• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಅರಮನೆ; ಇತಿಹಾಸ, ನಿರ್ಮಾಣ ಖರ್ಚು, ವಿನ್ಯಾಸ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ

|
Google Oneindia Kannada News

ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ವಿಶ್ವದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಮೈಸೂರು ಅರಮನೆ ಮೈಸೂರು ದಸರಾದ ಕೇಂದ್ರ ಬಿಂದುವಾಗಿದೆ. ವರ್ಷಪೂರ್ತಿ ಪ್ರವಾಸಿಗರಿಂದ ತುಂಬಿ ತುಳುಕುವ ಅರಮನೆ ದಸರಾ ಬರುತ್ತಿದ್ದಂತೆಯೇ ಥೇಟ್ ಇಂದ್ರನ ಅಮರಾವತಿಯಾಗಿ ಬಿಡುತ್ತದೆ.

ಮೈಸೂರು ದಸರಾದ ಪ್ರಮುಖ ವಿಧಿ ವಿಧಾನಗಳು ಇಲ್ಲಿಯೇ ನಡೆಯುತ್ತದೆ. ಖಾಸಗಿ ದರ್ಬಾರ್ ರಾಜವೈಭವಕ್ಕೆ ಸಾಕ್ಷಿಯಾಗಿದೆ. ಯಾರೇ ಆಗಲಿ ಮೈಸೂರು ಅರಮನೆ ನೋಡುತ್ತಿದ್ದಂತೆಯೇ ಇತಿಹಾಸವನ್ನು ಮೆಲುಕು ಹಾಕುವ ಪ್ರಯತ್ನ ಮಾಡುತ್ತಾರೆ. ಮೈಸೂರು ಸಂಸ್ಥಾನದ ಸುಮಾರು 25 ರಾಜರ, 550 ವರ್ಷಗಳ ರಾಜವೈಭವಕ್ಕೆ ಮೈಸೂರು ಅರಮನೆ ಸಾಕ್ಷಿಯಾಗಿದೆ.

ಇದು ಬರೀ ಅರಮನೆಯಲ್ಲ... ಭೂ ಸ್ವರ್ಗ ಸುಂದರಿ!ಇದು ಬರೀ ಅರಮನೆಯಲ್ಲ... ಭೂ ಸ್ವರ್ಗ ಸುಂದರಿ!

ಇವತ್ತು ನಿರ್ಮಾಣವಾಗಿರುವ ಅರಮನೆಗೂ ಮುನ್ನ ಕಟ್ಟಿಗೆ ಮತ್ತು ಇಟ್ಟಿಗೆಗಳಿಂದ 1800 ಮತ್ತು 1808ರ ಅವಧಿಯಲ್ಲಿ ಕಟ್ಟಲಾಗಿದ್ದ ಅರಮನೆಯಿತ್ತು. ಅದು ಆಕಸ್ಮಿಕವಾಗಿ ಅಗ್ನಿಗೆ ಆಹುತಿಯಾದ ಬಳಿಕ ನಿರ್ಮಾಣವಾದ ಅರಮನೆಯೇ ಈಗಿನ ಭವ್ಯ ಅರಮನೆಯಾಗಿದೆ. ಈ ಅರಮನೆಯನ್ನು 1897 ರಿಂದ 1911-12ರವರೆಗೆ ಸುಮಾರು 41,47,912 ರೂಪಾಯಿ ವೆಚ್ಚದಲ್ಲಿ ಕಟ್ಟಲಾಗಿದೆ. ಇದರ ಸುತ್ತಳತೆ 74.50 ಮೀ ಉದ್ದ ಹಾಗೂ 47.50 ಮೀಟರ್ ಅಗಲವಾಗಿದೆ. ಅರಮನೆಯ ಮುಖ್ಯ ಕಟ್ಟಡವನ್ನು ಕಂದು ಬಣ್ಣದ ದಪ್ಪ ಸ್ಪಟಿಕದ ಗಟ್ಟಿ ಶಿಲೆಗಳಿಂದ ನಿರ್ಮಿಸಲಾಗಿದೆ. ಅರಮನೆಯ ಮಧ್ಯಭಾಗದ ಐದು ಅಂತಸ್ತಿನ ಬಂಗಾರದ ಗಿಲೀಟಿನ ಗಗನಚಂಬಿ ಗೋಪುರವು ಭೂಮಿಯಿಂದ ಸುಮಾರು 145 ಅಡಿ ಎತ್ತರದಲ್ಲಿದೆ.

ಅರಮನೆಯು ಬೆಳಕಿಗೆ ಬಿಟ್ಟಿರುವ ಅಂಗಳದ (ತೊಟ್ಟಿ) ಸುತ್ತಲೂ ಕಟ್ಟಲ್ಪಟ್ಟಿದೆ. ಈ ತೊಟ್ಟಿಯ ಪೂರ್ವಭಾಗಕ್ಕೆ 21 ಅಡಿ ಅಗಲ ಹಾಗೂ 66 ಅಡಿ ಎತ್ತರವಿರುವ ಆಕರ್ಷಕ ಆನೆಯ ಬಾಗಿಲಿದೆ. ದೊಡ್ಡ ಅಂಗಳದಲ್ಲಿ ಹೊರಗಡೆ ಸಜ್ಜೆಗೆ ಹೋಗುವ 15 ಅಡಿ ಅಗಲವುಳ್ಳ ದಾರಿಗಳು ದೊಡ್ಡ ಚೌಕದ ಹಾಗೆ ಕಾಣುತ್ತವೆ. ಇನ್ನು ಎರಡನೆ ಅಂತಸ್ತಿನಲ್ಲಿ ಪೂರ್ವ ಭಾಗಕ್ಕೆ 155 ಅಡಿ ಅಗಲವಿರುವ ವಿಶಾಲ ರಾಜ ಸಭಾಮಂದಿರವಿದೆ. ಅದರ ಮೇಲೆ ಖಾಸಗಿ ನಿವಾಸಿ ಸ್ಥಳಗಳಿವೆ.

ಮೈಸೂರಿನಲ್ಲಿದೆ ಮೂವರು ರಾಜಕುಮಾರಿಯರ ಅರಮನೆ!ಮೈಸೂರಿನಲ್ಲಿದೆ ಮೂವರು ರಾಜಕುಮಾರಿಯರ ಅರಮನೆ!

 ಅರಮನೆ ಉಪ್ಪರಿಗೆಯ ಕೊಠಡಿಗಳು

ಅರಮನೆ ಉಪ್ಪರಿಗೆಯ ಕೊಠಡಿಗಳು

ಕೆಳಗಿನ ಉಪ್ಪರಿಗೆಗೆ ಬಂದರೆ ಅಂಗಳದ ಉತ್ತರ ಭಾಗದಲ್ಲಿ ಆಯುಧಶಾಲೆ, ಪುಸ್ತಕ ಭಂಡಾರ, ಅವುಗಳ ಮೇಲೆ ಸಂಗೀತದ ಕೊಠಡಿ, ಸ್ತ್ರೀಯರ ಸ್ವಾಗತ ಕೊಠಡಿ ಮತ್ತು ಮೂರನೆಯ ಅಂತಸ್ತಿನಲ್ಲಿ ವಿಶ್ರಾಂತಿ ಕೊಠಡಿಗಳಿವೆ. ಒಳ ಅಂಗಳದ ಪಶ್ಚಿಮಕ್ಕೆ ಹಳೆಯ ಅರಮನೆಯಿದೆ. ದಕ್ಷಿಣ ಭಾಗದ ಹತ್ತಿರದಲ್ಲೇ ಮುದ್ದಾದ ನವಿಲಿನ ಕಲ್ಯಾಣ ಭದ್ರಮಂಟಪವಿದೆ. ಮುಂದೆ ಹೋದರೆ ಎರಡನೆಯ ಉಪ್ಪರಿಗೆಯಲ್ಲಿ ಅಂಬಾವಿಲಾಸ ಸಭಾ ಮಂಟಪವಿದೆ. ಅರಮನೆಯ ದಕ್ಷಿಣ ಭಾಗದಲ್ಲಿ ರಾಣಿವಿಲಾಸ ಹಾಗೂ ಪೂಜಾ ಕೊಠಡಿಗಳಿವೆ. ಇವು ಅಂಬಾವಿಲಾಸ ಸಭಾಭವನದವರೆಗೂ ವಿಸ್ತರಿಸಿವೆ.

 ಹೊಯ್ಸಳ ರೀತಿಯ ಕಲಾಕೃತಿ

ಹೊಯ್ಸಳ ರೀತಿಯ ಕಲಾಕೃತಿ

ಮಧ್ಯಭಾಗದ ಮೂರು ನಾಲ್ಕು ಮತ್ತು ಐದನೇ ಅಂತಸ್ತುಗಳು ಮುಖ್ಯಗೋಪುರ ಶಿಖರಕ್ಕೆ ಆಧಾರಸ್ತಂಭಗಳಂತೆ ನಿಂತಿವೆ. ಅರಮನೆಯ ಹೊರನೋಟ ಹಿಂದೂ ಗ್ರೀಕ್ ಕಲೆಯ ರೂಪರೇಖೆಗಳಂತೆ ಕಂಡರೆ, ಬಾಗಿಲುಗಳ ಕಮಾನುಗಳ ಕಂಬ ಮತ್ತು ಬೋದುಗಳ ಅಲಂಕಾರಗಳು ಸ್ಪಷ್ಟ ಹೊಯ್ಸಳ ರೀತಿಯ ಕಲಾಕೃತಿಗಳಾಗಿವೆ. ಅರಮನೆಯ ಮಧ್ಯದ ಗೋಪುರವು ಪ್ರಭಾವಯುತವಾಗಿದ್ದು ಉಳಿದವುಗಳೆಲ್ಲವೂ ಅದಕ್ಕೆ ಹೊಂದಿಕೊಂಡ ಆಕೃತಿಗಳಾಗಿವೆ.

 ಶ್ರೀಮಂತಿಕೆಯ ವೈಭವ

ಶ್ರೀಮಂತಿಕೆಯ ವೈಭವ

ಅರಮನೆಯ ಮುಖ್ಯ ಮುಖಭಾಗದಲ್ಲಿ ಬೆಳಕು ಮತ್ತು ನೆರಳನ್ನು ಪಡೆಯುವ ಉದ್ದೇಶದಿಂದ ಗೋಪುರಗಳ, ಮಸೀದಿಯ ರೀತಿಯ ಶಿಖರಗಳ ಕೈಸಾಲೆ, ಉಪ್ಪರಿಗೆಯ ಮೊಗಸಾಲೆಗಳ. ವಸಾರೆ, ಪಡಸಾಲೆ, ಜಗಲಿಗಳ ಪೌಳಿ ಮಂಟಪಗಳ ಹಾಗೂ ಗೋಪುರ ಶಿಖರಗಳನ್ನು ಬಿಡಿಸಿ ನಿರ್ಮಿಸಲಾಗಿದೆ. ಮುಂಭಾಗದಲ್ಲಿ ಬೃಹತ್ ಕಂಬಗಳ ಜೊತೆಗೆ ಸ್ಪಟಿಕದ ಗಟ್ಟಿ ಶಿಲೆಗಳನ್ನು ಕೊರೆದು ನಿರ್ಮಿಸಿರುವ, ಪಡಸಾಲೆ, ಉಪ್ಪರಿಗೆಯ ಮೊಗಸಾಲೆಗಳು ತಮ್ಮದೇ ಆದ ಶ್ರೀಮಂತಿಕೆಯ ವೈಭವವನ್ನು ಸೂಚಿಸುತ್ತವೆ. ಅರಮನೆಯ ಅಡಿಪಾಯದಿಂದ ಮುಖ್ಯ ಗೋಪುರದ ತುದಿಯವರೆಗೂ ಉತ್ತಮ ಮಟ್ಟದ ಹಿಂದೂ ಶಿಲ್ಪ ವಿದ್ಯೆಯ ನುರಿತ ಕೆಲಸಗಾರರಿಂದ ಶಿಲ್ಪಕಲೆ ರಚಿಸಲ್ಪಟ್ಟಿದೆ. ಅಲ್ಲದೆ ಉಚ್ಛ ರೀತಿಯ ಹಿಂದೂ ಶಿಲ್ಪ ಕಲೆ ಮತ್ತು ಗ್ರೀಕ್ ಕಲೆಯು ಮಿಳಿತಗೊಂಡು ಶೋಭಾಯಮಾನವಾಗಿ ಕಂಗೊಳಿಸುತ್ತದೆ.

 ರಾಜವೈಭವ ಸೂಚಿಸುವ ದರ್ಬಾರ್ ಹಾಲ್

ರಾಜವೈಭವ ಸೂಚಿಸುವ ದರ್ಬಾರ್ ಹಾಲ್

ಅರಮನೆಯಲ್ಲಿ ಮಾಡಿದ ಕಲ್ಲಿನ, ದಂತ ಮತ್ತು ಮರದ ಕೆತ್ತನೆ ಕೆಲಸ ಅಲ್ಲದೆ ಕಲ್ಲಿನ ಕುಂದಣ ಕೆಲಸ, ಲೇಪದ ಕೆಲಸಗಳು ಕಲೆಗಾರನ ಕೈಚಳಕನ್ನು ಪ್ರದರ್ಶಿಸಿದೆ. ಕಟ್ಟಡದ ವಿವಿಧೆಡೆ ಸ್ಪಟಿಕದ ಕಲ್ಲು, ಕಂದುಬಣ್ಣದ ಶಿಲೆ, ಕಾಗೆ ಬಂಗಾರದಂತೆ ಮಿನುಗುವ ಬೆಣಚು ಶಿಲೆಗಳನ್ನು ಬಳಸಲಾಗಿದೆ. ಚಿತ್ರ ವಿಚಿತ್ರವಾದ ಬಣ್ಣದ ನಯಮಾಡಿದ ಕಲ್ಲಿನ ಕಂಬಗಳು ಯೋಗ್ಯ ಸ್ಥಳಗಳಲ್ಲಿ ನಿರ್ಮಿಸಲ್ಪಟ್ಟಿದೆ. ಅರಮನೆಯಲ್ಲಿರುವ ಅಂಬಾವಿಲಾಸ ದರ್ಬಾರ್ ಹಾಲ್ ರಾಜವೈಭವವನ್ನು ಸಾರುತ್ತದೆ.

 ಪ್ರವಾಸಿಗರ ಕಣ್ಮನಸೆಳೆಯುವ ಸಂಗ್ರಹಾಲಯ

ಪ್ರವಾಸಿಗರ ಕಣ್ಮನಸೆಳೆಯುವ ಸಂಗ್ರಹಾಲಯ

ಇಲ್ಲಿ 750 ಕೆ.ಜಿ. ತೂಕದ ಭವ್ಯ ಚಿತ್ತಾರದ ಚಿನ್ನದ ಅಂಬಾರಿ ಇದೆ. ಅಲ್ಲದೆ 135 ಕೆ.ಜಿ. ಬಂಗಾರವುಳ್ಳ ರತ್ನಖಚಿತ ಸಿಂಹಾಸನವೂ ಇದೆ. ಇನ್ನು ಅರಮನೆಯಲ್ಲಿನ ಆಯುಧ ಶಾಲೆ, ಸಂಗೀತ ಕೊಠಡಿ ಸೇರಿದಂತೆ ಹತ್ತು ಹಲವು ನೋಡತಕ್ಕ ಅತ್ಯಪೂರ್ವ ವಸ್ತುಗಳಿದ್ದು, ಇದೊಂದು ಅದ್ಭುತ ಸಂಗ್ರಹಾಲಯವಾಗಿದೆ. ಈ ಅರಮನೆಯನ್ನು ಎರಡು ಬಾರಿ ನಿರ್ಮಿಸಲಾಗಿದೆಯಂತೆ. 1939ರಲ್ಲಿ ಅರಮನೆಯ ಮುಂದೆ ಇದ್ದಂತಹ ಫೋರ್ಟಿಕೋವನ್ನು ತೆರವುಗೊಳಿಸಿ ಅಲ್ಲಿಂದ ನೇರವಾಗಿ ದರ್ಬಾರ್ ಹಾಲ್ ಕಾಣುವಂತೆ ಮಾಡಲಾಗಿದೆ.

ಇನ್ನು ಅರಮನೆಯಿಂದ ನಿಂತು ನೋಡಿದರೆ ಕಾಣುವ ದೃಶ್ಯಗಳಂತು ಅದ್ಭುತವಾಗಿವೆ. ಒಡೆಯರ ಕಾಲದಲ್ಲಿ ರಾಜಪರಿವಾರ ಅರಮನೆಯ ಮೇಲೆ ನಿಂತು ನಗರದ ಸೌಂದರ್ಯವನ್ನು ಸವಿಯುತ್ತಾ ಸಮಯ ಕಳೆಯುತ್ತಿದ್ದರು. ಇದೀಗ ಅರಮನೆ ವಿದ್ಯುದ್ದೀಪಗಳಿಂದ ಜಗಮಗಿಸುತ್ತಿದ್ದು, ದಸರಾ ಸಡಗರದಲ್ಲಿ ಮಿಂದೇಳುತ್ತಿದೆ.

English summary
Mysuru Dasara 2022:You know abaout history and amazing facts about Myuru palace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X