ST Somashekar profile; ಸಚಿವ ಎಸ್. ಟಿ. ಸೋಮಶೇಖರ್ ಪರಿಚಯ
ಬೆಂಗಳೂರಿನ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಪರಿಚಯ. ಮೊದಲು ಕಾಂಗ್ರೆಸ್‌ನಲ್ಲಿದ್ದ ಸೋಮಶೇಖರ್ ಬಳಿಕ ಬಿಜೆಪಿಗೆ ಬಂದರು.
ಬೆಂಗಳೂರು ನಗರದ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಟಿ. ಸೋಮಶೇಖರ್. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ, ಕ್ಷೇತ್ರದಲ್ಲಿ ಅಪಾರ ಹಿಡಿತ ಹೊಂದಿರುವ ಜನನಾಯಕ. ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಹಕಾರ ಸಚಿವರು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು.
ಒಂದು ಉಪ ಚುನಾವಣೆ ಸೇರಿದಂತೆ ಮೂರು ಬಾರಿ ಯಶವಂತಪುರ ಕ್ಷೇತ್ರದಿಂದ ಎಸ್. ಟಿ. ಸೋಮಶೇಖರ್ ಆಯ್ಕೆಯಾಗಿದ್ದಾರೆ. ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾದರು. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಸಚಿವರಾಗಿ ಮುಂದುವರೆದರು. ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದ ಎಸ್. ಟಿ. ಸೋಮಶೇಖರ್ 2019ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದರು. ಬಳಿಕ ಉಪ ಚುನಾವಣೆಯಲ್ಲಿ ಗೆದ್ದು ಸಚಿವ ಸ್ಥಾನ ಪಡೆದರು.

ಸಹಕಾರ ಸಚಿವರಾಗಿದ್ದ ಎಸ್. ಟಿ. ಸೋಮಶೇಖರ್ ಸಲ್ಲಿಸಿದ್ದ ವರದಿಗೆ ಕೇಂದ್ರ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಸಹಕಾರ ಸಚಿವಾಲಯ ಆರಂಭಿಸುವ ಮೊದಲು ರಾಜ್ಯದಲ್ಲಿನ ಸಹಕಾರ ಕ್ಷೇತ್ರದ ಕುರಿತು ಎಸ್. ಟಿ. ಸೋಮಶೇಖರ್ ಅಮಿತ್ ಶಾಗೆ ವರದಿ ಸಲ್ಲಿಕೆ ಮಾಡಿದ್ದರು. ಈ ವರದಿ ನೋಡಿ ಪತ್ರ ಬರೆಯುವ ಮೂಲಕ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಸಚಿವರ ಪರಿಚಯ; 65 ವರ್ಷ ವಯಸ್ಸಿನ ಎಸ್. ಟಿ. ಸೋಮಶೇಖರ್ ಬೆಂಗಳೂರಿನ ಹೆಸರಘಟ್ಟದಲ್ಲಿ ಜನಿಸಿದರು. ತಂದೆ ಎ. ತಿಮ್ಮೇಗೌಡ. ಬಿಎಸ್‌ಸಿ, ಎಲ್ಎಲ್‌ಬಿ ಪದವೀಧರರು. ಪತ್ನಿ ರಾಧಾ. ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳು. 2008ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಎಸ್. ಟಿ. ಸೋಮಶೇಖರ್ 2013ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ರಾಜಕೀಯಕ್ಕೆ ಬರುವ ಮೊದಲು ಕರ್ನಾಟಕ ರಾಜ್ಯ ಸಹಕಾರಿ ವಸತಿ ಮಹಾ ಮಂಡಲ ನಿ. ಬಸವನಗುಡಿ, ಬೆಂಗಳೂರು ಅಧ್ಯಕ್ಷರಾಗಿದ್ದರು. ಅಮೆರಿಕ, ಕೆನಡಾ, ಸಿಂಗಾಪುರ, ಯುರೋಪ್ ಮುಂತಾದ ದೇಶಗಳಿಗೆ ಭೇಟಿ ನೀಡಿದ್ದಾರೆ. ಪುಸ್ತಕ ಓದುವುದು, ಸಮಾಜ ಸೇವೆ ಎಸ್. ಟಿ. ಸೋಮಶೇಖರ್ ಅವರ ಹ್ಯವಾಸವಾಗಿದೆ. ಈ ಬಾರಿಯ ಚುನಾವಣೆಯಲ್ಲಿಯೂ ಸಹ ಯಶವಂತಪುರಲ್ಲಿ ಎಸ್. ಟಿ. ಸೋಮಶೇಖರ್ ಬಿಜೆಪಿ ಅಭ್ಯರ್ಥಿಯಾಗುವುದು ಖಚಿತವಾಗಿದೆ.
ಪಕ್ಷಕ್ಕಿಂತ ವ್ಯಕ್ತಿಯ ಹಿಡಿತ ಹೆಚ್ಚು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿದ್ದ ಎಸ್. ಟಿ. ಸೋಮಶೇಖರ್ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದರು. 2008ಕ್ಕೂ ಮುನ್ನ ಯಶವಂತಪುರ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿತ್ತು. ಕ್ಷೇತ್ರ ಮರುವಿಂಗಡನೆ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಎಸ್. ಟಿ. ಸೋಮಶೇಖರ ಕಾಂಗ್ರೆಸ್‌ನಿಂದ ಯಶವಂತಪುರದಲ್ಲಿ ಕಣಕ್ಕಿಳಿದಿದ್ದರು. 56,561 ಮತಗಳನ್ನು ಪಡೆದು ಬಿಜೆಪಿಯ ಶೋಭಾ ಕರಂದ್ಲಾಜೆ ವಿರುದ್ಧ ಸೋಲು ಕಂಡರು.
ಬಳಿಕ ಕಾಂಗ್ರೆಸ್ ಅಭ್ಯರ್ಥಿಯಾಗಿ 2013ರ ಚುನಾವಣೆಯಲ್ಲಿ ಮತ್ತೆ ಕಣಕ್ಕಿಳಿದರು. 1,20,380 ಮತಗಳನ್ನು ಪಡೆದು ಮೊದಲ ಬಾರಿಗೆ ಶಾಸಕರಾದರು. 2018ರಲ್ಲಿ ಕಾಂಗ್ರೆಸ್ ಮತ್ತೆ ಟಿಕೆಟ್ ನೀಡಿತು. 1,15,273 ಮತಗಳನ್ನು ಪಡೆದು ಗೆಲುವು ಕಂಡರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ, ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು.
ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಎಚ್. ಡಿ. ಕುಮಾರಸ್ವಾಮಿ ಸರ್ಕಾರ ಕಡೆವಿದ ನಾಯಕರಲ್ಲಿ ಎಸ್. ಟಿ. ಸೋಮಶೇಖರ್ ಸಹ ಒಬ್ಬರು. ಬಳಿಕ ಬಿಜೆಪಿ ಸೇರಿದ ಅವರು, 2019ರ ಆಗಸ್ಟ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು 1,44,722 ಮತಗಳನ್ನು ಪಡೆದು ಜಯಗಳಿಸಿದರು.
ಬಳಿಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ಸೇರಿದರು. ಸಹಹಾರ ಖಾತೆಯ ಹೊಣೆ ನೀಡಲಾಯಿತು. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಸಚಿವರಾಗಿ ಮುಂದುವರೆದರು. ಯಶವಂತಪುರ ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸಿನ ಮೂಲಕ ಗೆದ್ದು ಬರುವ ನಾಯಕ ಎಸ್. ಟಿ. ಸೋಮಶೇಖರ್. ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯ ಎನ್ನುವ ಮಟ್ಟಿಗೆ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದಾರೆ.
ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಮಾಹಿತಿ ಪ್ರಕಾರ ಎಸ್. ಟಿ. ಸೋಮಶೇಖರ್ ಆಸ್ತಿ 12.92 ಕೋಟಿ ರೂ.ಗಳು. ಸುಮಾರು 1.24 ಕೋಟಿ ರೂ. ಸಾಲವನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿದ್ದು https://www.facebook.com/STSomashekarGowdaMLA ಎಂಬ ಫೇಸ್‌ಬಕ್ ಪುಟದಲ್ಲಿ ಪೋಸ್ಟ್‌ಗಳನ್ನು ಹಾಕುತ್ತಾರೆ.












Click it and Unblock the Notifications