ತೋಟ ಅಡವಿಟ್ಟು 100 ಮೀಟರ್ ಸೇತುವೆ ನಿರ್ಮಿಸಿದ ಬೋಟ್‌ಮ್ಯಾನ್
ಭುವನೇಶ್ವರ, ನವೆಂಬರ್ 16: ಆ ವ್ಯಕ್ತಿಯ ಮುಖದಲ್ಲಿ ಅದೆನೋ ಖುಷಿ. ಸಾಧನೆ ಮಾಡಿದ ಸಮಾಧಾನ. ತಮ್ಮೂರಿನ ಜನರಿಗೆ ದಾರಿ ದೀಪವಾದ ತೃಪ್ತಿ. ಇದು ನೂರಾರು ಜನರಿಗೆ ಸೇತುವೆ ನಿರ್ಮಸಿದ ಒಡಿಶಾದ ಬೋಟ್‌ಮ್ಯಾನ್ ಕಥೆ. ಈಗಿನ ಕಾಲದಲ್ಲಿ ಕೊಂಚ ಭೂಮಿ ಕೊಡುವುದಿರಲಿ, ಬೇರೆಯವರ ಜಾಗದಲ್ಲಿ ನಡೆದಾಡುವುದು ಕಷ್ಟವಿದೆ. ಹೀಗಿರುವಾಗ ಕೋರಾಪುಟ್ ಜಿಲ್ಲೆಯ ಕೋಟ್ಪಾಡ್ ಬ್ಲಾಕ್‌ನ ಬಸುಲಿ ಗ್ರಾಮದ ಜಯದೇವ್ ಭಟ್ರ (55) ತಮ್ಮದೇ ಕಬ್ಬಿನ ತೋಟವನ್ನು ಅಡಮಾನ ಇಟ್ಟು ತಾವೇ ಸ್ವತ: 100 ಮೀಟರ್ ಸೇತುವೆ ನಿರ್ಮಿಸಿದ್ದಾರೆ. ಆ ಮೂಲಕ ಕನಿಷ್ಠ 30,000 ಜನರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಜಯದೇವ್ ಭಾತ್ರಾ ಅವರು ಜೀವನೋಪಾಯಕ್ಕಾಗಿ ಇಂದ್ರಾವತಿ ನದಿಯಲ್ಲಿ ಹಳ್ಳಿಗಾಡಿನ ದೋಣಿಯನ್ನು ಓಡಿಸುತ್ತಿದ್ದರು. ನೂರಾರು ಜನರನ್ನು ಇವರು ತಮ್ಮ ದೋಣಿಯಲ್ಲಿ ದಡ ದಾಟಿಸುತ್ತಿದ್ದರು. ಇಂದ್ರಾವತಿ ಮೇಲೆ ಸೇತುವೆ ನಿರ್ಮಾಣದ ಸರ್ಕಾರದ ಭರವಸೆಯಿಂದ ಜಯದೇವ್ ಹಾಗೂ ಊರಿನ ಜನ ಬೇಸತ್ತಿದ್ದರು. ಹೀಗಾಗಿ ಜಯದೇವ್ ಸ್ವತ: ತಾವೇ ಸೇತುವೆ ನಿರ್ಮಾಣ ಮಾಡುವ ಪಣತೊಟ್ಟರು. ಸದ್ಯ ಸುಮಾರು 3 ವರ್ಷಗಳ ಹಿಂದೆ ನಿರ್ಮಾಣಕ್ಕೆ ಮುಂದಾಗಿದ್ದ ಬಿದಿರಿನ ಸೇತುವೆಯನ್ನು ಪೂರ್ಣಗೊಳಿಸಿದ್ದಾರೆ. ನಬರಂಗಪುರ ಜಿಲ್ಲೆಯ ಕಾಂತಸಾರಗುಡ ಗ್ರಾಮ ಮತ್ತು ಕೊರಾಪುಟ್ ಜಿಲ್ಲೆಯ ಬಸುಲಿ ಗ್ರಾಮವನ್ನು ಸಂಪರ್ಕಿಸುವ ಈ ಸೇತುವೆ ನಿರ್ಮಾಣಕ್ಕೆ 3 ಎಕರೆ ಕಬ್ಬಿನ ತೋಟವನ್ನು ಅಡವಿಟ್ಟು 1 ಲಕ್ಷ ಹಣವನ್ನು ಪಡೆಯಲಾಗಿದೆ.
"ಇಂದ್ರಾವತಿ ಮೇಲೆ ಸೇತುವೆ ನಿರ್ಮಾಣದ ಸರ್ಕಾರದ ಭರವಸೆಯಿಂದ ನಾನು ಬೇಸತ್ತಿದ್ದೇನೆ. ನೂರಾರು ಜನರನ್ನು ನದಿ ದಾಟಿಸಿ ಜೀವನ ಸಾಗಿಸುವುದು ಕಷ್ಟವಾಗುತ್ತಿತ್ತು. ಮಾತ್ರವಲ್ಲದೆ ನೂರಾರು ಜನರನ್ನು ದಡ ದಾಟಿಸುತ್ತಿದ್ದ ನನ್ನ ಹಳ್ಳಿಗಾಡಿನ ದೋಣಿ ಹಳೆಯದಾಗಿತ್ತು. ಹೀಗಾಗಿ ಸೇತುವೆ ಮಾಡುವ ನಿರ್ಧಾರ ಮಾಡಿದೆ. ಭಾರೀ ಮಳೆಗಾಲದಲ್ಲಿ ದೋಣಿಯಲ್ಲಿ ಸಾಗಲು ತುಂಬಾ ಭಯವಾತ್ತಿತ್ತು. ಹಾಗಾಗಿ ನಾನು 3 ವರ್ಷಗಳ ಹಿಂದೆ ನದಿಗೆ ಅಡ್ಡಲಾಗಿ ಬಿದಿರು ಸೇತುವೆಯನ್ನು ನಿರ್ಮಿಸಲು ಪ್ರಾರಂಭಿಸಿದೆ "ಎಂದು ಭಟ್ರಾ ಹೇಳಿದರು. ಉದ್ಘಾಟನೆಗೆ ಸ್ಥಳೀಯ ಶಾಸಕ ಸಶಶಿವ ಪಧಾನಿ ಅವರನ್ನು ಆಹ್ವಾನಿಸಿದರೂ ಶಾಸಕರು ಬರಲಿಲ್ಲ ಎಂದು ಜಯದೇವ್ ಹೇಳಿದರು.
ಸೇತುವೆ ನಿರ್ಮಾಣದ ಆರಂಭದಲ್ಲಿ ಕಾಂತಾಸರಗುಡ, ಬಸುಲಿ ಗ್ರಾಮಸ್ಥರು ನನ್ನನ್ನು ಹೀಯಾಳಿಸಿದರು. ಆಗ ತಾವೇ ಎಲ್ಲವನ್ನೂ ಮಾಡಲು ನಿರ್ಧರಿಸಿದರು. ಈ ವರ್ಷದ ಆರಂಭದಲ್ಲಿ ಸೇತುವೆಗಾಗಿ 1 ಲಕ್ಷ ಸಂಗ್ರಹಿಸಲು ತಮ್ಮ ಕಬ್ಬಿನ ತೋಟವನ್ನು ಅಡಮಾನ ಇಡಲು ನಿರ್ಧರಿಸಿದರು. "ಇದು ನನಗೆ ಕಠಿಣ ನಿರ್ಧಾರವಾಗಿತ್ತು. ಆದರೆ ಬೇರೆ ಆಯ್ಕೆ ಇರಲಿಲ್ಲ" ಎಂದು ಭಾತ್ರಾ ಹೇಳಿದರು. ಅವರು ತಮ್ಮ 32 ವರ್ಷದ ಮಗ ಬನಮಾಲಿಯೊಂದಿಗೆ ಸ್ಥಳೀಯ ಮಾರುಕಟ್ಟೆಯಿಂದ ಬಿದಿರನ್ನು ಪಡೆದರು. ಸೇತುವೆಯಲ್ಲಿ ತನಗೆ ಸಹಾಯ ಮಾಡಿದ ಗ್ರಾಮಸ್ಥರಿಗೆ ಭಟ್ರ ಕೂಲಿಯನ್ನೂ ನೀಡಿದ್ದಾರೆ. ಸ್ವಲ್ಪ ಅಲುಗಾಡಿದರೂ 4 ಅಡಿ ಅಗಲದ ಸೇತುವೆಯು ದ್ವಿಚಕ್ರ ವಾಹನ ಸವಾರರ ಭಾರವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಭಾತ್ರಾ ಇದಕ್ಕೆ ಯಾವುದೇ ಟೋಲ್ ವಿಧಿಸುತ್ತಿಲ್ಲವಾದರೂ ಪ್ರಯಾಣಿಕರು 5 ಮತ್ತು 10 ರೂ. ನೀಡಿದ ಹಣವನ್ನು ಅವರು ಸ್ವೀಕರಿಸುತ್ತಾರೆ.
ಬಿದಿರಿನ ಸೇತುವೆಯು ಕೊಸಗುಮುಡ ಬ್ಲಾಕ್ ಮತ್ತು ಕೋಟ್‌ಪಾಡ್ ಬ್ಲಾಕ್‌ನ ನಿವಾಸಿಗಳ ನಡುವಿನ ಅಂತರವನ್ನು 25 ಕಿಲೋಮೀಟರ್‌ಗಿಂತಲೂ ಕಡಿಮೆ ಮಾಡುತ್ತದೆ. ಅವರಿಗೆ ಆರೋಗ್ಯ ಮತ್ತು ಶಿಕ್ಷಣವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಗುಮುಡ ಪಂಚಾಯಿತಿಯ ಸರಪಂಚ್ ಸೋನಾರು ಪೂಜಾರಿ ಹೇಳುತ್ತಾರೆ. ಇಂದ್ರಾವತಿ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ದಶಕಕ್ಕೂ ಹೆಚ್ಚು ಕಾಲ ಒತ್ತಾಯಿಸುತ್ತಿದ್ದರೂ ಭಟ್ರವರು ಅದನ್ನು ನನಸಾಗಿಸಿದ್ದಾರೆ. ಜನರಿಗೆ ಸಹಾಯ ಮಾಡಲು ಯಾರಾದರೂ ಇಷ್ಟು ಸಮಯ ಮತ್ತು ಹಣವನ್ನು ಖರ್ಚು ಮಾಡುತ್ತಾರೆನ್ನುವುದು ತುಂಬಾ ಸಂತೋಷದ ಮತ್ತು ಪ್ರಶಂಸೆಯ ವಿಚಾರ "ಎಂದು ಪೂಜಾರಿ ಹೇಳಿದರು.
2018ರ ವೇಳೆಗೆ ಪೂರ್ಣಗೊಳ್ಳಬೇಕಿದ್ದ ನಬರಂಗಪುರದ ಚಿರ್ಮಾ ಗ್ರಾಮದಲ್ಲಿ 2016ರಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ನದಿಗೆ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. "16.30 ಕೋಟಿ ಅಂದಾಜಿಸಲಾಗಿದ್ದ ಯೋಜನೆಯ ಗಡುವನ್ನು ಮೊದಲು 2019ಕ್ಕೆ ವಿಸ್ತರಿಸಲಾಗಿತ್ತು. ಆದರೆ ಐದು ವರ್ಷಗಳಲ್ಲಿ ಸೇತುವೆಯ ಒಂದು ಪಿಲ್ಲರ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ"ಎಂದು ಪೂಜಾರಿ ಹೇಳಿದರು. ಈ ವರ್ಷ ಪೂರ್ಣಗೊಳ್ಳಬೇಕಿದ್ದ ಸೇತುವೆಯ ಸ್ಥಿತಿಗತಿ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ವರದಿ ಕೇಳಿರುವುದಾಗಿ ನಬರಂಗ್‌ಪುರ ಜಿಲ್ಲಾಧಿಕಾರಿ ಕಮಲ್ ಲೋಚನ್ ಮಿಶ್ರಾ ಹೇಳಿದ್ದಾರೆ. ಬಿದಿರಿನ ಸೇತುವೆ ನಿರ್ಮಿಸಲು ಬೋಟ್‌ಮ್ಯಾನ್ ತನ್ನ ಜಮೀನನ್ನು ಅಡಮಾನ ಇಟ್ಟಿರುವ ವರದಿಯು ಸರ್ಕಾರಕ್ಕೆ ಅವಮಾನವಾಗಿದೆ ಎಂದು ಅವರು ಹೇಳಿದರು.
ಜೂನ್ 2019 ರಲ್ಲಿ, ಕಿಯೋಂಜಾರ್ ಜಿಲ್ಲೆಯ ನಿವೃತ್ತ ಜಾನುವಾರು ಇನ್ಸ್‌ಪೆಕ್ಟರ್ ಅವರು ತಮ್ಮ ನಿವೃತ್ತಿಯ ಉಳಿತಾಯವನ್ನು ಎರಡು ಹಳ್ಳಿಗಳನ್ನು ಸಂಪರ್ಕಿಸಲು ಸಲಾಂಡಿ ನದಿಯ ಮೇಲೆ 270 ಅಡಿ ಉದ್ದದ ಕಾಂಕ್ರೀಟ್ ಸೇತುವೆಯನ್ನು ನಿರ್ಮಿಸಲು ತೊಡಗಿಸಿಕೊಂಡರು. ಕಿಯೋಂಜಾರ್ ಜಿಲ್ಲೆಯ ಹತದಿಹಿ ಬ್ಲಾಕ್‌ನ ಕಾನ್ಪುರ್ ಗ್ರಾಮದ ಗಂಗಾಧರ್ ರೌತ್ ಅವರು ತಮ್ಮ ಉಳಿತಾಯದಿಂದ16 ಲಕ್ಷ ಖರ್ಚು ಮಾಡಿ ಈ ವರ್ಷದ ಆಗಸ್ಟ್‌ನಲ್ಲಿ ಸೇತುವೆಯನ್ನು ನಿರ್ಮಿಸಿದರು. ಸೇತುವೆಗೆ ಅಪ್ರೋಚ್ ರಸ್ತೆಗಳನ್ನು ನಿರ್ಮಿಸುವುದಾಗಿ ಕಿಯೋಂಜಾರ್ ಜಿಲ್ಲಾಡಳಿತ ಭರವಸೆ ನೀಡಿದ್ದರೂ, ಯೋಜನೆಯು ಅಪೂರ್ಣವಾಗಿದೆ.