ಕೊಡಗು: ಮಲೆನಾಡು ಕಾಡುಮಾವಿನ ಬಗ್ಗೆ ನಿಮಗೆಷ್ಟು ಗೊತ್ತು?, ಇಲ್ಲಿದೆ ವಿವರ

ಮಡಿಕೇರಿ, ಜೂನ್‌, 01: ಇವತ್ತು ಮಾರುಕಟ್ಟೆಯಲ್ಲಿ ರಸಭರಿತ ಸೇಲಂ, ರತ್ನಗಿರಿ (ಆಲ್ಫನ್ಸ್), ಬಾದಾಮಿ, ರಸಪುರಿ, ಮಲಗೋವ, ಮಲ್ಲಿಕಾ, ಸೇಂದೂರಾ, ತೋತಾಪುರಿ, ಬಾಗನಪಲ್ಲಿ, ದಶೇರಿ, ಕಾಲಾಪ ಹಾಡ್, ಕೇಶರ್, ಸಕ್ಕರೆ ಗುತ್ತಿ, ಅಮ್ರಪಾಲಿ, ದಿಲ್‌ಪಸಂದ್ ಹೀಗೆ ಹತ್ತಾರು ಬಗೆಯ ಮಾವಿನ ಹಣ್ಣುಗಳನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ ಮಲೆನಾಡಿನ ಕಾಡುಗಳಲ್ಲಿ ದೊರೆಯುವ ಕಾಡು ಮಾವಿನ ಹಣ್ಣುಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲ ಅನಿದುತ್ತದೆ.

ಮಲೆನಾಡಿನಲ್ಲಿ ಹೇರಳವಾಗಿ ಕಾಡುಗಳಿದ್ದ ಕಾಲದಲ್ಲಿ ಕಾಡು ಮಾವಿನ ಮರಗಳು ಹೆಮ್ಮರವಾಗಿ ಎಲ್ಲೆಂದರಲ್ಲಿ ಬೆಳೆಯುತ್ತಿದ್ದವು. ಅಲ್ಲದೆ, ಹೇರಳವಾಗಿ ಹಣ್ಣುಗಳು ಸಿಗುತ್ತುದ್ದವು. ಈ ಹಣ್ಣುಗಳನ್ನು ಸ್ಥಳೀಯರು ತಿನ್ನಲು ಮತ್ತು ಖಾದ್ಯವನ್ನಾಗಿ ಬಳಕೆ ಮಾಡುತ್ತಾ ಬಂದಿದ್ದಾರೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅರಣ್ಯ ನಾಶವಾಗುತ್ತಿರುವುದರಿಂದ ಹೆಮ್ಮರವಾಗಿ ಬೆಳೆದಿದ್ದ ಮಾವಿನ ಮರಗಳು ನಿಧಾನವಾಗಿ ನಶಿಸುತ್ತಾ ಹೋಗುತ್ತಿವೆ. ಹೀಗಾಗಿ ಮುಂದಿನ ಪೀಳಿಗೆಗೆ ಇವುಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಬೇಕಿದೆ.

Malnad mangoes

ಕಾಡು ಮಾವಿನ ಮರಗಳು ಕೊಡಗಿನ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಹಿಂದೆ ಏಲಕ್ಕಿ ತೋಟಗಳಿದ್ದ ಕಾಲದಲ್ಲಿ ನೆರಳಿನ ಅವಶ್ಯಕತೆ ಇದ್ದುದರಿಂದ ಅವುಗಳು ಹೆಮ್ಮರವಾಗಿ ಬೆಳೆದು ಹಣ್ಣುಗಳನ್ನು ನೀಡುತ್ತಿದ್ದವು. ನಂತರದ ಕಾಲಘಟ್ಟದಲ್ಲಿ ಏಲಕ್ಕಿ ತೋಟ ಕಾಫಿ ತೋಟವಾಗಿ ಮಾರ್ಪಟ್ಟಾಗ ಹೆಮ್ಮರಗಳಿಗೆ ಕೊಡಲಿ ಬಿದ್ದಿದ್ದರಿಂದ ಅವುಗಳು ನಶಿಸುವ ಹಂತವನ್ನು ತಲುಪಿದವು. ಆದರೂ ಇವತ್ತಿಗೂ ಕೊಡಗಿನ ಕಾಡುಗಳಲ್ಲಿ ರುಚಿ, ಗಾತ್ರ, ಸುವಾಸನೆ ಇವೆಲ್ಲದರಲ್ಲೂ ವಿಭಿನ್ನತೆ ಹೊಂದಿದ ಕಾಡು ಮಾವಿನ ಹಣ್ಣುಗಳು ಸಿಗುತ್ತವೆ.

ಮಲೆನಾಡಿಗರ ಪಾಲಿನ ಕಲ್ಪವೃಕ್ಷದ ವಿಶೇಷತೆ

ಇವತ್ತು ಮಾರುಕಟ್ಟೆಗೆ ಬರುವ ಬಗೆಬಗೆಯ ಮಾವಿನ ಹಣ್ಣುಗಳ ನಡುವೆ ಕಾಡುಮಾವಿಗೆ ಯಾವುದೇ ಸ್ಥಾನವಿಲ್ಲದಿದ್ದರೂ ಕಾಡುಗಳಲ್ಲಿ, ತೋಟಗಳಲ್ಲಿ ಪ್ರತಿ ವರ್ಷ ಫಸಲು ಬಿಟ್ಟು ಹಣ್ಣಾಗಿ ನೆಲಕ್ಕುರುಳುವುದು ನಡೆಯುತ್ತಲೇ ಇದೆ. ಈ ಪೈಕಿ ರುಚಿಕರವಾದ ಕೆಲವೇ ಕೆಲವು ಮರಗಳ ಹಣ್ಣುಗಳನ್ನು ಸಂಗ್ರಹಿಸಿ ತಂದು ನೇರವಾಗಿ ಸೇವಿಸುವುದು ಮತ್ತು ಅಡುಗೆಯಲ್ಲೂ ಸಹ ಬಳಸಲಾಗುತ್ತದೆ.

ಅದರಲ್ಲೂ ಹಿಂದಿನ ಕಾಲದಲ್ಲಿ ಮಳೆಗಾಲದಲ್ಲಿ ಈ ಹಣ್ಣುಗಳನ್ನು ಸಾಂಬಾರು ಪದಾರ್ಥಗಳಲ್ಲಿ ಬಳಕೆ ಮಾಡುವ ಸಲುವಾಗಿ ಭರಣಿ, ಮಣ್ಣಿನ ಮಡಿಕೆಯಲ್ಲಿ ಉಪ್ಪಿನೊಳಗೆ ಹಾಳಾಗದಂತೆ ಸಂಗ್ರಹಿಸಿಟ್ಟು ಬಳಸಿಕೊಳ್ಳುತ್ತಿದ್ದರು. ಜೊತೆಗೆ ಮಿಡಿ ಮಾವಿನ ಕಾಯಿಗಳನ್ನು ಉಪ್ಪಿನಕಾಯಿ ಹಾಕಿ ಮಳೆಗಾಲದಲ್ಲಿ ಬಳಸಿಕೊಳ್ಳುತ್ತಿದ್ದರು. ಇದು ಇವತ್ತಿಗೂ ಮುಂದುವರೆದಿದೆ. ಹೀಗಾಗಿ ಕಾಡುಮಾವಿನ ಹಣ್ಣುಗಳು ಮಲೆನಾಡಿಗರ ಪಾಲಿಗೆ ಕಲ್ಪವೃಕ್ಷವೇ. ಇದನ್ನು ಉಪ್ಪಿನಕಾಯಿ, ತಿನ್ನಲು ಅಲ್ಲದೆ, ಸಾರು, ಹುಳಿ ಹೀಗೆ ವಿವಿಧ ಖಾದ್ಯಗಳಿಗೆ ಬಳಕೆ ಮಾಡುವುದು ಈಗಲೂ ರೂಢಿಯಲ್ಲಿದೆ.

ಮೊದಲೆಲ್ಲ ಈ ಮಾವಿನ ಹಣ್ಣುಗಳಿಂದಲೇ ಜನರು ತರಕಾರಿ ಸಮಸ್ಯೆ ನೀಗಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚಿಗಿನ ದಿನಗಳಲ್ಲಿ ಕಾಡು ಮಾವಿನ ಮರಗಳು ನಾಶವಾಗುತ್ತಿವೆ. ಮತ್ತೊಂದೆಡೆ ಪರಿಸರದ ಮೇಲಾಗುತ್ತಿರುವ ಪರಿಣಾಮಗಳಿಂದಲೋ ಮೊದಲಿನಷ್ಟು ಫಸಲುಗಳು ಬರುತ್ತಿಲ್ಲ. ದನಿಯಾ, ಜೀರಿಗೆ ಹೀಗೆ ವಿವಿಧ ಸುವಾಸನೆಯಿಂದ ಕೂಡಿರುವ ಈ ಹಣ್ಣುಗಳು ರಾಸಾಯನಿಕ ಮುಕ್ತ ಮತ್ತು ಹೆಚ್ಚು ಜೀವಸತ್ವ ಹೊಂದಿದ ಹಣ್ಣುಗಳಾಗಿವೆ. ಈ ಮರ ಬೆಳೆಯುವುದರಿಂದ ಕೊಯ್ಲು ಮಾಡುವುದು ಕಷ್ಟ. ಮಾಗಿ ನೆಲಕ್ಕೆ ಬಿದ್ದಾಗ ಹಣ್ಣುಗಳನ್ನು ತರಬೇಕಾಗುತ್ತದೆ.

ಇವತ್ತಿಗೂ ಮಲೆನಾಡಿನ ಕಾಡುಗಳಲ್ಲಿ ಹೆಜ್ಜೆ ಹಾಕಿದರೆ ಮಾವಿನ ಮರಗಳ ಕೆಳಗೆ ಹರಡಿ ಬಿದ್ದಿರುವ ಹಣ್ಣುಗಳು ಕಾಣ ಸಿಗುತ್ತವೆ. ಕೆಲವೆಡೆ ಹಣ್ಣುಗಳನ್ನು ಪ್ರಾಣಿಗಳು ತಿಂದರೆ, ಉಳಿದಂತೆ ಕೊಳೆತು ಭೂಮಿ ಸೇರಿತ್ತವೆ. ಇನ್ನೂ ಕೆಲವರು ಈ ಹಣ್ಣುಗಳನ್ನು ಪಟ್ಟಣಕ್ಕೆ ತಂದು ಮಾರಾಟ ಮಾಡುತ್ತಾರೆ. ಈ ಹಣ್ಣುಗಳ ಬಳಕೆಯ ಬಗ್ಗೆ ಗೊತ್ತಿರುವವರು ಖರೀದಿ ಮಾಡಿ ಬಳಸುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಕಾಡುಮಾವು ಮಲೆನಾಡಿನಲ್ಲಿ ದೊರೆಯುವ ಪ್ರಮುಖ ಹಣ್ಣಾಗಿದ್ದು, ಬಳಕೆ ಮಾಡಿದವರಿಗಷ್ಟೆ ಇದರ ಮಹತ್ವ ತಿಳಿಯಲಿದೆ ಎನ್ನುವುದಂತೂ ಸತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+