Living Goddess: ನೇಪಾಳದ ಜೀವಂತ ದೇವತೆ: ಆಧ್ಯಾತ್ಮಿಕ ಆಚರಣೆಯ ರೋಚಕ ರಹಸ್ಯ
ಎಲ್ಲ ಮಕ್ಕಳಂತೆ ಜೀವಿಸುವ ಮೂರು ವರ್ಷದ ಹೆಣ್ಣು ಮಗು ಇದ್ದಕ್ಕಿದ್ದಂತೆ ದೇವರಾಗಿಬಿಡುತ್ತದೆ. ಇಡೀ ದೇಶವೇ ಆ ಮಗುವನ್ನ ದೇವರೆಂದು ಪೂಜೆ ಮಾಡುತ್ತದೆ. ದೇಶದ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು ಕೂಡ ಆ ಪುಟ್ಟ ಬಾಲಕಿಯನ್ನು ದೇವರೆಂದು ಪೂಜಿಸುತ್ತಾರೆ. ಅಷ್ಟೇ ಯಾಕೆ ದೊಡ್ಡ ದೊಡ್ಡ ಸಿನಿಮಾ ಸ್ಟಾರ್‌ಗಳು ಕೂಡ ಆ ಮಗುವನ್ನು ದೇವರೆಂದು ಕಾಲು ಮುಗಿದು ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅಷ್ಟಕ್ಕೂ ಯಾರೀ ಜೀವಂತ ದೇವರು? ಎಲ್ಲಿ ಪೂಜಿಸಲಾಗುತ್ತದೆ?
ನೇಪಾಳ ವಿಶ್ವದ ಅತ್ಯಂತ ಆಕರ್ಷಕ ಹಾಗೂ ವಿಶಿಷ್ಟವಾದ ಆಧ್ಯಾತ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಇಲ್ಲಿನ ಕಠ್ಮಂಡುವಿನಲ್ಲಿ ಜೀವಂತ ದೇವರನ್ನು ಪೂಜಿಸಲಾಗುತ್ತದೆ. ನೇಪಾಳಿ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಈ ಪ್ರಾಚೀನ ಸಂಪ್ರದಾಯ ಅಪರೂಪದ ಆಚರಣೆಯಾಗಿದೆ.

ನೇಪಾಳದಲ್ಲಿ ಜೀವಂತ ದೇವರು
ಹೌದು.. ಇಲ್ಲಿನ ಆರಾಧ್ಯ ದೈವ ತಲೇಜು (Taleju) ದೇವಿ. ಇಲ್ಲಿನ ಭಕ್ತರು ತಲೇಜು (Taleju) ದೇವಿಯ ಮಾನವ ಅವತಾರವಾಗಿ ಪುಟ್ಟ ಮಕ್ಕಳನ್ನು ಆಯ್ಕೆ ಮಾಡುತ್ತಾರೆ. ಈ ಮಗುವನ್ನು ಕುಮಾರಿ ಎಂದು ಕರೆಯಲಾಗುತ್ತದೆ. ಹಿಂದೂ ದೇವರು ತಲೇಜುವಿನ ಜೀವಂತ ಅವತಾರವೆಂದು ಪರಿಗಣಿಸಲಾಗುವ ಕುಮಾರಿಯನ್ನು ಬೌದ್ಧರು ಮತ್ತು ಹಿಂದೂಗಳು ಇಲ್ಲಿ ಪೂಜಿಸುತ್ತಾರೆ.
ನೇಪಾಳದ ಕುಮಾರಿ ಕೇವಲ ಧಾರ್ಮಿಕ ಸಂಕೇತವಲ್ಲ. ದೈವಿಕ ಶಕ್ತಿಗಳನ್ನು ಮತ್ತು ತನ್ನ ಭಕ್ತರನ್ನು ಆಶೀರ್ವದಿಸುವ ಸಾಮರ್ಥ್ಯವನ್ನು ಹೊಂದಿದ್ದಾಳೆ ಎಂದು ಭಕ್ತರು ನಂಬುತ್ತಾರೆ. ಹಾಗಂತ ಇಲ್ಲಿ ಎಲ್ಲಾ ಮಕ್ಕಳನ್ನು ಕುಮಾರಿ ಮಾಡಲಾಗುವುದಿಲ್ಲ. ಕುಮಾರಿ ಮಾಡಲು ಆ ಮಗುವಿಗೆ ಶಕ್ತಿ ಇರಬೇಕು. ದೈವಿ ಶಕ್ತಿ ಇದ್ದಾಗ ಮಾತ್ರ ಆ ಹೆಣ್ಣು ಮಗುವನ್ನು ಕುಮಾರಿಯಾಗಿ ಅಂದರೆ ಜೀವಂತ ದೇವರಾಗಿ ಪೂಜಿಸಲಾಗುತ್ತದೆ. ಹಾಗಾದರೆ ಮಗುವನ್ನು ಕುಮಾರಿಯಾಗಿ ಹೇಗೆ ಆಯ್ಕೆ ಮಾಡಲಾಗುತ್ತದೆ? ಇದನ್ನು ಕೇಳಿದರೆ ಒಂದು ಕ್ಷಣ ನೀವು ಧಂಗಾಗಿ ಹೋಗುತ್ತೀರಾ.

ಜೀವಂತ ದೇವರನ್ನು ಆಯ್ಕೆ ಮಾಡುವುದು ಹೇಗೆ?
ನೇಪಾಳದ ರಾಯಲ್ ಕುಮಾರಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಅತ್ಯಂತ ಕಠಿಣವಾಗಿರುತ್ತದೆ. ಯಾಕೆಂದರೆ ಹೆಣ್ಣು ಮಗು ಜೀವಂತ ದೇವತೆ ಎಂದು ಘೋಷಿಸಲ್ಪಡುವ ಮೊದಲು ಹಲವಾರು ಆಧ್ಯಾತ್ಮಿಕ ಮತ್ತು ದೈಹಿಕ ಮಾನದಂಡಗಳನ್ನು ಪೂರೈಸಬೇಕು. ಆಯ್ಕೆಯಾದ ನಂತರ ಅವರು ಕಠ್ಮಂಡು ದರ್ಬಾರ್ ಚೌಕದಲ್ಲಿರುವ ಕುಮಾರಿ ಘರ್‌ನಲ್ಲಿ ವಾಸಿಸುತ್ತಾರೆ. ವಿಶೇಷ ಸಮಾರಂಭಗಳು ಮತ್ತು ಇಂದ್ರ ಜಾತ್ರಾದಂತಹ ಭವ್ಯ ಹಬ್ಬಗಳ ಸಮಯದಲ್ಲಿ ಮಾತ್ರ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಅಲ್ಲಿ ಸಾವಿರಾರು ಜನರು ಆ ಮಗುವಿನ ಅಂದರೆ ಜೀವಂತ ದೇವರು ಕುಮಾರಿಯ ಆಶೀರ್ವಾದವನ್ನು ಪಡೆಯಲು ಸೇರುತ್ತಾರೆ.
ಜೀವಂತ ದೇವರು ಅಥವಾ ಕುಮಾರಿಯನ್ನು ಆಯ್ಕೆ ಮಾಡುವ ಮೊದಲು ಹೆಣ್ಣು ಮಗು 32 ಪರೀಕ್ಷೆಗಳನ್ನ ಎದುರಿಸಬೇಕು. ಈ ಪರೀಕ್ಷೆಗಳಲ್ಲಿ ಒಂದು ಪರೀಕ್ಷೆಯ ಬಗ್ಗೆ ಕೇಳಿದರೆ ಎದೆಯಲ್ಲಿ ನಡುಕ ಶುರುವಾಗುತ್ತದೆ. ವಿಜಯದಶಮಿಯ ರಾತ್ರಿ 108 ಎಮ್ಮೆ ಹಾಗೂ 108 ಕುರಿಗಳ ತಲೆ ಕಡೆದು ಹಾಕುತ್ತಾರೆ. ಯಾವ ಮಗು ಭಯವಿಲ್ಲದೆ ಈ ತಲೆ ಕಡೆದ ಎಮ್ಮೆ ಹಾಗೂ ಕುರಿಗಳ ರಾಶಿಯಲ್ಲಿ ನಡೆದುಕೊಂಡು ಹೋಗುತ್ತದೆಯೋ ಆ ಮಗು ಮುಂದಿನ ಪರೀಕ್ಷೆಗೆ ಅರ್ಹವಾಗುತ್ತದೆ.

ಕೊನೆಯ ಹಂತದ ಪರೀಕ್ಷೆಯಲ್ಲಿ 108 ಎಮ್ಮೆ ಹಾಗೂ 108 ಕುರಿ ಕಡೆದ ತಲೆಗಳನ್ನು ಒಂದು ಕೋಣೆಯಲ್ಲಿ ಹಾಕಲಾಗುತ್ತದೆ. ಯಾವ ಮಗು ಇಡೀ ರಾತ್ರಿ ಆ ಕೋಣೆಯಲ್ಲಿ ಭಯ ಇಲ್ಲದೆ, ಕಣ್ಣೀರು ಹಾಕದೆ ಕಾಲ ಕಳಿಯುತ್ತೋ ಆ ಮಗುವನ್ನು ಕುಮಾರಿ ಮಾಡುತ್ತಾರೆ. ಕುಮಾರಿಯ ಪಟ್ಟಾಭಿಷೇಕ ಆಗುವ ಮುಂಚೆ ಹಲವಾರು ಪೂಜೆ ಪುನಸ್ಕಾರಗಳು ನಡೆಯುತ್ತವೆ. ನಂತರ ಕುಮಾರಿಯನ್ನು ಅರಮನೆಯಲ್ಲಿ (ಕಠ್ಮಂಡು ದರ್ಬಾರ್ ಚೌಕದಲ್ಲಿರುವ ಕುಮಾರಿ ಘರ್) ಇರಿಸಲಾಗುತ್ತದೆ. ನಿತ್ಯ ನೂರಾರು ಜನ ಇಲ್ಲಿಗೆ ಆಗಮಿಸಿ ಕುಮಾರಿ ದರ್ಶನ ಪಡೆದು ಆಶೀರ್ವಾದ ಪಡೆಯುತ್ತಾರೆ.
ಕುಮಾರಿ ಹೇಗೆ ಆಶೀರ್ವಾದ ನೀಡುತ್ತಾಳೆ?
ನೇಪಾಳ ಜನರು ಪೂಜಿಸುವ ಜೀವಂತ ದೇವರು ಕುಮಾರಿ ಆಸನದ ಮೇಲೆ ಸುಮ್ಮನೆ ಕುಳಿತಿರುತ್ತಾರೆ. ಕುಮಾರಿ ಯಾರನ್ನಾದರೂ ನೋಡಿ ಅತ್ತರೆ ಅವರಿಗೆ ಏನೋ ಕೆಟ್ಟದು ಆಗುತ್ತದೆ ಎಂದು ಅರ್ಥ. ಒಂದು ವೇಳೆ ಯಾರನ್ನಾದರು ನೋಡಿ ನಕ್ಕರೆ ಅವರು ಸತ್ತರು ಎಂದು ಅರ್ಥವಂತೆ. ಯಾವುದೇ ಮುಖ ಭಾವ ಬದಲಾಗದೇ ಕುಳಿತಿದ್ದರೆ ಅದು ಒಳ್ಳೆಯದಾಗುತ್ತದೆ ಎಂದು ಭಾವಿಸಲಾಗುತ್ತದೆ.
ಕುಮಾರಿ ಅವಧಿ ಎಷ್ಟು?
ನೇಪಾಳದ ಜೀವಂತ ದೇವತೆಯನ್ನು ಪೂಜಿಸುವ ಸಂಪ್ರದಾಯ ಶತಮಾನಗಳಿಂದ ಅಸ್ತಿತ್ವದಲ್ಲಿದೆ. ಇದು ನೇಪಾಳದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಹಾಗಂತ ಈ ಹುಡುಗಿ ತನ್ನ ಜೀವಿತಾವಧಿಯವರೆಗೂ ಕುಮಾರಿಯಾಗಿರುವುದಿಲ್ಲ. ಬದಲಾಗಿ ಈಕೆ ದೊಡ್ಡವಳಾಗಿ 15-16 ವರ್ಷ ವಯಸ್ಸಾದ ಬಳಿಕ ಆಕೆ ಎಲ್ಲರಂತೆ ಸಮಾನ್ಯ ಜೀವನ ನಡೆಸುತ್ತಾಳೆ. ನಂತರ ಬೇರೆ ಮಗುವನ್ನು ಕುಮಾರಿಯಾಗಿ ಆಯ್ಕೆ ಮಾಡಲಾಗುತ್ತದೆ. ಹೀಗೆ ನೇಪಾಳ ಸಂಪ್ರದಾಯ, ಆಚರಣೆ ಮತ್ತು ಬೌದ್ಧ ಆಧ್ಯಾತ್ಮಿಕ ಆಚರಣೆಗಳ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಹೊಂದಿದೆ.












Click it and Unblock the Notifications