ಚುನಾವಣೆಗೂ ಮುನ್ನ ಡೇರಾ ಸಚ್ಚಾ ಸೌದಾಕ್ಕೆ ರಾಜಕಾರಣಿಗಳ ದೌಡು!
ಚಂಡೀಗಢ, ಜನವರಿ 10: ಪಂಜಾಬ್‌ನಲ್ಲಿ ಚುನಾವಣೆ ಘೋಷಣೆಯಾದ ಒಂದು ದಿನದ ನಂತರ, ಹಲವಾರು ಬಿಜೆಪಿ, ಕಾಂಗ್ರೆಸ್, ಎಎಪಿ ಮತ್ತು ಎಸ್‌ಎಡಿ ನಾಯಕರು ಭಾನುವಾರ ಬಟಿಂಡಾದ ಸಲಾಬತ್‌ಪುರದಲ್ಲಿ ಡೇರಾ ಸಚ್ಚಾ ಸೌದಾ ಅನುಯಾಯಿಗಳ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚುನಾವಣೆಗೂ ಮುನ್ನ ಈ ನಾಯಕರುಗಳು ಆಶೀರ್ವಾದ ಪಡೆದುಕೊಳ್ಳಲು ಡೇರಾ ಸಚ್ಚಾ ಸೌದಾಕ್ಕೆ ಆಗಮಿಸಿದ್ದಾರೆ.
ಬಿಜೆಪಿಯ ಹರ್ಜಿತ್ ಗ್ರೆವಾಲ್ ಮತ್ತು ಸುರ್ಜಿತ್ ಜ್ಯಾನಿ; ಸಚಿವ ವಿಜಯ್ ಇಂದರ್ ಸಿಂಗ್ಲಾ, ಮಾಜಿ ಸಚಿವ ಸಾಧು ಸಿಂಗ್ ಧರಂಸೋತ್, ಮಾಜಿ ಶಾಸಕರಾದ ಹರ್ಮಂದರ್ ಜಸ್ಸಿ ಮತ್ತು ಕಾಂಗ್ರೆಸ್‌ನ ಮಂಗತ್ ರಾಯ್ ಬನ್ಸಾಲ್, ಎಎಪಿಯ ಬಟಿಂಡಾ (ನಗರ) ಅಭ್ಯರ್ಥಿ ಜಗ್ರೂಪ್ ಗಿಲ್ ಹಾಗೂ ಎಸ್‌ಎಡಿ ಅಭ್ಯರ್ಥಿ ದಿರ್ಬಾ ಗುಲ್ಜಾರ್ ಸಿಂಗ್ ಡೇರಾ ಸಚ್ಚಾ ಸೌದಾದಲ್ಲಿ ಕಾಣಿಸಿಕೊಂಡ ನಾಯಕರ ಪೈಕಿ ಕೆಲವು ನಾಯಕರುಗಳು.
ಇನ್ನು ಈ ನಾಯಕರುಗಳು ತಮ್ಮ ಭೇಟಿಯಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಕೂಡಾ ಹೇಳಿಕೊಂಡಿದ್ದಾರೆ. ಗಮನಾರ್ಹವಾಗಿ, ಡೇರಾದ ರಾಜಕೀಯ ವ್ಯವಹಾರಗಳ ಸಮಿತಿಯ ಅಧ್ಯಕ್ಷ ರಾಮ್ ಸಿಂಗ್ ಮತ್ತು ರಾಜ್ಯ ಸಮಿತಿಯ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇನ್ನು ಈ ನಡುವೆ ಡೇರಾ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಯಾವ ಪಕ್ಷಕ್ಕೆ, ಯಾವ ಅಭ್ಯರ್ಥಿಗೆ ಬೆಂಬಲವನ್ನು ನೀಡಲಾಗುವುದು ಎಂದು ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದು ಬರೀ ಧಾರ್ಮಿಕ ಕಾರ್ಯಕ್ರಮ!
ಈ ಮಧ್ಯೆ ಡೇರಾ ಯಾವುದೇ ಪಕ್ಷಕ್ಕೆ ಬೆಂಬಲ ಘೋಷಿಸುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ. ಹಾಗೆಯೇ ಡೇರಾ ಕೆಲವು ನಿರ್ದಿಷ್ಟ ಸ್ಥಾನದ ಕೆಲವು ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸುವ ಚಿಂತನೆ ನಡೆಸಿದೆ ಎಂದು ವರದಿ ಆಗಿದೆ. ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಡೇರಾ ವಕ್ತಾರ ಹರ್ಚರಣ್ ಸಿಂಗ್,"ಇದು ಧಾರ್ಮಿಕ ಕಾರ್ಯಕ್ರಮವಾಗಿತ್ತು. ಇದರಲ್ಲಿ ರಾಜಕೀಯ ಏನೂ ಇರಲಿಲ್ಲ. ಇಂದಿನ ಸಭೆಯು ಡೇರಾದ ಎರಡನೇ ಮುಖ್ಯಸ್ಥ ಶಾ ಸತ್ನಾಮ್ ನೆನಪಿನಲ್ಲಿ ನಡೆಸಲಾಗಿತ್ತು. ಇದರಲ್ಲಿ ಅವರ ಅನುಯಾಯಿಗಳು ಭಾಗಿಯಾಗಿದ್ದಾರೆ," ಎಂದು ಹೇಳಿದ್ದಾರೆ.

ಚುನಾವಣೆಯ ಮೇಲೆ ಡೇರಾ ಪ್ರಭಾವ
ಡೇರಾ ಸಚ್ಚಾ ಸೌದಾವು ಸುಮಾರು 40 ಕ್ಷೇತ್ರಗಳ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು. ಡೇರಾವು ಪಂಜಾಬ್‌ನಲ್ಲಿ 84 ಶಾಖೆಗಳನ್ನು ಹೊಂದಿದೆ. ಇವುಗಳಲ್ಲಿ 11 ಶಾಖೆಗಳು, ಬಟಿಂಡಾ ಜಿಲ್ಲೆಯಲ್ಲಿದೆ. ಸಲಾಬತ್‌ಪುರದ ಶಾಖೆ ಕೂಡಾ ಬಟಿಂಡಾ ಜಿಲ್ಲೆಯಲ್ಲಿದೆ. ಆದ್ದರಿಂದ, ಮಾಲ್ವಾ ನಾಯಕರು ಡೇರಾ ಅನುಯಾಯಿಗಳನ್ನು ತಲುಪಲು ಪ್ರಾರಂಭಿಸಿದ್ದಾರೆ. ಮಾಲ್ವಾ ನಾಯಕರುಗಳಾದ ಕಾಂಗ್ರೆಸ್‌ನ ಸಚಿವ ವಿಜಯ್ ಇಂದರ್ ಸಿಂಗ್ಲಾ, ಮಾಜಿ ಸಚಿವ ಸಾಧು ಸಿಂಗ್ ಧರಂಸೋತ್, ಮಾಜಿ ಶಾಸಕರಾದ ಹರ್ಮಂದರ್ ಜಸ್ಸಿ ಮತ್ತು ಮಂಗತ್ ರಾಯ್ ಬನ್ಸಾಲ್, ಬಿಜೆಪಿಯ ಹರ್ಜಿತ್ ಸಿಂಗ್ ಗ್ರೆವಾಲ್, ಮಾಜಿ ರಾಜ್ಯ ಸಚಿವ ಸುರ್ಜಿತ್ ಜ್ಯಾನಿ, ಎಎಪಿಯ ಬಟಿಂಡಾ (ನಗರ) ಅಭ್ಯರ್ಥಿ ಜಗ್ರೂಪ್ ಸಿಂಗ್ ಗಿಲ್, ಅಕಾಲಿದಳದ ದಿರ್ಬಾ ಅಭ್ಯರ್ಥಿ ಗುಲ್ಜಾರ್ ಸಿಂಗ್ ಡೇರಾದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಜಕಾರಣಿಗಳು ಹೇಳುವುದು ಏನು?
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುನೀತಾ ಗಾರ್ಗ್, "ನನ್ನ ಭೇಟಿಗೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ನಾನು ಡೇರಾದ ಅನುಯಾಯಿ. ಹಾಗಾಗಿ ಷಾ ಸತ್ನಾಮ್ಜಿಯವರ ಜನ್ಮದಿನದಂದು ಗೌರವ ಸಲ್ಲಿಸಲು ಬಂದಿದ್ದೇನೆ. ಈ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಉತ್ತಮ ಸಾಮಾಜಿಕ ಕಾರ್ಯವನ್ನು ಮಾಡುತ್ತಿದೆ," ಎಂದಿದ್ದಾರೆ. ಇನ್ನು ಹರ್ಜೀತ್ ಗ್ರೆವಾಲ್, "ನನ್ನ ಪಕ್ಷದ ಅನೇಕ ಕಾರ್ಯಕರ್ತರು ಡೇರಾ ಅನುಯಾಯಿಗಳಾಗಿದ್ದಾರೆ. ಅವರಲ್ಲಿ ಕೆಲವರು ನನ್ನ ಪಕ್ಷದ ಕಚೇರಿಯನ್ನೂ ನೋಡಿಕೊಳ್ಳುತ್ತಾರೆ. ನಾನು ಇಲ್ಲಿಗೆ ಭೇಟಿ ನೀಡಬೇಕೆಂದು ನನ್ನ ಕಾರ್ಯಕರ್ತರು ಬಯಸಿದರು. ಆದ್ದರಿಂದಾಗಿ ನಾನು ಕಾರ್ಯಕರ್ತರೊಂದಿಗೆ ಭೇಟಿ ನೀಡಿದೆ. ಇದಕ್ಕೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಭಾನುವಾರ ಧಾರ್ಮಿಕ ಕಾರ್ಯಕ್ರಮವಿತ್ತು," ಎಂದಿದ್ದಾರೆ.
Recommended Video

ಸರ್ಕಾರ ವಿಫಲವಾದರೂ ಸಂಸ್ಥೆಯಿದೆ!
ಇತ್ತೀಚೆಗಷ್ಟೇ ಕಾಂಗ್ರೆಸ್‌ನಿಂದ ಎಎಪಿಗೆ ಸೇರ್ಪಡೆ ಆದ ಜಗ್ರೂಪ್ ಸಿಂಗ್ ಗಿಲ್ ಬಟಿಂಡಾದಲ್ಲಿ ಎಎಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಡೇರಾ ಸಚ್ಚಾ ಸೌದಾ ಬಗ್ಗೆ ಇತ್ತೀಚೆಗೆ ಹೇಳಿಕೆಗಳನ್ನು ಕೂಡಾ ನೀಡಿದ್ದರೆ. ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ವಿಡಿಯೋದಲ್ಲಿ ಜಗ್ರೂಪ್ ಸಿಂಗ್ ಗಿಲ್, "ಡೇರಾ ಸಚ್ಚಾ ಸೌದಾ ಕಳೆದ ಹಲವು ವರ್ಷಗಳಿಂದ ಮಾನವೀಯತೆಗಾಗಿ ಸಮಾಜಸೇವೆ ಮಾಡುತ್ತಿದೆ," ಎಂದು ಹೇಳಿದ್ದಾರೆ. ಹಾಗೆಯೇ, "ಸರ್ಕಾರಗಳು ವಿಫಲವಾಗಿರಬಹುದು ಆದರೆ ಸಂಸ್ಥೆಯು ಜನರಿಗೆ ಸಹಾಯ ಮಾಡುತ್ತಲೇ ಇದೆ," ಎಂದು ಕೂಡಾ ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)











Click it and Unblock the Notifications