• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಬಿನಿ ಹಿನ್ನೀರಿನಲ್ಲಿ ವಿದೇಶಿ ಅತಿಥಿಗಳ ಕಲರವ...

|

ಮೈಸೂರು, ಡಿಸೆಂಬರ್ 28: ಕಣ್ಣು ಹಾಯಿಸಿದೆಡೆ ಕಂಗೊಳಿಸುವ ಹಸಿರು, ಅಲೆಯಾಡುವ ನೀರು, ಆ ನೀರಲ್ಲಿ ಚೀರಾಡುತ್ತಾ ಹಾರಾಡುವ ಹಕ್ಕಿಗಳು. ಈ ದೃಶ್ಯವನ್ನು ನೋಡಬೇಕೆಂದರೆ ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯಕ್ಕೆ ಹೋಗಬೇಕಾಗುತ್ತದೆ.

ಪ್ರತಿ ವರ್ಷವೂ ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಕಬಿನಿ ಜಲಾಶಯದ ಹಿನ್ನೀರಿಗೆ ದೂರ ಊರಿನಿಂದ ಹಕ್ಕಿಗಳು ವಲಸೆ ಬರುತ್ತವೆ. ಅವುಗಳಿಗೆ ಗಡಿಯ ತಂಟೆಯಿಲ್ಲ, ಕೊರೊನಾದ ಭಯವಿಲ್ಲ. ತಮ್ಮ ಸಂತಾನ ಅಭಿವೃದ್ಧಿ ಮಾಡಿಕೊಂಡು ತೆರಳಬೇಕಷ್ಟೆ. ಇಲ್ಲಿ ಈ ಅತಿಥಿಗಳಿಗೆ ಯಾವುದೇ ಭಯವಿಲ್ಲ. ಜತೆಗೆ ಆಹಾರಕ್ಕೂ ಕೊರತೆಯಿಲ್ಲ.

ಬೆಳ್ಳಕ್ಕಿಗಳೀಗ ಕೊಡಗಿನ ಅತಿಥಿ

ಹಿನ್ನೀರಿನುದ್ದಕ್ಕೂ ಬೀಡು ಬಿಟ್ಟ ಹೆಬ್ಬಾತುಗಳು

ಹಿನ್ನೀರಿನುದ್ದಕ್ಕೂ ಬೀಡು ಬಿಟ್ಟ ಹೆಬ್ಬಾತುಗಳು

ಹಿನ್ನೀರಿನುದ್ದಕ್ಕೂ ಅಡ್ಡಾಡಿ ಮೀನು, ಹುಳ, ಹುಪ್ಪಟೆಯ ಪುಷ್ಕಳ ಭೋಜನ ಸವಿಯುತ್ತವೆ. ಅಷ್ಟೇ ಅಲ್ಲ ಸುತ್ತಮುತ್ತಲಿನ ರೈತರ ಹೊಲಗದ್ದೆಗಳಿಗೆ ತೆರಳಿ ಎರೆಹುಳ, ಗೊದ್ದ, ಕಪ್ಪೆ ಮೊದಲಾದವುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಇದರ ನಡುವೆ ಮೊಟ್ಟೆಯಿಟ್ಟು, ಮರಿಮಾಡಿ ಅವುಗಳಿಗೆ ಗುಟುಕು ಆಹಾರ ನೀಡಿ ಪೋಷಿಸುತ್ತವೆ. ಮರಿಗಳಿಗೆ ರೆಕ್ಕೆಪುಕ್ಕ ಹುಟ್ಟಿ ಅವು ಹಾರಲು ಕಲಿತ ಬಳಿಕ ತಮ್ಮ ಬಳಗೊಂದಿಗೆ ತಾವು ಎಲ್ಲಿಂದ ಬಂದವೋ ಅಲ್ಲಿಗೆ ಹೊರಟು ಹೋಗುತ್ತವೆ.

ಮಳೆಗೆ ಹೆದರಿ ಹಕ್ಕಿಗಳು ವಲಸೆ

ಮಳೆಗೆ ಹೆದರಿ ಹಕ್ಕಿಗಳು ವಲಸೆ

ಸಾಮಾನ್ಯವಾಗಿ ಮಲೆನಾಡಿನ ಪ್ರದೇಶಗಳಿಗೆ ಮಳೆಗಾಲದಲ್ಲಿ ಬೆಳ್ಳಕ್ಕಿಗಳು ಬರುತ್ತವೆ. ಅವು ಕೂಡ ಸುರಿಯುವ ಮಳೆಯಲ್ಲೇ ಸಂತಾನೋತ್ಪತ್ತಿ ಮಾಡಿಕೊಂಡು ಮರಳುತ್ತವೆ. ಮಲೆನಾಡಿನಲ್ಲಿ ಮಳೆಗಾಲ ಕಳೆದು ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಮಳೆಗೆ ಹೆದರಿ ವಲಸೆ ಹೋಗಿದ್ದ ಪಕ್ಷಿಗಳು ಮರಳಿ ಬರುವುದು ಮಾಮೂಲಿಯಾಗಿದೆ. ಚಳಿಗಾಲದ ಬಳಿಕ ಕಾಡಿನಲ್ಲಿ ವಿವಿಧ ಬಗೆಯ ಹಣ್ಣುಗಳು ದೊರೆಯುವುದರಿಂದ ಪಕ್ಷಿಗಳು ತಮಗೆ ಬೇಕಾದ ಆಹಾರಗಳನ್ನು ತಿನ್ನುತ್ತಾ ಚಿಲಿಪಿಲಿ ಗುಟ್ಟುತ್ತಾ ಮೊಟ್ಟೆಯಿಟ್ಟು ಮರಿ ಮಾಡುತ್ತಾ ಸುಖವಾಗಿ ಕಾಲ ಕಳೆಯುತ್ತಿರುತ್ತವೆ.

ಚೀರಾಟ, ಹಾರಾಟ ಮನಮೋಹಕ

ಚೀರಾಟ, ಹಾರಾಟ ಮನಮೋಹಕ

ಕಬಿನಿ ವ್ಯಾಪ್ತಿಯಲ್ಲಿ ಅರಣ್ಯ ಮತ್ತು ನೀರಿನ ಸೆಲೆಗಳು ಇರುವುದರಿಂದ ಪ್ರಾಣಿ ಪಕ್ಷಿಗಳು ಈ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇವುಗಳನ್ನು ವೀಕ್ಷಿಸಲೆಂದೇ ಪಕ್ಷಿ, ಪ್ರಾಣಿ ಪ್ರಿಯರು ದೌಡಾಯಿಸುತ್ತಾರೆ. ಕಬಿನಿ ವ್ಯಾಪ್ತಿಯಲ್ಲಿ ಹಲವಾರು ಬಗೆಯ ಪಕ್ಷಿಗಳು ನೋಡಲು ಸಿಕ್ಕರೂ ಅವುಗಳ ನಡುವೆ ಇದೀಗ ವಿದೇಶಗಳಿಂದ ಬಂದಿರುವ ಬೂದು ಬಣ್ಣದ ಬಾತುಕೋಳಿ (ಹೆಡೆಡ್ ಗೂಸ್) ಗಮನ ಸೆಳೆಯುತ್ತಿವೆ. ಹಿಂಡು ಹಿಂಡಾಗಿ ಕಬಿನಿ ಹಿನ್ನೀರಿನಲ್ಲಿ ಶಿಸ್ತಿನ ಸಿಪಾಯಿಗಳಂತೆ ಅತ್ತಿಂದ ಇತ್ತ ಓಡಾಡುತ್ತಾ ಬಿಸಿಲು ಕಾಯಿಸುವ ದೃಶ್ಯಗಳು ಗಮನ ಸೆಳೆಯುತ್ತವೆ. ಇವುಗಳನ್ನು ಸ್ಥಳೀಯರು ಹೆಬ್ಬಾತು ಎಂದು ತಮ್ಮದೇ ಭಾಷೆಯಲ್ಲಿ ಕರೆಯುತ್ತಾರೆ. ಇನ್ನು ಇವುಗಳು ಗುಂಪು ಗುಂಪಾಗಿ ಹಾರುವಾಗಲಂತೂ ಕಂಡು ಬರುವ ದೃಶ್ಯಗಳು ಮನಮೋಹಕವಾಗಿರುತ್ತವೆ. ಹಿನ್ನೀರು ಪ್ರದೇಶವನ್ನು ವಾಸ್ತವ್ಯಕ್ಕೆ ಗೊತ್ತುಪಡಿಸಿಕೊಂಡಿರುವ ಈ ಹಕ್ಕಿಗಳು ಹಗಲು ಹೊತ್ತಿನಲ್ಲಿ ಸುತ್ತಮುತ್ತಲಿನ ಗ್ರಾಮಗಳ ಗದ್ದೆ, ಹೊಲಗಳಲ್ಲಿಯೂ ಹಾರಾಡುತ್ತಾ ಆಹಾರಗಳನ್ನು ಅರಸುತ್ತಿರುತ್ತವೆ. ಸಂಜೆಯಾಗುತ್ತಿದ್ದಂತೆಯೇ ಹಿನ್ನೀರಿಗೆ ಬಂದು ಠಿಕಾಣಿ ಹೂಡುತ್ತವೆ.

ವಿವಿಧೆಡೆಯಿಂದ ಬಂದಿರುವ ಹೆಬ್ಬಾತುಗಳು

ವಿವಿಧೆಡೆಯಿಂದ ಬಂದಿರುವ ಹೆಬ್ಬಾತುಗಳು

ಕಬಿನಿ ಹಿನ್ನೀರಿನಲ್ಲಿ ಬೀಡು ಬಿಟ್ಟಿರುವ ಹೆಡೆಡ್ ಗೂಸ್ ನ ಹಿಂಡುಗಳಲ್ಲಿಲಡಾಕ್, ನೇಪಾಳ, ಚೀನಾ, ಹಿಮಾಲಯ, ಬರ್ಮಾ, ಶ್ರೀಲಂಕಾ ಮೊದಲಾದ ಕಡೆಗಳಿಂದ ಬಂದವುಗಳಿವೆ. ಹಿಮ ಪ್ರದೇಶಗಳಲ್ಲಿ ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಇಡೀ ಪ್ರದೇಶ ಹಿಮಗಟ್ಟುವುದರಿಂದ ಅಲ್ಲಿನ ವಾತಾವರಣದಲ್ಲಿ ಆಹಾರಕ್ಕೆ ಮತ್ತು ಸಂತನೋತ್ಪತ್ತಿಗೆ ಅನಾನುಕೂಲವಾಗುವುದರಿಂದ ಅನುಕೂಲ ವಾತಾವರಣವನ್ನು ಹುಡುಕಿಕೊಂಡು ಈ ಪಕ್ಷಿಗಳು ಕಬಿನಿ ಹಿನ್ನೀರಿಗೆ ಬರುತ್ತಿವೆ. ಈ ವ್ಯಾಪ್ತಿಯಲ್ಲಿ ಈಗ ಭತ್ತದ ಕಾಲವಾಗಿರುವುದರಿಂದ ಗದ್ದೆಯಲ್ಲಿ ಕೊಯ್ಲು ಮಾಡುವ ವೇಳೆ ಉದುರಿದ ಭತ್ತಗಳನ್ನು ಹೆಕ್ಕಿ ಇವು ತಿನ್ನುತ್ತವೆ. ಇವು ಗದ್ದೆಯಲ್ಲಿರುವಾಗ ಹಾಕುವ ಹಿಕ್ಕೆಗಳು ಗೊಬ್ಬರವಾಗಿರುವುದರಿಂದ ರೈತರು ಗದ್ದೆಗೆ ಬರಲೆಂದೇ ಬಯಸುತ್ತಾರೆ.

ಹೆಬ್ಬಾತುಗಳ ಹಿಕ್ಕೆಗಳು ಫಲವತ್ತಾದ ಗೊಬ್ಬರ

ಹೆಬ್ಬಾತುಗಳ ಹಿಕ್ಕೆಗಳು ಫಲವತ್ತಾದ ಗೊಬ್ಬರ

ಇವು ಶಿಸ್ತಿನ ಸಿಪಾಯಿಗಳಾಗಿದ್ದು, ಮುಂಜಾನೆ ಬೆಳಕು ಹರಿಯುತ್ತಿದ್ದಂತೆಯೇ ಗೂಡು ಬಿಡುವ ಇವು ರೈತರ ಗದ್ದೆ ಹೊಲಗಳಿಗೆ ತೆರಳುತ್ತವೆ. ಅಲ್ಲಿ ಕಾಳು, ಕಡ್ಡಿ, ಹುಳ ಹುಪ್ಪಟೆಗಳನ್ನು ತಿನ್ನುತ್ತಾ ಅಡ್ಡಾಡುತ್ತವೆ. ನಂತರ ಬಿಸಿಲಿನ ಝಳ ಹೆಚ್ಚುತ್ತಿದ್ದಂತೆಯೇ ಮತ್ತೆ ಅಲ್ಲಿಂದ ಹಾರಿ ಬಂದು ಹಿನ್ನೀರಿನಲ್ಲಿ ಈಜಾಡುತ್ತಾ ಸಮಯ ಕಳೆಯುತ್ತವೆ. ಮತ್ತೆ ಬಿಸಿಲಿನ ಝಳ ಕಡಿಮೆಯಾಗುತ್ತಿದ್ದಂತೆಯೇ ಸಂಜೆ ಹೊತ್ತು ಗದ್ದೆಗೆ ತೆರಳಿ ಆಹಾರ ಹುಡುಕುತ್ತವೆ. ರಾತ್ರಿಯಾಗುತ್ತಿದ್ದಂತೆಯೇ ಮತ್ತೆ ಸ್ವಸ್ಥಾನಕ್ಕೆ ಮರಳುತ್ತವೆ. ಸುಮಾರು ಆರು ತಿಂಗಳ ಕಾಲ ಇಲ್ಲಿ ನೆಲೆವೂರುವ ಇವು ರೈತನಿಗೆ ಒಂದು ರೀತಿಯಲ್ಲಿ ಮಿತ್ರನೂ ಹೌದು. ಇವುಗಳಿಂದ ಗದ್ದೆಯ ಫಲವತ್ತತೆ ಹೆಚ್ಚಾಗುತ್ತದೆ. ಜತೆಗೆ ಕೀಟಗಳನ್ನು ಹೆಕ್ಕಿ ತಿನ್ನುವುದರಿಂದ ಅನುಕೂಲವೂ ಆಗುತ್ತಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ವಿದೇಶದ ಈ ಅತಿಥಿಗಳು ಕಬಿನಿಯ ಆಕರ್ಷಣೆ ಎಂದರೆ ತಪ್ಪಾಗಲಾರದು.

English summary
As winter begins every year, Foreign birds Come to the backwaters of the Kabini reservoir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X