Video: 'ಗುಟ್ಕಾ ತಿಂದು ಶಾರುಖ್ ಖಾನೇ ಸತ್ತಿಲ್ಲ, ನಾವು ಹೆಂಗೆ ಸಾಯ್ತೀವಿ': ಬಾಲಕನ ಶಾಕಿಂಗ್ ಹೇಳಿಕೆ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಅದರಲ್ಲೂ ಮಕ್ಕಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ಆಗಾಗ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಕೆಲವೊಂದು ಕ್ಯೂಟ್, ಗುಡ್ ಎನಿಸಿದರೆ, ಇನ್ನೂ ಕೆಲವು ವಿಡಿಯೋಗಳು ನೋಡುಗರಲ್ಲಿ ಆತಂಕ ಹೆಚ್ಚಿಸುತ್ತದೆ. ಅದರಲ್ಲೂ ಒಂದು ಮಗುವಿನ ತಂದೆ-ತಾಯಿಯಾದವರು ನೋಡಿದರೆ ಈಗಿನ ಮಕ್ಕಳ ಮನಸ್ಥಿತಿ ಬಗ್ಗೆ ನಿಜಕ್ಕೂ ಆತಂಕಗೊಳ್ಳುತ್ತಾರೆ.
ಒಂದು ಮಗು ಬೆಳೆಯುವ ವಾತಾವರಣ ಮಗುವಿನ ವರ್ತನೆ, ಮನಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ತಂದೆ-ತಾಯಿ ಮನೆಯ ವಾತಾವರಣ ಮಾತ್ರವಲ್ಲ..ಕಣ್ಣೆದುರಿಗಿನ ಮೊಬೈಲ್, ಟಿವಿ ಹಾಗೂ ಅವುಗಳಲ್ಲಿ ಬರುವ ವಿಡಿಯೋಗಳು ಮಕ್ಕಳ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಮುಖ್ಯವಾಗಿ ಜಾಹಿರಾತು.

ಹಣಕ್ಕಾಗಿ ಮಾಡುವ ಗುಟ್ಕಾ, ಜೂಜಿನ ಜಾಹೀರಾತುಗಳು ಪುಟ್ಟ ಮಕ್ಕಳು ಮತ್ತು ಯುವ ಜನತೆಯ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತವೆ ಎನ್ನುವುದನ್ನು ತೋರಿಸುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಪ್ರತಿಯೊಬ್ಬರು ಕೂಡ ಮಕ್ಕಳ ಮನಸ್ಥಿತಿಯ ಬಗ್ಗೆ ಆತಂಕಕ್ಕೊಳಗಾಗಿದ್ದಾರೆ.
ಸತ್ಯ -ನ್ಯಾಯ-ಪ್ರೀತಿ ಎನ್ನುವ ಫೇಸ್‌ಬುಕ್ ಖಾತೆಯಲ್ಲಿ ಮೂರು ಅಪ್ರಾಪ್ತ ಬಾಲಕರ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಬಾಲಕ ಗುಟ್ಕಾ ತಿನ್ನುತ್ತಿರುವುದನ್ನು ಕಾಣಬಹುದು. ಮಕ್ಕಳ ಈ ದುರಭ್ಯಾಸ ಕಂಡ ವ್ಯಕ್ತಿಯೊಬ್ಬರು ಯಾಕೆ ಗುಟ್ಕಾ ತಿನ್ನುತ್ತೀರಾ. ಇದರಿಂದ ಸಾವು ಸಂಭವಿಸುತ್ತದೆ ಎಂದು ಬುದ್ಧಿವಾದ ಹೇಳಿದ್ದಾರೆ. ಆದರೆ ಆ ವ್ಯಕ್ತಿಗೆ ಬಾಲಕ ನೀಡಿದ ಉತ್ತರ ನೋಡುಗರನ್ನು ದಂಗಾಗಿಸಿದೆ.
ಗುಟ್ಕಾ ತಿಂತಿದ್ದೀಯಲ್ವಾ, ಸತ್ತು ಹೋದರೆ ಏನು ಮಾಡುತ್ತೀಯಾ ಎಂದು ವ್ಯಕ್ತಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಬಾಲಕ ಶಾರುಖ್ ಖಾನ್ ಇನ್ನೂ ಸತ್ತಿಲ್ಲ ಮತ್ತೆ ನಾವು ಹೇಗೆ ಸಾಯ್ತೀವಿ ಎಂದು ಕೇಳಿದ್ದಾನೆ. ಬಾಲಕನ ಉತ್ತರ ಕೇಳಿ ಶಾಕ್ ಆದ ವ್ಯಕ್ತಿ ಶಾರುಖ್ ಖಾನ್ ಏಕೆ ಸಾಯಬೇಕು ಎಂದು ಕೇಳಿದ್ದಾರೆ. ಇದಕ್ಕೂ ಅಚ್ಚರಿಯ ಉತ್ತರವನ್ನೇ ನೀಡಿದ ಬಾಲಕ ಅವರು ಗುಟ್ಕಾ ತಿನ್ನುತ್ತರಲ್ಲಾ. ಶಾರುಖ್ ಖಾನ್ ಗುಟ್ಕಾ ತಿನ್ನುತ್ತಾರೆ ಎಂದು ನಿಂಗೆ ಯಾರು ಹೇಳಿದ್ದು ಎಂದು ಕೇಳಿದರೆ, ಜಾಹೀರಾತಿನಲ್ಲಿ ನೋಡಿದ್ದೇನೆ, ಅವರು ಗುಟ್ಕಾ ತಿನ್ನುವುದನ್ನು ಬಾಲಕ ಉತ್ತರಿಸಿದ್ದಾನೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಸತ್ಯ -ನ್ಯಾಯ-ಪ್ರೀತಿ ಎನ್ನುವ ಫೇಸ್‌ಬುಕ್ ಖಾತೆ 'ಸಿನಿಮಾ ತಾರೆಯರು, ಸೆಲೆಬ್ರಿಟಿಗಳು ಹಣಕ್ಕಾಗಿ ಮಾಡುವ ಜಾಹೀರಾತುಗಳು ಮಕ್ಕಳನ್ನು ಹೇಗೆ ಹಾಳು ಮಾಡುತ್ತವೆ ನೋಡಿ. ಕೆಟ್ಟ ವಸ್ತು, ಜೂಜಿನ ಜಾಹೀರಾತು ನೀಡುವ ತಾರೆಯರನ್ನು ತಿರಸ್ಕರಿಸಬೇಕು' ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ಹಲವರು ಕಮೆಂಟ್ ಮಾಡಿದ್ದು, 'ಈ ಗುಟ್ಕಾ ತಿಂದು ಏನಾದರೂ ಮೃತ ಪಟ್ಟರೆ ಆಯಾ ಜಾಹಿರಾತು ಕಂಪನಿ ಮತ್ತು ಜಾಹಿರಾತು ನೀಡುವ ಸೆಲೆಬ್ರಿಟಿಗಳು ಪರಿಹಾರ ಕೊಡಬೇಕೆಂದು ಕಾನೂನು ಬಂದರೆ ಸರಿ ಹೋಗುತ್ತದೆ' ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಮತ್ತೊಬ್ಬರು 'ಸೆಲೆಬ್ರಿಟಿಗಳು ನಮ್ಮ ಕನ್ನಡದ ಕಣ್ಮಣಿ ಡಾಕ್ಟರ್ ರಾಜ್ ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ರಂತವರನ್ನು ನೋಡಿ ಕಲಿಯಬೇಕು. ಇಂತಹ ಜಾಹೀರಾತು ಕೊಟ್ಟು ಯುವ ಜನತೆಯ ದಾರಿ ತಪ್ಪಿಸುತಿರುವರಿಗೆ ಧಿಕ್ಕಾರವಿರಲಿ' ಎಂದಿದ್ದಾರೆ.












Click it and Unblock the Notifications