• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟ್ರಂಪ್ ಅಧ್ಯಕ್ಷರಾಗಲು ಈ ರಾಜ್ಯಗಳಲ್ಲಿ ಗೆಲ್ಲಲೇಬೇಕು..!

|

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವಿನ ನಗಾರಿ ಬಾರಿಸಲು ಟ್ರಂಪ್ ಎಲ್ಲಾ ರೀತಿಯ ಪಟ್ಟುಗಳನ್ನು ಹಾಕುತ್ತಿದ್ದಾರೆ. ಆದರೂ ಟ್ರಂಪ್ ಪಾಲಿಗೆ 2020ರ ಚುನಾವಣೆ ಕಬ್ಬಿಣದ ಕಡಲೆಯಾಗಿದೆ. ಈ ಹೊತ್ತಲ್ಲೇ ಹೊಸ ಲೆಕ್ಕಾಚಾರ ಶುರುವಾಗಿದೆ. ಅದೇನೆಂದರೆ ಅಮೆರಿಕದ ಮತ ವಿಭಜನೆ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳು ಪ್ರಮುಖ ಪಾತ್ರ ವಹಿಸಲಿವೆ. ಈ ರಾಜ್ಯಗಳಲ್ಲಿ ಟ್ರಂಪ್ ಗೆಲುವು ಸಾಧಿಸಿದರೆ, ಮತ್ತೊಮ್ಮೆ ಟ್ರಂಪ್ ಎಂಬ ಘೋಷವಾಖ್ಯ ನಿಜವಾಗಲಿದೆ.

ಆದರೆ ಇದು ಅಂದುಕೊಂಡಷ್ಟು ಸುಲಭವಾಗಿಲ್ಲ. ನೂರಾರು ಸವಾಲು ಟ್ರಂಪ್ ಎದುರು ನಿಂತಿವೆ. ಟ್ರಂಪ್ ಗೆದ್ದು ಮತ್ತೊಮ್ಮೆ ವೈಟ್‌ಹೌಸ್‌ಗೆ ಹೋಗಲು ಫ್ಲೋರಿಡಾ, ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಿ ಗೆಲ್ಲಲೇಬೇಕಿದೆ. ಫ್ಲೋರಿಡಾ ರಾಜ್ಯದಿಂದಲೇ ಬರೋಬ್ಬರಿ 29 'ಎಲೆಕ್ಟೊರೋಲ್ ಕಾಲೇಜು' ಅಂದರೆ ಜನರಿಂದ ನೇರವಾಗಿ ಆಯ್ಕೆಯಾಗಿ ಬರಲಿರುವ ಚುನಾಯಿತ ಪ್ರತಿನಿಧಿಗಳು ಇದ್ದಾರೆ. ಇವರಿಂದಲೇ ನೇರವಾಗಿ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಹೀಗೆ 29 ಸದಸ್ಯರ ಬಲ ಹೊಂದಿರುವ ಫ್ಲೋರಿಡಾ ಹಾಗೂ 20 ಸದಸ್ಯರ ಬಲ ಹೊಂದಿರುವ ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಿ ಟ್ರಂಪ್ ಗೆಲ್ಲಲೇಬೇಕಿದೆ. ಇಲ್ಲವಾದರೆ ಟ್ರಂಪ್‌ಗೆ ಗೆಲುವಿನ ಹಾದಿ ದುರ್ಗಮವಾಗಲಿದೆ.

ಟ್ರಂಪ್ ಭಾಷಣದ ಬಗ್ಗೆ ಮೌನವೇಕೆ?; ಮೋದಿಗೆ ಕಾಂಗ್ರೆಸ್ ಪ್ರಶ್ನೆ

ಜಾರ್ಜ್ ಬುಷ್‌ಗೂ ಹೀಗೆ ಆಗಿತ್ತು..!

ಜಾರ್ಜ್ ಬುಷ್‌ಗೂ ಹೀಗೆ ಆಗಿತ್ತು..!

ಅದು 2000ನೇ ಇಸವಿಯಲ್ಲಿ ನಡೆದಿದ್ದ ಜಿದ್ದಾಜಿದ್ದಿನ ಚುನಾವಣೆ. ಜಾರ್ಜ್ ಡಬ್ಲ್ಯೂ ಬುಷ್ ಮೊದಲ ಬಾರಿಗೆ ಅಧ್ಯಕ್ಷೀಯ ಚುನಾವಣೆಗೆ ನಿಂತಿದ್ದರು. ಆಗ ಜಾರ್ಜ್ ಡಬ್ಲ್ಯೂ ಬುಷ್ ನಸೀಬು ಬದಲಿಸಿದ್ದು ಇದೇ ಫ್ಲೋರಿಡಾ ಸ್ಟೇಟ್. ತಮ್ಮ ಪ್ರತಿಸ್ಪರ್ಧಿಯನ್ನು ಬುಷ್ 537 ಮತಗಳ ಅಂತರದಿಂದ ಸೋಲಿಸಿದ್ದರು. ಇದು ಬುಷ್ ಅಧ್ಯಕ್ಷ ಪದವಿಗೆ ಏರಲು ಸಾಕಷ್ಟು ಸಹಾಯಕವಾಗಿತ್ತು. ಜಾರ್ಜ್ ಡಬ್ಲ್ಯೂ ಬುಷ್ ರಿಪಬ್ಲಿಕನ್ ಪಕ್ಷದವರೇ ಆಗಿದ್ದಾರೆ. ಈಗ ಟ್ರಂಪ್ ಕೂಡ ರಿಪಬ್ಲಿಕನ್ ಆಗಿದ್ದು, 2020ರಲ್ಲೂ 2000ನೇ ಇಸವಿಯ ರಿಸಲ್ಟ್ ರಿಪೀಟ್ ಆಗುತ್ತಾ..? ಎಂಬುದು ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಪೆನ್ಸಿಲ್ವೇನಿಯಾ ರಾಜ್ಯದಲ್ಲೂ ಗೆಲುವು ಅಗತ್ಯ

ಪೆನ್ಸಿಲ್ವೇನಿಯಾ ರಾಜ್ಯದಲ್ಲೂ ಗೆಲುವು ಅಗತ್ಯ

2020ರ ಚುನಾವಣೆಯಲ್ಲಿ ಡೆಮಾಕ್ಟ್ರಟಿಕ್ ಪಕ್ಷದಿಂದ ಮಾಜಿ ಉಪಾಧ್ಯಕ್ಷ ಬಿಡೆನ್ ಹಾಗೂ ಹಾಲಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಟ್ರಂಪ್ ಸ್ಪರ್ಧಿಸಿದ್ದಾರೆ. ಇಬ್ಬರ ನಡುವೆ ಜಿದ್ದಾಜಿದ್ದಿನ ಹೋರಾಟವಿದ್ದು, ಪೆನ್ಸಿಲ್ವೇನಿಯಾ ಮತದಾರ ಯಾರ ಪರ ಒಲಿಯುವನು ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಏಕೆಂದರೆ ಇಲ್ಲಿಂದಲೂ 20 ಸದಸ್ಯರ ಬಲ ಸಿಗಲಿದ್ದು, ಅಧ್ಯಕ್ಷರಾಗುವ ಅಭ್ಯರ್ಥಿಗೆ ಇಲ್ಲಿ ಗೆಲ್ಲುವುದು ಅತ್ಯಗತ್ಯ. ಅಧ್ಯಕ್ಷ ಪದವಿಗೆ ಅಗತ್ಯವಿರುವ ಮ್ಯಾಜಿಕ್ ನಂಬರ್ 270ಕ್ಕೆ ಈ ರಾಜ್ಯದ ಕೊಡುಗೆ ದೊಡ್ಡದು.

ಟ್ರಂಪ್‌ಗೆ ಮತ ಹಾಕ್ಬೇಡಿ! ಅಜ್ಜಿಯ ಶ್ರದ್ಧಾಂಜಲಿ ಸಂದೇಶ ವೈರಲ್

ಸಾಂಪ್ರದಾಯಿಕ ಮತಗಳು ಉಲ್ಟಾ..?

ಸಾಂಪ್ರದಾಯಿಕ ಮತಗಳು ಉಲ್ಟಾ..?

ಹೌದು, 2020ರ ಚುನಾವಣೆ ಅಮೆರಿಕದಲ್ಲಿ ಎಲ್ಲವನ್ನೂ ಅಲ್ಲೋಲ ಕಲ್ಲೋಲ ಮಾಡುತ್ತಿದೆ. ಈಗಾಗಲೇ ಅಲ್ಲಿನ ಚುನಾವಣಾ ಪದ್ಧತಿಯೇ ಬದಲಾಗಿ ಹೋಗಿದ್ದು, ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಅಂಚೆ ಮತದಾನ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಈ ಮಧ್ಯೆ ಮತದಾರರ ಮೇಲೂ ಪ್ರಸಕ್ತ ವಾತಾವರಣ ಭಾರಿ ಪ್ರಭಾವ ಬೀರಿ ಸಾಂಪ್ರದಾಯಿಕ ಮತಗಳನ್ನೇ ಬುಡಮೇಲು ಮಾಡುವ ಸಾಧ್ಯತೆ ಇದೆ. ಭಾರತದಲ್ಲಿ ಇರುವಂತೆ ಅಮೆರಿಕದಲ್ಲಿ ಕೂಡ ಕೆಲವೊಂದು ರಾಜ್ಯಗಳು, ಒಂದೊಂದು ಪಕ್ಷಕ್ಕೆ ಒಗ್ಗಿಕೊಂಡಿವೆ. ಆದರೆ ಈ ಬಾರಿ ಏನಾಗಲಿದೆ ಅಂತಾ ವಿಷ್ಲೇಶಕರಿಗೂ ಹೇಳುವುದು ಕಷ್ಟಕರವಾಗುತ್ತಿದೆ.

ಪರೋಕ್ಷ ಚುನಾವಣೆ ಮೂಲಕ ಆಯ್ಕೆ

ಪರೋಕ್ಷ ಚುನಾವಣೆ ಮೂಲಕ ಆಯ್ಕೆ

ಭಾರತದಲ್ಲಿ ಇರುವಂತೆ ಅಮೆರಿಕದಲ್ಲಿ ಹತ್ತಾರು ಪಕ್ಷಗಳು ಅಸ್ತಿತ್ವದಲ್ಲಿ ಇಲ್ಲ. ಅಮೆರಿಕದಲ್ಲಿ 2 ರಾಜಕೀಯ ಪಕ್ಷಗಳಿದ್ದು, ಅಧ್ಯಕ್ಷರನ್ನು ‘ಎಲೆಕ್ಟೊರೋಲ್ ಕಾಲೇಜು' ಮೂಲಕ ಆಯ್ಕೆಮಾಡಲಾಗುತ್ತದೆ. ಸಾರ್ವಜನಿಕರು ‘ಎಲೆಕ್ಟೊರೋಲ್ ಕಾಲೇಜು'ಗಳ ಮೂಲಕ ಚುನಾಯಿತ ಪ್ರತಿನಿಧಿಗಳಿಗೆ ಮತ ಹಾಕುತ್ತಾರೆ. ಹೀಗೆ ಜನರ ಮತ ಪಡೆದು ಆಯ್ಕೆಯಾಗುವ ಪ್ರತಿನಿಧಿಗಳು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರ ಪಡೆಯುತ್ತಾರೆ. ಈ ಬಾರಿ ಡೊನಾಲ್ಡ್ ಟ್ರಂಪ್ ಹಾಗೂ ಜೋ ಬಿಡೆನ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ. ಪ್ರತಿ ರಾಜ್ಯದಲ್ಲಿ ಎಲೇಕ್ಟರ್‌ಗಳ ಸಂಖ್ಯೆ ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಆ ರಾಜ್ಯದ ಪಾಲು ಆಧರಿಸಿ ನಿರ್ಧರಿಸಲಾಗುತ್ತಿದೆ. ಈ ಪ್ರಕ್ರಿಯೆಗೆ ಇತ್ತೀಚಿನ ಜನಸಂಖ್ಯಾ ವರದಿ ಆಧಾರವಾಗಿರುತ್ತದೆ. ಅಂದರೆ 2019ರಲ್ಲಿ ನಡೆದ ಅಮೆರಿಕದ ಜನಗಣತಿ ಆಧಾರದಲ್ಲಿ ಅಮೆರಿಲದಲ್ಲಿ ಒಟ್ಟು 32.8 ಕೋಟಿ ಪ್ರಜೆಗಳಿದ್ದಾರೆ.

ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಎಷ್ಟು..?

ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಎಷ್ಟು..?

ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ 50 ರಾಜ್ಯಗಳಿದ್ದು, ವಾಶಿಂಗ್‌ಟನ್ ಡಿಸಿ ಅಮೆರಿಕದ ರಾಜಧಾನಿಯಾಗಿದೆ. ಹೀಗೆ ವಾಶಿಂಗ್‌ಟನ್ ಡಿಸಿ ಸೇರಿದಂತೆ 51 ರಾಜ್ಯಗಳ ಪ್ರಜೆಗಳು ಅಮೆರಿಕ ಅಧ್ಯಕ್ಷರ ಆಯ್ಕೆಗೆ ಮತದಾನ ಮಾಡುತ್ತಾರೆ. ಒಟ್ಟು 538 ಚುನಾಯಿತ ಪ್ರತಿನಿಧಿಗಳಿರುತ್ತಾರೆ. 538 ಪ್ರತಿನಿಧಿಗಳ ಪೈಕಿ ಪ್ರತಿ ರಾಜ್ಯವನ್ನೂ ಪ್ರತಿನಿಧಿಸಲು ಇಬ್ಬರು ಸೆನೆಟರ್‌ಗಳು ಆಯ್ಕೆಯಾಗುತ್ತಾರೆ. ಒಟ್ಟು 100 ಸೆನೆಟರ್‌ಗಳು ಆಯ್ಕೆಯಾಗುತ್ತಾರೆ. ವಾಷಿಂಗ್ಟನ್ ಡಿಸಿ ಸೇರಿದಂತೆ ಒಟ್ಟು 51 ಎಲೆಕ್ಟೊರಾಲ್ ಕಾಲೇಜುಗಳಿವೆ. ಪ್ರತಿ ರಾಜ್ಯದಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಬಹುಮತ ದೊರೆಯುತ್ತದೆಯೋ ಆ ಅಭ್ಯರ್ಥಿಗೆ ರಾಜ್ಯದ ಇತರ ಎಲ್ಲ ಮತಗಳು ಒಗ್ಗೂಡುತ್ತವೆ.

ಭಾರತದ ಗಾಳಿ ಕೊಳಕು ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಧ್ಯಕ್ಷರಾಗಲು ಎಷ್ಟು ಬಹುಮತ ಅಗತ್ಯ..?

ಅಧ್ಯಕ್ಷರಾಗಲು ಎಷ್ಟು ಬಹುಮತ ಅಗತ್ಯ..?

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನ ಅಲಂಕರಿಸಬೇಕಾದರೆ ಕನಿಷ್ಠ 270 ಮತ ಅಗತ್ಯವಾಗಿರುತ್ತದೆ. ಅಂದರೆ ಒಟ್ಟು 538 ಚುನಾಯಿತ ಪ್ರತಿನಿಧಿಗಳ ಪೈಕಿ 270 ಚುನಾಯಿತ ಅಭ್ಯರ್ಥಿಗಳ ಬೆಂಬಲ ಅತ್ಯಗತ್ಯವಾಗಿರುತ್ತದೆ. ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗೂ 2 ಮತಗಳನ್ನು ಹಾಕುವ ಹಕ್ಕು ಇರುತ್ತದೆ. ಒಂದು ಮತ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಮತ್ತೊಂದು ಮತ ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಲುತ್ತದೆ. ಇನ್ನು ಚುನಾವಣೆ ಪ್ರಕ್ರಿಯೆ ಬಗ್ಗೆ ಅನುಮಾನ ಹೊಂದಿದ್ದರೆ ಅಥವಾ ಈ ಕುರಿತಾಗಿ ತಕರಾರು ಇದ್ದರೆ ಸೋತ ಅಭ್ಯರ್ಥಿ ಅಮೆರಿಕದ ಸುಪ್ರೀಂಕೋರ್ಟ್ ಮೊರೆ ಹೋಗಲು ಅವಕಾಶ ಇದೆ. ಇದೀಗ ಟ್ರಂಪ್ ಕೂಡ ಅಂಚೆ ಮತದಾನದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ತಾವು ಸೋತರೆ ಅಧಿಕಾರ ಹಸ್ತಾಂತರ ಸುಪ್ರೀಂಕೋರ್ಟ್‌ನಲ್ಲಿ ನಿರ್ಧಾರವಾಗಬಹುದು ಎಂದಿದ್ದಾರೆ.

ಬಿಡೆನ್ ಭವಿಷ್ಯ ಏನಾಗಬಹುದು..?

ಬಿಡೆನ್ ಭವಿಷ್ಯ ಏನಾಗಬಹುದು..?

ಚುನಾವಣಾ ಪೂರ್ವ ಸಮೀಕ್ಷಾ ವರದಿಗಳ ಪ್ರಕಾರ 207 ಸ್ಥಾನಗಳನ್ನ ಬಿಡೆನ್ ಪಡೆಯುವುದು ಪಕ್ಕಾ. 72 ಸ್ಥಾನಗಳಲ್ಲಿ ಬಿಡೆನ್ ಪರವಾಗಿ ಒಲವು ಮೂಡಿದೆ. ಹೀಗೆ ಸದ್ಯದ ಅಂಕಿ-ಅಂಶಗಳ ಪ್ರಕಾರ 279 ಸ್ಥಾನಗಳಲ್ಲಿ ಬಿಡೆನ್ ವಿಕ್ಟರಿ ಪಕ್ಕಾ ಆಗಿದೆ. ಅಮೆರಿಕ ಅಧ್ಯಕ್ಷರಾಗಲು 270 ಸ್ಥಾನಗಳ ಮ್ಯಾಜಿಕ್ ನಂಬರ್ ಬೇಕಿದೆ. ಹೀಗೆ ನೋಡುವುದಾದರೆ ಬಿಡೆನ್ ಈಗಾಗಲೇ ಜಯದ ಕಡೆಗೆ ಮುಖಮಾಡಿದ್ದಾರೆ ಎನ್ನುತ್ತಿವೆ ಸಮೀಕ್ಷೆಗಳು.

ಟ್ರಂಪ್ ಪರ ಅಲೆ ಹೇಗಿದೆ..?

ಟ್ರಂಪ್ ಪರ ಅಲೆ ಹೇಗಿದೆ..?

ಬಿಡೆನ್‌ಗೆ ಹೋಲಿಕೆ ಮಾಡಿದರೆ ಟ್ರಂಪ್‌ಗೆ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಭಾರಿ ಹಿನ್ನಡೆ ಉಂಟಾಗಿದೆ. ಸಮೀಕ್ಷೆಗಳ ವರದಿ ಪ್ರಕಾರ 207 ಸ್ಥಾನಗಳನ್ನು ಬಿಡೆನ್ ಪಡೆಯುವುದು ಪಕ್ಕಾ ಆಗುತ್ತಿದ್ದರೆ, ಇನ್ನುಳಿದ 72 ಸ್ಥಾನಗಳಲ್ಲಿ ಬಿಡೆನ್ ಪರ ಒಲವು ಮೂಡಿದೆ. ಆದರೆ ಟ್ರಂಪ್‌ ವಿಚಾರದಲ್ಲಿ ಎಲ್ಲವೂ ಉಲ್ಟಾ ಆಗುತ್ತಿದ್ದು, 83 ಸ್ಥಾನಗಳಲ್ಲಿ ಮಾತ್ರ ಟ್ರಂಪ್ ಗೆಲುವು ಗಟ್ಟಿಯಾಗಿದೆ. ಇಷ್ಟೆಲ್ಲದರ ಮಧ್ಯೆ 42 ಸ್ಥಾನಗಳಲ್ಲಿ ಟ್ರಂಪ್ ಪರವಾದ ಅಲೆ ಇರುವುದರಿಂದ ಸದ್ಯದ ಸ್ಥಿತಿಯಲ್ಲಿ ಟ್ರಂಪ್ 125 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಹೀಗೆ ಬಿಡೆನ್‌ ಮತ್ತು ಟ್ರಂಪ್ ನಡುವೆ ಅಜಗಜಾಂತರ ವ್ಯತ್ಯಾಸ ಮೂಡುತ್ತಿದೆ.

ಟ್ರಂಪ್‌ಗೆ ಸೋಲಿನ ಭೀತಿ ಕಾಡುತ್ತಿದೆಯಾ..?

ಟ್ರಂಪ್‌ಗೆ ಸೋಲಿನ ಭೀತಿ ಕಾಡುತ್ತಿದೆಯಾ..?

15 ದಿನಗಳಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯಲಿದೆ. ಚುನಾವಣಾ ಕಣ ಕಾವೇರಿದೆ, ಟ್ರಂಪ್ ಮತ್ತು ಬಿಡೆನ್ ಗೆಲುವಿಗಾಗಿ ಕಾದಾಡುತ್ತಿದ್ದಾರೆ. ಆದರೆ ಈ ಹೊತ್ತಲ್ಲೇ ಟ್ರಂಪ್ ಸೋತರೆ ಕತೆ ಏನು ಎಂಬ ಪ್ರಶ್ನೆ ಎಲ್ಲೆಡೆ ಹರಿದಾಡುತ್ತಿದೆ. ಹೀಗೆ ಟ್ರಂಪ್ ಸೋಲಬಹುದು ಎಂಬ ಊಹೆಗೆ ಹಲವು ಘಟನೆಗಳು ಬಲ ನೀಡುತ್ತಿವೆ. ಕೊರೊನಾ ಕಂಟಕ, ಜನಾಂಗೀಯ ಸಂಘರ್ಷ, ಇದರ ಜೊತೆಗೆ ಅಮೆರಿಕದ ಆರ್ಥಿಕತೆಯ ಅಧಃಪತನ. ಇವಿಷ್ಟೂ ಕಾರಣಗಳು ಸಾಕಾಗಿಲ್ಲ ಎಂಬಂತೆ ಟ್ರಂಪ್ ವಿರುದ್ಧ ಕೇಳಿಬಂದಿರುವ ಗಂಭೀರವಾದ ಆರೋಪಗಳು, ಕ್ರಿಮಿನಲ್ ಪ್ರಕರಣಗಳು ಮೆಲ್ಲಗೆ ಟ್ರಂಪ್‌ಗೂ ಭಯದ ವಾಸನೆ ಸೋಕಿಸುತ್ತಿವೆ. ಹೀಗಾಗಿಯೇ ಟ್ರಂಪ್, ಬಿಡೆನ್ ಗೆದ್ದರೆ ತಾನು ದೇಶ ಬಿಡಬೇಕಾದ ಸಂದರ್ಭ ಬರಬಹುದು ಎಂದಿರಬಹುದು.

ಸುಮ್ಮನೆ ಖುರ್ಚಿ ಬಿಡಲ್ಲ ಎಂದಿದ್ದರು ಟ್ರಂಪ್..!

ಸುಮ್ಮನೆ ಖುರ್ಚಿ ಬಿಡಲ್ಲ ಎಂದಿದ್ದರು ಟ್ರಂಪ್..!

ಕೆಲ ದಿನಗಳ ಹಿಂದೆ ಟ್ರಂಪ್ ನೀಡಿದ್ದ ಹೇಳಿಕೆ ಭಾರಿ ವಿವಾದ ಸೃಷ್ಟಿ ಮಾಡಿತ್ತು. ನವೆಂಬರ್ ಚುನಾವಣೆಯಲ್ಲಿ ಸೋತರೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡುವ ಗ್ಯಾರಂಟಿ ಕೊಡಲ್ಲ ಎಂದಿದ್ದ ಟ್ರಂಪ್ ವಿರುದ್ಧ ಅಮೆರಿಕದ ರಾಜಕೀಯ ನಾಯಕರು ಪಕ್ಷಾತೀತವಾಗಿ ತಿರುಗಿಬಿದ್ದಿದ್ದರು. ನೇರವಾಗಿ ಅಂಚೆ ಮತದಾನವನ್ನೇ ಟಾರ್ಗೆಟ್ ಮಾಡಿದ್ದ ಟ್ರಂಪ್ ಹೀಗೆ ಹೇಳಿಕೆ ನೀಡಿದ್ದರು. ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆಯಬಹುದು ಎಂದಿದ್ದ ಅವರು, ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ವಿದೇಶಿ ಹಸ್ತಕ್ಷೇಪಕ್ಕಿಂತಲೂ ಅಂಚೆ ಮತದಾನವೇ ಬಹುದೊಡ್ಡ ಬೆದರಿಕೆಯಾಗಿದೆ ಎಂದು ಊಹಿಸಿದ್ದರು.

‘ಯಾರದ್ದೋ ವೋಟ್ ಇನ್ಯಾರೋ ಹಾಕ್ತಾರೆ’

‘ಯಾರದ್ದೋ ವೋಟ್ ಇನ್ಯಾರೋ ಹಾಕ್ತಾರೆ’

ಟ್ರಂಪ್ ಹೇಳುವ ಪ್ರಕಾರ ಅಂಚೆ ಮತದಾನದಿಂದ ನಕಲಿ ಮತದಾನಕ್ಕೆ ಅವಕಾಶ ನೀಡಿದಂತಾಗುತ್ತೆ. ಇಲ್ಲಿ ಯಾರದ್ದೋ ಮತವನ್ನು ಮತ್ತೊಬ್ಬರು ಚಲಾಯಿಸುತ್ತಾರೆ. ಸಾವಿರಾರು ಮತಪತ್ರಗಳು ನಾಪತ್ತೆಯಾಗಬಹುದು ಅನ್ನೋದು ಟ್ರಂಪ್‌ಗೆ ಕಾಡುತ್ತಿರುವ ಅನುಮಾನ. ಇಷ್ಟೆಲ್ಲದರ ನಡುವೆಯೂ ಡೆಮಾಕ್ರಟಿಕ್ ಲೀಡರ್ಸ್ ಅಂಚೆ ಮತದಾನದ ಪರವಾಗಿ ಗಟ್ಟಿ ನಿಲುವು ತಾಳಿದ್ದಾರೆ. ಮೊದಲಿನಿಂದ ಅಂಚೆ ಮತದಾನ ಪ್ರಕ್ರಿಯೆ ನಡೆದುಕೊಂಡು ಬಂದಿದೆ. ಕೊರೊನಾ ಭೀತಿಯಿರುವ ಸಂದರ್ಭ ಅಂಚೆ ಮತದಾನ ಪ್ರಕ್ರಿಯೆ ಆದ್ಯತೆಯಾಗಿದೆ ಎನ್ನುತ್ತಿದ್ದಾರೆ. ಆದರೆ ಟ್ರಂಪ್‌ಗೆ ಮಾತ್ರ ಅಂಚೆ ಮತದಾನ ಬಿಲ್‌ಕುಲ್ ಇಷ್ಟವಿಲ್ಲ, ಹೀಗಾಗಿ ನಾನು ಸೋತರೆ ನೇರವಾಗಿ ಸುಪ್ರೀಂಕೋರ್ಟ್‌ಗೆ ಹೋಗಲಿದ್ದೇನೆ ಎಂಬ ಸಂದೇಶವನ್ನು ಚುನಾವಣೆಗೂ ಮೊದಲೇ ರವಾನಿಸಿದ್ದಾರೆ.

English summary
Trump Must Win In Key States To Get Elected Again. US President Trump's path to a second term on carrying two battleground states, Florida and Pennsylvania.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X