Publictv Exit Poll : ಆರ್. ಆರ್. ನಗರದಲ್ಲಿ ಮುನಿರತ್ನ ಗೆಲುವು
ಬೆಂಗಳೂರು, ನವೆಂಬರ್ 07: ಬೆಂಗಳೂರು ನಗರದ ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲವು ಸಾಧಿಸಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ.
Recommended Video
ನವೆಂಬರ್ 3ರಂದು ಆರ್. ಆರ್. ನಗರ ಕ್ಷೇತ್ರದ ಉಪ ಚುಣಾವಣೆ ನಡೆದಿತ್ತು. ಕೇವಲ ಶೇ 45.24ರಷ್ಟು ಮತದಾನವಾಗಿತ್ತು. ಇದರಿಂದಾಗಿ ಯಾರಿಗೆ ಗೆಲವು ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಬಿಜೆಪಿಯ ಮುನಿರತ್ನ ಗೆಲುವು ಸಾಧಿಸಲಿದ್ದಾರೆ ಎಂದು ಶನಿವಾರದ ಸಮೀಕ್ಷಾ ವರದಿಗಳು ಹೇಳಿವೆ.
ಸಿ-ವೋಟರ್, ಕನ್ನಡದ ಪಬ್ಲಿಕ್ ಟಿವಿ ಮತ್ತು ರಾಜ್ಯದ ಗುಪ್ತಚರ ಇಲಾಖೆ ನಡೆಸಿದ ಸಮೀಕ್ಷೆಗಳಲ್ಲಿ ಬಿಜೆಪಿ ಪರವಾದ ವರದಿಗಳು ಬಂದಿವೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಡೆದರೂ ಅಂತಿಮವಾಗಿ ಬಿಜೆಪಿಗೆ ಜಯ ಎನ್ನುತ್ತಿವೆ ಸಮೀಕ್ಷೆಯ ವರದಿಗಳು.
ಆರ್. ಆರ್. ನಗರ ವಿಧಾನಸಭಾ ಕ್ಷೇತ್ರದ 9 ವಾರ್ಡ್‌ಗಳಲ್ಲಿ ಪಬ್ಲಿಕ್ ಟಿವಿ ನಡೆಸಿದ ಸಮೀಕ್ಷೆಯ ವರದಿಗಳು ಶನಿವಾರ ಪ್ರಕಟವಾಗಿವೆ. ಆರ್. ಆರ್. ನಗರದಲ್ಲಿ 4,62,201 ಮತದಾರರು ಇದ್ದರು. ಈ ಪೈಕಿ 2,09,333 ಜನರು ಮತದಾನವನ್ನು ಮಾಡಿದ್ದರು.

ಪಬ್ಲಿಕ್ ಟಿವಿ ಸಮೀಕ್ಷೆ ವರದಿ
ಪಬ್ಲಿಕ್ ಟಿವಿ ನಡೆಸಿದ ಸಮೀಕ್ಷೆಯ ವರದಿ ಪ್ರಕಾರ ಬಿಜೆಪಿ ಅಭ್ಯರ್ಥಿ ಮುನಿರತ್ನ ಶೇ 48ರಷ್ಟು, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶೇ 40ರಷ್ಟು, ಜೆಡಿಎಸ್‌ನ ಕೃಷ್ಣಮೂರ್ತಿ ಶೇ 11ರಷ್ಟು ಮತಗಳನ್ನು ಪಡೆಯಲಿದ್ದಾರೆ. ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದು, ಇತರ ಅಭ್ಯರ್ಥಿಗಳು ಶೇ 1ರಷ್ಟು ಮತಗಳನ್ನು ಪಡೆಯಲಿದ್ದಾರೆ.

ಗುಪ್ತಚರ ಇಲಾಖೆ ವರದಿ
ಆರ್. ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಶೇ 47ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಗುಪ್ತಚರ ಇಲಾಖೆ ವರದಿ ಹೇಳಿದೆ. ಕಾಂಗ್ರೆಸ್ ಶೇ 37, ಜೆಡಿಎಸ್ ಶೇ 15ರಷ್ಟು ಮತಗಳನ್ನು ಪಡೆಯಲಿದ್ದಾರೆ. ಇತರ ಅಭ್ಯರ್ಥಿಗಳು ಶೇ 1ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಹೇಳಿದೆ.

ಸಿ-ವೋಟರ್ ಸಮೀಕ್ಷೆ ಫಲಿತಾಂಶ
ಆರ್. ಆರ್. ನಗರ ಕ್ಷೇತ್ರದ ಸಿ-ವೋಟರ್ ಫಲಿತಾಂಶವನ್ನು ಟಿವಿ 9 ಪ್ರಕಟಿಸಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಶೇ 37.8ರಷ್ಟು, ಕಾಂಗ್ರೆಸ್‌ನ ಹೆಚ್. ಕುಸುಮಾ ಶೇ 31.1ರಷ್ಟು, ಜೆಡಿಎಸ್‌ನ ವಿ. ಕೃಷ್ಣಮೂರ್ತಿ ಶೇ 14ರಷ್ಟು ಮತ ಪಡೆಯಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಇತರ ಅಭ್ಯರ್ಥಿಗಳು ಶೇ 17.2ರಷ್ಟು ಮತಗಳನ್ನು ಪಡೆಯಲಿದ್ದಾರೆ.

ಮುನಿರತ್ನರಿಂದ ಗೆಲುವು
ಕ್ಷೇತ್ರ ಪುನರ್ ವಿಂಗಡನೆ ಬಳಿಕ ಆರ್. ಆರ್. ನಗರ ಕ್ಷೇತ್ರದಲ್ಲಿ ನಡೆದ ಎರಡು ಚುನಾವಣೆಯಲ್ಲಿಯೂ ಬಿಜೆಪಿ ಗೆದ್ದಿಲ್ಲ. ಇದಕ್ಕೆ ಕಾರಣ ಮುನಿರತ್ನ, ಕಾಂಗ್ರೆಸ್‌ನಿಂದ ಮುನಿರತ್ನ ಅವರು 2013, 2018ರಲ್ಲಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಅವರು ಬಿಜೆಪಿ ಇಂದ ಕಣಕ್ಕಿಳಿದಿದ್ದಾರೆ. ಬಿಜೆಪಿ ಗೆದ್ದರೆ ಅದಕ್ಕೆ ಕಾರಣವೂ ಮುನಿರತ್ನ ಆಗಲಿದ್ದಾರೆ.












Click it and Unblock the Notifications