ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗೇನಾಗಿದ್ದೇನೋ ಅದೆಲ್ಲದರ ಆರಂಭ ಅಲ್ಲಿಂದಲೇ : ಮೋದಿಯವರ ಜೀವನದ ವಿಶಿಷ್ಟ ಪಯಣ

|
Google Oneindia Kannada News

ಸುದ್ದಿಯ ಬಗ್ಗೆ ಸಿನಿಕತೆಯನ್ನು ಬೆಳೆಸಿಕೊಂಡಿರುವವರು ಕೂಡ ನಿಬ್ಬೆರಗಾಗುವಂತೆ ಜನಸಾಮಾನ್ಯರ ಮನಮಿಡಿಯುವ, ಕೆಚ್ಚೆದೆಯ, ಹೃದಯ ಹಿಂಡುವಂಥ ನೈಜ ಮತ್ತು ಮಾನವೀಯ ಸಂವೇದಿ ಕಥೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಹೇಳುವ 'ಹ್ಯೂಮನ್ಸ್ ಆಫ್ ಬಾಂಬೆ', ಮೊಟ್ಟಮೊದಲ ಬಾರಿಗೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಂದರ್ಶನ ಮಾಡಿದೆ. ನರೇಂದ್ರ ಮೋದಿಯವರು ಬಾಲಕನಾಗಿದ್ದಾಗಿನ ಕುತೂಹಲಭರಿತ ಕಥೆಗಳನ್ನು ಸಂದರ್ಶನ ಬಿಚ್ಚಿಡುತ್ತದೆ. "ಈಗೇನಾಗಿದ್ದೇನೋ ಅದೆಲ್ಲದರ ಆರಂಭ ಅಲ್ಲಿಂದಲೇ" ಎಂದು ಮೋದಿಯವರು ಬಾಲ್ಯದ ಕಥನವನ್ನು ಎಳೆಎಳೆಯಾಗಿ ಮತ್ತು ಸ್ವಾರಸ್ಯಕರವಾಗಿ ಹೇಳಿದ್ದಾರೆ.

"ಹೀಲಿಂಗ್ ಟಚ್ (ಸ್ಪರ್ಶ ಚಿಕಿತ್ಸೆ)" ಶಕ್ತಿ ಹೊಂದಿದ್ದ ತಮ್ಮ ತಾಯಿಯ ಚಿತ್ರಣ ಬಿಡಿಸುವುದರೊಂದಿಗೆ ಮೋದಿಯವರು ಕಥಾಪಯಣವನ್ನು ಆರಂಭಿಸುತ್ತಾರೆ. "ತಮ್ಮ ನೋವುಗಳಿಗೆ ತಾಯಿಯ ಸ್ಪರ್ಶದಿಂದ ಗುಣಮುಖರಾಗಲು ಜನರು ತಮ್ಮ ಮನೆಯ ಮುಂದೆ ಸಾಲು ನಿಲ್ಲುತ್ತಿದ್ದರು. ತಾಯಿಯವರಿಗೆ ಶಿಕ್ಷಣದ ಸೌಭಾಗ್ಯ ದೊರೆಯದಿದ್ದರೂ, ದೇವರು ಅವರ ಮೇಲೆ ಕರುಣೆ ತೋರಿದ್ದ, ಜನರ ನೋವನ್ನು ಗುಣಪಡಿಸುವ ವಿಶಿಷ್ಟ ಶಕ್ತಿ ಅವರಿಗೆ ದಯಪಾಲಿಸಿದ್ದ. ಈ ಸ್ಪರ್ಶ ಚಿಕಿತ್ಸೆ ಪಡೆಯಲೆಂದೇ ತಾಯಂದಿರು ಸಾಲುಗಟ್ಟಿ ಬರುತ್ತಿದ್ದರು."

ತಾಯಿಯ ಬಗ್ಗೆ ತಮಗೆ ಎಷ್ಟು ಮಮತೆ ಮತ್ತು ಪ್ರೀತಿಯಿದೆ ಎಂಬುದು ಮೋದಿಯವರ ಪ್ರತಿನುಡಿಯಲ್ಲೂ ವ್ಯಕ್ತವಾಗುತ್ತದೆ. ಅಮ್ಮನ ವ್ಯಕ್ತಿತ್ವವನ್ನು ಬಣ್ಣಿಸುವಾಗ ಅವರ ಕಣ್ಣಲ್ಲಿ ಅಗಾಧ ವಾತ್ಸಲ್ಯ ಉಕ್ಕುತ್ತಿರುತ್ತದೆ. 99 ವರ್ಷದ ಅಮ್ಮನಿಗೆ ತಾವು ಗಳಿಸಿದ ಸ್ಥಾನ ಎಂದೂ ಮಹತ್ವದ್ದಾಗಿರಲೇ ಇಲ್ಲ. ಅವರಿಗೆ ಬೇಕಾಗಿದ್ದುದೇನೆಂದರೆ, ತಮ್ಮ ಮಗ ಅತ್ಯಂತ ಪ್ರಾಮಾಣಿಕತೆಯಿಂದ ಮತ್ತು ನಿಯತ್ತಿನಿಂದ ದುಡಿಯಬೇಕು. ಮತ್ತು ಆ ಗುಣಗಳು ಅವರ ಜೀವನದ ಮೈಲಿಗಲ್ಲುಗಳಾಗಿರಬೇಕು ಎಂದು ಆ ತಾಯಿಯ ಹೃದಯ ಸದಾ ಬಯಸುತ್ತಿತ್ತು.

The Beginning of Everything That I Am Today - Narendra Modi

'ಲಂಚಕ್ಕೆ ಎಂದೂ ಕೈಚಾಚಬೇಡ' - ಇದು ನರೇಂದ್ರ ಮೋದಿಯವರಿಗೆ ಅವರ ತಾಯಿ ಕೊಟ್ಟ ಒಂದೇ ಅತ್ಯಮೂಲ್ಯ ಸಲಹೆ. ಅವರು ಆ ನುಡಿಮುತ್ತನ್ನು ಹೇಳಿದ ಘಟನೆಯ ಬಗ್ಗೆ ವಿವರಿಸುತ್ತ, "'ನೋಡು ಮಗನೆ, ನನಗೆ ನೀನೇನು ಮಾಡುತ್ತಿ ಎಂದು ಅರ್ಥವಾಗುವುದಿಲ್ಲ, ಆದರೆ ನನಗೊಂದು ಮಾತುಕೊಡು, ನೀನೆಂದೂ ಲಂಚ ತೆಗೆದುಕೊಳ್ಳುವುದಿಲ್ಲ ಎಂದು. ಎಂದೂ ಆ ತಪ್ಪು ಮಾಡಬೇಡ.' ಅಮ್ಮನ ಈ ನುಡಿಗಳು ನನ್ನ ಮೇಲೆ ಭಾರೀ ಪರಿಣಾಮ ಬೀರಿದವು. ಅದು ಹೇಗೆಂದು ನಾನು ಹೇಳುತ್ತೇನೆ. ಒಬ್ಬ ಮಹಿಳೆ ತನ್ನಿಡೀ ಜೀವನವನ್ನು ಬಡತನದಲ್ಲಿ ಕಳೆದವಳು, ಭೌತಿಕ ಸುಖವನ್ನು ಎಂದೂ ಅನುಭವಿಸದವಳು, ನಾನು ಸಮೃದ್ಧಿ ಪಡೆದಿರುವ ಸಮಯದಲ್ಲಿ, ಲಂಚಕ್ಕೆ ಎಂದೂ ಕೈ ಚಾಚಬೇಡ ಎಂದಿದ್ದಳು ನನ್ನ ನಿಸ್ಪೃಹ ಮನಸ್ಸಿನ ತಾಯಿ" ಎಂದು ನೆನಪಿಗೆ ಜಾರುತ್ತಾರೆ.

ಸತತ 13 ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ನರೇಂದ್ರ ಮೋದಿಯವರು ಮೊದಲ ಬಾರಿ ಮುಖ್ಯಮಂತ್ರಿಯಾದಾಗಿನ ಘಟನೆಯನ್ನು ಮೆಲುಕು ಹಾಕುತ್ತಾರೆ. ತಮ್ಮ ಜೀವನದ ದಿಕ್ಕನ್ನೇ ಆ ಘಟನೆ ಬದಲಿಸಿದ್ದರೆ, ಅಮ್ಮನಿಗೆ ತನ್ನ ಬಳಿಯೇ ಮಗ ಕೆಲಸ ಮಾಡುತ್ತಾನಲ್ಲ ಎಂಬ ಸಂತೋಷ ಮನೆಮಾಡಿತ್ತು ಎಂದು ಅವರು ನುಡಿಯುತ್ತಾರೆ. "ಪ್ರಮಾಣವಚನ ಸ್ವೀಕರಿಸುವ ಮುನ್ನ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆಯಲೆಂದು ಅಹಮದಾಬಾದ್ ಗೆ ಹೋದಾಗ, ನಾನು ಮುಖ್ಯಮಂತ್ರಿ ಆಗಿದ್ದೇನೆಂದು ಅವರಿಗೆ ಹೇಗೋ ತಿಳಿದಿತ್ತು. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನ್ನ ಕೆಲಸ ಏನೆಂದು ಆಕೆಗೆ ತಿಳಿದಿರಲಿಲ್ಲ. ನಾನು ಮನೆ ತಲುಪಿದಾಗ ಅಲ್ಲಾಗಲೇ ಸಂಭ್ರಮದ ವಾತಾವರಣ ಮನೆಮಾಡಿತ್ತು. ನನ್ನ ತಾಯಿ ನನ್ನನ್ನು ನೋಡಿ, ನನ್ನನ್ನು ತಬ್ಬಿಕೊಂಡು, 'ಸಂತೋಷದ ಸಂಗತಿಯೇನೆಂದರೆ ನೀನು ಗುಜರಾತಿಗೆ ಬಂದಿದ್ದಿಯಾ' ಅಂತ ನುಡಿದಿದ್ದಳು. ಅದು ನನ್ನ ತಾಯಿಯ ವಿಶಿಷ್ಟ ಗುಣ. ಸುತ್ತಮುತ್ತ ಏನೇ ನಡೆಯುತ್ತಿರಲಿ ತನ್ನ ಕಂದ ತನ್ನ ಬಳಿಯೇ ಇರಬೇಕೆಂದು ಬಯಸುತ್ತಾಳೆ."

ಕೇವಲ 40*12 ಚದರಡಿ ಮನೆಯಲ್ಲಿ ಎಂಟು ಜನರ ಕುಟುಂಬ ನೆಮ್ಮದಿಯ ಜೀವನ ನಡೆಸಿದ್ದರ ಬಗ್ಗೆ ಮೋದಿ ಮೆಲುಕು ಹಾಕುತ್ತಾರೆ. "ನಸುಕಿನಲ್ಲಿಯೇ ದೈನಂದಿನ ಕಾರ್ಯ ಆರಂಭವಾಗುತ್ತಿತ್ತು. ಚಹಾ ಅಂಗಡಿ ತೆರೆದಿಟ್ಟು ಶಾಲೆಗೆ ಹೋಗುತ್ತಿದ್ದೆ. ಚಹಾ ಅಂಗಡಿಯಲ್ಲಿ ನನ್ನ ತಂದೆಗೆ ಸಹಾಯ ಮಾಡುವುದರಿಂದ ನನಗೆ ನೆಮ್ಮದಿ ದೊರೆಯುತ್ತಿತ್ತು ಮತ್ತು ಆ ಕೆಲಸ ಕಷ್ಟದ್ದೆಂದು ಅನಿಸುತ್ತಿರಲಿಲ್ಲ. ಆ ದುಡಿಮೆಯೇ ಇಂದು ದೇಶದಾದ್ಯಂತ ಅಡ್ಡಾಡಿ ಜನರನ್ನು ಭೇಟಿ ಮಾಡುವುದು ಮತ್ತು ಅವರ ಮಾತು ಆಲಿಸುವುದಕ್ಕೆ ನಾಂದಿ ಹಾಡಿತು" ಎಂದು ಅವರು ನಡೆದುಬಂದ ಹಾದಿಯ ಅವಲೋಕನ ಮಾಡುತ್ತಾರೆ.

The Beginning of Everything That I Am Today - Narendra Modi

ದೊಡ್ಡ ಕನಸುಗಳುಳ್ಳ ಬಾಲಕ, ಸಿಕ್ಕ ಅವಕಾಶಗಳ ಸದುಪಯೋಗ ಪಡೆಯುವ ಕಥನವನ್ನು ಅವರು ತೆರೆದಿಡುತ್ತಾರೆ. ಕಾಡುವ ಕನಸನ್ನು ಬೆನ್ನತ್ತಿದಾಗ ಆಲಸ್ಯತನ ತೋರಿದರೆ ಮಾಡುವ ಪ್ರಯತ್ನವೆಲ್ಲ ನಿರರ್ಥಕವಾಗುತ್ತದೆ ಎಂಬುದರಲ್ಲಿ ಮೋದಿಯವರಿಗೆ ಅಪಾರ ನಂಬಿಕೆ. ಸಿಕ್ಕ ಅವಕಾಶಗಳ ಭರ್ತಿ ಲಾಭ ಪಡೆಯಬೇಕು ಮತ್ತು ಆಕಾಂಕ್ಷೆಗಳು ಸಾಕಾರವಾಗುವವರೆಗೆ ದುಡಿಯುತ್ತಲೇ ಇರಬೇಕು ಎಂಬುದು ಅವರ ಧ್ಯೇಯ. "ನನ್ನ ಸಂಕಷ್ಟಗಳೇನಿದ್ದವು ಎಂದು ನೀವು ಕೇಳಿದರೆ, ನನಗಾವುವೂ ಇರಲಿಲ್ಲ ಎಂದು ಹೇಳುತ್ತೇನೆ. ನನ್ನ ಬಳಿ ಏನೂ ಇರಲಿಲ್ಲ, ಐಷಾರಾಮಿ ಜೀವನವೆಂದರೇನು ಗೊತ್ತಿರಲಿಲ್ಲ, ಅತ್ಯುತ್ತಮ ಜೀವನವೇನೆಂಬುದನ್ನು ಕಂಡಿರಲಿಲ್ಲ. ಆ ಸಣ್ಣ ಜಗತ್ತಿನಲ್ಲಿಯೇ ನಾನು ಸಂತೋಷದಿಂದಿದ್ದೆ."

ತಮ್ಮ ಜೀವನದಲ್ಲಿ ಏನೇ ಕುಂದುಕೊರತೆಗಳಿದ್ದರೂ ದಾನಧರ್ಮಗಳ ಜೀವನವನ್ನು ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಅಳವಡಿಸಿಕೊಂಡಿದ್ದರು ಮೋದಿ. 8 ವರ್ಷದವರಿರುವಾಗಲೇ ಅವರು ಮೊದಲ ಬಾರಿ ಆರ್‌ಎಸ್ಎಸ್ ಸಭೆಗಳಲ್ಲಿ ಭಾಗವಹಿಸುತ್ತಿದ್ದರು ಮತ್ತು 9ನೇ ವಯಸ್ಸಿನಲ್ಲಿಯೇ ದಾನಧರ್ಮಗಳ ಅನುಭವವೂ, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಅವಕಾಶವೂ ಅವರಿಗೆ ದೊರೆತಿತ್ತು. ಅವರು ಆ ವಯಸ್ಸಿನಲ್ಲಿಯೇ ತಮ್ಮ ಸ್ನೇಹಿತನೊಂದಿಗೆ ಗುಜರಾತ್ ಪ್ರವಾಹ ಪೀಡಿತರಿಗೆ ಸಹಾಯ ಮಾಡಿದ್ದರು.

ಬಾಲ್ಯದಲ್ಲಿ ಅವರ ಕುಟುಂಬ ಭೌತಿಕ ಸುಖಗಳಿಂದ ವಂಚಿತವಾಗಿದ್ದರೂ, ಅತ್ಯಂತ ಶಿಸ್ತಿನ ಜೀವನ ನಡೆಸುವುದರಿಂದ ಎಂದೂ ಹಿಂದೆ ಬೀಳಲಿಲ್ಲ. ಅಂದು ಇಸ್ತ್ರಿ ಪೆಟ್ಟಿಗೆ ಇಲ್ಲದಿದ್ದರೂ, ಬಿಸಿ ಇದ್ದಿಲನ್ನು ಬಳಸಿ ತಮ್ಮ ಬಟ್ಟೆಗಳನ್ನು ಇಸ್ತ್ರಿ ಮಾಡಿಕೊಳ್ಳುತ್ತಿದ್ದುದಾಗಿ ಅವರು ನೆನಪಿಸಿಕೊಳ್ಳುತ್ತಾರೆ.

ತಮ್ಮ ಜೀವನದಲ್ಲಿ ಅಸಾಮಾನ್ಯ ಸಾಧನೆ ಮಾಡುವುದರ ಬಗ್ಗೆ ಬಾಲ್ಯದಲ್ಲಿದ್ದಾಗಲೇ ಮೋದಿಯವರಿಗೆ ತಿಳಿದಿತ್ತೆ? ಮೋದಿಯವರ ಪ್ರಕಾರ, ತಮಗೆ 8 ವರ್ಷವಾಗಿದ್ದಾಗ ಮುಂದೆ ದೇಶವನ್ನಾಳುವ ಕನಸನ್ನು ಎಂದೂ ಕಂಡಿರಲಿಲ್ಲ. ಆ ಬಗ್ಗೆ ಕನಸು ಕಾಣುವುದೂ ಅಂದು ಸಾಧ್ಯವಿರಲಿಲ್ಲ. ಆದರೆ ಅಂದು 'ಬಂಬೈ' ಬಗ್ಗೆ ಬಾಲ್ಯದಲ್ಲಿಯೇ ಕನಸುಗಳು ಮೊಳಕೆಯೊಡೆದಿದ್ದವು. ಲೈಬ್ರರಿಯಲ್ಲಿ ಗಂಟೆಗಟ್ಟಲೆ ಕುಳಿತು ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಿ ತಮ್ಮ ಕುತೂಹಲವನ್ನು ತಣಿಸಿಕೊಳ್ಳುತ್ತಿದ್ದುದಾಗಿ ಅವರು ಹ್ಯೂಮನ್ಸ್ ಆಫ್ ಬಾಂಬೆಗೆ ತಿಳಿಸಿದ್ದಾರೆ.

ಹಲವಾರು ವರ್ಷಗಳಿಂದ ದೇಶದ ಧೀಮಂತ ನಾಯಕ ನರೇಂದ್ರ ಮೋದಿಯವರ ಅಗಾಧ ಪರಿಚಯ ನಮಗಾಗಿದೆ. ಅವರ ವೈಯಕ್ತಿಕ ಜೀವನದ ವಿಶಿಷ್ಟ ಕಥನವನ್ನು ಹ್ಯೂಮನ್ಸ್ ಆಫ್ ಬಾಂಬೆ ತೆರೆದಿಟ್ಟಿದೆ. ಜೀವನದಲ್ಲಿ ಅಪಾರ ಸಂಘರ್ಷಗಳನ್ನು ಎದುರಿಸಿ, ಎಲ್ಲವನ್ನೂ ಮೆಟ್ಟಿನಿಂತು ಈ ಉನ್ನತ ಸ್ಥಿತಿಗೆ ತಲುಪಿದ್ದರೂ, ಅವರು ಇಂದಿಗೂ ಕೂಡ ತಮ್ಮ ತಾಯಿಯ ಬಗ್ಗೆ ಹಿಮಾಲಯದಷ್ಟು ಗೌರವ, ಪ್ರೀತಿ ಇಟ್ಟುಕೊಂಡಿದ್ದಾರೆ.

ಸ್ವಯಂ ಸಾಕ್ಷಾತ್ಕಾರಕ್ಕೆ ಹಿಮಾಲಯದತ್ತ ನರೇಂದ್ರ ಮೋದಿ ಪಯಣಸ್ವಯಂ ಸಾಕ್ಷಾತ್ಕಾರಕ್ಕೆ ಹಿಮಾಲಯದತ್ತ ನರೇಂದ್ರ ಮೋದಿ ಪಯಣ

English summary
The Beginning of Everything That I Am Today - PM Narendra Modi narrates his life's journey. Interview by Humans of Bombay provides an insight into Narendra Modi's life as a young boy. Modi also gives the endearing picture of his mother Heeraben, who had a 'healing touch'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X