ಪಾಕಿಸ್ತಾನ ಇತಿಹಾಸದಲ್ಲೇ ಭೀಕರ ಪ್ರವಾಹ; ಮಾನ್ಸೂನ್ ಆನ್ ಸ್ಟೀರಾಯ್ಡ್ಸ್ ಎಂದ ವಿಶ್ವಸಂಸ್ಥೆ
ನಮ್ಮ ರಾಜ್ಯದ ಹಲವೆಡೆ ಭಾರೀ ಮಳೆ ಮತ್ತು ಪ್ರವಾಹದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ರಸ್ತೆಗಳೆಲ್ಲಾ ಜಲಾವೃತವಾಗಿ ಕೆರೆಯಂತಾಗಿದೆ. ಚಿಕ್ಕಮಗಳೂರು, ರಾಮನಗರ ಮೊದಲಾದ ಜಿಲ್ಲೆಗಳಲ್ಲಂತೂ ಕೇಳುವುದೇ ಬೇಡ. ಇಂಥ ಸ್ಥಿತಿ ಇನ್ನೂ ಹಲವು ದಿನಗಳು ಮುಂದುವರಿದಿದರೆ ಹೇಗಿದ್ದೀತು? ಅಂಥ ಸ್ಥಿತಿಯನ್ನು ಪಾಕಿಸ್ತಾನ ಅನುಭವಿಸುತ್ತಿದೆ.
ಭಾರತದ ನೆರೆಯ ಪಾಕಿಸ್ತಾನದಲ್ಲಿ ರಣಭೀಕರ ನೆರೆ ಪರಿಸ್ಥಿತಿ ಉದ್ಭವಿಸಿದೆ. ಆ ದೇಶದ ಇತಿಹಾಸದಲ್ಲೇ ಕಂಡುಕೇಳರಿಯದಷ್ಟು ಮಟ್ಟಕ್ಕೆ ಮಳೆ ಮತ್ತು ಜಲಪ್ರವಾಹ ಉಕ್ಕೇರುತ್ತಿದೆ. 2010ರಲ್ಲಿ ಸಂಭವಿಸಿದ್ದ ಪ್ರವಾಹಕ್ಕಿಂತಲೂ ಘೋರವಾಗಿದೆ. ಪಾಕಿಸ್ತಾನದ ಮೂರನೇ ಒಂದು ಭಾಗ ನೀರಿನಿಂದ ತುಂಬಿಹೋಗಿದೆ.
ಪಾಕಿಸ್ತಾನದಲ್ಲಿ 20 ಕೋಟಿ ಜನಸಂಖ್ಯೆ ಇದ್ದು 4 ಕೋಟಿಗೂ ಹೆಚ್ಚು ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ. 50 ಲಕ್ಷಕ್ಕೂ ಹೆಚ್ಚು ಜನರು ಅನ್ನ ನೀರು ಇಲ್ಲದೇ ಒದ್ದಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಒಟ್ಟು 160 ಜಿಲ್ಲೆಗಳಿದ್ದು, ಬರೋಬ್ಬರಿ 110 ಜಿಲ್ಲೆಗಳು ಪ್ರವಾಹದಲ್ಲಿ ಸಿಲುಕಿವೆ ಎಂದರೆ ಅದೆಷ್ಟು ದೊಡ್ಡ ಮಟ್ಟದಲ್ಲಿ ಅಲ್ಲಿ ಜಲಪ್ರಳಯ ಆಗಿರಬಹುದು ಎಂದು ಅಂದಾಜಿಸಬಹುದು.
ಕಳೆದ ಮೂರ್ನಾಲ್ಕು ತಿಂಗಳಿಂದಲೂ ಪಾಕಿಸ್ತಾದ ಬಹುತೇಕ ಕಡೆ ನಿರಂತರವಾಗಿ ಮಳೆಯಾಗುತ್ತಿದೆ. ಅದರ ಪರಿಣಾಮವೇ ಭೀಕರ ಜಲಪ್ರವಾಹ. 1,100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಿಂಧ್, ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುಂಕ್ವ ಪ್ರಾಂತ್ಯಗಳಲ್ಲಂತೂ ಪರಿಸ್ಥಿತಿ ಹೆಚ್ಚು ಶೋಚನೀಯವಾಗಿದೆ. ಸಾವಿರಾರು ಮನೆಗಳು ಬಿದ್ದಿವೆ, ಊರಿಗೆ ಊರೇ ಮುಳುಗಡೆಯಾಗಿವೆ. ಭೂಕುಸಿತಗಳು ಸಂಭವಿಸುತ್ತಿವೆ. ಜನರು ಮನೆ ಕಳೆದುಕೊಂಡು, ಕುಡಿಯಲು ಅನ್ನವಿರಲಿ, ನೀರೂ ಕೂಡ ಸಿಗದ ಹಾಹಾಕಾರ ಪರಿಸ್ಥಿತಿ ಬಹಳ ಕಡೆ ಇದೆ.
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಪಾಕಿಸ್ತಾನದ ಪ್ರವಾಹ ಪರಿಸ್ಥಿತಿ ಬಗ್ಗೆ ತೀರಾ ಚಿಂತೆ ವ್ಯಕ್ತಪಡಿಸಿದ್ದಾರೆ. ಇವತ್ತು ಪಾಕಿಸ್ತಾನಕ್ಕೆ ಆಗಿದ್ದು ನಾಳೆ ನಿಮಗೂ ಆಗುತ್ತೆ ಎಂದು ಜಾಗತಿಕ ದೇಶಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಮಾನ್ಸೂನ್ ಆನ್ ಸ್ಟೀರಾಯ್ಡ್ಸ್
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳು ಪಾಕಿಸ್ತಾನದ ಪ್ರವಾಹವನ್ನು ಮಾನ್ಸೂನ್ ಆನ್ ಸ್ಟೀರಾಯ್ಡ್ಸ್ ಎಂದು ಬಣ್ಣಿಸಿದ್ದಾರೆ. ಅಂದರೆ, ಅತಿರೇಕದ ಮುಂಗಾರು ಎಂದು ಕರೆದಿದ್ದಾರೆ.
ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಶೆರಿ ರೆಹಮಾನ್ ತಮ್ಮ ದೇಶದ ಪ್ರವಾಹ ಪರಿಸ್ಥಿತಿಯನ್ನು ಬಹಳ ವಿಶದವಾಗಿ ಬಣ್ಣಿಸಿದ್ದಾರೆ. "ಪಾಕಿಸ್ತಾನದ ಸ್ಥಿತಿ ಒಂದು ರೀತಿಯಲ್ಲಿ ನೀರು ಭರ್ತಿಯಾಗಿರುವ ಸ್ಪಂಜಿನಂತೆ ಅಗಿದೆ. ಇನ್ನಷ್ಟು ನೀರನ್ನು ಹೀರಿಕೊಳ್ಳಲು ಸ್ಪಂಜಿಗೆ ಆಗುತ್ತಿಲ್ಲ" ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್, ದಕ್ಷಿಣ ಏಷ್ಯಾ ಪ್ರದೇಶ ಹವಾಮಾನ ಹವಾಮಾನ ಬಿಕ್ಕಟ್ಟಿನ ಹಾಟ್‌ಸ್ಪಾಟ್ ಆಗಿದೆ ಎಂದು ಎಚ್ಚರಿಸಿದ್ಧಾರೆ.
"ಹವಾಮಾನ ಬದಲಾವಣೆಯಿಂದ ನಮ್ಮ ಭೂಮಿಯನ್ನು ಬಲಿಕೊಡುವ ದಾರಿ ಬಿಟ್ಟುಬಿಡಿ. ಇವತ್ತು ಪಾಕಿಸ್ತಾನದಲ್ಲಿ ಪ್ರವಾಹ ಬಂದಿದೆ. ನಾಳೆ ನಿಮ್ಮ ದೇಶಕ್ಕೂ ಬರಬಹುದು," ಎಂದು ಜಾಗತಿಕ ರಾಷ್ಟ್ರಗಳಿಗೆ ಅವರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಹವಾಮಾನ ಬದಲಾವಣೆ ಎಫೆಕ್ಟ್
ಪಾಕಿಸ್ತಾನದಲ್ಲಿ ಆಗುತ್ತಿರುವ ಪ್ರವಾಹ ಪರಿಸ್ಥಿತಿಯು ಹವಾಮಾನ ಬದಲಾವಣೆಯಿಂದ ಉದ್ಭವಿಸಿರುವ ವಿದ್ಯಮಾನ. ಹಸಿರುಮನೆ ಅನಿಲಗಳಿಂದಾಗಿ ಹವಾಮಾನ ಬದಲಾವಣೆ ಆಗುತ್ತಿದೆ ಎಂದು ತಜ್ಞರು ಹೇಳುತ್ತಾರೆ.
ಜಾಗತಿಕವಾಗಿ ಹೊಮ್ಮುವ ಗ್ರೀನ್‌ಹೌಸ್ ಗ್ಯಾಸ್‌ನಲ್ಲಿ ಪಾಕಿಸ್ತಾನದ ಪಾಲು ಶೇ. 1 ಕೂಡ ಇಲ್ಲ. ಆದರೆ ಹವಾಮಾನ ಬದಲಾವಣೆಯಿಂದ ಅತಿ ಹೆಚ್ಚು ಬಾಧಿತವಾಗುವ ದೇಶಗಳಲ್ಲಿ ಪಾಕಿಸ್ತಾನ ಇರುತ್ತದೆ ಎಂದು ಪಾಕಿಸ್ತಾನದ ಸಚಿವ ಶೆರಿ ರೆಹಮಾನ್ ಕಂಗಾಲಾಗಿದ್ದಾರೆ.
ಅಷ್ಟಕ್ಕೂ ಇಂಥ ವಿಷಮ ಪ್ರವಾಹಕ್ಕೆ ಹವಾಮಾನ ಬದಲಾವಣೆ ಹೇಗೆ ಕಾರಣವಾಗುತ್ತದೆ? ತಜ್ಞರ ಪ್ರಕಾರ ಗ್ರೀನ್‌ಹೌಸ್ ಗ್ಯಾಸ್‌ಗಳು ವಾತಾವರಣವನ್ನು ಸುತ್ತುವರಿಯುತ್ತಿದ್ದು ವರ್ಷದಿಂದ ವರ್ಷಕ್ಕೆ ಭೂಮಿಯ ತಾಪಮಾನ ಏರುತ್ತಲೇ ಇದೆ. 20ನೇ ಶತಮಾನದಲ್ಲಿ ಔದ್ಯಮಿಕ ಕ್ರಾಂತಿ ಶುರುವಾದಾಗಿನಿಂದ ಭೂಮಿಯ ಉಷ್ಣತೆ 1.2 ಡಿಗ್ರಿಯಷ್ಟು ಏರಿರುವ ಅಂದಾಜು ಇದೆ. ಈಗಲೂ ಭೂಮಿಯ ತಾಪಮಾನ ಏರುತ್ತಲೇ ಇದೆ. ವಾಹನಗಳ ಹೊಗೆ, ಕೈಗಾರಿಕೆಗಳಿಂದ ಹೊರಹೊಮ್ಮುವ ವಿಷಕಾರಿ ಅನಿಲ ಇತ್ಯಾದಿ ನಿಲ್ಲದೇ ಹೋದರೆ ಹಸಿರುಮನೆ ಪರಿಣಾಮ ಭೀಕರವಾಗಿ ಆಗಲಿದ್ದು, ಪ್ರವಾಹದ ಭೀಕರತೆ ಮತ್ತು ಸಂಭಾವ್ಯತೆ ಇನ್ನಷ್ಟು ಹೆಚ್ಚಾಗುತ್ತದೆ.
ಭೂಮಿಯ ಉಷ್ಣಾಂಶ ಏರಿಕೆಯಾದರೆ ಮಂಜಿನ ಗಡ್ಡೆಗಳು ಕರಗಿ ನೀರಾಗುತ್ತವೆ. ಪರಿಣಾಮವಾಗಿ ನದಿ, ಸಮುದ್ರಗಳು ಉಕ್ಕೇರುತ್ತವೆ. ಹಾಗೆಯೇ, ಅಧಿಕ ತಾಪಮಾನದಿಂದ ಭಾರೀ ಮಳೆಯೂ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

ಪಾಕಿಸ್ತಾನಕ್ಕೆ ನೆರವು:
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಇದೇ ವೇಳೆ, ಪಾಕಿಸ್ತಾನದ ನೆರವಿಗೆ ಧಾವಿಸುವಂತೆ ವಿಶ್ವ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.
ಪಾಕಿಸ್ತಾನಕ್ಕೆ 160 ಮಿಲಿಯನ್ ಡಾಲರ್ (ಸುಮಾರು 1,270 ಕೋಟಿ ರೂಪಾಯಿ) ಹಣದ ತುರ್ತು ವ್ಯವಸ್ಥೆ ಮಾಡಲು ವಿವಿಧ ದೇಶಗಳಿಗೆ ವಿಶ್ವಸಂಸ್ಥೆ ನೆರವಿನ ಯಾಚನೆ ಮಾಡಿದೆ.
ಸದ್ಯ ಪಾಕಿಸ್ತಾನಕ್ಕೆ ಆಗಿರುವ ಭೀಕರ ಪ್ರವಾಹ ಪರಿಸ್ಥಿತಿಯಿಂದ ಆ ದೇಶ ಚೇತರಿಸಿಕೊಳ್ಳಲು 10 ಬಿಲಿಯನ್ ಡಾಲರ್ (ಸುಮಾರು 80 ಸಾವಿರ ಕೋಟಿ ರೂ) ಅಗತ್ಯ ಬೀಳಬಹುದು ಎಂಬ ಅಂದಾಜಿದೆ.
ಈಗಾಗಲೇ ಆರ್ಥಿಕವಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ಪಾಕಿಸ್ತಾನಕ್ಕೆ ಈಗ ಪ್ರವಾಹ ಇನ್ನಷ್ಟು ಪೆಟ್ಟು ಕೊಟ್ಟಿದೆ. ವಿಶ್ವಸಂಸ್ಥೆ 3 ಮಿಲಿಯನ್ ಡಾಲರ್ ನೆರವು ಒದಗಿಸಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಐಎಂಎಫ್ ಈ ಸಂಕಷ್ಟದ ಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ 1.2 ಬಿಲಿಯನ್ ಡಾಲರ್ (ಸುಮಾರು 85 ಸಾವಿರ ಕೋಟಿ ರೂ) ಸಾಲ ಮಂಜೂರು ಮಾಡಿರುವುದಾಗಿ ಹೇಳಿದೆ.
ಚೀನಾ, ಜಪಾನ್, ಯುಎಇ ಮತ್ತು ಟರ್ಕಿ ಟೆಂಟ್ ಹಾಗೂ ಔಷಧಿಗಳ ನೆರವು ನೀಡಿವೆ. ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ ಮತ್ತಿತರ ದೇಶಗಳು ಸಹಾಯ ಒದಗಿಸುವುದಾಗಿ ವಾಗ್ದಾನ ನೀಡಿವೆ.

ಭಾರತದ ನೆರವು ಅಗತ್ಯ
ಬೇರೆ ದೇಶಗಳು ಏನೇ ನೆರವು ನೀಡಲಿ, ನೆರೆಯ ದೇಶವಾಗಿ ಭಾರತದ ಸಹಾಯ ಪಾಕಿಸ್ತಾನಕ್ಕೆ ಬಹಳ ಅತ್ಯಗತ್ಯ. ಮೊನ್ನೆ ಪಾಕಿಸ್ತಾನದ ಸಚಿವರೊಬ್ಬರು ಭಾರತದ ಜೊತೆ ವ್ಯಾಪಾರ ಸಂಬಂಧ ಪುನರಾರಂಭಿಸಬೇಕೆನ್ನುವ ಇಚ್ಛೆ ವ್ಯಕ್ತಪಡಿಸಿದ್ದರು.
2019ರಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾರತದ ಜೊತೆ ವ್ಯಾಪಾರ ಸಂಬಂಧವನ್ನು ಕಡಿತ ಮಾಡಿದ್ದರು. ಈಗ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಭಾರತದೊಂದಿಗಿನ ವ್ಯಾಪಾರ ವ್ಯವಹಾರ ಅತಿ ಅಗತ್ಯ ಬೀಳುತ್ತಿದೆ
ಭಾರತ ತನ್ನ ನೆರೆಯ ದೇಶಗಳ ನೆರವಿಗೆಂದೇ ಬಜೆಟ್‌ನಲ್ಲಿ 6,292 ಕೋಟಿ ರೂ ಎತ್ತಿಡುತ್ತದೆ. ಪಾಕಿಸ್ತಾನ ಭಯೋತ್ಪಾದನೆಗೆ ಏನೇ ಕುಮ್ಮಕ್ಕು ಕೊಟ್ಟರೂ ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಮಾನವೀಯತೆಯ ದೃಷ್ಟಿಯಿಂದ ಭಾರತ ನೆರವಿಗೆ ಮನಸು ಮಾಡಿದೆ.
ಪಾಕಿಸ್ತಾನದಿಂದ ಸೂಕ್ತ ರೀತಿಯಲ್ಲಿ ಮನವಿ ಬಂದರೆ ಮಾನವೀಯ ಸಹಾಯ ಮಾಡಲು ಸಿದ್ಧವಿದೆ ಎಂದು ಹೇಳಿರುವ ಭಾರತ, ತನ್ನ ನೆರೆಯ ದೇಶದೊಂದಿಗೆ ವ್ಯಾಪಾರ ಸಂಬಂಧವನ್ನು ಪುನಾರಂಭಿಸುವ ಇರಾದೆಯಲ್ಲಿಲ್ಲ.
ಸದ್ಯಕ್ಕೆ ಎರಡೂ ದೇಶಗಳ ಮಧ್ಯೆ ವ್ಯಾಪಾರ ಸಂಬಂಧ ಮತ್ತೆ ಶುರುವಾಗುವುದಿಲ್ಲ. ಆದರೆ, ಮಾನವೀಯತೆಯ ದೃಷ್ಟಿಯಿಂದ ಪಾಕಿಸ್ತಾನಕ್ಕೆ ನೆರವನ್ನಂತೂ ಒದಗಿಸಲು ಸಿದ್ಧವಿದ್ದೇವೆ. ಅದೆಲ್ಲವೂ ಪಾಕಿಸ್ತಾನದಿಂದ ಯಾವ ರೀತಿಯಲ್ಲಿ ಮನವಿ ಬರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಕೇಂದ್ರದ ಮೂಲಗಳು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿ ಬಂದಿವೆ
(ಒನ್ಇಂಡಿಯಾ ಸುದ್ದಿ)












Click it and Unblock the Notifications