ಕಮ್ಯೂನಿಸ್ಟರಿಗೆ ವಿಲನ್, ಪಾಶ್ಚಿಮಾತ್ಯರಿಗೆ ಹೀರೋ- ಶೀತಲ ಸಮರಕ್ಕೆ ಅಂತ್ಯವಾಡಿದ್ದ ಗೋರ್ಬಿ
ಮಾಸ್ಕೋ, ಆಗಸ್ಟ್ 31: ಹಿಂದಿನ ಸೋವಿಯತ್ ರಷ್ಯಾದ ಮಾಜಿ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ನಿನ್ನೆ ಮಂಗಳವಾರ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ದೀರ್ಘಕಾಲದಿಂದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಗೋರ್ಬಚೇವ್ ಮಾಸ್ಕೋದ ಆಸ್ಪತ್ರೆಯೊಂದರಲ್ಲಿ ಮೃತಪಟ್ಟರೆಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಮಾಸ್ಕೋದಲ್ಲಿ ಅವರ ಪತ್ನಿ ರೈಸಾ ಟೈಟಾರೆಂಕೋ ಸಮಾಧಿ ಪಕ್ಕದಲ್ಲೇ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಗೋರ್ಬಚೇವ್ ಕುಟುಂಬದವರು ಹೇಳಿರುವುದು ತಿಳಿದುಬಂದಿದೆ.
ಅಮೆರಿಕ ಮತ್ತು ಯುಎಸ್‌ಎಸ್‌ಆರ್ ನಡುವೆ ಇದ್ದ ಹಲವು ದಶಕಗಳ ಸುದೀರ್ಘ ಶೀತಲ ಸಮರ ಅಂತ್ಯಗೊಳ್ಳಲು ಪ್ರಮುಖ ಕಾರಣಕಾರ್ತರಾಗಿದ್ದ ಮಿಖಾಯಿಲ್ ಗೋರ್ಬಚೇವ್ ನಿಧನಕ್ಕೆ ಅನೇಕ ಪಾಶ್ಚಿಮಾತ್ಯ ದೇಶಗಳ ಮುಖಂಡರು ಆಘಾತ ವ್ಯಕ್ತಪಡಿಸಿದ್ದಾರೆ. ಗೋರ್ಬಚೇವ್ ಜೊತೆ ಬಹುತೇಕ ವೈರತ್ವ ಹೊಂದಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೂಡ ಸಂತಾಪ ಸೂಚಿಸಿದ್ದಾರೆ.
ಕುತೂಹಲವೆಂದರೆ ಸೋವಿಯತ್ ರಷ್ಯಾ ಕಾಲಘಟ್ಟದಲ್ಲಿದ್ದ ಕೊನೆಯ ನಾಯಕ ಎಂದರೆ ಮಿಖಾಯಿಲ್ ಗೋರ್ಬಚೇವ್. 90 ವರ್ಷದವರೆಗೂ ಬದುಕಿದ ಮೊದಲ ಸೋವಿಯತ್ ಮುಖಂಡರೂ ಅವರಾಗಿದ್ದರು. ಮನುಕುಲಕ್ಕೆ ಮಾರಕವಾಗಿದ್ದ ಕೋಲ್ಡ್ ವಾರ್ ಕೊನೆಯಾಗಿ ವಿಶ್ವದದಲ್ಲಿ ಆತಂಕ ಸ್ಥಿತಿ ನಿರ್ಮಾಣವಾಗಲು ಗೋರ್ಬಚೇವ್ ಅವರ ಪಾತ್ರ ಅತಿದೊಡ್ಡದು. ಇದೇ ಕಾರಣಕ್ಕೆ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗಿತ್ತು.
ಬಡ ರೈತರ ಕುಟುಂಬದಿಂದ ಬಂದ ಮಿಖಾಯಿಲ್ ಗೋರ್ಬಚೇವ್, ಸೋವಿಯತ್ ರಷ್ಯಾದ ಕಮ್ಯೂನಿಸ್ಟ್ ಪಕ್ಷದ ಮುಖ್ಯಸ್ಥ ಮತ್ತು ರಾಷ್ಟ್ರದ ಅಧ್ಯಕ್ಷರಾಗುವ ಹಂತಕ್ಕೆ ಬೆಳೆದದ್ದು ರೋಚಕ ಇತಿಹಾಸ. ಹಾಗೆಯೇ, ಸೋವಿಯತ್ ರಷ್ಯಾದಲ್ಲಿ ಸುಧಾರಣೆ ತರಲು ಹೋಗಿ ತಮ್ಮ ಕಣ್ಮುಂದೆಯೇ ದೇಶ ಹಲವು ವಿಭಜನೆಗಳಾಗುವುದನ್ನು ಹತಾಶೆಯಿಂದ ನೋಡುವಂತಾಗಿತ್ತು.

ಬಡ ರೈತರ ಮಗ
ಮಿಖಾಯಿಲ್ ಗೋರ್ಬಚೇವ್ 1931 ಮಾರ್ಚ್ 2ರಂದು ಅಂದಿನ ಸೋವಿಯತ್ ರಷ್ಯಾದ ನೈಋತ್ಯ ಭಾಗದಲ್ಲಿದ್ದ, ಮತ್ತು ಚೆಚೆನ್ಯಾದ ಗಡಿ ಭಾಗದಲ್ಲಿರುವ ಸ್ಟಾವ್ರೊಪೋಲ್ ಕ್ರಾಯ್ ರಾಜ್ಯದಲ್ಲಿನ ಪ್ರಿವೋಲ್ನೋಯೆ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಮತ್ತು ತಾಯಿ ಬಡ ರೈತರು.
ಆಗ ಸೋವಿಯತ್ ರಷ್ಯಾವನ್ನು ಆಳುತ್ತಿದ್ದುದು ಜೋಸೆಫ್ ಸ್ಟಾಲಿನ್. ಕಮ್ಯೂನಿಸ್ಟ್ ಪಕ್ಷದ ಆಡಳಿತ ಇದ್ದದ್ದು. ಸಹಜವಾಗಿ ಗೋರ್ಬಚೇವ್ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರಾಗಿ, ನಂತರ ನಾಯಕರಾಗಿ ಬೆಳೆದರು. ಆಗಿನ ಕಾಲದಲ್ಲಿ ಸೋಷಿಯಲಿಸ್ಟ್ ಮಾದರಿಯಲ್ಲಿ ಕೃಷಿಗಾರಿಕೆ ನಡೆಯುತ್ತಿತ್ತು. ಗೋರ್ಬಚೇವ್ ಕುಟುಂಬದವರು ಬಹಳ ಕಷ್ಟಪಟ್ಟು ಹೊಲದಲ್ಲಿ ಕೆಲಸ ಮಾಡಿ ಗುರುತಿಸಿಕೊಂಡಿದ್ದರು. ಗೋರ್ಬಚೇವ್ ಓದಿನ ಜೊತೆಗೆ ಹೊಲದಲ್ಲೂ ಕೆಲಸ ಮಾಡುತ್ತಿದ್ದರು.
ಮುಂದೆ ಗೋರ್ಬಚೇವ್ ಕಾನೂನು ಶಿಕ್ಷಣ ಓದಿದರು. ಕುತೂಹಲವೆಂದರೆ ಆಗ ಸೋವಿಯತ್ ರಷ್ಯಾದಲ್ಲಿ ಕಾನೂನು ಪದವಿ ಓದುತ್ತಿದ್ದುದು ಅಪರೂಪ. ಇವರ ರೈತ ಹಿನ್ನೆಲೆ ಮತ್ತು ಇವರ ಕುಟುಂಬದ ಶ್ರಮದ ಹಿನ್ನೆಲೆಯಿಂದ ಇವರಿಗೆ ಸುಲಭವಾಗಿ ಕಾನೂನು ಶಿಕ್ಷಣಕ್ಕೆ ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು.
ನಂತರ ಅವರು ಕಮ್ಯೂನಿಸ್ಟ್ ಪಕ್ಷದಲ್ಲಿ ಹಂತ ಹಂತವಾಗಿ ಬೆಳೆದರು. 1985ರಲ್ಲಿ ಪಕ್ಷದ ಜನರಲ್ ಸೆಕ್ರೆಟರಿ ಆದರು. ಇದು ಯುಎಸ್‌ಎಸ್‌ಆರ್‌ನ ಮುಖ್ಯಸ್ಥ ಸ್ಥಾನ.

ಶೀತಲ ಸಮರಕ್ಕೆ ಅಂತ್ಯ
1985ರಲ್ಲಿ ಮಿಖಾಯಿಲ್ ಗೋರ್ಬಚೇವ್ ಸೋವಿಯತ್ ರಷ್ಯಾ ಮುಖ್ಯಸ್ಥರಾದ ಬಳಿಕ ಬಹಳ ಗಮನಾರ್ಹ ಕಾರ್ಯಗಳನ್ನು ಮಾಡಿದರು. ಆಗ ಅಮೆರಿಕ ಮತ್ತು ಯುಎಸ್‌ಎಸ್‌ಆರ್ ನಮ್ಮ ವಿಶ್ವದ ಎರಡು ಸೂಪರ್ ಪವರ್ ದೇಶಗಳೆನಿಸಿದ್ದವು. ಹಲವು ದಶಕಗಳಿಂದ ಎರಡೂ ದೇಶಗಳ ಮಧ್ಯೆ ಶೀತಲ ಸಮರ ನಡೆದಿತ್ತು. ಪರಮಾಣು ಯುದ್ಧವೇ ನಡೆದುಹೋಗಿ ಮನುಕುಲಕ್ಕೆ ಗಂಡಾಂತರವಾಗಿಬಿಡಬಹುದು ಎಂಬ ಹಂತಕ್ಕೆ ಅಮೆರಿಕ ರಷ್ಯಾ ವೈರತ್ವ ಬೆಳೆದಿತ್ತು.
ಇಂಥ ಸಂದರ್ಭದಲ್ಲಿ ಶೀತಲ ಸಮರ ಕೊನೆಗಾಣಿಸಲು ಸಾಧ್ಯವಾಗುವ ರೀತಿಯಲ್ಲಿ ಮಿಖಾಯಿಲ್ ಗೋರ್ಬಚೇವ್ ಹೆಜ್ಜೆಗಳನ್ನು ಹಾಕಿದರು. ಅಮೆರಿಕದೊಂದಿಗೆ ಪರಮಾಣು ಶಸ್ತ್ರ ಒಪ್ಪಂದಕ್ಕೆ ಸಹಿಹಾಕಿದ್ದು ಐತಿಹಾಸಿಕ ನಿರ್ಧಾರ.
ಹಾಗೆಯೇ, ಈಸ್ಟ್ ಜರ್ಮನಿ ಮತ್ತು ವೆಸ್ಟ್ ಜರ್ಮನಿ ಮಧ್ಯೆ ಅಡ್ಡವಾಗಿದ್ದ ಬರ್ಲಿನ್ ಗೋಡೆಯನ್ನು ಕೆಡವಿದಾಗ ಸೋವಿಯತ್ ರಷ್ಯಾದ ಸೇನೆಯನ್ನು ಆಕ್ರಮಣ ಮಾಡದಂತೆ ತಡೆಹಿಡಿದ್ದರು. ಆಗ ಈಸ್ಟ್ ಜರ್ಮನಿ ಕಮ್ಯೂನಿಸ್ಟ್ ರಾಷ್ಟ್ರವಾಗಿತ್ತು. ಸೋವಿಯತ್ ರಷ್ಯಾ ಜೊತೆ ಮೈತ್ರಿ ಹೊಂದಿತ್ತು. ಬರ್ಲಿನ್ ಗೋಡೆ ಪತನದ ಬಳಿಕ ಪೂರ್ವ ಮತ್ತು ಪಶ್ಚಿಮ ಜರ್ಮನಿ ದೇಶಗಳು ಒಂದಾದವು. ಸೋವಿಯತ್ ರಷ್ಯಾ ಮತ್ತು ಅಮೆರಿಕ ನಡುವಿನ ಶೀತಲ ಸಮರದ ಯುಗ ಬಹುತೇಕ ಆಗಲೇ ಅಂತ್ಯವಾಯಿತು.

ಸುಧಾರಣೆಗಳ ನಾಯಕ
ಮಿಖಾಯಿಲ್ ಗೋರ್ಬೆಚೇವ್ ಸೋವಿಯತ್ ರಷ್ಯಾದ ಮುಖ್ಯಸ್ಥರಾದ ಬಳಿಕ ಬಹಳ ಸುಧಾರಣಾ ಕ್ರಮಗಳನ್ನು ಕೈಗೊಂಡರೆನ್ನಲಾಗಿದೆ. ಆಗ ಯುಎಸ್‌ಎಸ್‌ಆರ್ ಸೂಪರ್ ಪವರ್ ದೇಶವಾದರೂ ಆಂತರಿಕವಾಗಿ ಬಹಳ ಸಂಕಷ್ಟದ ಸ್ಥಿತಿಯಲ್ಲಿತ್ತು. ದೇಶದ ಉತ್ಪನ್ನ ಪ್ರಮಾಣ, ಗುಣಮಟ್ಟ ಇತ್ಯಾದಿ ಕುಸಿತವಾಗಿತ್ತು. ಅನೇಕ ಅರ್ಥಶಾಸ್ತ್ರಜ್ಞರು ದೇಶದ ಭವಿಷ್ಯದ ಬಗ್ಗೆ ಕಳವಳಕ್ಕೀಡಾಗಿದ್ದರು.
ಪೆರೆಸ್ಟ್ರೋಯಿಕಾ ಎಂದು ಕರೆಯಲಾಗುತ್ತಿದ್ದ ಸುಧಾರಣಾ ನೀತಿಯನ್ನು ಗೋರ್ಬಚೇವ್ ಅಳವಡಿಸಿದರು. ಔದ್ಯಮಿಕ ಉತ್ಪನ್ನ ಹೆಚ್ಚಿಸಲು ಮೊದಲಿಗೆ ಕ್ರಮ ಕೈಗೊಂಡರು. ಹಂತ ಹಂತವಾಗಿ ಪೆರೆಸ್ಟ್ರೋಯಿಕಾ ನೀತಿಯ ಅಡಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಾ ಹೋದರು. ಕೃಷಿ ಕ್ಷೇತ್ರದ ಉತ್ಪನ್ನತೆಯನ್ನು ಹೆಚ್ಚಿಸಲು ಐದು ಸಚಿವಾಲಯಗಳನ್ನು ವಿಲೀನಗೊಳಿಡಿಸಿದರು.
ಸೋಷಿಯಲಿಸ್ಟ್ ಮಾರುಕಟ್ಟೆ ವ್ಯವಸ್ಥೆ ಬದಲು ಕೇಂದ್ರೀ ಯೋಜಿತ ಆರ್ಥಿಕತೆಯಾಗಿ ಬೆಳೆಯಲಾಗುವಂತೆ ಸುಧಾರಣೆಗಳನ್ನು ಮಾಡಿದರು.

ಯುಎಸ್‌ಎಸ್‌ಆರ್ ಪತನ
ಎಂಬತ್ತರದ ದಶಕದಲ್ಲಿ ಕಮ್ಯೂನಿಸ್ಟ್ ವ್ಯವಸ್ಥೆ ವಿರುದ್ಧ ಜನರು ದಂಗೆ ಏಳಲು ಆರಂಭಿಸಿದರು. 1986ರಲ್ಲಿ ಸೋವಿಯತ್ ರಷ್ಯಾ ಭಾಗವಾಗಿದ್ದ ಕಜಕಸ್ತಾನದಲ್ಲಿ ಇದು ಮೊದಲು ಅರಂಭವಾಯಿತು. ನಂತರ ಇದು ರಷ್ಯಾದ ವಿವಿಧ ಪ್ರಾಂತ್ಯಗಳಿಗೆ ಹರಡಿತು. ವಿಶ್ವದ ಅನೇಕ ಕಮ್ಯೂನಿಸ್ಟ್ ದೇಶಗಳಲ್ಲೂ ಕ್ರಾಂತಿಗಳಾದವು. ಪರಿಣಾಮವಾಗಿ ಬಹುತೇಕ ಕಮ್ಯೂನಿಸ್ಟ್ ದೇಶಗಳು ಪತನಗೊಂಡವು. ವಿಶ್ವದ ಅತಿದೊಡ್ಡ ಕಮ್ಯೂನಿಸ್ಟ್ ರಾಷ್ಟ್ರವಾಗಿದ್ದ ಸೋವಿಯತ್ ರಷ್ಯಾ ಚಿಂದಿ ಚಿಂದಿಯಾಯಿತು.
ಸೋವಿಯತ್ ರಷ್ಯಾದ ಭಾಗವಾಗಿದ್ದ ಅನೇಕ ಪ್ರಾಂತ್ಯಗಳಲ್ಲಿ ಚುನಾವಣೆಗಳಾದವು. ಬಹುತೇಕ ಕಡೆ ಕಮ್ಯೂನಿಸ್ಟ್ ಆಡಳಿತ ವಿರುದ್ಧ ಜನಾಭಿಪ್ರಾಯ ಬಂದು ಅಧಿಕಾರ ಬದಲಾವಣೆ ಆಯಿತು. ಸೋವಿಯತ್ ರಷ್ಯಾದಲ್ಲಿ ಚುನಾವಣೆಗೆ ಪ್ರೋತ್ಸಾಹ ಕೊಟ್ಟಿದ್ದು ಮಿಖಾಯಿಲ್ ಗೋರ್ಬಚೇವ್.
ಆದರೆ, ಗೋರ್ಬಚೇವ್ ಮನಸ್ಸಲ್ಲಿ ಇದ್ದದ್ದು ಸೋವಿಯತ್ ರಷ್ಯಾಗೆ ಸಮಗ್ರ ಸುಧಾರಣೆ ಆಗಬೇಕೆಂದು. ಆದರೆ, ಚುನಾವಣೆಗಳು ರಷ್ಯಾ ವಿಭಜನೆಗೆ ಎಡೆ ಮಾಡಿಕೊಡುತ್ತದೆ ಎಂದು ಅವರು ಎಣಿಸಿರಲಿಲ್ಲ. 1990ರ ಮಾರ್ಚ್ ತಿಂಗಳಲ್ಲಿ ಸೋವಿಯತ್ ರಷ್ಯಾದಲ್ಲಿ ಕಮ್ಯೂನಿಸ್ಟ್ ಆಡಳಿತ ಬಹುತೇಕ ಅಂತ್ಯವಾಗಿತ್ತು. ಬಹು ಪಕ್ಷಗಳ ಅರೆ-ಅಧ್ಯಕ್ಷೀಯ ಗಣರಾಜ್ಯವಾಗಿ ಬದಲಾಯಿತು. ಮೊದಲ ಅಧ್ಯಕ್ಷೀಯ ಚುನಾವಣೆಯೂ ಆಯಿತು. ಗೋರ್ಬಚೇವ್ ಅಧ್ಯಕ್ಷರಾದರು. 1991 ಡಿಸೆಂಬರ್ ತಿಂಗಳಲ್ಲಿ ಸೋವಿಯತ್ ಒಕ್ಕೂಟ (ಯುಎಸ್‌ಎಸ್‌ಆರ್) ವಿಸರ್ಜನೆಗೊಂಡಿತು.
ಉಕ್ರೇನ್, ಜಾರ್ಜಿಯಾ, ಅಜರ್ಬೈಜಾನ್, ಆರ್ಮೇನಿಯಾ ಮೊದಲಾದ ಅನೇಕ ಪ್ರದೇಶಗಳು ಸೋವಿಯತ್ ಒಕ್ಕೂಟದಿಂದ ಬೇರ್ಪಟ್ಟವು. ಸೋವಿಯತ್ ರಷ್ಯಾ ಅವಿಭಜಿತವಾಗಿ ಮುಂದುವರಿಯಬೇಕೆಂದು ಅಪೇಕ್ಷಿಸಿದ್ದ ಮಿಖಾಯಿಲ್ ಗೋರ್ಬಚೇವ್ ಅವರಿಗೆ ನಿರಾಸೆಯಾಗಿದ್ದು ಹೌದು.

ಕಮ್ಯೂನಿಸ್ಟ್ ಯುಗಾಂತ್ಯ
ಯುಎಸ್‌ಎಸ್‌ಆರ್ ಪತನದೊಂದಿಗೆ ವಿಶ್ವದಲ್ಲಿ ಕಮ್ಯುನಿಸ್ಟ್ ಗೋಲ್ಡನ್ ಯುಗ ಬಹುತೇಕ ಮುಗಿದುಹೋಗಿತ್ತು. ಉತ್ತರ ಕೊರಿಯಾ, ಕ್ಯೂಬಾ, ಚೀನಾದಂಥ ಕೆಲವೇ ದೇಶಗಳಲ್ಲಿ ಮಾತ್ರ ಕಮ್ಯೂನಿಸ್ಟ್ ಆಡಳಿತ ಮುಂದುವರಿಯಿತು. ಚೀನಾದಲ್ಲಿ ಮಾವೋವಾದಿ ಕಮ್ಯೂನಿಸ್ಟ್ ವ್ಯವಸ್ಥೆ ಮುಂದುವರಿಯಿತು.
ಮಿಖಾಯಿಲ್ ಗೋರ್ಬಚೇವ್ ಅವರಿಂದಾಗಿ ಯುಎಸ್‌ಎಸ್‌ಆರ್ ಎಂಬ ಸೂಪರ್ ಪವರ್ ಶಕ್ತಿ ಅಂತ್ಯವಾಯಿತು ಎಂದು ಹಲವರು ಈಗಲೂ ಹೇಳುತ್ತಾರೆ. ಗೋರ್ಬಿ ಎಂದೇ ಖ್ಯಾತವಾಗಿರುವ ಅವರು ಪಾಶ್ಚಿಮಾತ್ಯರ ಪಾಲಿಗೆ ಹೀರೋ ಆದರೆ, ರಷ್ಯಾದ ಅನೇಕ ಮಂದಿಗೆ ಈಗಲೂ ವಿಲನ್ ಎಂಬಂತೆ ಪರಿಗಣಿತವಾಗಿದ್ದಾರೆ.
ಸೋವಿಯತ್ ರಷ್ಯಾದಲ್ಲಿ ಸುಧಾರಣೆಗಳನ್ನು ತರಲು ಹೋಗಿ ಅವರು ವಿವಿಧ ಪ್ರದೇಶಗಳಿಗೆ ತೀರಾ ಹೆಚ್ಚು ಸ್ವಾತಂತ್ರ್ಯ ಕೊಟ್ಟರು, ತಮ್ಮ ಹತೋಟಿ ತಪ್ಪುವಂತೆ ಮಾಡಿಕೊಂಡರು ಎಂದು ಹೇಳಲಾಗುತ್ತದೆ.
1995ರಲ್ಲಿ ಮಿಖಾಯಿಲ್ ಗೋರ್ಬಚೆವ್ ರಷ್ಯಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು. ಆದರೆ, ಅವರಿಗೆ ಶೇ. 1 ಮತವೂ ಸಿಗಲಿಲ್ಲ. ಬೋರಿಸ್ ಯೆಲ್ಸಿನ್ ಎದುರು ಹೀನಾಯವಾಗಿ ಸೋತರು. ಆ ನಂತರ ಗೋರ್ಬಚೇವ್ ಬಹುತೇಕ ರಾಜಕೀಯ ನಿವೃತ್ತಿಗೆ ಜಾರಿದರು. ಸಾಮಾಜಿಕ ಕಾರ್ಯ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದ್ದರು.
ಅದೇನೇ ಆದರೂ ಅಮೆರಿಕ ಮತ್ತು ಯುಎಸ್‌ಎಸ್‌ಆರ್ ನಡುವಿನ ಶೀತಲ ಸಮರದ ಅಧ್ಯಾಯ ಮುಕ್ತಾಯ ಹಾಡಲು ಗೋರ್ಬಚೇವ್ ಪಾತ್ರ ಬಹಳ ಮಹತ್ವದ್ದು. ಒಂದು ವೇಳೆ ಕೋಲ್ಡ್ ವಾರ್ ಇನ್ನಷ್ಟು ಕಾಲ ಸಾಗಿದ್ದರೆ ಪರಮಾಣು ಯುದ್ಧ ಯಾವಾಗ ಬೇಕಾದರೂ ನಡೆದುಬಿಡುವ ಸಂಭವತೆ ಹೆಚ್ಚಿತ್ತು.
(ಒನ್ಇಂಡಿಯಾ ಸುದ್ದಿ)











Click it and Unblock the Notifications