Shivamogga City Constituency ; ಕೆ. ಎಸ್. ಈಶ್ವರಪ್ಪ ಕೈ ತಪ್ಪುತ್ತಾ ಟಿಕೆಟ್?
ಕರ್ನಾಟಕ ಬಿಜೆಪಿಗೆ ಶಿವಮೊಗ್ಗ ಆಗ ಶಕ್ತಿ ಕೇಂದ್ರವಾಗಿತ್ತು. ಈ ಕೇಂದ್ರದ ಪ್ರಮಖ ಕ್ಷೇತ್ರ ಶಿವಮೊಗ್ಗ ನಗರ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮಾತ್ರ ಗೆದ್ದುಕೊಂಡು ಬರುತ್ತಿರುವ ಕ್ಷೇತ್ರ ಇದಾಗಿದೆ. ಹಾಲಿ ಶಾಸಕರು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ.
ಸ್ಮಾರ್ಟ್ ಸಿಟಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ಕ್ಷೇತ್ರದಲ್ಲಿ ನಗರಗಳ ಪ್ರಮುಖ ಸಮಸ್ಯೆಗಳಾದ ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಮುಂತಾದವುಗಳನ್ನು ಕಾಣಬಹುದಾಗಿದೆ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಈಶ್ವರಪ್ಪ ಹೇಗೆ ಕೆಲಸ ಮಾಡಿದ್ದಾರೆ? ಎಂದು ಕ್ಷೇತ್ರದ ಜನರೇ ತೀರ್ಮಾನ ಮಾಡಬೇಕು.
ಇದೇ ಕ್ಷೇತ್ರದಲ್ಲಿ 1999 ಮತ್ತು 2013ರಲ್ಲಿ ಕೆ. ಎಸ್. ಈಶ್ವರಪ್ಪ ಸೋಲು ಕಂಡಿದ್ದಾರೆ. 2013ರಲ್ಲಿ ಕೆಜೆಪಿ, ಬಿಜೆಪಿ ಮತ ವಿಭಜನೆಗೊಂಡ ಕಾರಣ ಈಶ್ವರಪ್ಪ ಸೋತರು, ಮೂರನೇ ಸ್ಥಾನಕ್ಕೆ ಇಳಿದರು. ಕಾಂಗ್ರೆಸ್‌ನ ಕೆ. ಬಿ. ಪ್ರಸನ್ನ ಕುಮಾರ್ ಗೆದ್ದರು. 2018ರಲ್ಲಿ ಕೆ. ಎಸ್. ಈಶ್ವರಪ್ಪ 46, 107 ಮತಗಳ ಅಂತರದಲ್ಲಿ ಗೆದ್ದು ಬಂದರು. ಸಚಿವರಾದರು, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದರು.
ಬಿಜೆಪಿಯ ಅಲಿಖಿತ 75 ವಯೋಮಿತಿಯ ನಿಯಮದ ಅನ್ವಯ ಕೆ. ಎಸ್. ಈಶ್ವರಪ್ಪಗೆ ಈ ಬಾರಿ ಟಿಕೆಟ್ ಕೈ ತಪ್ಪಲಿದೆಯೇ? ಕಾದು ನೋಡಬೇಕು. 75ರ ಸನಿಹದಲ್ಲಿರುವ ಈಶ್ವರಪ್ಪ ಚುನಾವಣೆಯಿಂದ ದೂರ ಉಳಿದು ಪುತ್ರ ಕೆ. ಈ. ಕಾಂತೇಶ್‌ಗೆ ಟಿಕೆಟ್ ಕೊಡಿಸಲಿದ್ದಾರೆ ಎಂಬ ಸುದ್ದಿ ಇದೆ. ಮತ್ತೊಂದು ಕಡೆ ಈಶ್ವರಪ್ಪ ಕಣಕ್ಕಿಳಿಯಲಿಲ್ಲ ಎಂದರೆ ಬಿಜೆಪಿ ಟಿಕೆಟ್‌ಗಾಗಿ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ.

ಈಶ್ವರಪ್ಪಗೆ ಟಿಕೆಟ್ ಇಲ್ಲ?
75 ವರ್ಷ ವಯಸ್ಸು, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಇವೆಲ್ಲದರಿಂದ ಕೆ. ಎಸ್. ಈಶ್ವರಪ್ಪಗೆ ಟಿಕೆಟ್ ಕೈ ತಪ್ಪಲಿದೆ ಎಂಬುದು ಒಂದು ವಾದ. ಆದರೆ ಈಶ್ವರಪ್ಪ ಪುತ್ರ ಕೆ. ಈ. ಕಾಂತೇಶ್‌ಗೆ ಸಹ ಅಷ್ಟು ಸುಲಭವಾಗಿ ಟಿಕೆಟ್ ಸಿಗುವುದಿಲ್ಲ ಎಂಬ ಮಾತು ಸಹ ಇದೆ.
ಈಶ್ವರಪ್ಪ ಸ್ಪರ್ಧೆ ಮಾಡುವುದಿಲ್ಲ ಎಂದರೆ ಶಿವಮೊಗ್ಗ ನಗರ ಬಿಜೆಪಿ ಟಿಕೆಟ್‌ಗೆ ಡಜನ್‌ಗೂ ಅಧಿಕ ಆಕಾಂಕ್ಷಿಗಳಿದ್ದಾರೆ. ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಮಾಜಿ ಎಂಎಲ್‌ಸಿ ಎಂ. ಬಿ. ಭಾನುಪ್ರಕಾಶ್, ಸೂಡಾ ಮಾಜಿ ಅಧ್ಯಕ್ಷ ಎಸ್. ಎಸ್. ಜ್ಯೋತಿ ಪ್ರಕಾಶ್, ಗಿರೀಶ್ ಪಟೇಲ್, ದತ್ತಾತ್ರಿ, ಚನ್ನಬಸಪ್ಪ ಸೇರಿದಂತೆ ಹಲವು ಆಕ್ಷಾಂಕ್ಷಿಗಳಿದ್ದಾರೆ. ಹೊಸ ಮುಖಕ್ಕೆ ಆದ್ಯತೆ ದೊರೆಯಲಿದೆ ಎಂಬ ಸುದ್ದಿಯೂ ಇದೆ.

ಆಯನೂರು ಮಂಜುನಾಥ್ ಪ್ರಬಲ ಆಕಾಂಕ್ಷಿ
ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್‌ಗೆ ಆಯನೂರು ಮಂಜುನಾಥ್ ಪ್ರಬಲ ಆಕಾಂಕ್ಷಿ. ಹಾಲಿ ವಿಧಾನ ಪರಿಷತ್ ಸದಸ್ಯರು, ವಿಧಾನಸಭೆ, ವಿಧಾನ ಪರಿಷತ್, ರಾಜ್ಯಸಭೆ ಮತ್ತು ಲೋಕಸಭಾ ಸದಸ್ಯರಾಗಿದ್ದ ಅವರು ಮತ್ತೊಮ್ಮೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಲು ಬಯಸಿದ್ದಾರೆ.
ಹೊಸನಗರ ಕ್ಷೇತ್ರದಿಂದ ಶಾಸಕರಾಗಿದ್ದ ಅವರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸಲಾಯಿತು. ಲೋಕಸಭೆ ಚುನಾವಣೆ ಗೆದ್ದರೂ 13 ತಿಂಗಳಿನಲ್ಲಿ ವಾಜಪೇಯಿ ಸರ್ಕಾರ ಬಿದ್ದು ಹೋಗಿ ಅಲ್ಲಿಯೂ ಆಯನೂರು ಪೂರ್ಣಾವಧಿ ಪೂರೈಸಲಿಲ್ಲ.
ಯಡಿಯೂರಪ್ಪ ಆಪ್ತರಾದ ರುದ್ರೇಗೌಡರು 2013ರಲ್ಲಿ ಕೆಜೆಪಿಯಿಂದ ಶಿವಮೊಗ್ಗ ನಗರದಲ್ಲಿ ಕಣಕ್ಕಿಳಿದು ಈಶ್ವರಪ್ಪ ಸೋಲಿಸಿದ್ದರು. 278 ಮತಗಳ ಅಂತರದಿಂದ ಕೆ. ಬಿ. ಪ್ರಸನ್ನ ಕುಮಾರ್ ವಿರುದ್ಧ ಸೋಲು ಕಂಡಿದ್ದರು. ಈ ಬಾರಿ ಅವರು ಶಿವಮೊಗ್ಗ ಟಿಕೆಟ್ ಆಕಾಂಕ್ಷಿ.

ಕಾಂಗ್ರೆಸ್‌ನಲ್ಲಿ 11ಕ್ಕೂ ಹೆಚ್ಚು ಆಕಾಂಕ್ಷಿಗಳು
ಶಿವಮೊಗ್ಗ ನಗರದ ಕಾಂಗ್ರೆಸ್ ಟಿಕೆಟ್‌ಗೆ ಮಾಜಿ ಶಾಸಕ ಕೆ. ಬಿ. ಪ್ರಸನ್ನ ಕುಮಾರ್ ಸೇರಿದಂತೆ 11ಕ್ಕೂ ಅಧಿಕ ಆಕಾಂಕ್ಷಿಗಳಿದ್ದಾರೆ. ವೈ. ಎಚ್. ನಾಗರಾಜ್ ತಾವು ಟಿಕೆಟ್ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿದ್ದಾರೆ. ಉಳಿದಂತೆ ಪಕ್ಷದ ಜಿಲ್ಲಾಧ್ಯಕ್ಷ ಎಚ್. ಎಸ್. ಸುಂದರೇಶ್, ಪಾಲಿಕೆ ಸದಸ್ಯ ಎಚ್. ಸಿ. ಯೋಗೀಶ್ ಸೇರಿದಂತೆ ಹಲವರ ಹೆಸರು ಇದೆ. ಸಿದ್ದರಾಮಯ್ಯ ಬಣ, ಡಿ. ಕೆ. ಶಿವಕುಮಾರ್ ಬಣ ಎಂಬ ಚರ್ಚೆಯೂ ಜೋರಾಗಿದೆ. ಹಾಲಿ ಬಿಜೆಪಿ ವಶದಲ್ಲಿರುವ ಕ್ಷೇತ್ರ ಮತ್ತೆ ಕಾಂಗ್ರೆಸ್ ಕೈ ಸೇರಲಿದೆಯೇ? ಕಾದು ನೋಡಬೇಕಿದೆ.
ಕಾಂಗ್ರೆಸ್ ಕ್ಷೇತ್ರದಲ್ಲಿ 2008ರಲ್ಲಿ 26,563, 2013ರಲ್ಲಿ 39,355 ಮತ್ತು 2018ರ ಚುನಾವಣೆಯಲ್ಲಿ 57,920 ಮತಗಳನ್ನು ಪಡೆದಿದೆ.
ಜೆಡಿಎಸ್‌ನಿಂದ ಯಾರಿಗೆ ಟಿಕೆಟ್
ಶಿವಮೊಗ್ಗ ನಗರದಲ್ಲಿ ಯಾವಾಗಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇರುತ್ತದೆ. ಜೆಡಿಎಸ್ ಪಕ್ಷದಿಂದ ಜಿಲ್ಲಾ ಅಧ್ಯಕ್ಷರಾದ ಎಂ. ಶ್ರೀಕಾಂತ್ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಮಧು ಬಂಗಾರಪ್ಪ, ಆರ್. ಎಂ. ಮಂಜುನಾಥ ಗೌಡ ಕಾಂಗ್ರೆಸ್ ಸೇರಿದ ಬಳಿಕ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ಕುಗ್ಗಿದೆ. ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಪರಿಸ್ಥಿತಿ ಏನಾಗಲಿದೆ? ಎಂದು ಕಾದು ನೋಡಬೇಕಿದೆ.
ಆಮ್ ಆದ್ಮಿ ಪಕ್ಷ ಸಹ ಶಿವಮೊಗ್ಗದಲ್ಲಿ ಅಭ್ಯರ್ಥಿ ಕಣಕ್ಕಿಳಿಸಲು ಬಯಸಿದೆ. ಇದಕ್ಕಾಗಿ ಸಿದ್ಧತೆಗಳನ್ನು ಸಹ ನಡೆಸುತ್ತಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಪೈಪೋಟಿ ನಡುವೆ ಬೇರೆ ಪಕ್ಷದ ಪ್ರಭಾವ ಅಷ್ಟಾಗಿ ಕಾಣಿಸದು.

ಮತದಾರರ ವಿವರಗಳು
ಶಿವಮೊಗ್ಗ ನಗರ ಕ್ಷೇತ್ರದ ಒಟ್ಟು ಮತದಾರರು 2,63,985. ಪುರುಷರು 1,29,717 ಮತ್ತು ಮಹಿಳೆಯರು 1,34,268 ಆಗಿದೆ.
ಹಿಂದಿನ ಚುನಾವಣೆ ಫಲಿತಾಂಶಗಳು
* 2004 ಕೆ. ಎಸ್. ಈಶ್ವರಪ್ಪ ಗೆಲುವು-69,015 ಮತಗಳು
* 2008 ಕೆ. ಎಸ್. ಈಶ್ವರಪ್ಪ ಗೆಲುವು- 58,982 ಮತಗಳು
* 2013 ಕೆ. ಬಿ. ಪ್ರಸನ್ನ ಕುಮಾರ್ (ಕಾಂಗ್ರೆಸ್) ಗೆಲುವು - 39,355 ಮತಗಳು
* 2018 ಕೆ. ಎಸ್. ಈಶ್ವರಪ್ಪ ಗೆಲುವು - 104027 ಮತಗಳು.












Click it and Unblock the Notifications