ಮನೆಗೆ ನುಗ್ಗಿದ ಉಗ್ರರನ್ನು ಸಂಹರಿಸಿದ ಕಾಶ್ಮೀರಿ ಹುಡುಗಿ ರುಕ್ಸಾನ ಕೌಸರ್; ಸ್ವಾತಂತ್ರ್ಯೋತ್ಸವದಂದು ಒಂದು ನೆನಪು

ಜಮ್ಮು ಮತ್ತು ಕಾಶ್ಮೀರ ಅಂದರೆ ಅಮರನಾಥ ದೇವಾಲಯ, ಶಿವನ ಮಂದಿರಗಳು, ದಾಲ್ ಲೇಕ್, ಅಮೋಘ ಪರಿಸರ, ಜನರ ಆತ್ಮೀಯ ಒಡನಾಟ ಇವೆಲ್ಲವೂ ನೆನಪಾಗುತ್ತಿದ್ದವು. ಈಗ ಜಮ್ಮು ಮತ್ತು ಕಾಶ್ಮೀರ ಎಂದರೆ ಭಯೋತ್ಪಾದಕರ ಕಣಿವೆ, ಉಗ್ರರ ಅಟ್ಟಹಾಸ, ಭದ್ರತಾ ಪಡೆಗಳ ಕಣ್ಗಾವಲು, ಯುವಕರ ಕಲ್ಲು ತೂರಾಟ ಇವೆಲ್ಲವೂ ನೆನಪಾಗುತ್ತವೆ.

ಕಾಶ್ಮೀರೀ ಫೈಲ್ಸ್ ಸಿನಿಮಾ ಬಂದ ನಂತರವಂತೂ ಕಾಶ್ಮೀರ ಮತ್ತು ಕಾಶ್ಮೀರಿಗಳು ಹೀಗೇ ಎಂದು ಸಾಮಾನ್ಯೀಕರಿಸಿ ಭಾವಿಸಿಬಿಡುವ ಸಾಧ್ಯತೆಗಳುಂಟು. ಆ ಸಿನಿಮಾದಲ್ಲಿರುವುದು ಸುಳ್ಳಲ್ಲ ಎನ್ನುವುದನ್ನು ನಿರಾಕರಿಸಲು ಆಗಲ್ಲ. ಆದರೆ, ಈಗ ಹೇಳಹೊರಟಿರುವುದು ಏನೆಂದರೆ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಬಹುತೇಕ ಎಲ್ಲಾ ಸಮುದಾಯದವರು ಪೀಡಿತರಾಗಿದ್ದಾರೆ.

ಸ್ಥಳೀಯ ಕಾಶ್ಮೀರಿ ಮುಸ್ಲಿಮರು ಉಗ್ರರಿಗೆ ಒಳಗಿಂದೊಳಗೆ ಪ್ರೋತ್ಸಾಹ ನೀಡುತ್ತಾರೆ ಎಂಬುದು ಸಾಮಾನ್ಯವಾಗಿ ಕೇಳಿಬರುವ ಆರೋಪ. ಬೇರೆ ಬೇರೆ ಕಾರಣಕ್ಕೆ ಇದು ಒಂದಷ್ಟು ನಿಜವೂ ಇರಬಹುದು. ಹಾಗಂತ ಎಲ್ಲರೂ ಹಾಗೇ ಇರುತ್ತಾರೆ ಎಂದು ಹೇಳಲು ಹೇಗೆ ಸಾಧ್ಯ.

ಭಯೋತ್ಪಾದಕರ ಬಂದೂಕು ತಮ್ಮತ್ತ ನೆಟ್ಟಿರುತ್ತದೆ ಎಂದು ಗೊತ್ತಿದ್ದರೂ ಧೈರ್ಯವಾಗಿ ಸರಕಾರದ ಪರವಾಗಿ ಕೆಲಸ ಮಾಡುವ ಅದೆಷ್ಟೋ ಕಾಶ್ಮೀರೀ ಮುಸ್ಲಿಮ್ ಅಧಿಕಾರಿಗಳು ಇದ್ದಾರೆ. ಹಾಗೆಯೇ, ಭಯೋತ್ಪಾದಕರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಸಾಮಾನ್ಯ ಕಾಶ್ಮೀರೀ ಮುಸ್ಲಿಮರೂ ಇದ್ದಾರೆ. ಅಂಥವರಲ್ಲಿ ಪ್ರಮುಖವಾಗಿ ನೆನಪಿಗೆ ಬರುವುದು ರುಕ್ಸಾನ ಕೌಸರ್ ಎಂಬ ವೀರ ವನಿತೆ.

ಯಾರು ಈ ರುಕ್ಸಾನ?

ಯಾರು ಈ ರುಕ್ಸಾನ?

ಜಮ್ಮು ಮತ್ತು ಕಾಶ್ಮೀರದ ರಾಜೋರಿ ಜಿಲ್ಲೆಯ ಕಳಸಿ ಪಟ್ಟಣದವರು. ಈಕೆಯ ಮನೆ ಇರುವ ಸ್ಥಳ ಭಾರತ ಪಾಕಿಸ್ತಾನ ಗಡಿರೇಖೆಯಿಂದ ಕೇವಲ ೩೦ ಕಿಮೀ ದೂರದಲ್ಲಿದೆ. ಪಕ್ಕದಲ್ಲೇ ದಟ್ಟಡವಿ ಇದೆ. ಉಗ್ರರ ಅಡಗುದಾಣಗಳಿಗೆ ಪ್ರಶಸ್ತವಾದ ಸ್ಥಳ. ಹೀಗಾಗಿ, ರಾಜೋರಿ ಜಿಲ್ಲೆಯ ಅನೇಕ ಭಾಗದಲ್ಲಿ ಜನರು ಉಗ್ರರ ಉಪಟಳದ ಮಧ್ಯೆ ದಿನ ದೂಡಬೇಕಿದೆ.

ಮನೆಗೆ ನುಗ್ಗಿದ ಉಗ್ರರು

ಮನೆಗೆ ನುಗ್ಗಿದ ಉಗ್ರರು

ಅದು 2009, ಸೆಪ್ಟೆಂಬರ್ 27. ಪಾಕಿಸ್ತಾನೀ ಉಗ್ರರೆನ್ನಲಾದ ಮೂವರು ವ್ಯಕ್ತಿಗಳು ರುಕ್ಸಾನ ಕೌಸರ್ ಮನೆಗೆ ನುಗ್ಗುತ್ತಾರೆ. ಆಗ ಮನೆಯಲ್ಲಿ ರುಕ್ಸಾನ ಜೊತೆ ತಂದೆ ತಾಯಿ ನೂರು ಹುಸೇನ್ ಮತ್ತು ರಷೀದಾ ಬೇಗಮ್ ಮತ್ತು ಸಹೋದರ ಏಜಾಜ್ ಇರುತ್ತಾರೆ. ಇವರ ಮನೆಗೆ ಬರುವ ಭಯೋತ್ಪಾದಕರು ಅಂದು ರಾತ್ರಿ ಅಲ್ಲಿಯೇ ತಂಗಲು ನಿಶ್ಚಯಿಸುತ್ತಾರೆ. ಊಟ ಮತ್ತು ಮಲಗಲು ವ್ಯವಸ್ಥೆ ಮಾಡುವಂತೆ ಕೌಸರ್ ಕುಟುಂಬಕ್ಕೆ ಬೆದರಿಕೆ ಹಾಕುತ್ತಾರೆ.

ಆದರೆ, ಕೌಸರ್ ತಂದೆ ನೂರ್ ಮೊಹಮ್ಮದ್ ಉಗ್ರರ ಒತ್ತಾಯಕ್ಕೆ ಮಣಿಯುವುದಿಲ್ಲ. ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ಕೊಡುವುದಿಲ್ಲ. ಇದರಿಂದ ಕ್ರುದ್ಧಗೊಂಡ ಉಗ್ರರು ಹಲ್ಲೆಗೆ ಮುಂದಾಗುತ್ತಾರೆ.

ರೊಚ್ಚಿಗೆದ್ದ ರುಕ್ಸಾನ

ರೊಚ್ಚಿಗೆದ್ದ ರುಕ್ಸಾನ

ಉಗ್ರಗಾಮಿಗಳು ತಮ್ಮ ರೈಫಲ್ ನಳಿಕೆಯಿಂದ ನೂರ್ ಮೊಹಮ್ಮದ್ ಮೇಲೆ ಹಲ್ಲೆ ಮಾಡತೊಡಗುತ್ತಾರೆ. ಅಲ್ಲಿಯವರೆಗೂ ಹಾಸಿಗೆ ಅಡಿ ಭಯದಿಂದ ಬಚ್ಚಿಟ್ಟುಕೊಂಡಿದ್ದ ರುಕ್ಸಾನ ಕೆರಳಿ ಕೆಂಡವಾಗುತ್ತಾಳೆ. ದುರ್ಗೆಯ ಅವತಾರವಾಯಿತೇನೋ ಎಂಬಂತೆ ಕೆರಳುವ ರುಕ್ಸಾನ ಮನೆಯಲ್ಲಿದ್ದ ಕೊಡಲಿಯನ್ನು ತೆಗೆದುಕೊಂಡು ಒಬ್ಬ ವ್ಯಕ್ತಿಯ ತಲೆಗೆ ಬಡಿಯುತ್ತಾಳೆ. ನಂತರ ಆತನ ಬಳಿ ಇದ್ದ ಎಕೆ-47 ರೈಫಲ್ ತೆಗೆದುಕೊಂಡು ಶೂಟ್ ಮಾಡಿ ಕೊಂದುಹಾಕುತ್ತಾಳೆ.

ಈ ವೇಳೆಗೆ ರುಕ್ಸಾನ ಸಹೋದರ ಕೂಡ ಧೈರ್ಯ ತಂದುಕೊಂಡು ಇತರ ಉಗ್ರರ ಮೇಲೆ ದಾಳಿ ಮಾಡುತ್ತಾನೆ. ರುಕ್ಸಾನ ಮತ್ತಾಕೆಯ ಸಹೋದರ ಇಬ್ಬರೂ ಸೇರಿ ಉಗ್ರರು ಅಲ್ಲಿಂದ ಕಾಲು ಕೀಳುವಂತೆ ಮಾಡುತ್ತಾರೆ. ಅದಾದ ಬಳಿಕ ಅವರ ಇಡೀ ಕುಟುಂಬ ಶಾಹದ್ರ ಷರೀಫ್ ಪೊಲೀಸ್ ಚೌಕಿಗೆ ಹೋಗಿ ಎಲ್ಲಾ ವಿವರ ನೀಡಿ ಉಗ್ರರಿಂದ ಕಸಿದುಕೊಂಡಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸುತ್ತಾರೆ.

ರುಕ್ಸಾನ ಅಂದು ಕೊಂದಿದ್ದು ಸಾಮಾನ್ಯ ಉಗ್ರನನ್ನಲ್ಲ. ಆತ ಲಷ್ಕರೆ ತೈಯಬಾ ಸಂಘಟನೆಯ ಕಮಾಂಡರ್ ಅಬು ಒಸಾಮ ಎಂಬ ವಿಚಾರ ಬಳಿಕ ಗೊತ್ತಾಗುತ್ತದೆ. ಅಚ್ಚರಿಯ ಸಂಗತಿ ಎಂದರೆ ಲಷ್ಕರೆ ಕಮಾಂಡರ್‌ನ ಕೈಯಿಂದ ಎಕೆ-47 ಕಸಿದುಕೊಂಡು ಆತನನ್ನೇ ಶೂಟ್ ಮಾಡಿ ಸಾಯಿಸಿದ ಕೌಸರ್ ತನ್ನ ಜೀವನದಲ್ಲಿ ಬಂದೂಕು ಕೈಯಲ್ಲಿ ಹಿಡಿದದ್ದು ಅದೇ ಮೊದಲ ಸಾರಿಯಂತೆ.

ರುಕ್ಸಾನಗೆ ಹಲವು ಪ್ರಶಸ್ತಿ, ಸನ್ಮಾನ

ರುಕ್ಸಾನಗೆ ಹಲವು ಪ್ರಶಸ್ತಿ, ಸನ್ಮಾನ

ಉಗ್ರರನ್ನು ಧೈರ್ಯದಿಂದ ಎದುರಿಸಿ ಹಿಮ್ಮೆಟ್ಟಿಸಿದ ರುಕ್ಸಾನಾ ಕೌಸರ್‌ಗೆ ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತ ಸರಕಾರಗಳಿಂದ ಹಲವು ಗೌರವ, ಪುರಸ್ಕಾರಗಳು ಸಿಕ್ಕಿವೆ.

* ಕೇಂದ್ರದಿಂದ ರಾಷ್ಟ್ರೀಯ ಶೌರ್ಯ ಪರಶಸ್ತಿ
* ಜೈಪುರದಲ್ಲಿ ರಾಣಿ ಝಾನ್ಸಿ ಶೌರ್ಯ ಪ್ರಶಸ್ತಿ
* ಸರದಾರ್ ಪಟೇಲ್ ಪ್ರಶಸ್ತಿ ಮತ್ತು 1 ಲಕ್ಷ ನಗದು ಬಹುಮಾನ
* ಕಾಶ್ಮೀರ ಸರಕಾರದಿಂದ 5 ಸಾವಿರ ರೂ ನಗದು
* ಆಸ್ತಾ ವೆಲ್ಫೇರ್ ಸೊಸೈಟಿಯಿಂದ 1 ಲಕ್ಷ ನಗದು ಬಹುಮಾನ
* ರಾಷ್ಟ್ರಪತಿಗಳಿಂದ ಸರ್ವೋತ್ತಮ್ ಜೀವನ್ ರಕ್ಷಾ ಪದಕ
* ರುಕ್ಸಾ ಮತ್ತು ಸಹೋದರ ಏಜಾಜ್‌ಗೆ ಕೀರ್ತಿ ಚಕ್ರ ಪ್ರಶಸ್ತಿ. ಶಾಂತಿಕಾಲದಲ್ಲಿ ನೀಡುವ ಅತ್ಯುನ್ನತ ಧೈರ್ಯ ಪ್ರಶಸ್ತಿಗಳಲ್ಲಿ ಕೀರ್ತಿ ಚಕ್ರ ಎರಡನೆಯದ್ದು.

ಉಗ್ರರಿಂದ ಪ್ರತೀಕಾರದ ದಾಳಿ

ಉಗ್ರರಿಂದ ಪ್ರತೀಕಾರದ ದಾಳಿ

ಕೆಲ ವರದಿಗಳ ಪ್ರಕಾರ ರುಕ್ಸಾನ ಮನೆಗೆ ಉಗ್ರರು ನುಗ್ಗಿದ ಘಟನೆಯಾಗುವ ಕೆಲ ದಿನಗಳ ಮೊದಲು ಅಪಹರಣ ಘಟನೆ ನಡೆದಿತ್ತು. ರುಕ್ಸಾನ ಮತ್ತವರ ಸಂಬಂಧಿ ಕುಲ್ಜಮ್ ಪಾರಿ ಅವರನ್ನು ಸ್ಥಳೀಯ ಯುವಕನೊಬ್ಬ ಅಪಹರಣ ಮಾಡಿದ್ದನೆನ್ನಲಾಗಿದೆ. ಆ ಪ್ರಕರಣವನ್ನು ಪೊಲೀಸರೇ ಮುಚ್ಚಿಹಾಕಿದರೆನ್ನಲಾಗಿದೆ. ಉಗ್ರರು ರುಕ್ಸಾನ ಮನೆಗೆ ನುಗ್ಗುವುದಕ್ಕೂ ಅಪಹರಣ ಘಟನೆಗೂ ಸಂಬಂಧ ಇದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ವರದಿಯಾಗಿದೆ.

ಮನೆಗೆ ನುಗ್ಗಿದ ಉಗ್ರರನ್ನು ರುಕ್ಸಾನ ಧೈರ್ಯದಿಂದ ಹಿಮ್ಮೆಟ್ಟಿಸಿದ್ದೇನೋ ಹೌದು. ಅಷ್ಟಕ್ಕೆ ಉಗ್ರರು ಸುಮ್ಮನಾಗುತ್ತಾರೆಯೇ..? 2009 ಅಕ್ಟೋಬರ್ 31ರಂದು ರಾತ್ರಿ ರುಕ್ಸಾನ ಮನೆಯ ಮೇಲೆ ಗ್ರೆನೇಡ್ ಮತ್ತು ಗನ್ ದಾಳಿಯನ್ನು ಉಗ್ರರು ನಡೆಸುತ್ತಾರೆ.

ಆದರೆ, ಅಷ್ಟರೊಳಗೆ ರುಕ್ಸಾನ ಮತ್ತವರ ಕುಟುಂಬವನ್ನು ಬಿಗಿಭದ್ರತೆ ಇರುವ ಪೊಲೀಸ್ ಕಾಲೊನಿಗೆ ಕರೆದೊಯ್ದು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿರುತ್ತದೆ. ಹೀಗಾಗಿ, ರುಕ್ಸಾನ ಮನೆ ಮೇಲೆ ಉಗ್ರರು ಬಾಂಬ್ ದಾಳಿ ಮಾಡಿದಾಗ ಯಾರಿಗೂ ಅಪಾಯವಾಗಲಿಲ್ಲ.

ಹತ್ತು ದಿನಗಳ ಬಳಿಕ ರುಕ್ಸಾನ ಮನೆಯ ಬಳಿ ಐಇಡಿ ಬಾಂಬ್ ನೆಟ್ಟಿರುವುದನ್ನು ಭದ್ರತಾ ಪಡೆಗಳು ಪತ್ತೆ ಮಾಡುತ್ತಾರೆ. ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿ ರುಕ್ಸಾನ ಜೀವ ಉಳಿಸುತ್ತಾರೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+