ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿಗೆ ನೀರವ ಮೌನ; ಬೇರಿಯಂ ಇಲ್ಲದೇ ಪಟಾಕಿ ಉದ್ಯಮ ತಲ್ಲಣ

|
Google Oneindia Kannada News

ದೀಪಾವಳಿ ಅಂದರೆ ದೀಪಗಳ ಹಬ್ಬವಾದರೂ ಸಾಂಪ್ರದಾಯಿಕವಾಗಿ ಪಟಾಕಿಯ ಸಡಗರ ತರುವ ಹಬ್ಬವಾಗಿ ರೂಪುಗೊಂಡಿದೆ. ಕೆಲವರಿಗೆ ಪಟಾಕಿ ಶಬ್ದ ಖುಷಿ ಕೊಟ್ಟರೆ ಇನ್ನೂ ಕೆಲವರಿಗೆ ಅದು ನರಕ. ಕಿವಿ ತಮಟೆ ಒಡೆದುಹೋಗುವ ರೀತಿಯಲ್ಲಿ ಬರುವ ಶಬ್ದ, ರಸ್ತೆಯಲ್ಲಿ ನಡೆದು ಹೋಗುವಾಗ ಬೆಚ್ಚಿಬೀಳಿಸುವ ಶಬ್ದ ಬಹಳ ಮಂದಿಗೆ ಕಿರಿಕಿರಿ ತರುವುದು ಹೌದು.

ಅದಕ್ಕಿಂತ ಹೆಚ್ಚಾಗಿ ಪಟಾಕಿ ಸಿಡಿತದಿಂದ ಕಣ್ಣು ಕಳೆದುಕೊಂಡವರು ಅದೆಷ್ಟೋ ಮಂದಿ ಇದ್ದಾರೆ. ಪ್ರತೀ ವರ್ಷವೂ ನೂರಾರು ಜನರು ಪಟಾಕಿ ಸ್ಫೋಟದಿಂದ ಕಣ್ಣು ಕಳೆದುಕೊಳ್ಳುತ್ತಾರೆ. ಅಸಂಖ್ಯಾತ ಜನರು ಪಟಾಕಿಯ ನೇರ ಮತ್ತು ಪರೋಕ್ಷ ಪರಿಣಾಮಗಳಿಂದ ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ.

ಜನದಟ್ಟಣೆ ಪ್ರದೇಶದಲ್ಲಿ ಪಟಾಕಿ ಮಾರಾಟ ನಿಷೇಧ ಊರ್ಜಿತಜನದಟ್ಟಣೆ ಪ್ರದೇಶದಲ್ಲಿ ಪಟಾಕಿ ಮಾರಾಟ ನಿಷೇಧ ಊರ್ಜಿತ

ಪಟಾಕಿ ತಯಾರಿಕೆಯಲ್ಲಿ ಬಳಸಲಾಗುವ ಬೇರಿಯಂ ಬಹಳ ಅಪಾಯಕಾರಿ ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ, 2018ರಲ್ಲಿ ಸುಪ್ರೀಂಕೋರ್ಟ್ ಬೇರಿಯಂ ಬಳಕೆಯನ್ನು ನಿಷೇಧಿಸಿತು. ಬೇರಿಯಂ ಬಳಸದೇ ತಯಾರಿಸುವ ಹಸಿರು ಪಟಾಕಿಗಳಿಗೆ ಮಾತ್ರ ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

ಸರ್ವೋಚ್ಚ ನ್ಯಾಯಾಲಯದ ಈ ಆದೇಶ ಪಟಾಕಿ ಕಿರಿಕಿರಿಯಿಂದ ಬೇಸತ್ತವರಿಗೆ ನೆಮ್ಮದಿ ತಂದಿದೆಯಾದರೂ ಪಟಾಕಿ ಉದ್ಯಮ ಮಾತ್ರ ಹೈರಾಣಗೊಂಡಿದೆ. ಅದರಲ್ಲೂ ಪಟಾಕಿ ಉದ್ಯಮದ ಕೇಂದ್ರಬಿಂದುವಾಗಿರುವ ತಮಿಳುನಾಡಿನ ಶಿವಕಾಶಿಯ ಪಟಾಕಿ ತಯಾರಕರಂತೂ ತಲೆ ಮೇಲೆ ಕೈಹೊತ್ತು ಕೂತಿದ್ದಾರೆ.

ನಿಷೇಧ ತೆರವುಗೊಳಿಸಿ ಎಂದು ಒತ್ತಾಯ

ನಿಷೇಧ ತೆರವುಗೊಳಿಸಿ ಎಂದು ಒತ್ತಾಯ

ಯಾವುದೇ ವೈಜ್ಞಾನಿಕ ಅಧ್ಯಯನ ಮಾಡದೆಯೇ ಬೇರಿಯಂ ಅನ್ನು ನಿಷೇಧಿಸಲಾಗಿದೆ ಎಂದು ಶಿವಕಾಸಿ ಪಟಾಕಿ ತಯಾರಕರ ಸಂಘದ ಸದಸ್ಯರೊಬ್ಬರು ಹೇಳುತ್ತಾರೆ.

"ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಪಟಾಕಿಗಳನ್ನು ನಿಷೇಧಿಸಲಿ. ಹಸಿರು ಪಟಾಕಿ ತಯಾರಿಕೆಯ ತಾಂತ್ರಿಕ ವಿಧಿ ವಿಧಾನಗಳು ನಮಗೆ ತಿಳಿದಿದೆ. ಅದರೆ, ಹಸಿರು ಪಟಾಕಿ ತಯಾರಿಕೆಯಲ್ಲೂ ಬೇರಿಯಂ ನಿಷೇಧಿಸುವುದಕ್ಕೆ ನಮ್ಮ ವಿರೋಧ ಇದೆ" ಎಂದು ಇವರು ಆಕ್ಷೇಪಿಸಿದ್ದಾರೆ.

2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಅಸ್ಪಷ್ಟ ಇತ್ತು. ಗ್ರೀನ್ ಪಟಾಕಿಗಳಿಗೆ ಮಾತ್ರ ಅನುಮತಿ ಎಂದು ಕೋರ್ಟ್ ಹೇಳಿದೆ ಎಂದು ಪಟಾಕಿ ಕಂಪನಿಗಳು ಗ್ರಹಿಸಿದ್ದವು. ಪರಿಣಾಮವಾಗಿ ಹಸಿರು ಪಟಾಕಿಗಳ ತಯಾರಿಕೆಯಲ್ಲಿ ಬೇರಿಯಂ ಮಿಶ್ರಣ ಮಾಡುವುದನ್ನು ಮುಂದುವರಿಸಿದ್ದವು. ಆದರೆ, 2021ರಲ್ಲಿ ಸುಪ್ರೀಂ ಕೋರ್ಟ್ ಮತ್ತೆ ಸ್ಪಷ್ಟನೆ ಕೊಟ್ಟಿತು. ಬೇರಿಯಂ ಕೂಡ ಬಳಸುವಂತಿಲ್ಲ ಎಂದು ತಿಳಿಸಿ ಮತ್ತೆ ಆದೇಶ ಹೊರಡಿಸಿತು.

ಆ ವರ್ಷ ಸುಪ್ರೀಂ ಕೋರ್ಟ್ ಆದೇಶ ದೀಪಾವಳಿ ಹಬ್ಬ ಮುಗಿದ ಬಳಿಕ ಬಂದಿದ್ದರಿಂದ ಪಟಾಕಿ ತಯಾರಕ ಸಂಸ್ಥೆಗಳಿಗೆ ಅಂಥದ್ದೇನೂ ಪರಿಣಾಮವಾಗಿರಲಿಲ್ಲ. ಆದರೆ, ಈ ವರ್ಷ ಬೇರಿಯಂ ಇಲ್ಲದೆಯೇ ಪಟಾಕಿ ತಯಾರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಶಿವಕಾಸಿಯ ಪಟಾಕಿ ತಯಾರಕರು ಮುಳುಗಿಹೋಗಿದ್ದಾರೆ.

ಬೇರೆ ಕ್ಷೇತ್ರದಲ್ಲಿ ಬೇರಿಯಂ ಬಳಸುತ್ತಾರಲ್ಲ?

ಬೇರೆ ಕ್ಷೇತ್ರದಲ್ಲಿ ಬೇರಿಯಂ ಬಳಸುತ್ತಾರಲ್ಲ?

ಬೇರಿಯಂ ನಿಷೇಧ ಮಾಡಿದ ಕ್ರಮವನ್ನು ಉಗ್ರವಾಗಿ ಪ್ರತಿಭಟಿಸುವ ಪಟಾಕಿ ತಯಾರಕರು, ತಮ್ಮಂಥ ದುರ್ಬಲರ ಮೇಲೆ ದೌರ್ಜನ್ಯ ಆಗುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ.

ಬೇರೆ ಕ್ಷೇತ್ರಗಳಲ್ಲಿ ಉತ್ಪಾದನೆಗೆ ಬೇರಿಯಂ ಬಳಸುತ್ತಾರೆ. ಅಲ್ಲೆಲ್ಲಾ ಇಲ್ಲದ ನಿಷೇಧ ಪಟಾಕಿ ಉದ್ಯಮಕ್ಕೆ ಯಾಕೆ? ಪರಿಸರವಾದಿಗಳು ಮತ್ತು ಅಧಿಕಾರಿಗಳಿಗೆ ಪಟಾಕಿ ತಯಾರಕರೇ ಸುಲಭ ಗುರಿಯಾಗಿಹೋಗಿದ್ದಾರೆ ಎಂದು ಶಿವಕಾಸಿಯ ಪಟಾಕಿ ಉದ್ಯಮಿಯೊಬ್ಬರು ಹೇಳಿದ್ದಾರೆ.

ಬೇರಿಯಂ ಯಾಕೆ ಬೇಕು?

ಬೇರಿಯಂ ಯಾಕೆ ಬೇಕು?

ಪಟಾಕಿ ತಯಾರಿಕೆಯಲ್ಲಿ ಬೇರಿಯಂ ಪ್ರಮುಖ ವಸ್ತು. ಹೆಚ್ಚಿನ ಪಟಾಕಿಗೆ ಆಕ್ಸಿಡೈಸರ್ ಆಗಿ ಬೇರಿಯಂ ಅನ್ನು ಬಳಸಲಾಗುತ್ತದೆ. ಇದನ್ನು ನಿಷೇಧಿಸಿದರೆ ಬಹುತೇಕ ಪಟಾಕಿ ಉತ್ಪನ್ನ ಹೊರತರಲು ಸಾಧ್ಯವಿಲ್ಲ ಎನ್ನುತ್ತಾರೆ ಪಟಾಕಿ ತಯಾರಕರು.

"ನಿಷೇಧದ ಬಳಿಕ ನನ್ನ ಕಾರ್ಖಾನೆಯಲ್ಲಿ ಉತ್ಪಾದನೆ ಅರ್ಧಕ್ಕೆ ನಿಂತಿದೆ. ಮೊದಲೆಲ್ಲಾ ನನ್ನ ಕಂಪನಿಗಳಲ್ಲಿ 450ರಿಂದ 500 ಕೆಲಸಗಾರರು ಇದ್ದರು. ಈಗ 200 ಮಂದಿ ಇದ್ದರೆ ಹೆಚ್ಚು" ಎಂದು ಇನ್ನೊಬ್ಬ ಪಟಾಕಿ ಉದ್ಯಮಿ ತಿಳಿಸಿದ್ದಾರೆ.

ದೇಶದ ಪ್ರಮುಖ ಪಟಾಕಿ ತಯಾರಕ ಪ್ರದೇಶವಾಗಿರುವ ಶಿವಕಾಶಿಯಲ್ಲಿ ಮೂರು ಲಕ್ಷ ಕೆಲಸಗಾರರು ನೇರವಾಗಿ ತೊಡಗಿಸಿಕೊಂಡಿದ್ದಾರೆ. ಸಂಘಟಿತವಾಗಿರುವ ಪಟಾಕಿ ತಯಾರಕ ಘಟಕಗಳೇ ಒಂದು ಸಾವಿರ ಇವೆ. ಇನ್ನೂ ನಾಲ್ಕು ಲಕ್ಷ ಜನರಿಗೆ ಈ ಉದ್ಯಮ ಪರೋಕ್ಷವಾಗಿ ಕೆಲಸ ನೀಡಿದೆ. ಈಗ ಬೇರಿಯಂ ನಿಷೇಧದ ಪರಿಣಾಮವಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೇರಿಯಂ ಮೇಲಿನ ನಿಷೇಧ ತೆರವುಗೊಳಿಸಿ ಹಸಿರು ಪಟಾಕಿ ತಯಾರಿಕೆಗೆ ಅನುಮತಿ ಕೊಡಬೇಕು ಎಂಬುದು ಉದ್ಯಮಿಗಳ ಆಗ್ರಹ.

ಕಳ್ಳರಿಗೆ ಚಾನ್ಸ್

ಕಳ್ಳರಿಗೆ ಚಾನ್ಸ್

ಬೇರಿಯಂ ನಿಷೇಧದಿಂದಾಗಿ ಶಿವಕಾಸಿಯ ಅಧಿಕೃತ ಪಟಾಕಿ ತಯಾರಕರಿಗೆ ಸಂಕಷ್ಟವಾಗಿದೆ. ಅಕ್ರಮವಾಗಿ ಪಟಾಕಿ ತಯಾರಿಸುವವ ಸಂಖ್ಯೆ ಹೆಚ್ಚಿದೆ. ಹೆಚ್ಚಿನ ಕಾರ್ಮಿಕರು ಈಗ ಅಕ್ರಮ ಪಟಾಕಿ ತಯಾರಕರ ಬಳಿ ಕೆಲಸಕ್ಕೆ ಹೋಗುತ್ತಿದ್ದಾರೆ. ಕಳ್ಳ ಮಾರ್ಗಗಳ ಮೂಲಕ ಅನಧಿಕೃತವಾಗಿ ಪಟಾಕಿ ತಯಾರಿಕೆ ಮತ್ತು ಹಂಚಿಕೆ ನಡೆಯಬಹುದು ಎಂಬುದು ಪಟಾಕಿ ತಯಾರಕರ ಸಂಘಟನೆಯ ಭಯ.

ಸುಪ್ರೀಂ ತೀರ್ಪು ಯಾಕೆ?

ಸುಪ್ರೀಂ ತೀರ್ಪು ಯಾಕೆ?

ದೆಹಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಪಟಾಕಿಯಿಂದಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಅರ್ಜುನ್ ಗೋಪಾಲ್ ಎಂಬುವವರು ರಿಟ್ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಅಪಾಯಕಾರಿ ಎನಿಸುವ ಪಟಾಕಿಗಳಿಗೆ ನಿಷೇಧ ಹಾಕಿತು.

ದೆಹಲಿ ವಾಯು ಮಾಲಿನ್ಯಕ್ಕೆ ಪಟಾಕಿಯೇ ನೇರ ಕಾರಣವಲ್ಲವಾದರೂ ಮಾಲಿನ್ಯ ಹೆಚ್ಚಳಕ್ಕೆ ಅದೂ ಒಂದು ಕಾರಣಕರ್ತವಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತು. ಹೆಚ್ಚು ಮಾಲಿನ್ಯ ಸೃಷ್ಟಿಸದ ಹಸಿರು ಪಟಾಕಿ ಉತ್ಪಾದನೆಗೆ ಮಾತ್ರ ನ್ಯಾಯಾಲಯ ಅನುಮತಿ ನೀಡಿದೆ.

ಬೇರಿಯಂ ಯಾಕೆ ಡೇಂಜರ್?

ಬೇರಿಯಂ ಯಾಕೆ ಡೇಂಜರ್?

ಬೇರಿಯಂ ಎಂಬುದು ಬೇರೈಟ್ ಅದಿರಿನಿಂದ ತಯಾರಿಸುವ ಬಿಳಿ ಅಥವಾ ಸಿಲ್ವರ್ ಬಣ್ಣದ ರಾಸಾಯನಿಕ ವಸ್ತುವಾಗಿದೆ. ಇದು ಆರೋಗ್ಯಕ್ಕೆ ಹಾನಿ ಮಾಡುವ ವಸ್ತು ಎಂಬುದು ಅನೇಕ ಅಧ್ಯಯನಗಳಿಂದ ದೃಢಪಟ್ಟಿದೆ.

ಬೇರಿಯಂ ನಮ್ಮ ಶ್ವಾಸಕೋಶಕ್ಕೆ ಹೋದಾಗ ಆರೋಗ್ಯಕ್ಕೆ ತೊಂದರೆ ಆಗುತ್ತದೆ. ನಮ್ಮ ಚರ್ಮ ಮತ್ತು ಕಣ್ಣುಗಳಿಗೆ ಹಾನಿ ಮಾಡುತ್ತದೆ. ಮೂಗು, ಗಂಟಲುಗಳ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚು ಪ್ರಮಾಣದಲ್ಲಿ ಬೇರಿಯಂನ ಸಂಪರ್ಕಕ್ಕೆ ಬಂದರೆ ವಿಷಕಾರಿ ಎನಿಸಬಹುದು. ತಲೆಸುತ್ತು, ವಾಂತಿ, ಬೇಧಿ, ಸ್ನಾಯು ದೌರ್ಬಲ್ಯ, ನಡುಗುವಿಕೆ, ಪ್ಯಾರಾಲಿಸಿಸ್ ಆಬಗಬಹುದು. ಕೆಲವೊಮ್ಮೆ ಸಾವೂ ಸಂಭವಿಸಬಹುದು.

ಬೇರಿಯಂನಿಂದ ಕಿಡ್ನಿಗೆ ತೊಂದರೆ ಆಗುತ್ತದೆ ಎಂದು ಹೇಳಲಾಗುತ್ತದೆ. ಇದು ಬೆಂಕಿಗೆ ಬೇಗ ಈಡಾಗುತ್ತದೆ. ಬೆಂಕಿಯ ಸಂಪರ್ಕಕ್ಕೆ ಬಂದರೆ ಸ್ಫೋಟಗೊಳ್ಳುತ್ತದೆ. ಬೇರಿಯಂ ನಮ್ಮ ಗಾಳಿ ಅಥವಾ ನೀರಿನ ಸಂಪರ್ಕಕ್ಕೆ ಬಂದರೂ ಬೆಂಕಿ ಹೊತ್ತಿಕೊಳ್ಳುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Cracker producers are desperate of losing the living after SC banned use of barium in producing crackers last year. Barium is banned without any scientific study, claims crackers producers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X