ಮಂಡ್ಯ: ಹೆಜ್ಜಾರ್ಲೆ ಪಕ್ಷಿಗೆ ಜಿಪಿಎಸ್ ಅಳವಡಿಸಿದ ವಿಜ್ಞಾನಿಗಳು; ದೇಶದಲ್ಲೇ ಮೊದಲ ಯಶಸ್ವಿ ಪ್ರಯೋಗ
ಮಂಡ್ಯ, ಸೆಪ್ಟೆಂಬರ್ 17 : ದೇಶದಲ್ಲೇ ಮೊಟ್ಟ ಮೊದಲಬಾರಿಗೆ ಹೆಜ್ಜಾರ್ಲೆ ಪಕ್ಷಿಗೆ ಜಿಪಿಎಸ್ ಅಳವಡಿಸಲಾಗಿದೆ. ಪಕ್ಷಿಯ ಮೂಲಸ್ಥಾನ ಹಾಗೂ ಅದು ಸಂಚಾರ ಮಾರ್ಗವನ್ನು ತಿಳಿಯುವ ಉದ್ದೇಶದಿಂದ ಡೆಹರಾಡೂನ್‌ನ ವಿಜ್ಞಾನಿಗಳ ತಂಡವೊಂದು ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ಹೆಜ್ಜಾರ್ಲೆಗೆ ಜಿಪಿಎಸ್ ಅಳವಡಿಸುವಲ್ಲಿ ಯಶಸ್ವಿಯಾಗಿದ್ದು, ಆ ಮೂಲಕ ಐತಿಹಾಸಿಕ ದಿನಕ್ಕೆ ಕೊಕ್ಕರೆ ಬೆಳ್ಳೂರು ಪಕ್ಷಿಧಾಮ ಸಾಕ್ಷಿಯಾಗಿದೆ.
ಡೆಹರಾಡೂನ್‌ನ ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್‌ನಿಂದ ವಿಜ್ಞಾನಿಗಳ ತಂಡ ಕೊಕ್ಕರೆ ಬೆಳ್ಳೂರಿಗೆ ಆಗಮಿಸಿದ್ದು ಸ್ಪಾಟ್ ಬಿಲ್ಲಿಡ್ ಪೆಲಿಕಾನ್ ಹಕ್ಕಿಗೆ ಟ್ರ್ಯಾಕರ್ ಅಳವಡಿಸಿದೆ. ಯೂರೋಪ್‌ನ ಗ್ರೀಕ್ ದೇಶದಿಂದ ತಂದಿರುವ ವಿಶೇಷ ಜಿಪಿಎಸ್ ಟ್ರ್ಯಾಕರ್ ಮೂಲಕ ಪಕ್ಷಿಯ ಪ್ರವಾಸ ಮಾರ್ಗವನ್ನು ಕಂಡುಹಿಡಿಯಲು ಸಹಕಾರಿಯಾಗಲಿದೆ.
ಹೆಜ್ಜಾರ್ಲೆಗಳು ಯಾವ ಯಾವ ದೇಶದಲ್ಲಿ ಸಂಚರಿಸುತ್ತವೆ. ಎಲ್ಲಿ ತಂಗುತ್ತವೆ. ಅದರ ಚಟುವಟಿಕೆಗಳ ಇಂಚಿಂಚು ಮಾಹಿತಿಯನ್ನು ಟ್ರ್ಯಾಕಿಂಗ್ ಮೂಲಕ ತಿಳಿಯಬಹುದಾಗಿದೆ. ಶ್ರೀಲಂಕಾ, ಮ್ಯಾನ್ಮಾರ್ ದೇಶಗಳಿಗೆ ಸಂಚರಿಸಲಿರುವ ಹೆಜ್ಜಾರ್ಲೆ ಪಕ್ಷಿಯ ಮೂಲಸ್ಥಾನ ಯಾವುದು, ಯಾವ ಯಾವ ಕಾಲಘಟ್ಟದಲ್ಲಿ ಎಲ್ಲೆಲ್ಲಿ ಸಂಚರಿಸಲಿದೆ ಎನ್ನುವುದರ ಪಕ್ಕಾ ಮಾಹಿತಿ ದೊರಕುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಸೋಲಾರ್ ಲೈಟ್ ಮೂಲಕ ಆಟೋಮ್ಯಾಟಿಕ್ ಆಗಿ ಚಾರ್ಜ್ ಆಗಲಿರುವ ಗ್ರೀಕ್‌ನ ಜಿಪಿಎಸ್ ಟ್ರ್ಯಾಕರ್‌ನ್ನು ಒಂದು ಹೆಜ್ಜಾರ್ಲೆ ಪಕ್ಷಿಯ ರೆಕ್ಕೆಗೆ ಯಶಸ್ವಿಯಾಗಿ ಸೆಪ್ಟೆಂಬರ್ 12ರಂದು ಯಶಸ್ವಿಯಾಗಿ ಅಳವಡಿಸಲಾಗಿದೆ. ಇದರ ಮೂಲಕ ಕನಿಷ್ಠ ನಾಲ್ಕು ವರ್ಷಗಳ ಕಾಲ ಪಕ್ಷಿ ಸಂಚರಿಸುವ ಮಾರ್ಗದ ಎಲ್ಲಾ ಮಾಹಿತಿಯನ್ನು ಅರಣ್ಯಾಧಿಕಾರಿಗಳಿಗೆ ಕಳುಹಿಸಿ ಕೊಡುತ್ತದೆ. ಕೊಕ್ಕೆರೆ ಬೆಳ್ಳೂರಿಗೆ ಅಕ್ಟೋಬರ್ ತಿಂಗಳಲ್ಲಿ ಕಾಣಿಸಿಕೊಳ್ಳುವ ಈ ವಿಶೇಷ ಪಕ್ಷಿ ಎರಡು ತಿಂಗಳ ಬಳಿಕ ಮಾಯವಾಗುತ್ತದೆ. ಕರ್ನಾಟಕ, ತಮಿಳುನಾಡು, ಮಲೇಶಿಯಾ, ಮ್ಯಾನ್ಮಾರ್ ಹಾಗೂ ಶ್ರೀಲಂದಾದಲ್ಲಿ ಮಾತ್ರ ಈ ಪಕ್ಷಿ ಸಂತತಿ ಕಾಣ ಸಿಗಲಿದೆ ಎಂದು ತಿಳಿಸಿದರು.

ಡೆಹರಾಡೂನ್ ವಿಜ್ಞಾನಿಗಳಿಂದ ಹೊಸ ಪ್ರಯತ್ನ
ಈಗಾಗಲೇ ಸ್ಪಾಟ್ ಬಿಲ್ಲಿಡ್ ಪೆಲಿಕಾನ್ ಪಕ್ಷಿಯ ಸಂತತಿ ಎಲ್ಲೆಡೆ ಕಣ್ಮರೆಯಾಗುತ್ತಿದೆ. ಈ ಪಕ್ಷಿಯ ಸಂತತಿಯನ್ನ ಕಾಪಾಡಿಕೊಳ್ಳಲು ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಡೆಹರಾಡೂನ್ ಮುಂದಾಗಿದೆ. ಭಾರತದಲ್ಲೇ ಮೊದಲ ಬಾರಿಗೆ ಕಾಲರ್ ಟ್ರ್ಯಾಕರ್ ಐಡಿ ಅಳವಡಿಸಿದ್ದು, ಇನ್ನು ಮುಂದೆ ಈ ಪಕ್ಷಿ ಸಂಚರಿಸುವ ಪ್ರತಿಯೊಂದು ಮಾರ್ಗದ ಮಾಹಿತಿಯೂ ದಾಖಲಾಗಲಿದೆ. ಒಟ್ಟಾರೆ ಕೊಕ್ಕರೆ ಬೆಳ್ಳೂರು ಪಕ್ಷಿಧಾಮಕ್ಕೆ ಬಂದ ಡೆಹರಾಡೂನ್ ತಂಡ ಪಕ್ಷಿಗಳಿಗೆ ಕಾಲರ್ ಟ್ರ್ಯಾಕರ್ ಐಡಿ ಅಳವಡಿಸಿ ವಿಶೇಷ ಸಾಧನೆಯನ್ನು ಸಂಭ್ರಮಿಸಿದ್ದಾರೆ.

ಪಕ್ಷಿಗಳ ಸಂತಾನೋತ್ಪತ್ತಿಯಲ್ಲಿ ಏರಿಳಿತ
ಪೆಲಿಕಾನ್ ಪಕ್ಷಿಗಳ ಬಗ್ಗೆ ಸಮರ್ಪಕವಾದ ಮಾಹಿತಿ ದೊರೆಯದಿರುವುದರಿಂದ ಅಧ್ಯಯನಕ್ಕೆ ಹಿನ್ನಡೆಯಾಗಿದೆ. ಕೊಕ್ಕರೆ ಬೆಳ್ಳೂರಿನಲ್ಲಿ ಒಂದು ವರ್ಷ ಹೆಚ್ಚು ಸಂತಾನೋತ್ಪತ್ತಿಯಾದರೆ, ಮತ್ತೊಂದು ವರ್ಷ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣವೇನು. ಮೊಟ್ಟೆ ಇಟ್ಟು ಮರಿ ಮಾಡಿದ ನಂತರ ಕೆಲವು ಪಕ್ಷಿಗಳು ಮರಿಗಳನ್ನು ಗುರುತಿಸುತ್ತಿಲ್ಲ. ಇದು ಏಕೆ? ಕೊಕ್ಕರೆ ಬೆಳ್ಳೂರಿನಲ್ಲಿ ಸಂತಾನೋತ್ಪತ್ತಿ ಕಡಿಮೆಯಾದಾಗ ರಂಗನತಿಟ್ಟಿನಲ್ಲಿ ಹೆಚ್ಚಾಗಿರುತ್ತದೆ. ಇದಕ್ಕೆ ಕಾರಣವೇನು? ಹವಾಮಾನ ಅಥವಾ ಆಹಾರದ ಕಾರಣದಿಂದ ಸಂತಾನೋತ್ಪತ್ತಿಗೆ ಪಕ್ಷಿಗಳು ಬೇರೆ ಜಾಗವನ್ನು ಆಯ್ಕೆ ಮಾಡುತ್ತಿವೆಯೇ ಅಥವಾ ಪಕ್ಷಿಗಳು ಇಟ್ಟ ಮೊಟ್ಟೆಗಳಿಗೆ ರಕ್ಷಣೆ ದೊರಕುತ್ತಿಲ್ಲವೇ ಎಂಬ ಅಂಶಗಳಿಗೆ ಸರಿಯಾದ ಉತ್ತರ ದೊರಕುತ್ತಿಲ್ಲ. ಇದೆಲ್ಲದರ ಮೇಲೆ ಅಧ್ಯಯನ ನಡೆಯಬೇಕಿದೆ.
ಇದರ ಜೊತೆಗೆ ಸ್ಥಳೀಯ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಪಕ್ಷಿಗಳ ಮೊಟ್ಟೆಗಳಿಗೆ ಹಾನಿಯಾಗದಂತೆ ತಡೆಯುವ ಕೆಲಸವನ್ನು ಅರಣ್ಯಾಧಿಕಾರಿಗಳು ಮಾಡುತ್ತಿದ್ದಾರೆ. ಇವೆಲ್ಲಾ ಅಂಶಗಳ ಕುರಿತಂತೆ ಅಧ್ಯಯನ ಮಾಡಲು ಜಿಪಿಎಸ್ ಟ್ರ್ಯಾಕರ್‌ನ್ನು ಸದ್ಯ ಒಂದು ಹಕ್ಕಿಗೆ ಅಳವಡಿಸಲಾಗಿದೆ. ಮುಂದಿನ ಡಿಸೆಂಬರ್ ಸೀಸನ್‌ನಲ್ಲಿ ಎರಡನೇ ಪಕ್ಷಿಗೆ ಅಳವಡಿಸುವ ಯೋಜನೆಯಿದೆ.

ಬರುತ್ತಿರುವ ಪಕ್ಷಿಗಳ ಸಂಖ್ಯೆಯಲ್ಲಿ ಶೇ.10ರಷ್ಟು ಕ್ಷೀಣ
ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಕೊಕ್ಕರೆ ಬೆಳ್ಳೂರಿಗೆ ಬರುತ್ತಿರುವ ಪಕ್ಷಿಗಳ ಸಂಖ್ಯೆಯಲ್ಲಿ ಶೇ.10ರಷ್ಟು ಕಡಿಮೆಯಾಗಿದೆ. ಇದೇ ಸಮಯದಲ್ಲಿ ರಂಗನತಿಟ್ಟಿನಲ್ಲಿ ಹೆಜ್ಜಾರ್ಲೆಗಳ ಸಂಖ್ಯೆ ಹೆಚ್ಚಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಹೆಜ್ಜಾರ್ಲೆ ದೇಹದೊಳಗೆ ಜಂತುಹುಳುಗಳ ಸಂಖ್ಯೆ ಹೆಚ್ಚಾಗಿ ಇದ್ದಕ್ಕಿದ್ದಂತೆ ಮರದಿಂದ ಕೆಳಗೆ ಬಿದ್ದು ಸಾವನ್ನಪ್ಪುತ್ತಿದ್ದವು. ಒಟ್ಟು 100ಕ್ಕೂ ಹೆಜ್ಜಾರ್ಲೆಗಳು ಸಾವನ್ನಪ್ಪಿದ್ದವು. ಕಲುಷಿತ ನೀರು ಕುಡಿದು ಪಕ್ಷಿಗಳು ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿತ್ತು. ಆದರೆ, ಪಕ್ಷಿಗಳ ಸಾವಿಗೆ ನಿಜವಾದ ಕಾರಣವೇನೆಂಬುದು ಇದುವರೆಗೂ ಪತ್ತೆಯಾಗಲೇ ಇಲ್ಲ.

ಜಿಪಿಎಸ್ ಅಳವಡಿಕೆ ಅಧ್ಯಯನಕ್ಕೆ ಅನುಕೂಲ
"ಹೆಜ್ಜಾರ್ಲೆಗೆ ಇದೇ ಮೊದಲಬಾರಿಗೆ ಜಿಪಿಎಸ್ ಅಳವಡಿಸಲಾಗಿದೆ. ಬಹಳ ಹಿಂದಿನಿಂದಲೂ ಪಕ್ಷಿಗಳು ಇಲ್ಲಿಗೆ ಬರುತ್ತಿದ್ದರೂ ಇವು ಎಲ್ಲಿಂದ ಬರುತ್ತವೆ, ಎಲ್ಲಿಗೆ ಹೋಗುತ್ತವೆ. ಎಲ್ಲೆಲ್ಲಿ ಸಂಚರಿಸುತ್ತವೆ ಎನ್ನುವುದು ತಿಳಿದಿರಲಿಲ್ಲ. ಈಗ ಜಿಪಿಎಸ್ ಟ್ರ್ಯಾಕರ್ ಅಳವಡಿಸಿರುವುದರಿಂದ ಪಕ್ಷಿಗಳು ಸಂಚರಿಸುವ ಪ್ರತಿದಿನದ ಇಂಚಿಂಚೂ ಮಾಹಿತಿ ನಮಗೆ ದೊರಕಲಿದೆ. ಇದರಿಂದ ಪಕ್ಷಿಗಳ ಕುರಿತ ಅಧ್ಯಯನಕ್ಕೂ ಸಹಕಾರಿಯಾಗಲಿದೆ. ಈಗ ಒಂದು ಪಕ್ಷಿಗೆ ಮಾತ್ರ ಅಳವಡಿಸಿದ್ದು, ಡಿಸೆಂಬರ್‌ನಲ್ಲಿ ಎರಡನೇ ಹೆಜ್ಜಾರ್ಲೆಗೆ ಅಳವಡಿಸಲಾಗುವುದು," ಎಂದು ವಿಜ್ಞಾನಿ ಡಾ.ಸುರೇಶ್ ತಿಳಿಸಿದ್ದಾರೆ.











Click it and Unblock the Notifications