ಅಂದು ಶಿಕ್ಷಣ ಸಚಿವ, ಈಗ ಸದನದ 'ಹೆಡ್ ಮಾಸ್ಟರ್'; ಕಾಗೇರಿ ಪರಿಚಯ
ಬೆಂಗಳೂರು, ಜುಲೈ 31 : ಕರ್ನಾಟಕ ವಿಧಾನಸಭೆ ಸ್ಪೀಕರ್ ಆಗಿ ಬಿಜೆಪಿ ಹಿರಿಯ ನಾಯಕ, ಮೃದು ಮಾತಿನ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಿರಸಿಯ ನಾಯಕನಿಗೆ ಸದನವನ್ನು ಮುನ್ನೆಡೆಸುವ ಮಹತ್ವದ ಜವಾಬ್ದಾರಿ ಹೆಗಲೇರಿದೆ.
ಬುಧವಾರ 58 ವರ್ಷದ ವಿಶ್ವೇಶ್ವರ ಹೆಗಡೆ ಕಾಗೇರಿ ಕರ್ನಾಟಕ ವಿಧಾನಸಭೆ ಸ್ಪೀಕರ್ ಆಗಿ ಆಯ್ಕೆಯಾದರು. ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಕಾಗೇರಿ ಈ ಬಾರಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸ್ಪೀಕರ್ ಸ್ಥಾನ ಅಲಂಕರಿಸಿದರು.
"ನಾನು ಇಂತಹ ಹುದ್ದೆಗೆ ಬಂದಿರುವುದೇ ನಮ್ಮ ಸುದೈವವಾಗಿದೆ. ವಿದ್ಯಾರ್ಥಿ ಚಳವಳಿಗಳ ಮೂಲಕ ರಾಜಕೀಯಕ್ಕೆ ಬಂದೆ. 1990ರ ಸಂದರ್ಭದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾದೆ. ಬಳಿಕ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದೇನೆ" ಎಂದು ಕಾಗೇರಿ ಹೇಳಿದರು.

ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿಯ ಕಟ್ಟಾಳು. ಶಿರಸಿ ಭಾಗದ ಪ್ರಭಾವಿ ನಾಯಕ. ಅಂಕೋಲಾ ಕ್ಷೇತ್ರದಿಂದ ಮೂರು ಬಾರಿ, ಶಿರಸಿ ಕ್ಷೇತ್ರದಿಂದ ಮೂರು ಬಾರಿ ಒಟ್ಟು 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೃದು ಮಾತಿನ, ಸೌಮ್ಯಾ ಸ್ವಭಾವದ ಕಾಗೇರಿ ಸದನವನ್ನು ಹೇಗೆ ನಡೆಸಲಿದ್ದಾರೆ? ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಸಂಕ್ಷಿಪ್ತ ಪರಿಚಯ : ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬರೂರು ಗ್ರಾಮದವರು. ಜುಲೈ 10, 1961 ಜನ್ಮ ದಿನಾಂಕ. ತಂದೆ ಅನಂತ ಹೆಗಡೆ, ತಾಯಿ ಸರ್ವೇಶ್ವರಿ ಹೆಗಡೆ. ಪತ್ನಿ ಭಾರತಿ, ಮೂವರು ಹೆಣ್ಣು ಮಕ್ಕಳು.
ಬಿ.ಕಾಂ ಪದವಿ ಪಡೆದಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಕೃಷಿಕರಾಗಿದ್ದವರು. ಬಳಿಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. 2008ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. ಶಿರಸಿಯ ಸ್ವರ್ಣವಲ್ಲಿ ಮಠದ ಉಪಾಧ್ಯಕ್ಷರಾಗಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು ಕಾಗೇರಿ ಅವರ ಹವ್ಯಾಸ. ಕ್ರಿಕೆಟ್ ಮೆಚ್ಚಿನ ಕ್ರೀಡೆ.
ಇದು ಕರ್ನಾಟಕದ ನೂತನ ಸ್ಪೀಕರ್ ಕಾಗೇರಿ ಅವರ ಸಂಕ್ಷಿಪ್ತ ಪರಿಚಯ. ರಾಷ್ಟ್ರದ ಗಮನ ಸೆಳೆದಿರುವ ಹುದ್ದೆಯನ್ನು ಅಲಂಕರಿಸಿರುವ ಅವರು, ಪ್ರಬಲ ವಿರೋಧ ಪಕ್ಷವನ್ನು ಹಾಗೂ ಅಲ್ಪಮತದ ಸರಕಾರದಲ್ಲಿ ಕಲಾಪಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದು ಕುತೂಹಲದ ಅಂಶವಾಗಿದೆ.












Click it and Unblock the Notifications