ಬಿಜೆಪಿಯ 3ನೇ ಅಭ್ಯರ್ಥಿ ಲೆಹರ್ ಸಿಂಗ್ ಗೆಲವು ಖಚಿತ: ಅದು ಹೇಗೆ?
ರಾಜ್ಯದ ನಾಲ್ಕು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಮಂಗಳವಾರ (ಮೇ 31), ಬಿಜೆಪಿ, ಕಾಂಗ್ರೆಸ್ (ಹೆಚ್ಚುವರಿ) ಮತ್ತು ಜೆಡಿಎಸ್ ನಿಂದ ಅಭ್ಯರ್ಥಿ ಕಣಕ್ಕಿಳಿಯುವ ಮೂಲಕ, ಇಡೀ ಚಿತ್ರಣವೇ ಬದಲಾಯಿತು ಎನ್ನುವುದಕ್ಕಿಂತ, ಇನ್ನೊಂದು ಸುತ್ತಿನ ರಾಜಕೀಯ ಮೇಲಾಟಕ್ಕೆ ವೇದಿಕೆ ಸಜ್ಜಾಗಿದೆ.
ಮೇಲ್ನೋಟಕ್ಕೆ ನಾಲ್ಕನೇ ಅಭ್ಯರ್ಥಿ ಗೆಲ್ಲುವುದು ಯಾವ ಪಕ್ಷಕ್ಕೂ ಸುಲಭ ಸಾಧ್ಯವಲ್ಲ ಎನ್ನುವ ಚಿತ್ರಣವಿದ್ದರೂ, ಅಳೆದು ತೂಗಿ ಹೆಜ್ಜೆಯಿಡುವ ಬಿಜೆಪಿಯ ವರಿಷ್ಠರು ಖಚಿತ ವಿಶ್ವಾಸದಿಂದಲೇ ಲೆಹರ್ ಸಿಂಗ್ ಅವರಿಗೆ ಟಿಕೆಟ್ ನೀಡಿದೆ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಭಾರೀ ಕುಳ ಕುಪೇಂದ್ರ ರೆಡ್ಡಿಯವರು ಕಣಕ್ಕಿಳಿಯುವ ವಿಚಾರ ಸುದ್ದಿಯಲ್ಲಿದ್ದರೂ, ಬಿಜೆಪಿಯಿಂದ ಲೆಹರ್ ಸಿಂಗ್ ಮತ್ತು ಕಾಂಗ್ರೆಸ್ಸಿನಿಂದ ಹಿರಿಯ ಮುಖಂಡ ರೆಹಮಾನ್ ಖಾನ್ ಪುತ್ರ ಮನ್ಸೂರ್ ಖಾನ್ ಆಖಾಡಕ್ಕೆ ಇಳಿಯುವುದು ಅಂತಿಮ ಕ್ಷಣದಲ್ಲಿ ನಿರ್ಧಾರವಾಗಿರುವಂತದ್ದು.
ಮನ್ಸೂರ್ ಖಾನ್ ಅವರು ಕೊನೆಯ ಕ್ಷಣದಲ್ಲಿ ಕಣಕ್ಕಿಳಿದ ಹಿಂದೆ ಪಕ್ಕಾ ಸಿದ್ದರಾಮಯ್ಯನವರ ಗೇಂ ಪ್ಲ್ಯಾನ್ ಇದೆ ಎಂದು ಖುದ್ದು ಕುಮಾರಸ್ವಾಮಿಯವರೇ ಬೆಂಕಿ ಉಗುಳಿದ್ದಾರೆ. ದೇವೇಗೌಡ್ರ ಕುಟುಂಬ ಮತ್ತು ಸಿದ್ದರಾಮಯ್ಯ ಎನ್ನುವ ಎರಡು ಧುರೀಣರ ಜಿದ್ದಾಟದಲ್ಲಿ ಬಿಜೆಪಿಯ ಲೆಹರ್ ಸಿಂಗ್ ಗೆಲುವಿನ ನಗು ಬೀರುವ ಸಾಧ್ಯತೆ ಹೆಚ್ಚು. ಅದು ಹೇಗೆ?

ರಾಜ್ಯಸಭಾ ಚುನಾವಣೆಯಲ್ಲಿ ತಮ್ಮತಮ್ಮ ಪಕ್ಷದ ಅಧಿಕೃತ ಪ್ರತಿನಿಧಿ
ರಾಜ್ಯಸಭಾ ಚುನಾವಣೆಯಲ್ಲಿ ತಮ್ಮತಮ್ಮ ಪಕ್ಷದ ಅಧಿಕೃತ ಪ್ರತಿನಿಧಿ/ಏಜೆಂಟ್‌ಗಳಿಗೆ ತೋರಿಸಿಯೇ ಮತ ಚಲಾಯಿಸಬೇಕು. ಹಾಗಂತ, ವಿಪ್ ಉಲ್ಲಂಘಿಸಿ ಕ್ರಾಸ್ ವೋಟಿಂಗ್ ಮಾಡಬಾರದು ಎನ್ನುವ ಕಾನೂನೇನೂ ಇಲ್ಲ. ಮೇಲ್ನೋಟಕ್ಕೆ ಜೆಡಿಎಸ್‌ಗೆ ತೊಡಕಾಗುವ ಸಾಧ್ಯತೆಯಿರುವುದು ಇಲ್ಲೇ. ಯಾಕೆಂದರೆ, ಕನಿಷ್ಠ ನಾಲ್ಕರಿಂದ ಐದು ಜೆಡಿಎಸ್ ಶಾಸಕರು ಈಗಾಗಲೇ ಪಕ್ಷ ಬಿಡುವ ಮಾತನ್ನಾಡಿದ್ದಾರೆ. ಕುಪೇಂದ್ರ ರೆಡ್ಡಿಯವರ ಅದೃಷ್ಟ ಸರಿಯಿದ್ದರೆ, ಇವರೆಲ್ಲಾ ಬೆಂಗಳೂರಿಗೆ ಬಂದು ಪರವಾಗಿ ಅಥವಾ ವಿರೋಧವಾಗಿ ಮತ ಚಲಾಯಿಸಬಹುದು. ಅಥವಾ, ಮತದಾನದಿಂದ ದೂರ ಉಳಿಯಬಹುದು. ಹಾಗಾಗಿ, ತಮ್ಮದೇ ಪಕ್ಷದ 32 ಶಾಸಕರ ಬೆಂಬಲ ಸಿಗುವ ಖಚಿತ ಭರವಸೆ ಜೆಡಿಎಸ್ ಇಟ್ಟುಕೊಳ್ಳುವಂತಿಲ್ಲ.

ಸಿದ್ದರಾಮಯ್ಯನವರನ್ನೇ ರಾಜಕೀಯ ಗುರುಗಳು ಎಂದು ಪೂಜಿಸುವವರು
ಇನ್ನು, ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲೆಂದೇ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಯಿತು ಎನ್ನುವುದಕ್ಕಿಂತ, ಕುಮಾರಸ್ವಾಮಿ ಮತ್ತು ತಮ್ಮ ಪಕ್ಷದಲ್ಲೇ ಇದ್ದಾರೆ ಎನ್ನಲಾಗುತ್ತಿರುವ ವಿರೋಧಿ ಬಣಕ್ಕೆ ರಾಜಕೀಯದ ಆಟ ತೋರಿಸಲು ಸಿದ್ದರಾಮಯ್ಯನವರು ಮನ್ಸೂರ್ ಖಾನ್ ಅವರನ್ನು ಕೊನೆಯ ಕ್ಷಣದಲ್ಲಿ ನಿಲ್ಲಿಸಿದರು ಎನ್ನುವ ಮಾತು ಜೋರಾಗಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಸಿದ್ದು ಆಪ್ತರೂ ಆಗಿರುವ ಎಂ.ಬಿ.ಪಾಟೀಲ್, "ನಮ್ಮ ಅಭ್ಯರ್ಥಿಯನ್ನು ನಿಲ್ಲಿಸಿದ್ದೇವೆ, ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಕಾದು ನೋಡಿ ನಮ್ಮ ಎರಡನೇ ಅಭ್ಯರ್ಥಿ ಗೆಲ್ಲುತ್ತಾರೆ" ಎನ್ನುವ ಮಾತನ್ನಾಡಿದ್ದಾರೆ. ಜೆಡಿಎಸ್ ನಲ್ಲಿ ಸಿದ್ದರಾಮಯ್ಯನವರನ್ನೇ ರಾಜಕೀಯ ಗುರುಗಳು ಎಂದು ಪೂಜಿಸುವವರು ಇರುವುದರಿಂದ ಇದೂ ಒಂದು ಲೆಕ್ಕಾಚಾರ ಆದರೂ ಆಗಬಹುದು.

ಜೆಡಿಎಸ್ ಅಭ್ಯರ್ಥಿಗೆ ಕೂಡ 32 ಶಾಸಕರ ಬೆಂಬಲದ ಮತಗಳಿವೆ
ಬಿಜೆಪಿಯಿಂದ 3, ಕಾಂಗ್ರೆಸ್ ನಿಂದ 2 ಹಾಗೂ ಜೆಡಿಎಸ್ ಪಕ್ಷದಿಂದ ಒಬ್ಬ ಅಭ್ಯರ್ಥಿ ಚುನಾವಣಾ ಕಣದಲ್ಲಿದ್ದಾರೆ. ಗೆಲ್ಲಲು ಪ್ರತಿ ಅಭ್ಯರ್ಥಿಗಳಿಗೆ 45 ಮತಗಳು ಅಂದರೆ 45 ಶಾಸಕರ ಬೆಂಬಲ ಬೇಕು. (4,481 ಮೌಲ್ಯಗಳು, ಒಬ್ಬ ಶಾಸಕನ ಒಂದು ಓಟು ಸಾವಿರ ಮೌಲ್ಯಗಳಿಗೆ ಸಮ) ಬಿಜೆಪಿ ಎರಡು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ನಿರಾಯಾಸವಾಗಿ ಗೆಲ್ಲಲಿದೆ. ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ ತಲಾ 45 ಮತಗಳ ಹಂಚಿಕೆ ಬಳಿಕ ಇಬ್ಬರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಅವರ ಬಳಿ ಉಳಿಯಲಿವೆ 32 ಹೆಚ್ಚುವರಿ ಮತಗಳು. ಕಾಂಗ್ರೆಸ್ ತನ್ನ ಮೊದಲ ಅಭ್ಯರ್ಥಿ ಗೆಲ್ಲಿಸಿಕೊಂಡ ನಂತರ 2ನೇ ಅಭ್ಯರ್ಥಿಗೆ 24 ಹೆಚ್ಚುವರಿ ಮತಗಳು ಉಳಿಯಲಿವೆ. ಕ್ರಾಸ್ ವೋಟಿಂಗ್ /ಶಾಸಕರ ಗೈರಾಗದಿದ್ದರೆ ಜೆಡಿಎಸ್ ಅಭ್ಯರ್ಥಿಗೆ ಕೂಡ 32 ಶಾಸಕರ ಬೆಂಬಲದ ಮತಗಳಿವೆ.

ಒಬ್ಬ ಶಾಸಕರಿಗೆ ಪ್ರಥಮ, ದ್ವಿತೀಯ ಪ್ರಾಶಸ್ತ್ಯದ ಮತದಾನ ಮಾಡಲು ಅವಕಾಶ
ಒಬ್ಬ ಶಾಸಕರಿಗೆ ಪ್ರಥಮ, ದ್ವಿತೀಯ ಪ್ರಾಶಸ್ತ್ಯದ ಮತದಾನ ಮಾಡಲು ಅವಕಾಶವಿರುತ್ತದೆ. 6 ಅಭ್ಯರ್ಥಿಗಳು ಕಣದಲ್ಲಿ ಉಳಿದರೆ ಗೆಲುವಿನ ಲೆಕ್ಕಾಚಾರ ಬದಲಾಗಲಿದೆ ಎನ್ನುವ ಮಾಹಿತಿಯಿದೆ. ಅತಿಹೆಚ್ಚು ಮೊದಲ ಪ್ರಾಶಸ್ತ್ಯದ ಹಾಗೂ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಪಡೆಯುವ ನಾಲ್ಕನೇ ಅಭ್ಯರ್ಥಿಗೆ ಗೆಲ್ಲುವ ಅವಕಾಶ ಹೆಚ್ಚು. ಈ ಲೆಕ್ಕಾಚಾರದ ಪ್ರಕಾರ, ಬಿಜೆಪಿಯ ಮೂರನೇ ಅಭ್ಯರ್ಥಿ ಅಥವಾ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಗೆಲುವಿಗೆ ಹೆಚ್ಚಿನ ಅವಕಾಶ. ಯಾಕೆಂದರೆ ಇಬ್ಬರ ಬಳಿಯೂ 32 ಮತಗಳು ಇರುತ್ತವೆ. ಬಲಾಢ್ಯ ಹೈಕಮಾಂಡ್ ಮುಂದೆ ಬಿಜೆಪಿಯವರು ವಿಪ್ ಉಲ್ಲಂಘಿಸುವ ಸಾಧ್ಯತೆ ಕಮ್ಮಿ, ಆದರೆ ಇದೇ ಮಾತನ್ನು ಜೆಡಿಎಸ್ಸಿಗೆ ಹೇಳಲು ಬರುವುದಿಲ್ಲ. ಹಾಗಾಗಿ, ಸದ್ಯದ ರಾಜಕೀಯ ಲೆಕ್ಕಾಚಾರದ ಪ್ರಕಾರ, ಬಿಜೆಪಿ ಮೂರು ಸ್ಥಾನ ಗೆಲ್ಲುವ ಸಾಧ್ಯತೆ ಹೆಚ್ಚು.

ನಿರ್ಮಲಾ ಸೀತಾರಾಮನ್ ಹಾಗೂ ಜಗ್ಗೇಶ್
ನಾಲ್ವರು ಅಭ್ಯರ್ಥಿಗಳು ಕಣದಲ್ಲಿ ಇದ್ದಾಗ ಮತ ಚಲಾಯಿಸುವ ಸದಸ್ಯ ಎರಡು, ಮೂರು ಹಾಗೂ ನಾಲ್ಕನೇ ಪ್ರಾಶಸ್ತ್ಯವನ್ನೂ ಗುರುತಿಸಬೇಕು. ಹೀಗೆ 120 ಶಾಸಕರ ಸಂಖ್ಯಾಬಲ ಹೊಂದಿರುವ ಬಿಜೆಪಿ ಶಾಸಕರು ಎರಡನೇ ಪ್ರಾಶಸ್ತ್ಯದ ಮತವನ್ನು ಲೆಹರ್ ಸಿಂಗ್ ಅವರಿಗೆ ಚಲಾಯಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ನಿರ್ಮಲಾ ಸೀತಾರಾಮನ್ ಹಾಗೂ ಜಗ್ಗೇಶ್ ಅವರು ನಿರಾಯಾಸವಾಗಿ ಗೆದ್ದ ಬಳಿಕ ಎರಡನೇ ಪ್ರಾಶಸ್ತ್ಯದ ಮತಮೌಲ್ಯಗಳು ಲೆಹರ್‌ಸಿಂಗ್ ಗೆಲುವಿಗೆ ಅನುಕೂಲ ಆಗಬಹುದು.












Click it and Unblock the Notifications