Maha Kumbh Mela 2025: ಜಗತ್ತಿನಾದ್ಯಂತ ಮಹಾ ಕುಂಭಮೇಳ ಟ್ರೆಂಡಿಂಗ್: ಪಾಕಿಸ್ತಾನದ ಜನರಿಗೆ ಹೆಚ್ಚು ಆಸಕ್ತಿ
ಭಾರತದಲ್ಲಿ ಅತಿ ದೊಡ್ಡ ಧಾರ್ಮಿಕ ಉತ್ಸವದ ಸಂಭ್ರಮ ಮನೆ ಮಾಡಿದೆ. ಹಿಂದೂ ಧರ್ಮದಲ್ಲಿ ಅತ್ಯಂತ ದೊಡ್ಡ ಹಾಗೂ ಅತ್ಯಂತ ಪವಿತ್ರವಾದ ಉತ್ಸವಗಳಲ್ಲಿ ಪ್ರಮುಖವಾದ ಮಹಾ ಕುಂಭಮೇಳಕ್ಕೆ ಜನವರಿ 13ರಿಂದ ಚಾಲನೆ ಸಿಕ್ಕಿದ್ದು, ನಾಲ್ಕು ದಿನಗಳನ್ನು ಯಶಸ್ವಿಯಾಗಿ ಮುಗಿಸಿ ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ. ಬರೋಬ್ಬರಿ ಹನ್ನೆರಡು ವರ್ಷಗಳ ಬಳಿಕ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಈ ಮಹಾ ಕುಂಭಮೇಳಕ್ಕೆ ಜಗತ್ತಿನಾದ್ಯಂತದಿಂದ ಭಕ್ತ ಸಾಗರವೇ ಹರಿದು ಬರುತ್ತಿದೆ.
ಮಹಾ ಕುಂಭ ಮೇಳ ಸದ್ಯ ಭಾರತಕ್ಕೆ ಮಾತ್ರವಲ್ಲದೇ, ಜಾಗತೀಕ ಮಟ್ಟದ ಧಾರ್ಮಿಕ ಕಾರ್ಯಕ್ರಮವಾಗಿದೆ. ಗಂಗಾ, ಯಮುನಾ ಹಾಗೂ ಸರಸ್ವತಿ ಮಹಾ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಭಾರತದ ಮೂಲೆ ಮೂಲೆಯ ಭಕ್ತರು ಮಾತ್ರವಲ್ಲದೇ, ಬ್ರೆಜಿಲ್, ಜರ್ಮನಿ, ಜಪಾನ್, ಇಂಗ್ಲೆಂಡ್, ಅಮೇರಿಕಾ ಮತ್ತು ಸ್ಪೇನ್‌ನಂತಹ ದೇಶದ ನಿವಾಸಿಗಳು ಕೂಡ ಆಗಮಿಸುತ್ತಿದ್ದಾರೆ. ವಿದೇಶಿ ಗಣ್ಯರು ಕೂಡ ಮಹಾ ಕುಂಭಮೇಳದಲ್ಲಿ ಭಾಗಿಯಾಗುತ್ತಿದ್ದು, ಮಹಾ ಕುಂಭ ಮೇಳ ಪ್ರಪಂಚದಾದ್ಯಂತ ಸದ್ದು ಮಾಡುತ್ತಿದೆ.

ಇದೀಗ ಮಹಾ ಕುಂಭ ಮೇಳಕ್ಕೆ ಸಂಬಂಧಿಸಿದಂತೆ ಮತ್ತೊಂದು ಕುತೂಹಲಕಾರಿ ವಿಚಾರ ಬಹಿರಂಗಗೊಂಡಿದೆ. ಸದ್ಯ ಟ್ರೆಂಡಿಂಗ್‌ನಲ್ಲಿರುವ ಮಹಾ ಕುಂಭ ಮೇಳದ ಬಗ್ಗೆ ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಕತಾರ್ ರಾಷ್ಟ್ರಗಳಲ್ಲಿಯೇ ಈ ಬಗ್ಗೆ ಹೆಚ್ಚು ಹುಡುಕಲಾಗುತ್ತಿದೆ. ಅಚ್ಚರಿಯೆಂದರೆ ಈ ಪಟ್ಟಿಯಲ್ಲಿ ಪಾಕಿಸ್ತಾನದ ಹೆಸರು ಮೊದಲಿದೆ. ಹೌದು ಭಾರತದಲ್ಲಿ ನಡೆಯುತ್ತಿರುವ ಬೃಹತ್ ಧಾರ್ಮಿಕ ಉತ್ಸವ ಮಹಾ ಕುಂಭ ಮೇಳದ ಬಗ್ಗೆ ಪಾಕಿಸ್ತಾನದಂತಹ ಇಸ್ಲಾಮಿಕ್ ದೇಶಗಳು ಹುಡುಕಿ ಮಾಹಿತಿ ಪಡೆದುಕೊಳ್ಳುತ್ತಿವೆ.
ಪಾಕಿಸ್ತಾನದ ನಂತರ, ಕತಾರ್, ಯುಎಇ ಮತ್ತು ಬಹ್ರೇನ್‌ನಂತಹ ದೇಶಗಳು ಮಹಾ ಕುಂಭ ಮೇಳದ ಬಗ್ಗೆ ಅತಿಯಾದ ಆಸಕ್ತಿ ಹೊಂದಿದ್ದು, ನೇಪಾಳ, ಸಿಂಗಾಪುರ, ಆಸ್ಟ್ರೇಲಿಯಾ, ಕೆನಡಾ, ಐರ್ಲೆಂಡ್, ಬ್ರಿಟನ್, ಥೈಲ್ಯಾಂಡ್ ಮತ್ತು ಅಮೇರಿಕಾದ ಜನರು ಕೂಡ ಮಹಾ ಕುಂಭ ಮೇಳ ಕಾರ್ಯಕ್ರಮದ ಬಗ್ಗೆ ಹುಡುಕಿ ಓದುತ್ತಿದ್ದಾರೆ. ಒಟ್ಟಿನಲ್ಲಿ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಈ ಮಹಾ ಕುಂಭಮೇಳ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ.












Click it and Unblock the Notifications