ನೀತಿ ಆಯೋಗದ ಆರೋಗ್ಯ ಸೂಚ್ಯಂಕ: ಕೇರಳಕ್ಕೆ ಅಗ್ರ ಸ್ಥಾನ, ಯುಪಿಯಲ್ಲಿದೆ ಕೆಟ್ಟ ಪರಿಸ್ಥಿತಿ!
ಕೇರಳ ರಾಜ್ಯವು ಆರೋಗ್ಯ ಸೂಚ್ಯಂಕದಲ್ಲಿ ಮತ್ತೆ ಅಗ್ರ ಸ್ಥಾನದಲ್ಲಿದೆ. ದೊಡ್ಡ ರಾಜ್ಯಗಳ ಪೈಕಿ ಕೇರಳ ರಾಜ್ಯವು ಟಾಪ್‌ನಲ್ಲಿದ್ದು, ಈ ಸಂದರ್ಭದಲ್ಲೇ ಉತ್ತರ ಪ್ರದೇಶವು ಕೆಟ್ಟ ಪರಿಸ್ಥಿತಿಯನ್ನು ಹೊಂದಿದೆ ಎಂದು ನೀತಿ ಆಯೋಗದ ಆರೋಗ್ಯ ಸೂಚ್ಯಂಕ ಹೇಳಿದೆ. 2019-20 ರ ಸಾಲಿನ ಆರೋಗ್ಯ ಸೂಚ್ಯಂಕ ಇದಾಗಿದೆ.
ಇನ್ನು ಈ ಟಾಪ್ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಮಾತ್ರವಲ್ಲದೆ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯವು ಕೂಡಾ ಇದೆ. ಆದರೆ ಉತ್ತರ ಪ್ರದೇಶ ರಾಜ್ಯವು ಉತ್ತರಾಖಂಡ ಹಾಗೂ ರಾಜಸ್ಥಾನ, ಮಧ್ಯ ಪ್ರದೇಶದೊಂದಿಗೆ ಕೊನೆಯ ಸ್ಥಾನದಲ್ಲಿ ಇದೆ. ಇನ್ನು 2019-20 ರ ಆರೋಗ್ಯ ಸೂಚ್ಯಂಕದ ಪ್ರಕಾರ ಸಣ್ಣ ರಾಜ್ಯಗಳ ಪೈಕಿ ಮಿಜೋರಾಂ ಮೊದಲ ಸ್ಥಾನದಲ್ಲಿ ಇದೆ. ಈ ವೇಳೆಯಲ್ಲೇ ನಾಗಾಲ್ಯಾಂಡ್ ಕೊನೆಯ ಸ್ಥಾನದಲ್ಲಿ ಇದೆ. ಇನ್ನು ಈ ನಡುವೆ ಕಳೆದ 2018-19 ಸಾಲಿನ ಆರೋಗ್ಯ ಸೂಚ್ಯಂಕಕ್ಕಿಂತ ಮಿಜೋರಾಂ, ಸಿಕ್ಕಿಂ ಹಾಗೂ ಮೇಘಾಲಯ ರ್‍ಯಾಕಿಂಗ್‌ನಲ್ಲಿ ಕೊಂಚ ಮೇಲಕ್ಕೆ ಏರಿದೆ.
ಕೇಂದ್ರಾಡಳಿತ ಪ್ರದೇಶಗಳ ಪೈಕಿ ದಮನ್ ಮತ್ತು ದಿಯೋ, ನಗರ ಹವೇಲಿ ಮತ್ತು ಚಂಡೀಗಢ ಮೊದಲು ಹಾಗೂ ಎರಡನೇ ಸ್ಥಾನದಲ್ಲಿ ಇದೆ. 2018-19 ರ ಆರೋಗ್ಯ ಸೂಚ್ಯಂಕವನ್ನು ನೋಡಿದಾಗ, 2019-20 ರಲ್ಲಿ ದಮನ್ ಮತ್ತು ದಿಯೋ, ದಾದ್ರಾ, ನಗರ್ ಹವೇಲಿ, ಲಕ್ಷದ್ವೀಪ, ದೆಹಲಿ, ಜಮ್ಮು ಮತ್ತು ಕಾಶ್ಮೀರ ಕೊಂಚ ಅಭಿವೃದ್ಧಿಯನ್ನು ಹೊಂದಿದೆ.

ಮೊದಲ ಸ್ಥಾನದಲ್ಲಿ ಕೇರಳ
ಈ ವರದಿಯನ್ನು ನೀತಿ ಆಯೋಗವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ವಿಶ್ವ ಬ್ಯಾಂಕ್‌ನ ಸಹಯೋಗದೊಂದಿಗೆ ತಯಾರಿ ಮಾಡಿದೆ. 2018-19 ರ ವರ್ಷದಿಂದ 2019-20 ರ ವರ್ಷಕ್ಕೆ ರಾಜ್ಯಗಳಲ್ಲಿ ಆರೋಗ್ಯ ಸ್ಥಿತಿಯನ್ನು ನೋಡಿಕೊಂಡು ಈ ವರದಿಯನ್ನು ಸಿದ್ದಪಡಿಸಲಾಗಿದೆ. ಉತ್ತರ ಪ್ರದೇಶ ಸೂಚಕದಲ್ಲಿ ಕೊಂಚ ಬೆಳವಣಿಗೆ ಹೊಂದಿದೆ ಎಂದು ಕಂಡು ಬಂದಿದ್ದರೂ ಪರಿಸ್ಥಿತಿ ಇನ್ನೂ ಕೂಡಾ ಆರೋಗ್ಯ ಪರಿಸ್ಥಿತಿ ಕೆಟ್ಟದಾಗಿದೆ ಎಂದು ವರದಿಯು ಹೇಳುತ್ತದೆ. ಇನ್ನು ಈ ಸಂದರ್ಭದಲ್ಲೇ ಕೇರಳದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಬೆಳವಣಿಗೆ ಕಂಡು ಬಂದಿದೆ. ಈ ಮೂಲಕ ಕೇರಳ ಮೊದಲ ಸ್ಥಾನವನ್ನು ಕಾಪಾಡಿಕೊಂಡಿದೆ.

ಉತ್ತರ ಪ್ರದೇಶ ಸೂಚ್ಯಂಕ
ಇನ್ನು ಹೆಚ್ಚು ಅಭಿವೃದ್ಧಿ ಹೊಂದಿರುವ ರಾಜ್ಯಗಳಲ್ಲಿಯೂ ಕೂಡಾ ಇನ್ನೂ ಅಭಿವೃದ್ಧಿ ಆಗಬೇಕಿದೆ. ಅತೀ ಅಧಿಕ ಆರೋಗ್ಯ ಸೂಚ್ಯಂಕವೆಂದರೆ 82.20 ಆಗಿದ್ದು, ಅದು ಕೇರಳದ ಸೂಚ್ಯಂಕವಾಗಿದೆ. ಇನ್ನೂ ಕೂಡಾ ಶೇಕಡ 100 ಕ್ಕೆ ತುಂಬಾ ಅಂತರವಿದೆ. ಇನ್ನು ಅತೀ ಕಡಿಮೆ ಆರೋಗ್ಯ ಸೂಚ್ಯಂಕವನ್ನು ಹೊಂದಿರುವ ಉತ್ತರ ಪ್ರದೇಶದ ಆರೋಗ್ಯ ಸೂಚ್ಯಂಕವು ಶೇಕಡ 30.57 ಆಗಿದೆ. ಇನ್ನು ಉತ್ತರ ಪ್ರದೇಶ ಸೂಚ್ಯಂಕವು ಈ ಹಿಂದೆ 2018-2019 ರಲ್ಲಿ 25.07 ಆಗಿತ್ತು. ಆದರೆ ಬಳಿಕ 2019-20 ರಲ್ಲಿ ಶೇಕಡ 30.57 ಕ್ಕೆ ಏರಿಕೆ ಕಂಡಿದೆ.

ರಾಜ್ಯವಾರು ಟಾಪ್-5 ಪಟ್ಟಿ ಇಲ್ಲಿದೆ ನೋಡಿ
ಕೇರಳ ಕಳೆದ ಬಾರಿ ಒಂದನೇ ಸ್ಥಾನದಲ್ಲಿದ್ದು, ಈ ಬಾರಿಯೂ ಆ ಸ್ಥಾನವನ್ನು ಕಾಪಾಡಿಕೊಂಡಿದೆ. ಆರೋಗ್ಯ ಸೂಚ್ಯಂಕ ಶೇಕಡ 82.20 ಆಗಿದೆ. ಇನ್ನು ತಮಿಳುನಾಡು ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದು ಈ ಬಾರಿಯೂ ಕೂಡಾ ಸ್ಥಾನವನ್ನು ಕಾಪಾಡಿಕೊಂಡಿದೆ. ತಮಿಳುನಾಡಿನ ಆರೋಗ್ಯ ಸೂಚ್ಯಂಕ ಶೇಕಡ 72.42 ಆಗಿದೆ. ಕಳೆದ ಬಾರಿ ನಾಲ್ಕನೇ ಸ್ಥಾನದಲ್ಲಿ ಇದ್ದ ತೆಲಂಗಾಣ ಈ ಬಾರಿ ಮೂರನೇ ಸ್ಥಾನಕ್ಕೆ ಏರಿದೆ. ತೆಲಂಗಾಣದ ಆರೋಗ್ಯ ಸೂಚ್ಯಂಕ ಶೇಕಡ 69.96 ಆಗಿದೆ. ಆಂಧ್ರ ಪ್ರದೇಶದವು ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಆಂಧ್ರ ಪ್ರದೇಶದ ಆರೋಗ್ಯ ಸೂಚ್ಯಂಕ 69.95 ಆಗಿದೆ. ಇನ್ನು ಮಹಾರಾಷ್ಟ್ರ ಮಾತ್ರ ಐದನೇ ಸ್ಥಾನದಲ್ಲಿಯೇ ಉಳಿದು ಕೊಂಡಿದೆ. ಮಹಾರಾಷ್ಟ್ರದ ಆರೋಗ್ಯ ಸೂಚ್ಯಂಕ ಶೇಕಡ 69.14 ಆಗಿದೆ.

ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?
ಕರ್ನಾಟಕ ರಾಜ್ಯವು 2018-2019 ರಲ್ಲಿ ಎಂಟನೇ ಸ್ಥಾನದಲ್ಲಿ ಇತ್ತು. ಆದರೆ ಈ ವರ್ಷ ಒಂದು ಸ್ಥಾನ ಇಳಿದಿದೆ. ಅಂದರೆ 2019-20 ರ ನೀತಿ ಆಯೋಗದ ಆರೋಗ್ಯ ಸೂಚ್ಯಂಕದ ಪ್ರಕಾರ ಕರ್ನಾಟಕ ಒಂಬತ್ತನೇ ಸ್ಥಾನದಲ್ಲಿ ಇದೆ. ಕರ್ನಾಟಕದ ಆರೋಗ್ಯ ಸೂಚ್ಯಂಕವು ಶೇಕಡ 57.93 ಆಗಿದೆ. ಇನ್ನು ಆರನೇ ಸ್ಥಾನದಲ್ಲಿ ಇದ್ದ ಹಿಮಾಚಲ ಪ್ರದೇಶ ಏಳನೇ ಸ್ಥಾನಕ್ಕೆ ಕುಸಿದಿದೆ. ಹಿಮಾಚಲ ಪ್ರದೇಶದ ಆರೋಗ್ಯ ಸೂಚ್ಯಂಕ 63.17 ಆಗಿದೆ. ಇನ್ನು ಗುಜರಾತ್‌ನ ಆರೋಗ್ಯ ಸೂಚ್ಯಂಕವು ಏಳನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಗುಜರಾತ್‌ನ ಆರೋಗ್ಯ ಸೂಚ್ಯಂಕವು ಶೇಕಡ 63.59 ಆಗಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications