Maha Kumbh Mela 2025: ಇಂದಿನಿಂದ ಮಹಾ ಕುಂಭಮೇಳ ಆರಂಭ: ಪ್ರಯಾಗ್‌ರಾಜ್‌ನತ್ತ ಭಕ್ತ ಸಾಗರ
ಹಿಂದೂ ಧರ್ಮದಲ್ಲಿ ಅತ್ಯಂತ ದೊಡ್ಡ ಮತ್ತು ಅತ್ಯಂತ ಪವಿತ್ರವಾದ ಉತ್ಸವಗಳಲ್ಲಿ ಪ್ರಮುಖವಾದ ಮಹಾ ಕುಂಭಮೇಳ ಈ ಬಾರಿ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿದೆ. ಈ ಮಹಾ ಕುಂಭಮೇಳವು ಹೊಸ ವರ್ಷದ ಮೊದಲ ಹುಣ್ಣಿಮೆ ಅಂದರೆ ಇಂದು (ಜನವರಿ 13) ರಂದು ಆರಂಭವಾಗಿ 2025ರ ಮಹಾ ಶಿವರಾತ್ರಿಯ ದಿನ ಅಂದರೆ ಫೆಬ್ರವರಿ 26ರವರೆಗೆ ನಡೆಯಲಿದೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಬರೋಬ್ಬರಿ 12 ವರ್ಷಕ್ಕೊಮ್ಮೆ ನಡೆಯುವ ಈ ಮಹಾ ಕುಂಭಮೇಳ ಬಹಳ ಕಳೆದ ಬಾರಿಗಿಂತ ವಿಜೃಂಭಣೆಯಿಂದ ನಡೆಯುತ್ತಿದೆ. ಈ ಮಹಾ ಉತ್ಸವದಲ್ಲಿ ಹಿಂದೂಗಳು ಮಾತ್ರವಲ್ಲದೇ ಹಿಂದುಯೇತರರ, ಆಸ್ತಿಕರು, ನಾಸ್ತಿಕರೂ ಸೇರಿಂದಂತೆ ಕೋಟ್ಯಂತರ ಜನ ಭಾಗಿಯಾಗುತ್ತಾರೆ. ಈ ಬಾರಿ ಜಗತ್ತಿನಾದ್ಯಂತದಿಂದ 40 ಕೋಟಿ ಭಕ್ತರು ಮಹಾ ಕುಂಭಮೇಳಕ್ಕೆ ಆಗಮಿಸುವ ನಿರೀಕ್ಷೆ ಇದೆ.

ದೇಶದ ಮೂರು ಮಹಾನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ನಡೆಯುವ ಮಹಾ ಕುಂಭಮೇಳದಲ್ಲಿ ಶಾಹಿ ಸ್ನಾನ ಮಾಡುವುದರಿಂದ ಜನರು ಮೋಕ್ಷವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ. ಹೀಗಾಗಿ ದೇಶದ ಮೂಲೆ ಮೂಲೆಯಿಂದ ಜನ ಮಹಾ ಕುಂಭಮೇಳಕ್ಕೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಭಕ್ತರಿಗಾಗಿ 10,000 ಹೆಕ್ಟೇರ್‌ಗಳ ವಿಶಾಲವಾದ ಪ್ರದೇಶದಲ್ಲಿ 1.5 ಲಕ್ಷ ಟೆಂಟ್‌ಗಳನ್ನು ನಿರ್ಮಿಸಲಾಗಿದೆ. ಶೌಚಾಲಯ, ಸ್ವಚ್ಛತೆ ಸೇರಿದಂತೆ ಮೊದಲೆಂದಿಗಿಂತಲೂ ಈ ಬಾರಿ ಭಕ್ತರಿಗಾಗಿ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಉತ್ತಮವಾಗಿ ಮಾಡಲಾಗಿದೆ.
ಇಂದಿನಿಂದ ಆರಂಭವಾಗಿ ಫೆಬ್ರವರಿ 26ರವರೆಗೆ ನಡೆಯಲಿರುವ ಮಹಾ ಕುಂಭಮೇಳಕ್ಕೆ ತೆರಳುವ ಭಕ್ತರು ಕೆಲವು ಪ್ರಮುಖ ದಿನಾಂಕಗಳನ್ನು ನೆನಪಿನಲ್ಲಿಡಿ.
ಮಹಾ ಕುಂಭ ಮೇಳ 2025: ಪ್ರಮುಖ ದಿನಾಂಕಗಳ ವಿವರ
ಜನವರಿ 13 2025ರಂದು ಮಹಾ ಕುಂಭಮೇಳ ಪ್ರಾರಂಭವಾಗುತ್ತದೆ.
ಫೆಬ್ರವರಿ 26, 2025ರಂದು ಮಹಾ ಕುಂಭಮೇಳ ಕೊನೆಗೊಳ್ಳುತ್ತದೆ.
ಜನವರಿ 13, 2025ರಂದು ಪುಷ್ಯ ಪೂರ್ಣಿಮಾ ಅಂದರೆ ಹೊಸ ವರ್ಷದ ಮೊದಲ ಹುಣ್ಣಿಮೆಯ ದಿನವಾಗಿರುತ್ತದೆ.

ಪ್ರಮುಖ ಕುಂಭ ಸ್ನಾನದ ದಿನಾಂಕಗಳು
- ಜನವರಿ 14, 2025ರಂದು ಮಕರ ಸಂಕ್ರಾಂತಿಯ ದಿನ ಮೊದಲ ಶಾಹಿ ಸ್ನಾನ ನಡೆಯುತ್ತದೆ.
- ಜನವರಿ 29, 2025ರಂದು ಮೌನಿ ಅಮವಾಸ್ಯೆಯ ದಿನ ಎರಡನೇ ಶಾಹಿ ಸ್ನಾನ ನಡೆಯುತ್ತದೆ.
- ಫೆಬ್ರವರಿ 3, 2025ರಂದು ವಸಂತ ಪಂಚಮಿಯ ದಿನ ಮೂರನೇ ಶಾಹಿ ಸ್ನಾನ ನಡೆಯುತ್ತದೆ.
- ಫೆಬ್ರವರಿ 12, 2025ರಂದು ಮಾಘಿ ಪೂರ್ಣಿಮಾ ಅಂದರೆ ಹುಣ್ಣಿಮೆಯ ದಿನ.
- ಫೆಬ್ರವರಿ 26, 2025ರಂದು ಮಹಾ ಶಿವರಾತ್ರಿ ಹಾಗೂ ಮಹಾ ಕುಂಭಮೇಳಕ್ಕೆ ತೆರೆ.












Click it and Unblock the Notifications