KRS & Vani Vilas sagar dam: ಹಿರಿಯೂರು ವಿವಿ ಸಾಗರ & ಕೃಷ್ಣರಾಜ ಸಾಗರಕ್ಕೂ ತುಂಬಾ ನಂಟು..!-ಹೇಗೆ?
ಚಿತ್ರದುರ್ಗ, ಡಿಸೆಂಬರ್, 10: ಇವೆರಡು ರಾಜ್ಯದ ಪ್ರಮುಖ ಜಲಾಶಗಳಾಗಿದ್ದು, ಪ್ರವಾಸಿಗರಿಗೆ ಸ್ವರ್ಗದ ಅನುಭವ ನೀಡುವ ತಾಣಗಳು ಎಂದರೆ ತಪ್ಪಾಗಲಾರದು. ಅಲ್ಲದೆ ಈ ಸುಪ್ರಸಿದ್ದ ಜಲಾಶಯಗಳಿಗೆ ರಾಜಮಹಾಜರ ನಂಟಿದೆ. ಹಾಗಾದರೆ ಆ ಜಲಾಶಯಗಳು ಯಾವುವು? ಅವುಗಳ ಹಿನ್ನೆಲೆ ಎಂಥಹದ್ದು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಿತ್ರದುರ್ಗ ಜಿಲ್ಲೆಯ ಜೀವನಾಡಿ ವಾಣಿ ವಿಲಾಸ ಜಲಾಶಯ ಹಾಗೂ ಮೈಸೂರು, ಬೆಂಗಳೂರು, ಮಂಡ್ಯ ಜಿಲ್ಲೆಯ ಜೀವನಾಡಿಯಾದ ಕೃಷ್ಣರಾಜ ಸಾಗರ (KRS) ಜಲಾಶಯಗಳಿಗೆ ಅವಿನಾಭಾವ ನಂಟಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರಿನ ಅನುಕೂಲವಾಗುವಂತೆ ವಾಣಿವಿಲಾಸಪುರ ಬಳಿ ವಾಣಿವಿಲಾಸ ಜಲಾಶಯವನ್ನು 1907ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿದರು.

ರಾಜ್ಯದ ಹಳೆಯ ಅಣೆಕಟ್ಟುಗಳಲ್ಲಿ ವಿವಿ ಸಾಗರ ಡ್ಯಾಂ ಕೂಡ ಒಂದಾಗಿದೆ. 1907ರಲ್ಲಿ ನಿರ್ಮಾಣ ಆಗಿರುವ ಈ ಡ್ಯಾಂಗೆ ಸುಮಾರು 115 ವರ್ಷಗಳ ಕಾಲ ಇತಿಹಾಸವಿದೆ. 1935ರಲ್ಲಿ ಜಲಾಶಯಕ್ಕೆ 135.25 ಅಡಿ ನೀರು ಸಂಗ್ರಹವಾಗುವ ಮೂಲಕ ಮೊದಲ ಬಾರಿಗೆ ಡ್ಯಾಂ ಕೋಡಿ ಬಿದ್ದು, ಇತಿಹಾಸ ಸೃಷ್ಟಿಸಿತ್ತು. ಇದಾದ ಬಳಿಕ ಕಳೆದ ವರ್ಷ 2022ರಲ್ಲಿ ಎರಡನೇ ಬಾರಿಗೆ 135 ಅಡಿ ನೀರು ಸಂಗ್ರಹವಾಗಿ ಡ್ಯಾಂ ಕೋಡಿ ಬಿದ್ದು ಐತಿಹಾಸಿಕ ಸಾಧನೆಗೆ ಕಾರಣವಾಗಿತ್ತು.
ಹೆಚ್ಚು ನೀರು ಸಂಗ್ರಹವಾದ ವರ್ಷ
1933ರಲ್ಲಿ 135.25 ಅಡಿ ನೀರು ಸಂಗ್ರಹ ಆಗಿದ್ದು, 1934ರಲ್ಲಿ 130.24 ಅಡಿ ನೀರು ಹರಿದು ಬಂದಿತ್ತು. 1957ರಲ್ಲಿ 125.05 ಅಡಿ, 1958ರಲ್ಲಿ124.50 ಅಡಿ, 2021ರಲ್ಲಿ 125.50 ಅಡಿ 2022ರಲ್ಲಿ 135 ಅಡಿ ನೀರು ಸಂಗ್ರಹ ಆಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.
ವೇದಾವತಿ ಎಂದು ಹೆಸರಾಗಿದ್ದು ಹೇಗೆ
ರಾಜ್ಯದ ಬಹುತೇಕ ಜಲಾಶಯಗಳು ಮುಂಗಾರು ಹಂಗಾಮಿನಲ್ಲಿ ತುಂಬುವುದು ವಾಡಿಕೆ ಇದೆ. ಆದರೆ ವಾಣಿ ವಿಲಾಸ ಸಾಗರ ಜಲಾಶಯದ ನೀರಿನ ಹರಿವು ಗಮನಿಸಿದಾಗ ಹಿಂಗಾರು ಮಳೆಗೆ ಅತೀ ಹೆಚ್ಚು ನೀರು ಸಂಗ್ರಹಣೆ ಆಗುತ್ತಿರುವುದು ವಿಶೇಷವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ "ವೇದಾ" ನದಿ ಕಡೂರಿನ ಬಳಿ "ಅವತಿ" ಎಂಬ ನದಿಯನ್ನು ಸೇರಿ ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ.
ಯಾರ ನೇತೃತ್ವದಲ್ಲಿ ಡ್ಯಾಂ ನಿರ್ಮಾಣ?
ಹಿರಿಯೂರು ತಾಲೂಕಿನ ವಾಣಿ ವಿಲಾಸಪುರದ ಬಳಿ ಎರಡು ಗುಡ್ಡಗಳ ಮಧ್ಯೆ ನಿರ್ಮಿಸಿರುವ ಜಲಾಶಯವೇ ಮಾರಿಕಣಿವೆ ಅಣೆಕಟ್ಟು. ಇನ್ನು ವಾಣಿ ವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್ ಪೀಸ್ ಎಂದು ಗುರುತಿಸಲಾಗಿದೆ. ಈ ಅಣೆಕಟ್ಟನ್ನು 1898ರಲ್ಲಿ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ 'ತಾರಾ ಚಾಂದ್ ದಲಾಲ್' ಎಂಬ ಇಂಜಿನಿಯರ್ ನೇತೃತ್ವದ ತಂಡವು ನಿರ್ಮಾಣ ಮಾಡಿತ್ತು.
KRS, ವಿವಿ ಸಾಗರಕ್ಕಿರುವ ನಂಟು
ಆಗಿನ ಮೈಸೂರು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಮುಂದಾಳತ್ವದಲ್ಲಿ ಅಣೆಕಟ್ಟನ್ನು ನಿರ್ಮಿಸಿ, 1907ರಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದರು. ಅಲ್ಲದೇ ಕೃಷ್ಣರಾಜ ಸಾಗರ (KRS) ಅಣೆಕಟ್ಟು ನಿರ್ಮಾಣಕ್ಕೆ ವಾಣಿ ವಿಲಾಸ ಸಾಗರದ ನೀಲಿ ನಕ್ಷೆಯೇ ಮೂಲ ಎಂದು ಹೇಳಲಾಗುತ್ತದೆ.
ಸುಳ್ಳು ಸುದ್ದಿ ಹಬ್ಬಿಸಿದ್ದ ಕಿಡಿಗೇಡಿಗಳು
ಇನ್ನು ಕಳೆದ ವರ್ಷ ಡ್ಯಾಂ ಕೋಡಿ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹವಾಗಿತ್ತು. ಈಗಿರುವಾಗ ಜಲಾಶಯದ ಮುಂಭಾಗದ ಕಟ್ಟಡದಲ್ಲಿ ನೀರು ಜಿನುಗುತ್ತಿತ್ತು. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಡ್ಯಾಂ ಕೋಡಿ ಬಿದ್ದಿದೆ ಎಂದು ಜಿಲ್ಲೆಯ ಜನತೆಯಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ವಾಣಿ ವಿಲಾಸ ಅಣೆಕಟ್ಟು ಬಿರುಕು ಬಿಟ್ಟಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
ಸುಳ್ಳು ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಹಿಂದಿನ ಶಾಸಕರು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ಇದು ಸಳ್ಳು ಸುದ್ದಿ ಯಾರು ನಂಬಬೇಡಿ. ಡ್ಯಾಂ ಎಲ್ಲಿಯೂ ಬಿರುಕು ಬಿಟ್ಟಿಲ್ಲ. ಹೇಳಿಕೆ ವಿಡಿಯೋ ಬಿಡುಗಡೆ ಮಾಡಿದ್ದ ಅವರು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಪ್ರವಾಸಿಗರನ್ನು ಸೆಳೆಯುತ್ತಿರುವ ವಿವಿ ಸಾಗರ
ವಾಣಿ ವಿಲಾಸ ಜಲಾಶಯವನ್ನು ನೋಡಲು ಬಯಸುವ ಪ್ರವಾಸಿಗರು ಹಿರಿಯೂರು ನಗರದಿಂದ ಹೊಸದುರ್ಗ ರಸ್ತೆ ಮಾರ್ಗವಾಗಿ 18 ಕಿಲೋ ಮೀಟರ್ ದೂರದ ಎಡಭಾಗಕ್ಕೆ ಜಲಾಶಯ ತಲುಪಬಹುದು. ಬೆಂಗಳೂರು, ತುಮಕೂರಿನಿಂದ ಹಿರಿಯೂರು ನಗರದ ಮೂಲಕ ಡ್ಯಾಂ ಪ್ರವೇಶಿಸಬಹುದು.
ಹುಬ್ಬಳ್ಳಿ, ದಾವಣಗೆರೆಯಿಂದ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಲಭಾಗದ ವಿವಿ ಪುರ ಕ್ರಾಸ್ ಮೂಲಕ ಜಲಾಶಯಕ್ಕೆ ತೆರಳಬಹುದು. ಚಿಕ್ಕಮಗಳೂರು, ಶಿವಮೊಗ್ಗ ಭಾಗದ ಪ್ರವಾಸಿಗರು ಹೊಸದುರ್ಗದಿಂದ ಹಿರಿಯೂರು ಮಾರ್ಗವಾಗಿ ಬಲಭಾಗದ ಮೂಲಕ ತೆರಳಿ ಡ್ಯಾಂ ವೀಕ್ಷಿಸಬಹುದಾಗಿದೆ.
ಏಷಿಯನ್ ಅಭಿವೃದ್ಧಿ ಬ್ಯಾಂಕ್ ಮೂಲಕ 740 ಕೋಟಿ ರೂ ವೆಚ್ಚದಲ್ಲಿ ವಾಣಿ ವಿಲಾಸ ಸಾಗರ ಜಲಾಶಯ, ನಾಲೆಗಳ ಆಧುನೀಕರಣ, ಹನಿ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಇತ್ತೀಚೆಗಷ್ಟೇ ನಡೆದ ಸಭೆಯಲ್ಲಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದ್ದರು.
2023ರಲ್ಲಿ ಸಂಗ್ರಹವಾದ ನೀರಿನ ಪ್ರಮಾಣ
2023 ಸೆಪ್ಟೆಂಬರ್ 4ರಂದು ವಾಣಿ ವಿಲಾಸ ಸಾಗರ ಜಲಾಶಯಕ್ಕೆ 2,612 ಕ್ಯೂಸೆಕ್ ಒಳಹರಿವು, 2,457 ಕ್ಯೂಸೆಕ್ ಹೊರಹರಿವು, ಜಲಾಶಯದ ನೀರಿನ ಮಟ್ಟ 131.45 ಅಡಿ ಇತ್ತು. ಸೆಪ್ಟೆಂಬರ್ 5ರಂದು 4437 ಕ್ಯೂಸೆಕ್ ಒಳಹರಿವು, ನೀರಿನ ಮಟ್ಟ 132.10 ಅಡಿ, ಸೆಪ್ಟೆಂಬರ್ 6ರಂದು 7,467 ಕ್ಯೂಸೆಕ್ ಒಳಹರಿವು, ಜಲಾಶಯದ ನೀರಿನ ಮಟ್ಟ 133 ಅಡಿ, 7312 ಕ್ಯೂಸೆಕ್ ಹೊರಹರಿವು, ಸೆಪ್ಟೆಂಬರ್ 7ರಂದು 11,112 ಕ್ಯೂಸೆಕ್ ಒಳಹರಿವು, ನೀರಿನ ಮಟ್ಟ 134 ಅಡಿ, 10,957 ಕ್ಯೂಸೆಕ್ ಹೊರ ಹರಿವು, ನಂತರ 14,891 ಕ್ಯೂಸೆಕ್ ಒಳಹರಿವು ಹೆಚ್ಚಳ, ನೀರಿನ ಮಟ್ಟ 135 ಅಡಿ, 14,736 ಕ್ಯೂಸೆಕ್ ಪ್ರಮಾಣದಲ್ಲಿ ಹೊರ ಹರಿವು ನೀರನ್ನು ನಾಲೆಗಳು ಹಾಗೂ ವೇದಾವತಿ ನದಿ ಮೂಲಕ ಬಿಡಲಾಗಿತ್ತು.












Click it and Unblock the Notifications