ಮನೆಯಲ್ಲಿ ಸುಲಭವಾಗಿ ಮಾಡಿ ಬಟಾಣಿ ರೈಸ್ ಬಾತ್
ಪ್ರತಿದಿನ ಊಟ, ತಿಂಡಿಗೆ ಏನು ಮಾಡುವುದು? ಎಂದು ಚಿಂತೆ ಮಾಡುತ್ತಿದ್ದೀರಾ?. ಬ್ಯಾಚುಲರ್ ಆಗಿರಲಿ, ಮನೆಯಲ್ಲಿ ಹಲವು ಜನರು ಇರಲಿ. ಬಟಾಣಿ ಇದ್ದರೆ ಸುಲಭವಾಗಿ ಬಟಾಣಿ ರೈಸ್ ಬಾತ್ ಮಾಡಿ. ಬೆಳಗ್ಗೆ ತಿಂಡಿ ಇರಲಿ, ಮಧ್ಯಾಹ್ನದ ಊಟದ ಟೈಂ ಇರಲಿ ಅಥವ ರಾತ್ರಿ ಬೇಗನೆ ಮಾಡಬಹುದು ಬಟಾಣಿ ರೈಸ್, ಮಸಾಲೆಯುಕ್ತ ಈ ರೈಸ್ ಬಾತ್ ಬಿಸಿ ಬಿಸಿ ಇದ್ದಾಗ ಸವಿದರೆ ಇನ್ನಷ್ಟು ರುಚಿಕರವಾಗಿರುತ್ತದೆ. ಸುಲಭವಾಗಿ ಕೆಲವೇ ನಿಮಿಷಗಳಲ್ಲಿ ಇದನ್ನು ಮಾಡಬಹುದು.
ಉಪಹಾರಕ್ಕೆ ಹಲವರು ರೈಸ್ ಬಾತ್ ಮಾಡುತ್ತಾರೆ. ಪಲಾವ್, ಬಿಸಿಬೇಳೆ ಬಾತ್, ಪೊಂಗಲ್ ಈ ಥರದ ಖಾದ್ಯ ಮಾಡಿ ಬೇಸರಗೊಂಡಿದ್ದರೆ, ಎಲ್ಲರೂ ಇಷ್ಟಪಡುವ ಮನೆ ಮಂದಿಗೆಲ್ಲಾ ರುಚಿಯಾಗಿ ಬಟಾಣಿ ರೈಸ್ ಮಾಡಿ. ಕೆಲವೇ ಹೊತ್ತಿನಲ್ಲಿ ಕಡಿಮೆ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಬಟಾಣಿ ರೈಸ್ ಬಾತ್ ಮಾಡಬಹುದು. ಜೊತೆಗೆ ಈರುಳ್ಳಿ, ಟೊಮೆಟೋ ಬಳಕೆ ಮಾಡಿಕೊಂಡು ಮೊಸರು ಬಜ್ಜಿ ಮಾಡಿಕೊಂಡು ಬೇಕಾದರೂ ಸವಿಯಬಹುದು.

ಬಟಾಣಿ ರೈಸ್ ಬಾತ್ ಮಾಡುವುದು ಹೇಗೆ?: ಮೊದಲು ಬಟಾಣಿ ರೈಸ್ ಬಾತ್ ಮಾಡಲು ಮಸಾಲೆ ತಯಾರಿಸೋಣ. ಖಾರಕ್ಕೆ ತಕ್ಕಂತೆ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ದನಿಯಾ, ಸೋಂಪುಕಾಳು, ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ, ಬೆಳ್ಳುಳ್ಳಿ, ಹಸಿ ಶುಂಠಿ ಹಾಕಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ತೀರಾ ನುಣ್ಣಗೆ ಆಗದಂತೆ ರುಬ್ಬಿಕೊಂಡರೆ ರೈಸ್ ಬಾತ್ ಸವಿಯೂ ಹೆಚ್ಚಿರುತ್ತದೆ.
ಕುಕ್ಕರ್‌ಗೆ ಎಣ್ಣೆ ಹಾಕಿಕೊಳ್ಳಿ (ತುಪ್ಪವನ್ನು ಬಳಕೆ ಮಾಡಬಹುದು). ಲವಂಗ, ಚಕ್ಕೆ, ಏಲಕ್ಕಿ ಪರಿಮಳ ಬರುವ ತನಕ ಹುರಿದುಕೊಳ್ಳಿ. ಬಳಿಕ ಈರುಳ್ಳಿ ಹಾಕಿಕೊಂಡು ಕಂದು ಬಣ್ಣ ಬರುವ ತನಕ ಹುರಿಯಿರಿ. ಬಳಿಕ ಟೊಮೆಟೋ, ಕರಿಬೇವಿನ ಸೊಪ್ಪು, ಅರಿಶಿನ ಪುಡಿ ಹಾಕಿಕೊಂಡು ಹುರಿಯಿರಿ.
ಬಳಿಕ ಒಂದೂವರೆ ಅಥವ ಎರಡು ಕಪ್ ಬಟಾಣಿ ಹಾಕಿಕೊಂಡು ಬಳಿಕ ರುಬ್ಬಿಕೊಂಡ ಮಸಾಲೆ ಹಾಕಿ ಅದರ ವಾಸನೆ ಹೋಗುವ ತನಕ ಹುರಿದುಕೊಳ್ಳಿ. ಅಗತ್ಯ ಇರುವಷ್ಟು ಅಕ್ಕಿಯನ್ನು ತೊಳೆದು ಹಾಕಿಕೊಳ್ಳಿ. ಅಕ್ಕಿಗೆ ಅಗತ್ಯವಾದಷ್ಟು ನೀರು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಎರಡು ಅಥವ ಮೂರು ವಿಶಲ್ ಕೂಗಿಸಿ. ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಸಹ ಸೇರಿಸಿಕೊಳ್ಳಬಹುದು.
ತಣ್ಣಗಾದ ಬಳಿಕ ಒಮ್ಮೆ ಇನ್ನೊಮ್ಮೆ ಚೆನ್ನಾಗಿ ಬೆರೆಸಿ. ರುಚಿಯಾದ ಬಟಾಣಿ ರೈಸ್ ಸಿದ್ಧವಾಗಿದೆ. ಮೊಸರು ಜೊತೆ, ಮೊಸರು ಬಜ್ಜಿಯ ಜೊತೆ ಅಥವ ಹಾಗೆಯೇ ಇದನ್ನು ಸವಿಯಬಹುದು. ಬೆಳಗ್ಗೆಯ ಉಪಹಾರಕ್ಕೆ ಮಾತ್ರವಲ್ಲ ಅನ್ನ, ಸಾಂಬಾರು ತಿಂದು ಬೇಜಾರಾಗಿದ್ದರೆ ಮಧ್ಯಾಹ್ನಕ್ಕೂ ಇದನ್ನು ಮಾಡಿಕೊಳ್ಳಬಹುದು.
ಬೆಳಗಿನ ಉಪಹಾರಕ್ಕೆ ಪೌಷ್ಠಿಕಾಂಶವುಳ್ಳ ಆಹಾರ ಸೇವಿಸಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದ್ದರಿಂದ ಬಟಾಣಿ, ವಿವಿಧ ಮಸಾಲೆ ಪದಾರ್ಥಗಳು ಸೇರಿರುವ ಬಟಾಣಿ ರೈಸ್ ಮಾಡಿ ಸವಿಯಿರಿ. ಒಮ್ಮೆ ಮನೆಯಲ್ಲಿ ಟ್ರೈ ಮಾಡಿ, ಬಳಿಕ ರುಚಿ ಹೇಗಿದೆ? ಎಂದು ಹೇಳಿ.












Click it and Unblock the Notifications