಜನರಲ್ ಅಮಿರ್ ಅಬ್ದುಲ್ಲಾ ಖಾನ್ ನಿಯಾಜಿ ನೇತೃತ್ವದ 93,000 ಸೈನಿಕರ ಪಡೆಯು ಪೂರ್ವ ಪಾಕಿಸ್ತಾನದಲ್ಲಿ ಭಾರತೀಯ ಸೇನೆ-ಮುಕ್ತಿ ಬಾಹಿನಿ ಜಂಟಿ ಪಡೆಗೆ ಶರಣಾಯಿತು.

* ಶರಣಾಗತಿಯ ಪತ್ರಕ್ಕೆ ಢಾಕಾದ ರಾಮ್ನಾ ರೇಸ್ ಕೋರ್ಸ್‌ನಲ್ಲಿ ಪಾಕಿಸ್ತಾನ ಸಹಿ ಹಾಕಿತು. ಪಾಕಿಸ್ತಾನದ ಸೈನಿಕರು ಮತ್ತು ಅವರ ಪರವಾಗಿದ್ದ ಪೂರ್ವ ಪಾಕಿಸ್ತಾನದ ನಾಗರಿಕರನ್ನು ಭಾರತ ಯುದ್ಧ ಕೈದಿಗಳನ್ನಾಗಿ ತನ್ನ ವಶಕ್ಕೆ ಪಡೆದುಕೊಂಡಿತು.

ಶಿಮ್ಲಾ ಒಪ್ಪಂದಕ್ಕೆ ಸಹಿ

ಶಿಮ್ಲಾ ಒಪ್ಪಂದಕ್ಕೆ ಸಹಿ

* ಯುದ್ಧದ ಸೋಲಿಗೆ ಕಾರಣಗಳನ್ನು ಅರಿಯಲು ರಚಿಸಲಾದ ಹಮೂದರ್ ರಹಮಾನ್ ಆಯೋಗವು, ಪಾಕಿಸ್ತಾನಿ ಜನರಲ್‌ಗಳ ಮೇಲೆ ದೋಷಾರೋಪ ಮಾಡಿತು. ಕರ್ತವ್ಯ ನಿರ್ಲಕ್ಷ್ಯ, ಯುದ್ಧ ಅಪರಾಧ, ಸ್ಮಗ್ಲಿಂಗ್ ಮುಂತಾದವುಗಳಲ್ಲಿ ತೊಡಗಿಕೊಂಡಿದ್ದರು ಎಂದು ಆರೋಪಿಸಿತು.

* 1972ರಲ್ಲಿ ಭಾರತ-ಪಾಕಿಸ್ತಾನ ನಡುವೆ ಶಿಮ್ಲಾ ಒಪ್ಪಂದ ನಡೆಯಿತು. ಭಾರತವು ಪಾಕಿಸ್ತಾನದಿಂದ ವಶಪಡಿಸಿಕೊಂಡಿದ್ದ ಕೆಲವು ಪ್ರದೇಶಗಳನ್ನು ಬಿಟ್ಟುಕೊಟ್ಟಿತು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಬಾಂಗ್ಲಾದೇಶವನ್ನು ಸ್ವತಂತ್ರ ದೇಶವೆಂದು ಪರಿಗಣಿಸಿತು.

English summary
Indo-Pak 1971 War Vijay Diwas. 22 facts about India - Pakistan war of 1971 for Bangladesh freedom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X