ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ದಸರಾ: ಮಹಿಳಾ ಮತ್ತು ಮಕ್ಕಳ ದಸರೆಗೆ ಹೊಸತನದ ಮೆರಗು

By ಬಿಎಂ ಲವಕುಮಾರ್
|
Google Oneindia Kannada News

ಮೈಸೂರು ದಸರಾ ಎಂದರೆ ಬರೀ ಅಂಬಾರಿ- ಜಂಬೂಸವಾರಿ ನಮ್ಮ ಕಣ್ಣಮುಂದೆ ಹಾದು ಹೋಗುತ್ತದೆ. ಆದರೆ ದಸರಾ ಆರಂಭದ ಹತ್ತು ದಿನಗಳ ಕಾಲ ನಡೆಯುವ ಒಂದೊಂದು ಕಾರ್ಯಕ್ರಮಗಳು ಕೂಡ ದಸರಾಕ್ಕೆ ಮೆರಗು ನೀಡುತ್ತವೆ. ಅದರಲ್ಲೊಂದು ಮಹಿಳಾ ಮತ್ತು ಮಕ್ಕಳ ದಸರವಾಗಿದೆ.

ಕೊರೊನಾ ಕಾರಣದಿಂದ ಮೈಸೂರು ದಸರಾ ಎರಡು ವರ್ಷಗಳ ಕಾಲ ಸರಳವಾಗಿ ನಡೆದಿತ್ತು. ಹೀಗಾಗಿ ಮಹಿಳಾ ಮತ್ತು ಮಕ್ಕಳ ದಸರಾ ನಡೆದಿರಲಿಲ್ಲ. ಆದರೆ ಈ ಬಾರಿ ಅದ್ಧೂರಿ ದಸರಾ ನಡೆಸಲಾಗುತ್ತಿದ್ದು, ಅದರಲ್ಲಿ ಮಹಿಳಾ ಮತ್ತು ಮಕ್ಕಳ ದಸರಾವನ್ನು ಹಲವು ವಿಶೇಷತೆಗಳೊಂದಿಗೆ ಆಚರಿಸಲು ಸರ್ವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಾರಿ ಸೆಪ್ಟೆಂಬರ್ 27ರಿಂದ ಅಕ್ಟೋಬರ್‌ 1ರವರೆಗೆ ಮಹಿಳಾ ಮತ್ತು ಮಕ್ಕಳ ದಸರಾ ನಡೆಯಲಿದೆ.

ಎರಡು ವರ್ಷಗಳ ಬಳಿಕ ಮಹಿಳಾ, ಮಕ್ಕಳ ದಸರಾ ನಡೆಯುತ್ತಿರುವುದರಿಂದ ಮಹಿಳೆಯರು ಮತ್ತು ಮಕ್ಕಳು ದಸರಾಕ್ಕೆ ರಂಗು ತುಂಬಲು ಎಲ್ಲ ರೀತಿಯಲ್ಲಿಯೂ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜತೆಗೆ ಮಹಾಮಾರಿ ಕೊರೊನಾದಿಂದಾಗಿ ಎರಡು ವರ್ಷದಿಂದ ಕಳೆಗುಂದಿದ್ದ ದಸರಾಕ್ಕೆ ಹೊಸ ಕಳೆ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಈ ನಡುವೆ ಮಹಿಳಾ ಮತ್ತು ಮಕ್ಕಳ ದಸರಾವನ್ನು ಈ ಬಾರಿ ಹೊಸತನದೊಂದಿಗೆ ಆಚರಿಸಲು ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ತೀರ್ಮಾನ ಕೈಗೊಂಡಿದೆ.

ಐದು ದಿನಗಳ ಮಹಿಳಾ ದಸರಾ ಕಾರ್ಯಕ್ರಮಗಳ ಪೈಕಿ ಮೂರು ದಿನ ಅಂದರೆ ಸೆಪ್ಟೆಂಬರ್ 27ರಿಂದ 29ರವರಗೆ ಮಹಿಳೆಯರಿಗಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಮಹಿಳೆಯರಿಗೆ ಅನುಕೂಲವಾಗುವ ಹಾಗೂ ಮಕ್ಕಳು, ಮಹಿಳೆಯರು ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಮನರಂಜನೆ ನೀಡುವಂತಹ ನಾನಾ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಸಬಲೀಕರಣದ ಆಶಯದೊಂದಿಗೆ ಮಹಿಳಾ ಹಾಗೂ ಮಕ್ಕಳ ದಸರಾ ಆಯೋಜಿಸಲು ತೀರ್ಮಾನಿಸಲಾಗಿದೆ.

 ಮಹಿಳಾ ಮತ್ತು ಮಕ್ಕಳ ದಸರಾ

ಮಹಿಳಾ ಮತ್ತು ಮಕ್ಕಳ ದಸರಾ

ನಾನಾ ಸ್ಪರ್ಧೆ, ಭರಪೂರ ಮನರಂಜನೆಯ ಜತೆಗೆ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಹಾಗೂ ದೌರ್ಜನ್ಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಈ ಬಾರಿ ವಿಶೇಷವಾಗಿ ಲಿಂಗತ್ವ ಅಲ್ಪಸಂಖ್ಯಾತರನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೂ ಜೋಶ್ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ.

ಜೆ.ಕೆ.ಮೈದಾನದಲ್ಲಿ 27ರಂದು ಮಹಿಳಾ ಮತ್ತು ಮಕ್ಕಳ ದಸರಾದ ಉದ್ಘಾಟನೆ ನಡೆಯಲಿದ್ದು, ಮೊದಲ ದಿನ ರಂಗೋಲಿ ಸ್ಪರ್ಧೆ ಆಯೋಜಿಸಿದ್ದರೆ, ಉದ್ಘಾಟನೆಗೂ ಮುನ್ನ ರಂಗೋಲಿ ಸ್ಪರ್ಧೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಬೆಳ್ಳಂಬೆಳಗ್ಗೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ಪರ್ಧೆಯಲ್ಲಿ ಗೆಲುವು ಪಡೆಯುವ ಮಹಿಳೆಯರಿಗೆ ಆಕರ್ಷಕ ಬಹುಮಾನವೂ ಇರಲಿದೆ.

 ರಾಗಿ ಬೀಸುವ ಸ್ಪರ್ಧೆ

ರಾಗಿ ಬೀಸುವ ಸ್ಪರ್ಧೆ

ಮೊದಲ ದಿನ ಸರಕಾರಿ ಬಾಲಕರ ಹಾಗೂ ಬಾಲಕಿಯರ ಮಂದಿರದ ಮಕ್ಕಳಿಂದ ಮೆರವಣಿಗೆ ನಡೆಯಲಿದೆ. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಅನಾವರಣವಾಗಲಿದೆ. ಎರಡನೇ ದಿನ ಮಹಿಳೆಯರಿಗೆ ಪದಗಳೊಂದಿಗೆ ರಾಗಿ ಬೀಸುವ ಸ್ಪರ್ಧೆ ಆಯೋಜಿಸಲಾಗಿದೆ. ಆಸಕ್ತರು ರಾಗಿ ಬೀಸುವ ಕಲ್ಲನ್ನು ತಾವೇ ತಂದು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಎಲ್ಲ ಮಹಿಳೆಯರು ಜಾನಪದ ಸೇರಿದಂತೆ ನಾನಾ ಪದಗಳನ್ನು ಹಾಡುತ್ತರಾಗಿ ಬೀಸಬೇಕಾಗಿದೆ. ಮಹಿಳೆಯರಿಗೆ ವೇಷಭೂಷಣ ಸ್ಪರ್ಧೆ, ಒಲೆ ರಹಿತ ಅಡುಗೆ ಸ್ಪರ್ಧೆ ನಡೆಯಲಿದೆ.

 ಮಮಿಕ್ರಿ ,ನಾಟಕ ಪ್ರದರ್ಶನ

ಮಮಿಕ್ರಿ ,ನಾಟಕ ಪ್ರದರ್ಶನ

ಈ ಬಾರಿ ದಸರಾ ಕಾರ್ಯಕ್ರಮದಲ್ಲಿ ಎರಡನೇ ದಿನ ಲೈಂಗಿಕ ಅಲ್ಪಸಂಖ್ಯಾತರಿಗೆ ಅವಕಾಶ ನೀಡಲಾಗಿದ್ದು, ಅವರಿಗಾಗಿ ವಿವಿಧ ರೀತಿಯ ಸ್ಪರ್ಧೆಗಳಾದ. ಲೆಮೆನ್ ಆಂಡ್ ಸ್ಪೂನ್, ಮಡಕೆ ಒಡೆಯುವ ಸ್ಪರ್ಧೆ ಸೇರಿದಂತೆ ವಿವಿಧ ರೀತಿಯ ಕ್ರೀಡೆಗಳು ನಡೆಯಲಿವೆ. ಜತೆಗೆ ಲಿಂಗತ್ವ ಅಲ್ಪಸಂಖ್ಯಾತರಿಂದ ನೃತ್ಯ ಮತ್ತು ನಾಟಕ ಪ್ರದರ್ಶನಗೊಳ್ಳಲಿದೆ. ಗೋಪಿ ಸೇರಿದಂತೆ ಮಿಮಿಕ್ರಿ ಕಲಾವಿದರಿಂದ ಮಿಮಿಕ್ರಿ ಕಾರ್ಯಕ್ರಮ, ನಾಟಕ ರಂಗ ಟ್ರಸ್ಟ್ ಮೈಸೂರು ವತಿಯಿಂದ ಇವಳಜ್ಜಿ ಅದಮಜ್ಜಿ ನಾಟಕ ಪ್ರದರ್ಶನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

 ಜಾನಪದ ಸಮೂಹ ನೃತ್ಯ ಸ್ಪರ್ಧೆ

ಜಾನಪದ ಸಮೂಹ ನೃತ್ಯ ಸ್ಪರ್ಧೆ

ಮಹಿಳಾ ದಸರಾ ಅಂಗವಾಗಿ ಮೂರನೇ ದಿನ ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಇಲಾಖೆ ಸಿಬ್ಬಂದಿ ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ನಾನಾ ಆಟೋಟ ನಡೆಯಲಿದ್ದು, ವಿಶೇಷವಾಗಿ ನೀರು ತುಂಬಿದ ಬಿಂದಿಗೆಯನ್ನು ಹೊತ್ತು ನಡೆಯುವ ಸ್ಪರ್ಧೆ, ಲೆಮೆನ್ ಆಂಡ್ ಸ್ಪೂನ್, ಬಲೂನ್ ಊದುವ ಸ್ಪರ್ಧೆ, ಜಾನಪದ ಗೀತೆ ಗಾಯನ ಸ್ಪರ್ಧೆ, ಕೇಶವಿನ್ಯಾಸ ಸ್ಪರ್ಧೆ, ಜಾನಪದ ಸಮೂಹ ನೃತ್ಯ ಸ್ಪರ್ಧೆ ನಡೆಯಲಿವೆ. ಬಳಿಕ ಸುಧಾ ಬರಗೂರು ಅವರಿಂದ ಚುಟುಕು ಹಾಸ್ಯ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ.

ಒಟ್ಟಾರೆ ಈ ಬಾರಿಯ ದಸರಾದಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ ಮಹಿಳಾ ಮತ್ತು ಮಕ್ಕಳ ದಸರಾಕ್ಕೆ ಹೊಸ ಮೆರಗು ನೀಡುವ ಬಗೆಗೆ ಚಿಂತನೆಗಳು ನಡೆದಿವೆ. ಹೀಗಾಗಿ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬಹುದಾಗಿದೆ.

English summary
Mysuru Dasara 2022: During the ten days of the beginning of dasara, various programs also add cheer to Grand festival for Mysuru. This time it has been decided to celebrate Mahila and Makala Dasara differently from September 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X