Kanakadasa Jayanthi: ಶೂಟಿಂಗ್ ಸ್ಪಾಟ್ ಮಹದೇವಪುರದಲ್ಲಿ ಕನಕನಿಗೆ ನಿತ್ಯ ಪ್ರಾರ್ಥನೆ....!
ಮೈಸೂರು, ನವೆಂಬರ್ 18: ರಾಜ್ಯದಾದ್ಯಂತ ಕನಕದಾಸ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕನಕದಾಸರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಆದರೆ ಮೈಸೂರಿಗೆ ಸಮೀಪದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿಗೆ ಸೇರಿದ ಮಹದೇವಪುರದಲ್ಲಿ ಕನಕನಿಗೆ ನಿತ್ಯವೂ ಪೂಜೆ ನಡೆಸುವುದರೊಂದಿಗೆ ಆರಾಧಿಸುತ್ತಾ ಬರಲಾಗುತ್ತಿದೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ನಿಜ.
ಸದಾ ಜಾತಿ ವಿಚಾರದಲ್ಲಿ ಕಿತ್ತಾಡುತ್ತಿದ್ದ ಜನರನ್ನು ತನ್ನ ಕೀರ್ತನೆ ಮೂಲಕವೇ ಎಚ್ಚರಿಸಿದವರು ಕನಕದಾಸರು. ಅವರ ಬಗ್ಗೆ ಹೇಳುವ ಮುನ್ನ ಮೈಸೂರಿನ ಮಹದೇವಪುರದಲ್ಲಿ ಗುಡಿಕಟ್ಟಿ ಪೂಜೆ ಮಾಡುತ್ತಿರುವ ಬಗ್ಗೆ ಹೇಳಲೇ ಬೇಕಾಗುತ್ತದೆ. ಕನಕನಿಗೆ ಇಲ್ಲಿ ಪೂಜೆ ಸಲ್ಲಿಕೆ ಹಿಂದೆ ಅವರು ಇಲ್ಲಿ ಪವಾಡ ಸೃಷ್ಟಿಸಿದ ಕಥೆಯಿದೆ. ಅವರ ಭಕ್ತಿ ಮತ್ತು ಪವಾಡವನ್ನರಿತ ಜನ ಅವರನ್ನೇ ದೇವರೆಂದು ಪೂಜಿಸುತ್ತಾ ಬರುತ್ತಿದ್ದಾರೆ.

ನಾವೆಲ್ಲರೂ ಜಾತಿಯ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾ ಬಂದವರೇ ಅದರಲ್ಲೂ ಮೇಲು ಕೀಳಿನ ನಡುವೆ ನಲುಗಿ ಹೋದವರೇ.. ಇವತ್ತಿಗೆ ಹೋಲಿಸಿದರೆ ಅವತ್ತಿನ ಕಾಲದಲ್ಲಿ ಜಾತಿಯಲ್ಲಿನ ಮೇಲು ಕೀಳು ಅಂಟುಜಾಡ್ಯದಂತೆ ಹರಡಿಕೊಂಡಿತ್ತು. ಅದನ್ನು ಹೋಗಲಾಡಿಸಲು ಹೋರಾಡಿದ ದಾರ್ಶನಿಕರಲ್ಲಿ ಕನಕದಾಸರು ಒಬ್ಬರಾಗಿದ್ದಾರೆ. ಕೃಷ್ಣನನ್ನೇ ಜಪಿಸುತ್ತಾ ಊರೂರು ತಿರುಗಿ ಕೀರ್ತನೆಗಳ ಮೂಲಕ ಮೇಲು ಕೀಳು ತೊಡೆದು ಮನುಷ್ಯರಾಗಿ ಬಾಳಿ ಎಂಬ ಸಂದೇಶ ಸಾರಿದ ಕನಕದಾಸರಿಗೆ ಕೃಷ್ಣನೇ ದರ್ಶನ ನೀಡಿದ್ದನು.
ಮೈಸೂರು ಭಾಗಕ್ಕೆ ಬಂದಿದ್ದ ಕನಕದಾಸರು
ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಲುವಾಗಿ ಲೋಕ ಸಂಚಾರ ಹೊರಟ ಕನಕದಾಸರು ಒಮ್ಮೆ ಮೈಸೂರಿನಿಂದ 18 ಕಿ.ಮೀ. ದೂರದಲ್ಲಿರುವ ಮಹದೇವಪುರಕ್ಕೆ ಬಂದಿದ್ದರಂತೆ. ಲೋಕಸಂಚಾರಿಯಾದ ಕನಕದಾಸರು ಉಡುಪಿಯ ಶ್ರೀ ಕೃಷ್ಣನ ದರ್ಶನ ಪಡೆದ ಬಳಿಕ ತಮ್ಮ ಗುರುಗಳಾದ ಸೋಸಲೆ ವ್ಯಾಸರಾಜರ ಮೂಲಸ್ಥಳ ಸೋಸಲೆಗೆ ಹೋಗುವ ಸಲುವಾಗಿ ಇಲ್ಲಿಗೆ ಬಂದಿದ್ದರಂತೆ ಹೀಗೆ ಹೀಗೆ ಬಂದವರಿಗೆ ಮಾರ್ಗ ಮಧ್ಯದಲ್ಲಿ ಸಿಗುವ ಶ್ರೀರಂಗಪಟ್ಟಣದ ಶ್ರೀ ರಂಗನಾಥನ ದರ್ಶನ ಮಾಡಬೇಕೆಂಬ ಬಯಕೆಯಾಗುತ್ತದೆ. ಹೀಗಾಗಿ ಅವರು ನಡೆಯುತ್ತಾ ಮಹದೇವಪುರಕ್ಕೆ ಬರುತ್ತಾರೆ.

ಅಲ್ಲಿ ಅಡ್ಡಲಾಗಿ ಕಾವೇರಿ ನದಿ ಹರಿಯುತ್ತಿದ್ದು, ಈ ನದಿಯನ್ನು ದಾಟಿಸುವಂತೆ ಅಲ್ಲಿದ್ದ ತೆಪ್ಪ ನಡೆಸುತ್ತಿದ್ದ ಗಂಗಾಮತಸ್ಥರನ್ನು ಕೇಳುತ್ತಾರೆ. ಈ ವೇಳೆ ಅವರು ತೆಪ್ಪದಲ್ಲಿ ಕರೆದುಕೊಂಡು ಹೋಗಲು ಒಪ್ಪಿದರೂ ತೆಪ್ಪದಲ್ಲಿದ್ದ ಮೇಲ್ಜಾತಿಯವರು ವಿರೋಧ ವ್ಯಕ್ತಪಡಿಸುತ್ತಾರೆ. ಕಾರಣ ನಡೆದು ಹೈರಾಣಗಿದ್ದ ದೇಹ, ಮಾಸಲು ಬಟ್ಟೆಯನ್ನು ನೋಡಿ ಆತ ಕೆಳಜಾತಿಯವನು ಅವನನ್ನು ಹತ್ತಿಸಿಕೊಳ್ಳದಂತೆ ಒತ್ತಡ ಹೇರುತ್ತಾರೆ. ಮೇಲ್ವರ್ಗದವರ ಮಾತಿಗೆ ಕಟ್ಟು ಬಿದ್ದ ದೋಣಿ ನಡೆಸುವವರು ಮೌನಕ್ಕೆ ಜಾರುತ್ತಾರೆ.
ಬಾಳೆ ಎಲೆಯಲ್ಲಿ ನದಿ ದಾಟಿದ ಕನಕದಾಸರು
ಮುಂದಕ್ಕೆ ಪ್ರಯಾಣ ಬೆಳೆಸಬೇಕಾದರೆ ಕಾವೇರಿ ನದಿಯನ್ನು ದಾಟುವುದು ಅನಿವಾರ್ಯವಾಗಿತ್ತು. ಆದರೆ ನದಿಯ ಆಚೆ ದಡಕ್ಕೆ ಕರೆದೊಯ್ಯಲು ತೆಪ್ಪ ನಡೆಸುವವರು ತಯಾರಿರಲಿಲ್ಲ. ಹೀಗಾಗಿ ಅವರು ನದಿ ಸಮೀಪದಲ್ಲಿ ಬಾಳೆ ಬೆಳೆದಿದ್ದ ರೈತನ ಬಳಿಗೆ ಹೋಗಿ ತನಗೆ ಬಾಳೆಲೆ ಕೊಡುವಂತೆ ಕೇಳುತ್ತಾರೆ. ಆತ ಕೊಡಲು ಒಪ್ಪುವುದಿಲ್ಲ. ಆದರೆ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬ ಮೊದಲಿಗೆ ಬಾಳೆ ಎಲೆ ಕೊಡು ಆತ ಏನು ಮಾಡುತ್ತಾನೆಂದು ನೋಡೋಣ ಎನ್ನುತ್ತಾ ಬಾಳೆ ಎಲೆಯನ್ನು ಕೊಡಿಸುತ್ತಾನೆ.
ರೈತನಿಂದ ಬಾಳೆ ಎಲೆ ಪಡೆದ ಕನಕದಾಸರು ಅದೇ ಎಲೆಯ ಮೇಲೆ ಕುಳಿತು ತೆಪ್ಪದಂತೆ ನೀರಿನಲ್ಲಿ ಸಾಗಿ ಮತ್ತೊಂದು ದಡವನ್ನು ಸೇರಿ ಅಲ್ಲಿದ್ದ ಬಂಡೆ ಮೇಲೆ ಹತ್ತಿ ಮಂಡಿಯೂರಿ ಕುಳಿತುಕೊಳ್ಳುತ್ತಾರೆ. ನಂತರ ತಮ್ಮ ಹೊಟ್ಟೆಯನ್ನು ಬಗೆದು ಕರುಳನ್ನು ಹೊರತೆಗೆದು ನೀರಿನಲ್ಲಿ ತೊಳೆದು ಸ್ವಚ್ಛ ಮಾಡಿ ಮತ್ತೆ ತಮ್ಮ ಹೊಟ್ಟೆಯಲ್ಲಿ ಹಾಕಿಕೊಂಡು ನಾನೀಗ ಪರಿಶುದ್ಧನೇ ಎಂದು ಕೇಳುತ್ತಾರೆ. ಅವರ ಪವಾಡ ಕಂಡ ಜನಕ್ಕೆ ಇವರು ಸಾಮಾನ್ಯರಲ್ಲ ದೈವಸ್ವರೂಪಿ ಎಂಬುದು ಅರಿವಾಗುತ್ತದೆ ಹೀಗಾಗಿ ಅವರ ಕಾಲಿಗೆ ಬಿದ್ದು ನಮ್ಮಿಂದ ತಪ್ಪಾಯಿತು ನಮ್ಮನ್ನು ಕ್ಷಮಿಸಿಬಿಡಿ ಎಂದು ಬೇಡಿಕೊಳ್ಳುತ್ತಾರೆ.
ಕನಕನಿಗೆ ಗುಡಿಕಟ್ಟಿ ಪೂಜೆ ಸಲ್ಲಿಕೆ
ಅಂದು ತೆಪ್ಪ ನಡೆಸುತ್ತಿದ್ದ ಗಂಗಾಮತಸ್ಥರು ಕನಕದಾಸರ ದೈವಪವಾಡವನ್ನು ಹತ್ತಿರದಿಂದ ನೋಡಿದ ಹಿನ್ನಲೆಯಲ್ಲಿ ಅಂದಿನಿಂದಲೇ ಅವರನ್ನು ಪೂಜಿಸುತ್ತಾ ಬಂದಿದ್ದಾರೆ. ಅವರು ಕೂತಿದ್ದ ಬಂಡೆಗೆ ಕನಕ ಬಂಡೇ ಎಂದೇ ಕರೆಯಲಾಗುತ್ತಿದ್ದು ಪೂಜ್ಯಭಾವನೆಯಿಂದ ನೋಡಲಾಗುತ್ತಿದೆ. ಕಳೆದ ಎರಡು ದಶಕಗಳಿಂದ ನಂಜುಂಡಯ್ಯ ಎಂಬುವರು ಕೊಡಗನಹಳ್ಳಿ ರಾಮೇಗೌಡ ಮತ್ತ ಜೆ.ಸಿ.ದರ್ಶನ್ ಎಂಬುವರ ಸಹಕಾರದಲ್ಲಿ 2003ರಲ್ಲಿ ಮಹದೇವಪುರದಲ್ಲಿ ಪುಟ್ಟ ಕನಕ ದೇವಾಲಯವನ್ನು ನಿರ್ಮಿಸಿದ್ದು, ಪೂಜಾ ಕೈಂಕರ್ಯಗಳನ್ನು ನೆರೆವೇರಿಸಿಕೊಂಡು ಬರಲಾಗುತ್ತಿದೆ.
ಮಹದೇವರಪುರ ಭತ್ತದ ಗದ್ದೆ ಬಯಲಿನ ಸುಂದರ ತಾಣವಾಗಿದ್ದು, ಅಕ್ಕ ಪಕ್ಕದ ತೆಂಗಿನ ಗಿಡಗಳ ನಡುವಿನ ಹಾದಿಯ ಸುತ್ತಲೂ ಹಸಿರು ಚೆಲ್ಲಿರುವ ಸುಂದರ ಪರಿಸರ ಶೂಟಿಂಗ್ ಸ್ಪಾಟ್ ಆಗಿ ಗಮನಸೆಳೆಯುತ್ತಾ ಬಂದಿದೆ. ಇದರ ಜತೆಯಲ್ಲಿಯೇ ಇಲ್ಲಿ ಕನಕದಾಸರು ಮಾಡಿದ ಪವಾಡವೂ ಅಷ್ಟೇ ಗಮನಾರ್ಹವಾಗಿದೆ. ಕನಕನ ಪವಾಡಕ್ಕೆ ಸಾಕ್ಷಿಯಾಗಿ ಇಲ್ಲಿ ಕನಕನ ಬಂಡೆ ನಿಂತಿದೆ. ಅದನ್ನು ದೈವ ದೃಷ್ಟಿಯಿಂದಲೇ ಜನ ನೋಡುತ್ತಾರೆ.












Click it and Unblock the Notifications