
ಕಾರ್ ಕಲಿಸಲು ಬಂದವನ ಮೇಲೆ ಚಿಗುರಿದ್ದು ಹೇಗೆ ಪ್ರೀತಿ?
ಇಸ್ಲಮಾಬಾದ್, ಅಕ್ಟೋಬರ್ 4: ಲವ್ ಸ್ಟೋರಿಗಳು ಅಂದ್ರೇನೇ ಹಾಗೆ. ಒಂದೊಂದು ದಿಕ್ಕಿನಲ್ಲಿ ಒಂದೊಂದು ರೀತಿಯ ಪ್ರೀತಿಯ ಕಥೆಗಳು ಹುಟ್ಟಿಕೊಳ್ಳುತ್ತವೆ. ಅದೇ ರೀತಿ ಇದು ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಚಿಗುರಿದ ಪ್ರೀತಿಯ ಕಥೆ. ಸೋಷಿಯಲ್ ಮೀಡಿಯಾದಲ್ಲಿ ಹುಟ್ಟಿ, ಸೋಷಿಯಲ್ ಮೀಡಿಯಾದಲ್ಲೇ ಬ್ರೇಕ್ ಅಪ್ ಮಾಡಿಕೊಳ್ಳುವ ಪ್ರೇಮಿಗಳಿದ್ದಾರೆ.
ಇಂಥವರ ಮಧ್ಯೆ ಈ ಜೋಡಿಯು ಅದೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದೆ. ಕಾರು ಕಲಿಸುವುದಕ್ಕಾಗಿ ಬಂದವನ ಮೇಲೆ ಆ ಯುವತಿಗೆ ಪ್ರೀತಿ ಚಿಗುರಿದ್ದು ಹೇಗೆ?, ಚಾಕಚಕ್ಕತೆಯ ಚಾಲಕ ಚೋರ ಚಿತ್ತ ಚೋರನಾಗಿದ್ದರ ಹಿಂದಿನ ಮರ್ಮವೇನು?. ಮೋಹದ ಬಲೆಗೆ ಬಿದ್ದ ಮದನಾರಿ ಹೇಳುವುದೇನು?, ಚಾಲಕನಾಗಿ ಬಂದಾತ ಮನೆ ಅಳಿಯನಾದ ಸುಂದರ ಪ್ರೇಮ ಕಥೆಯನ್ನು ಮುಂದೆ ಓದಿ.
Lockdown Love Story: ಇದು ಬಾಲ್ಕನಿಯಲ್ಲಿ ಅರಳಿದ ಪ್ರೀತಿ!

ಡ್ರೈವಿಂಗ್ ಕಲಿಸದೇ ಹೃದಯ ಕದ್ದ ಚಾಲಕ
17 ವರ್ಷದ ಮಗಳು ಕಾರ್ ಡ್ರೈವಿಂಗ್ ಕಲಿಯಲಿ ಎನ್ನುವುದು ತಂದೆಯ ಕನಸಾಗಿತ್ತು. ಮಗಳಿಗೆ ಕಾರು ಕಲಿಸುವುದಕ್ಕಾಗಿಯೇ 21 ವರ್ಷದ ಆ ಚಾಲಕನನ್ನು ತಂದೆ ನೇಮಕ ಮಾಡಿಕೊಂಡಿದ್ದರು. ಯುವತಿಗೆ ಡ್ರೈವಿಂಗ್ ಹೇಳಿಕೊಡುವುದಕ್ಕಾಗಿ ಬಂದವನು ಮಗಳ ಪಾಲಿನ ಪ್ರಿಯಕರನಾಗಿ ಬದಲಾಗಿ ಬಿಟ್ಟನು. ಚಾಲನೆ ಬದಲಿಗೆ ಯುವತಿಗೆ ಪ್ರೀತಿಯ ಪಾಠ ಹೇಳಿಕೊಟ್ಟಿದ್ದನು. ಅಲ್ಲಿಂದ ಯುವತಿ ಮತ್ತು ಚಾಲಕನ ನಡುವಿನ ಪ್ರೀತಿ ಶುರುವಾಯಿತು.

ಯುವತಿಯ ಮನಸ್ಸು ಕಾಡಿದ ಪ್ರೀತಿ
ಒಂದು ಕಡೆಯಲ್ಲಿ ಕುಳಿತು ಯುವತಿಗೆ ಡ್ರೈವಿಂಗ್ ಪಾಠವನ್ನು ಹೇಳಿ ಕೊಡುತ್ತಿದ್ದರೆ, ಯುವತಿಯು ನಿಧಾನವಾಗಿ ಆತನ ಬಲೆಗೆ ಬೀಳುತ್ತಿದ್ದಳು. ಚಾಲಕನ ಡ್ರೈವಿಂಗ್ ಸ್ಟೈಲ್ ಆಕೆಯ ಮನಸ್ಸು ಗೆದ್ದಿತ್ತು. ಚಾಲನೆ ಮೇಲಿನ ಗಮನಕ್ಕಿಂತ ಚಾಲಕನ ಮೇಲಿನ ಗಮನ ಹೆಚ್ಚಾಯಿತು. ಚಾಲಕನ ಮೇಲೆ ಪ್ರೀತಿ ಚಿಗುರಿತು. ಚಾಲನೆಯ ಮೇಲಿನ ಪ್ರೀತಿ ಮರೆ ಆಯಿತು. ಪ್ರತಿನಿತ್ಯ ಇಬ್ಬರ ಭೇಟಿಗೆ ಡ್ರೈವಿಂಗ್ ಕಲಿಕೆಯು ಕೇವಲ ಒಂದು ನೆಪವಾಗಿ ಬದಲಾಗಿ ಬಿಟ್ಟಿತು.

ಕಾರ್ ಗೇರ್ ಮೇಲೊಂದು ಮೋಹ
ಡ್ರೈವರ್ಸ್ ಪಾಲಿಗೆ ಡ್ರೈವಿಂಗ್ ಒಂದು ರೀತಿ ಫ್ಯಾಷನ್ ಆಗಿರುತ್ತದೆ. ವಿಭಿನ್ನ ಶೈಲಿಯ ಡ್ರೈವಿಂಗ್ ಸ್ಕಿಲ್ ಅನ್ನು ಹೊಂದಿದ್ದ ಚಾಲಕನ ಗೇರ್ ಚೇಂಜಿಂಗ್ ಸ್ಟೈಲ್ ಯುವತಿಗೆ ಅಚ್ಚುಮೆಚ್ಚಾಯಿತು. ಗೇರ್ ಮೇಲೆ ಕೈ ಇಟ್ಟಿರುವ ಚಾಲಕನ ಕೈ ಮೇಲೆ ಕೈ ಇಟ್ಟುಕೊಂಡು ಕೂರುವುದೇ ಯುವತಿಗೆ ಪ್ರಿಯವಾಯಿತು. ಅಲ್ಲಿಂದ ಪ್ರೀತಿ ಮತ್ತಷ್ಟು ಬಲವಾಯಿತು.

ಆ ಚಾಲಕನನ್ನೇ ವರಿಸಿದ ಮಧುಬಾಲೆ!
ಮಗಳು ಹಾಗೂ ಚಾಲಕನ ನಡುವಿನ ಪ್ರೀತಿಯ ವಿಷಯ ಎರಡು ಮನೆಗಳಲ್ಲಿ ಗೊತ್ತಾಯಿತು. ಪೋಷಕರು ಸಹ ಈ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟರು. ಇಬ್ಬರ ನಡುವಿನ ಪ್ರೀತಿಯ ದೋಣಿಯು ಮದುವೆಯ ದಡ ಸೇರಿತು. ಡ್ರೈವಿಂಗ್ ಕಲಿಸಲು ಬಂದವನಿಗೆ ಯುವತಿ ಮನಸೋತು ಮದುವೆಯಾಗಿರುವ ಈ ವರದಿಯು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಯಿತು.