ಹುಲಿ ಬಂತು ಹುಲಿ.... ಎಲ್ಲಾ ಓಡಿ.... ಓಡೋಕು ಮುಂಚೆ ಸರಿಯಾಗಿ ನೋಡಿ....
ಹುಲಿ ಬಂತು ಹುಲಿ.... ಎಲ್ಲಾ ಓಡಿ.... ಹುಲಿ ಬಂತು ಹುಲಿ.... ಓಡಿ ಓಡಿ.... ಎಲ್ಲೆಡೆ ಇದೇ ಭಯ. ಇದೇ ಭೀತಿ. ಮನೆ ಬಿಟ್ಟು ಹೊರ ಬಂದ್ರು ಭಯ.. ಮನೆಯಲ್ಲಿದ್ರೂ ಭಯ. ಕೆಲಸಕ್ಕೆ ಹೋದ್ರೂ ಭಯ. ಹೀಗೆ ರಾಜ್ಯದ ಜನರ ನಿದ್ದೆಗೆಡಿಸಿದೆ ಈ ಹುಲಿಮಹಾರಾಯ. ಇದೇ ಸಂದರ್ಭದಲ್ಲಿ ಮತ್ತೊಂದು ಹುಲಿ ಜನರಲ್ಲಿ ಆತಂಕ ಹೆಚ್ಚಿಸಿದೆ. ಇದನ್ನು ಕಂಡು ಜನ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.
ಹೌದು... ಹುಲಿಯೊಂದು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಹುಲಿ ರಸ್ತೆಯಲ್ಲಿ ಓಡಾಡುತ್ತಿದೆ ಅಂದರೆ ಎಲ್ಲಿ? ಯಾವ ರಸ್ತೆ? ಎನ್ನುವ ಪ್ರಶ್ನೆಯನ್ನು ನೀವು ಥಟ್ ಅಂತ ಕೇಳಿಬಿಡಬಹುದು. ಆದರೆ ಈ ಹುಲಿ ನಿಜವಾದ ಹುಲಿಯಲ್ಲ. ಬದಲಿಗೆ ಹುಲಿಯಂತೆ ಬಣ್ಣ ಹಚ್ಚಿದ ನಾಯಿ.

ಈ ನಾಯಿ ರಸ್ತೆಯಲ್ಲಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಳ್ಳಂಬೆಳಿಗ್ಗೆ ಈ ವಿಡಿಯೋ ನೋಡಿದ ಜನ ಬೆಚ್ಚಿ ಬಿದ್ದಿದ್ದಾರೆ. ಇದನ್ನೇ ಹುಲಿ ಅಂದುಕೊಂಡ ಜನ ಮನೆಬಿಟ್ಟು ಹೊರಬರಲು ಹಿಂದೇಟಾಕಿದ್ದಾರೆ. ಇದನ್ನೇ ನಿಜವಾದ ಹುಲಿ ಅಂದುಕೊಂಡು ಭಯಭೀತರಾಗಿದ್ದಾರೆ. ಆದರೆ ಇದು ನಿಜವಾದ ಹುಲಿಯಲ್ಲ. ಕೊಂಚ ಅರಣ್ಯಕ್ಕೆ ಹತ್ತಿರದಲ್ಲಿ ಮನೆ ಅಥವಾ ಕಚೇರಿ ಇದ್ದವರು ಈ ವಿಡಿಯೋ ನೋಡಿ ಬಾಗಿಲನ್ನು ಹಾಕಿಕೊಂಡಿರುವುದು ಸುಳ್ಳಲ್ಲ.
ಅಷ್ಟಕ್ಕೂ ನಾಯಿಗೆ ಹುಲಿಯಂತೆ ಬಣ್ಣ ಹಚ್ಚಿದ್ದು ಇದೇ ಮೊದಲಲ್ಲ. ಈ ಹಿಂದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿಶೇಷವಾಗಿ ಮಲೆನಾಡಿನಲ್ಲಿ ರೈತರು ನಾಯಿಗಳಿಗೆ ಹುಲಿಯಂತೆ ಬಣ್ಣ ಹಚ್ಚುತ್ತಾರೆ. ಅರೇ.. ರೈತರು ಯಾಕೆ ನಾಯಿಗಳಿಗೆ ಹುಲಿಯಂತೆ ಬಣ್ಣವನ್ನು ಹಚ್ಚುತ್ತಾರೆ ಅನ್ನೋ ಪ್ರಶ್ನೆಯನ್ನು ನೀವು ಮಾಡಬಹುದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ......
ವಿಶೇಷವಾಗಿ ಮಲೆನಾಡಿನ ರೈತರು ಮಂಗಳ ಹಾವಳಿಯಿಂದಾಗಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈ ಮಂಗಗಳನ್ನು ಓಡಿಸುವುದೇ ಒಂದು ದೊಡ್ಡ ಸಮಸ್ಯೆ. ಏನೆಲ್ಲಾ ಮಾಡಿದರೂ ಈ ಮಂಗಗಳನ್ನು ಓಡಿಸುವುದು ಸಾಧ್ಯವೇ ಆಗುತ್ತಿರಲಿಲ್ಲ. ಹೀಗಾಗಿ ನಾಯಿಗೆ ಬಣ್ಣ ಹಚ್ಚುವ ಮೂಲಕ ಮಂಗಗಳ ಹಾವಳಿಗೆ ಬ್ರೇಕ್ ಹಾಕಲು ರೈತರು ಮುಂದಾಗಿದ್ದಾರೆ. ಇದರಿಂದ ಮಂಗಗಳ ಹಾವಲಿ ಕೂಡ ಕೊಂಚ ಮಟ್ಟಿಗೆ ಕಡಿಮೆಯಾಗಿದೆ ಎನ್ನುತ್ತಾರೆ ರೈತರು.
ಗ್ರಾಮೀಣ ಭಾಗದಲ್ಲಿ ಜನರು ಕಾಡುಪ್ರಾಣಿಗಳು ಮತ್ತು ಮಂಗಗಳ ಉಪಟಳದಿಂದ ಮುಕ್ತರಾಗಲು ಮನೆಯ ಸಾಕು ನಾಯಿಗೆ ಈ ರೀತಿ ಬಣ್ಣವನ್ನು ಬಳಿಯುತ್ತಾರೆ. ಇದರಿಂದ ಸ್ವಲ್ಪ ಮಟ್ಟಿಗಾದರೂ ಮಂಗಗಳ ಹಾಗೂ ಕಾಡುಪ್ರಾಣಿಗಳ ಉಪಟಳದಿಂದ ಮುಕ್ತರಾಗಬಹುದು ಎನ್ನುವ ಆಸೆ. ಆದರೆ ಇಂಥಹ ಯಾವುದೇ ಉದ್ದೇಶವಿಲ್ಲದೆ ಹೀಗೆ ಸುಖಾ ಸುಮ್ಮನೆ ನಾಯಿಗೆ ಹುಲಿ ಬಣ್ಣ ಬಳಿದು ರಸ್ತೆಗೆ ಬಿಡುವುದು ಸರಿಯೇ?
ಒಂದು ವೇಳೆ ಆರೋಗ್ಯ ಸಮಸ್ಯೆ ಇರುವವರು ಇದನ್ನು ನೋಡಿ ನಿಜವಾದ ಹುಲಿ ಅಂದುಕೊಂಡು ಏನಾದರೂ ಹೆಚ್ಚು ಕಡಿಮೆ ಆದರೆ ಇದಕ್ಕೆ ಯಾರು ಹೊಣೆ? ಇದೇ ರಸ್ತೆಯಲ್ಲಿ ಮಕ್ಕಳೋ ವಯಸ್ಸಾದವರೋ ಹೋಗುತ್ತಿದ್ದರೆ ಇವರ ಸ್ಥಿತಿ ಏನಾಗಬೇಡ ಎನ್ನುವ ಬಗ್ಗೆ ಯೋಚನೆ ಮಾಡಿದರೆ ಕೋಪ ಬರದೇ ಇರದು. ಹೀಗಾಗಿ ಇಂಥಹ ಸುಖಾ ಸುಮ್ಮನೆ ಭೀತಿ ಹುಟ್ಟಿಸುವ ಕಿಡಿಗೇಡಿಗಳ ಪುಂಡತನಕ್ಕೆ ಬ್ರೇಕ್ ಹಾಕಬೇಕಿದೆ.












Click it and Unblock the Notifications