Ramachandra Guruji: ಹನುಮನ ಬಾಲ್ಯದ ಹೆಸರು ಬೇರೆ ಇದೆ- ಆಂಜನೇಯನ ಬಗ್ಗೆ ಕೆಲ ಗೊತ್ತಿಲ್ಲದ ವಿಚಾರ ಹೇಳಿದ ರಾಮಚಂದ್ರ ಗುರೂಜಿ
ಹನುಮಂತನನ್ನು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಆಂಜನೇಯ, ಅಂಜನಿಸುತ, ಮಾರುತಿ, ವಾಯುಪುತ್ರ ಹೀಗೆ ಹನುಮನಿಗೆ ನಾನಾ ಹೆಸರುಗಳಿವೆ. ಈ ಒಂದೊಂದು ಹೆಸರು ಬರಲು ಒಂದೊಂದು ಕಥೆಯೇ ಇದೆ. ಆದರೆ ಶ್ರೀರಾಮನ ಪರಮ ಭಕ್ತ ಹನುಮನ ನಿಜವಾದ ಹೆಸರು ಬೇರೆನೇ ಇದೆ ಎನ್ನುತ್ತಾರೆ ರಾಮಚಂದ್ರ ಗುರೂಜಿ ಅವರು.
ಹೌದು ರಾಜೇಶ್ ರಿವೀಲ್ಸ್ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ ಅಂತರಾಷ್ಟ್ರೀಯ ಖ್ಯಾತಿಯ ಪುನರ್ಜನ್ಮ ತಜ್ಞರು ಮತ್ತು ಆಧ್ಯಾತ್ಮಿಕ ಚಿಂತಕರಾದ ರಾಮಚಂದ್ರ ಗುರೂಜಿ ಅವರು ಹನುಮನ ಬಗ್ಗೆ ನಮಗೆ ತಿಳಿಯದ ಹಲವಾರು ವಿಷಯಗಳನ್ನು ಹೇಳಿದ್ದಾರೆ. ಆಂಜನೇಯ ನಾವೆಲ್ಲರು ಅಂದುಕೊಂಡಂತೆ ಕಪಿಯ ರೂಪಿ ಅಲ್ಲ. ಬದಲಿಗೆ ಆತನೊಬ್ಬ ಸುಂದರವಾದ ದೈವ ಶಕ್ತಿ. ಆತನ ನಿಜವಾದ ಹೆಸರು ಬೇರೆನೇ ಇದೆ ಎಂದು ಹೇಳಿದ್ದಾರೆ.

ಆಂಜನೇಯನ ನಿಜವಾದ ಹೆಸರು ಏನು?
ಆಂಜನೇಯನಿಗೆ ನಾವಂದುಕೊಂಡಂತೆ ಕಪಿ ರೂಪವಿಲ್ಲ. ಆತ ತುಂಬಾ ಸುಂದರವಾಗಿದ್ದಾನೆ. ಹನುಮನ ನಿಜವಾದ ಬಾಲ್ಯದ ಹೆಸರು 'ಸುಂದರ್'. ಬಾಲ್ಯದ ನಂತರ ಬಂದ ಹೆಸರು ಆಂಜನೇಯ. ಹೀಗಾಗಿ ಆತನ ಹೆಸರನ್ನು ಒಂದು ಕಾಂಡಕ್ಕೆ (ಸುಂದರ್‌ಕಾಂಡ) ಇಡಲಾಯಿತು. ಇದಕ್ಕೆ ಸಾಕಷ್ಟು ಪುರಾವೆಗಳು ಇವೆ ಎಂದು ರಾಮಚಂದ್ರ ಗುರೂಜಿ ವಿವರಿಸಿದ್ದಾರೆ.
ಮನೆಯ ಹೆಣ್ಣು ಮಕ್ಕಳನ್ನು ನಾವು ತುಂಬಾ ಸುಂದರವಾಗಿರುವ ಗಂಡಿಗೆ ಕೊಟ್ಟು ಮದುವೆ ಮಾಡುತ್ತೇವೆ. ಹೀಗಿರುವಾಗ ಸೂರ್ಯ ದೇವ ತನ್ನ ಮಗಳನ್ನು ಆಂಜನೇಯನಿಗೆ ಕೊಟ್ಟು ಮದುವೆ ಮಾಡಲು ದಡ್ಡನಲ್ಲ. ಆಂಜನೇಯ ತುಂಬಾ ಸುಂದರವಾಗಿದ್ದರಿಂದಲೇ ಸೂರ್ಯದೇವ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ ಎಂದು ಗುರೂಜಿ ಹೇಳಿದ್ದಾರೆ.

ಸುಂದರ್ (ಆಂಜನೇಯ)ಗೆ ಸೂರ್ಯನ ಮಗಳಾದ ಸುವಸ್ಥಲಾದೇವಿಯನ್ನು ಕೊಟ್ಟು ಮದುವೆ ಮಾಡಲಾಯಿತು. ಆಂಜನೇಯ ಸುವಸ್ಥಲಾದೇವಿ ದೇವಸ್ಥಾನ ಇಂದಿಗೂ ಆಂಧ್ರಪ್ರದೇಶದಲ್ಲಿ ಇದೆ. ಆದರೆ ಇವರಿಬ್ಬರೂ ಕೂಡ ಸಂಸಾರ ಮಾಡಿಲ್ಲ. ಆಂಜನೇಯ ಬ್ರಹ್ಮಚಾರಿ ಆಗಿದ್ದಾನೆ. ಆತ ಮದುವೆ ಆಗಿಯೂ ಕೂಡ ಬ್ರಹ್ಮಚಾರಿ. ಇದಲ್ಲದೆ ಗುರೂಜಿ ಅವರು ಹನುಮನ ಒನ್ ಸೈಡ್ ಲವ್ ಸ್ಟೋರಿ ಕೂಡ ಹೇಳಿದ್ದಾರೆ.
ಓದುವಾಗಲೇ ಆಂಜನೇಯನ ಮೇಲೆ ಪ್ರೀತಿ
ಕೊಪ್ಪಳದ ಹಂಪಿಯಲ್ಲಿರುವ ಅಂಜನಾದ್ರಿ ಪರ್ವತದಲ್ಲಿ ಮತಂಗಮುನಿಗಳು ನಡೆಸುತ್ತಿದ್ದ ಗುರುಕುಲದಲ್ಲಿ ಸುಂದರ್ (ಆಂಜನೇಯ) ಹಾಗೂ ಮಂದಾರವತಿ ಓದುತ್ತಿದ್ದರು. ಮಂದಾರವತಿ ಕಪಿಕುಲದವಳು. ಈಕೆಗೆ ಸುಂದರ್ ಕಂಡರೆ ತುಂಬಾ ಪ್ರೀತಿ. ಸುಂದರ್ ಬಗ್ಗೆ ಹಲವಾರು ಕನಸ್ಸುಗಳನ್ನು ಕಾಣುತ್ತಿದ್ದಳು.

ಆದರೆ ಅನ್ಯಮನಸ್ಕಳಾದ ಆಕೆಗೆ ಕೊಟ್ಟಿರುವ ಕರ್ತವ್ಯ ನಿಭಾಯಿಸದೇ ಇದ್ದಿದ್ದರಿಂದ ಮತಂಗಮುನಿಗಳು ಶಾಪ ಕೊಟ್ಟರು. ನೀನು ದಕ್ಷಿಣ ಸಮುದ್ರದಲ್ಲಿ ದೈತ್ಯದೇಹಿ ಎನ್ನುವ ಹೆಸರಿನಲ್ಲಿ ಒಂದು ತಿಮಿಂಗಿಲ ಆಗಿ ಇರು ಎಂದು ಶಾಪ ಕೊಟ್ಟರು. ನಂತರ ಮಂದಾರವತಿ ಮತಂಗಮುನಿಗಳ ಬಳಿ ಶಾಪವಿಮೋಚನೆಗಾಗಿ ಬೇಡಿಕೊಂಡಳಂತೆ.
ಆಗ ಮತಂಗಮುನಿಗಳು ಹನುಮನು ಲಂಕೆಗೆ ಸೇತುವೆ ಕಟ್ಟಲು ನೀನಿರುವ ಸಮುದ್ರಕ್ಕೆ ಬರುತ್ತಾನೆ. ಸೇತುವೆ ಕಟ್ಟಲು ದೊಡ್ಡ ದೊಡ್ಡ ಬಂಡೆಗಳನ್ನು ಎತ್ತುಕೊಂಡು ಹೋಗುವಾಗ ಹನುಮ ಬೆವರುತ್ತಾನೆ. ಈ ಬೆವರನ್ನು ನೀನು ನುಂಗಿದರೆ ನೀನು ಶಾಪವಿಮೋಚನೆ ಆಗುತ್ತೀಯ ಜೊತೆಗೆ ನೀನು ಗರ್ಭಿಣಿಯಾಗುತ್ತೀಯಾ ಎಂದು ಹೇಳಿದರಂತೆ. ಅಲ್ಲದೆ ನಿನ್ನಿಂದ ಮಗು ಹುಟ್ಟುತ್ತಾನೆ. ಅವನು ಲೋಕ ಖ್ಯಾತಿ ಆಗುತ್ತಾನೆ. ಅವನ ಹೆಸರು ಮಕರ ಧ್ವಜ. ಇದೆಲ್ಲಾ ಮೂಲ ರಾಮಾಯಣದಲ್ಲಿ ಇದೆ ಎಂದು ರಾಮಚಂದ್ರ ಗುರೂಜಿ ಹೇಳಿದರು.
ಹೀಗೆ ಶ್ರೀರಾಮ ಭಕ್ತ ಹನುಮನ ನಿಜವಾದ ಹೆಸರು ಹಾಗೂ ಆತನ ಮೇಲೆ ಮಂದಾರವತಿಗೆ ಇದ್ದ ಕ್ರಶ್ ಬಗ್ಗೆ ಗುರೂಜಿ ವಿವರಿಸಿದರು. ಇದರಿಂದ ನಾನಾ ಪ್ರಶ್ನೆಗಳನ್ನೂ ಹುಟ್ಟಿಹಾಕಿದ್ದಾರೆ. ಬೆವರಿಂದ ಮಕ್ಕಳು ಹುಟ್ಟಲು ಸಾಧ್ಯವೇ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಹನುಮನಿಗೆ ಸಂಬಂಧಿಸಿದ ಈ ವಿಷಯಗಳನ್ನು ಓದಿದಾಗ ನಿಮಗೇನನಿಸುತ್ತದೆ ಕಾಮೆಂಟ್ ಮಾಡಿ.












Click it and Unblock the Notifications