ಜೀವನದಲ್ಲಿ ಏನಾದರೂ ಸಾಧಿಸುವ ಹಂಬಲ ಇದೆಯಾ? ಈ ಸುದ್ದಿ ಓದಿ
ನಾವು ಯಾರನ್ನಾದರು ಮಾತನಾಡಿಸುವಾಗ, ಸಾಮಾನ್ಯವಾಗಿ ಏನಪ್ಪ ಇವತ್ತಿನ ವಿಶೇಷ ಅಂದ್ರೆ ಅದೇ ಕೆಲಸ, ಅದೇ ದಿನಚರಿ ಏನಿದೆ ವಿಶೇಷ ಎಂದು ಪ್ರತಿಕ್ರಿಯಿಸುವುದನ್ನೆ ರೂಢಿಸಿಕೊಂಡಿರುತ್ತೇವೆ. ಆದ್ರೆ ನಮ್ಮ ಸುತ್ತಮುತ್ತ ಪ್ರತಿ ಕ್ಷಣವು ಹೊಸದೊಂದು ಘಟಿಸುತ್ತಿರುತ್ತವೆ. ಅದನ್ನು ನೋಡುವಂತಹ, ಗಮನಿಸುವಂತಹ, ಆ ಬಗ್ಗೆ ಅವಲೋಕಿಸುವಂತಹ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳಬೇಕು. ಎಷ್ಟೋ ಬಾರಿ ನಮ್ಮ ನಡುವೆ ಜರಗುವ ಸಣ್ಣ ಸಣ್ಣ ಸಂಗತಿಗಳೆ ಮಹತ್ವದ ಕಾರ್ಯಕ್ಕೆ ಪ್ರೇರಣೆಯಾಗಬಹುದು. ಅದಕ್ಕೆ ವಿಜ್ಞಾನಿ ನ್ಯೂಟನ್ ಉದಾಹರಣೆಯಾಗಿ ನಮ್ಮ ಮುಂದೆ ಇದ್ದಾರೆ.
ಅಲ್ಲಿಯವರೆಗೂ ಮರದಿಂದ ಹಣ್ಣು ಬೀಳುವುದು ಸಾಮಾನ್ಯ ಸಂಗತಿಯೇ ಆಗಿತ್ತು. ಅದನ್ನು ಪ್ರತಿಯೊಬ್ಬರು ನೋಡುತ್ತಿದ್ದರು. ಅಲ್ಲಿಯೇ ಮರೆತು ಬಿಡುತ್ತಿದ್ದರು. ಆದರೆ, ಅದೊಂದು ಸಾಮಾನ್ಯ ಸಂಗತಿಯಿಂದಲೇ ವಿಜ್ಞಾನಿ ನ್ಯೂಟನ್ ಭೂಮಿಗಿರುವ ಗುರುತ್ವಾಕರ್ಷಣಾ ಶಕ್ತಿಯನ್ನು ಕಂಡುಕೊಂಡರು.

ನ್ಯೂಟನ್ ತನ್ನ ಕೆಲಸವನ್ನು, ತನ್ನ ಆಲೋಚನೆಯನ್ನು ಮರದಿಂದ ಹಣ್ಣೊಂದು ಕೆಳಕ್ಕೆ ಬಿದ್ದ ಸಂಗತಿಯೊಂದಿಗೆ ಸಂಯೋಜಿಸಿಕೊಂಡಾಗ ಆತನ ಒಳಗೆ ಹೊಸ ಚಿಂತನೆಯೊಂದು ಮೂಡಿತು. ಅದೇ ಗುರುತ್ವಾಕರ್ಷಣಾ ಶಕ್ತಿ. ಹೀಗೆ ಪ್ರಕೃತಿಯಲ್ಲಾಗುವ ಸಣ್ಣ ಸಣ್ಣ ಚಲನೆಗಳು ಸಾಮಾನ್ಯ ವ್ಯಕ್ತಿಯನ್ನು ಸಾಧಕನನ್ನಾಗಿ ರೂಪಿಸಬಹುದು. ಅದಕ್ಕಾಗಿ ನಾವು ಮಾಡಬೇಕಾಗಿರುವುದೇನು ಎಂಬುದನ್ನು ನೋಡೋಣ ಬನ್ನಿ
ಸೃಜನಶೀಲತೆಯ ಪ್ರೇರಣೆ
'ನಾವು ಮಾಡುವ ಕೆಲಸದ ಬಗ್ಗೆ ಫ್ಯಾಷನ್ ಇರಬೇಕು' ಅಂತ ಆಯಾ ಕ್ಷೇತ್ರದ ಹಿರಿಯರು ಹೇಳುತ್ತಿರುತ್ತಾರೆ. ಫ್ಯಾಷನ್ ಅಂದ್ರೆ ನಾವು ಮಾಡುವ ಕೆಲಸವನ್ನು, ಆ ಕೆಲಸದ ಬಗೆಗಿನ ಆಲೋಚನೆಯನ್ನು ಸೃಜನಶೀಲವಾಗಿ ನೋಡವ ಕ್ರಮವೇ ಆಗಿದೆ. ಇದರಿಂದ ನಾವು ಮಾಡುವ ಕೆಲಸ ಹೇಗಿದೆ ಎಂಬುದು ಆಗಿಂದಾಗಲೆ ನಮ್ಮ ಅರಿವಿಗೆ ಬರುತ್ತದೆ. ಇದರಿಂದ ನಮ್ಮ ಕೆಲಸವನ್ನು ಚೆಂದವಾಗಿಸಲು ನಮ್ಮೊಳಗಿನ ಸೃಜನಶೀಲತೆ ಪ್ರೇರಣೆ ನೀಡುತ್ತಿರುತ್ತದೆ.
ಏಕತಾನತೆಯಿಂದ ಹೊರಬನ್ನಿ
ನಮ್ಮ ಸಮಾಜದಲ್ಲಿ ಬಹುತೇಕ ಕೆಲಸಗಳು ಏಕತಾನತೆಯಿಂದ ಕೂಡಿದೆ. ಯಾರೊ ಒಬ್ಬರು ಮಾಡಿದ ಸೂತ್ರದಡಿಯಲ್ಲಿಯೆ ನಾವು ಕೆಲಸ ನಿರ್ವಹಿಸುತ್ತಾ ಹೋಗುತ್ತಿರುತ್ತೇವೆ. ಈ ಏಕತಾನತೆಯ ಮನಃಸ್ಥಿತಿಗೆ ಅಂಟಿಕೊಂಡು ಬಿಟ್ಟರೆ ನಮ್ಮ ಕಣ್ಣ ಮುಂದೆ ಎಂತಹ ಚಲನೆಗಳು, ಬದಲಾವಣೆಗಳು ಕಂಡರೂ ಅದ್ಯಾಕೆ ಆಗಾಯ್ತು ಅನ್ನುವಂತಹ ಪ್ರಶ್ನೆಗಳು ಮೂಡುವುದೇ ಇಲ್ಲ. ಒಂದು ರೀತಿಯಲ್ಲಿ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುತ್ತೇವೆ. ಹೀಗಾಗಿ ಪ್ರಶ್ನೆಗಳ ಜೊತೆ ಜೊತೆಗೆ ನಾವು ಮಾಡುವ ಕೆಲಸದಲ್ಲಿ, ನೋಡುವ ನೋಟದಲ್ಲಿ, ಗಮನಿಸುವಿಕೆಯಲ್ಲಿ ತೊಡಗಿದರೆ ನಾವು ಮಾಡುವ ಕೆಲಸವನ್ನೆ ಹೊಸದಾಗಿ ಮಾಡಲು ಸಾಧ್ಯವಾಗುತ್ತದೆ.
ಬದಲಾವಣೆಯ ತುಡಿತ
ಯಾವುದೇ ವಸ್ತು ಎಷ್ಟೇ ಗಟ್ಟಿಮುಟ್ಟಾಗಿದ್ದರೂ ಅದನ್ನು ಕೆಲಸಕ್ಕೆ ಹಚ್ಚದಿದ್ದರೆ ಇದ್ದಲ್ಲಿಯೇ ತುಕ್ಕು ಹಿಡಿಯುತ್ತದೆ. ದಿನೇ ದಿನೇ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಹಾಗೆಯೇ ಯಾವುದೇ ವ್ಯಕ್ತಿ ಎಷ್ಟೆ ಪ್ರತಿಭಾವಂತನಾಗಿದ್ದರೂ ಆತ ಕಾರ್ಯರೂಪಕ್ಕೆ ಇಳಿಯದಿದ್ದರೆ ಪ್ರತಿಭೆಗೆ ಮಂಕು ಬಡಿಯುತ್ತದೆ.
ಯಾವುದೇ ಸೃಜನಶೀಲ ವ್ಯಕ್ತಿ ತನ್ನ ಪ್ರತಿಭೆಯ ಮೂಲಕ ಹೊಸದನ್ನು ಸೃಷ್ಟಿ ಮಾಡಬೇಕಾದರೆ ಹೊಸದರ ಬಗ್ಗೆ ತುಡಿತ, ಪ್ರೇರಣೆ ಬೇಕಾಗುತ್ತದೆ. ನಿರ್ಧಿಷ್ಟವಾದ ಉದ್ದೇಶಗಳ ಕಡೆಗೆ ಗಮವಹಿಸಿ ಸಾಗಬೇಕಾಗುತ್ತದೆ. ಅದಕ್ಕೆ ನಮ್ಮ ಸುತ್ತಮುತ್ತ ನಡುವೆ ನಡೆಯುವ ಸಾಮಾನ್ಯ ಸಂಗತಿಗಳು ಪ್ರೇರಣೆ ನೀಡಬಹುದು. ಆ ಬಗ್ಗೆ ಸೂಕ್ಷ್ಮತೆಯ ನೋಟವನ್ನು ಹೊಂದಿರುವುದು ಮುಖ್ಯವಾಗುತ್ತದೆ.
ಸಣ್ಣ ಸಂಗತಿಗಳ ಮಹತ್ವ
ಪ್ರಾರಂಭದ ಉದಾಹರಣೆಯನ್ನೆ ಮತ್ತೊಮ್ಮೆ ಹೇಳುವುದಾದರೆ ಮರದಿಂದ ಹಣ್ಣೊಂದು ಕೆಳಕ್ಕೆ ಬೀಳುವುದು ಸಾಮಾನ್ಯ ಸಂಗತೆಯೇ. ಆದರೆ, ಆ ದೃಶ್ಯದ ಪ್ರೇರಣೆಯಿಂದ ವಿಜ್ಞಾನಿ ನ್ಯೂಟನ್ ಜಗತ್ತಿಗೆ ಹೊಸ ಥಿಯರಿಯೊಂದನ್ನು ನೀಡಿದರು. ಹೀಗೆ ಪ್ರತಿಯೊಬ್ಬರು ತಮ್ಮ ಕೆಲಸದಲ್ಲಿ ಮಹತ್ವದನ್ನು ಸಾಧಿಸಲು ಇಂತಹ ಸಾಮಾನ್ಯ ಸಂಗತಿಗಳು ಪ್ರೇರಣೆ ಆಗಬಹುದು. ಅದು ನಾವು ನೋಡುವ ಕ್ರಮದಲ್ಲಿ ನಿರ್ಧಾರವಾಗುತ್ತದೆ.












Click it and Unblock the Notifications