ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಸುತ್ತ 'ಸೈಕೊಫ್ಯಾಂಟ್ಸ್'; ಯಾರಿದ್ದಾರೆ ಆ ಟೀಮ್‌ನಲ್ಲಿ?

|
Google Oneindia Kannada News

ಇತ್ತೀಚೆಗೆ ಬಹಳಷ್ಟು ರಾಜಕೀಯ ನಾಯಕರು ಕಾಂಗ್ರೆಸ್ ತೊರೆದುಹೋಗಿದ್ದಾರೆ. ಕೆಲ ಹಿರಿಯ ನಾಯಕರು ಪಕ್ಷ ಬಿಟ್ಟು ಹೋಗಿದ್ದು ಸಾಕಷ್ಟು ಸುದ್ದಿಯಾಗಿದೆ. ಗುಲಾಂ ನಬಿ ಆಜಾದ್ ಮೊನ್ನೆಮೊನ್ನೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡುವಾಗ ರಾಹುಲ್ ಗಾಂಧಿ ವಿರುದ್ಧ ನೇರಾನೇರ ವಾಗ್ದಾಳಿ ಮಾಡಿ ಹೋಗಿದ್ದರು.

ರಾಹುಲ್ ಗಾಂಧಿ ಸುತ್ತ ಅನನಭವಿ ಸೈಕೊಫ್ಯಾಂಟ್‌ಗಳ ತಂಡ ಸೇರಿಕೊಂಡಿದೆ. ಈ ತಂಡದಲ್ಲಿ ಪಿಎಗಳು, ಸೆಕ್ಯೂರಿಟಿ ಗಾರ್ಡ್‌ಗಳಿದ್ದು ಎಲ್ಲಾ ನಿರ್ಧಾರಗಳನ್ನು ಈ ಸೈಕೊಫ್ಯಾಂಟ್‌ಗಳೇ ತೆಗೆದುಕೊಳ್ಳುವುದು ಎಂದು ಗುಲಾಂ ನಬಿ ಆಜಾದ್ ಖಂಡತುಂಡವಾಗಿ ಆಪಾದನೆ ಮಾಡಿದ್ದರು.

ಯಾರಾಗ್ತಾರೆ ಕಾಂಗ್ರೆಸ್ ಅಧ್ಯಕ್ಷರು: ರಾಹುಲ್ ಗಾಂಧಿ ಹೊರತೂ ಯಾರಿಲ್ಲವೇ?ಯಾರಾಗ್ತಾರೆ ಕಾಂಗ್ರೆಸ್ ಅಧ್ಯಕ್ಷರು: ರಾಹುಲ್ ಗಾಂಧಿ ಹೊರತೂ ಯಾರಿಲ್ಲವೇ?

ಇಲ್ಲಿ ಸೈಕೊಫ್ಯಾಂಟ್ಸ್ ಎಂದರೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಖಸ್ತುತಿ ಮಾಡುವವರು. ಅಂದರೆ ಹೊಗಳುಭಟ್ಟರ ಪಡೆ. ಅವರ ಸುತ್ತ ಇರುವ ಜನರು ರಾಹುಲ್ ಗಾಂಧಿಯನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತಿದ್ದಾರೆ ಎಂಬುದು ಗುಲಾಂ ನಬಿ ಆಜಾದ್ ಮಾತಿನ ಅರ್ಥ.

ಆಜಾದ್ ರಾಜೀನಾಮೆಗೆ ಎರಡು ದಿನ ಮುಂಚೆ ಕಾಂಗ್ರೆಸ್ ತೊರೆದಿದ್ದ ಜೈವೀರ್ ಶೆರ್ಗಿಲ್ ಕೂಡ ಬಹುತೇಕ ಇಂಥದೇ ಆರೋಪ ಮಾಡಿದ್ದರು. ಪಿಎಗಳು ಮತ್ತು ಒಎಸ್‌ಡಿಗಳು ಹಾಗು ಕೆಲ ಆಯ್ದ ನಾಯಕರು ಪಕ್ಷವನ್ನು ನಡೆಸುತ್ತಿದ್ದಾರೆ ಎಂದು ಆಗ ರಾಷ್ಟ್ರೀಯ ವಕ್ತಾರರಾಗಿದ್ದ ಶೆರ್ಗಿಲ್ ಹೇಳಿದ್ದರು.

ಬಂಡಾಯ ಮತ್ತು ರಾಜೀನಾಮೆ- ಗುಲಾಂ ನಬಿ ಆಜಾದ್ ರಾಜಕೀಯ ಹಾದಿಬಂಡಾಯ ಮತ್ತು ರಾಜೀನಾಮೆ- ಗುಲಾಂ ನಬಿ ಆಜಾದ್ ರಾಜಕೀಯ ಹಾದಿ

ಗುಲಾಂ ನಬಿ ಆಜಾದ್, ಜೈವೀರ್ ಶೆರ್ಗಿಲ್ ಮಾತ್ರವಲ್ಲ ಇನ್ನೂ ಅನೇಕರು ರಾಹುಲ್ ಗಾಂಧಿ ಸುತ್ತಮುತ್ತಲಿನ ಜನರ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಿದೆ. ಅಷ್ಟಕ್ಕೂ ರಾಹುಲ್ ಗಾಂಧಿಯನ್ನು ಆವರಿಸಿಕೊಂಡಿರುವ ಈ 'ಕೋಟೆರಿ'ಯಲ್ಲಿ ಯಾರಿದ್ದಾರೆ?

ಕೆಬಿ ಬೈಜು

ಕೆಬಿ ಬೈಜು

ರಾಹುಲ್ ಗಾಂದಿ ಮತ್ತು ಬೈಜು ನಡುವಿನ ಪರಿಚಯ ಮತ್ತು ನಂಟು 1991ರಿಂದಲೂ ಇದೆ. ರಾಹುಲ್ ಗಾಂಧಿಯ ಬಹಳ ನಿಷ್ಠಾವಂತ ಬಂಟರಲ್ಲಿ ಕೆ.ಬಿ. ಬೈಜು ಪ್ರಮುಖರು. ರಾಹುಲ್ ಗಾಂಧಿಗೆ ಹಿಂದೆ ನೀಡಲಾಗಿದ್ದ ಎಸ್‌ಪಿಜಿ ಭದ್ರತಾ ತಂಡದ ಸದಸ್ಯರಾಗಿದ್ದವರು ಇವರು. ರಾಹುಲ್ ಗಾಂಧಿ 2007ರಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾದಾಗ ಅವರ ಆಪ್ತ ವಲಯದಲ್ಲಿ ಇದ್ದವರು.

ಈಗಲೂ ರಾಹುಲ್ ಗಾಂಧಿಯ ಭದ್ರತೆ, ಸಂಚಾರ, ಪ್ರಯಾಣ ಇತ್ಯಾದಿ ಎಲ್ಲಾ ವ್ಯವಸ್ಥೆಯನ್ನು ಬೈಜುವೇ ನೋಡಿಕೊಳ್ಳುವುದು. ಹೀಗಾಗಿ, ರಾಹುಲ್ ಗಾಂಧಿಗೆ ಬೈಜು ನೆಚ್ಚಿನ ಬಂಟ ಎನಿಸಿದ್ದಾರೆ.

ಗುಲಾಂ ನಬಿ ಆಜಾದ್ ಮೊದಲಾದವರು ರಾಹುಲ್ ಗಾಂಧಿ ತಂಡದಲ್ಲಿ ಸೆಕ್ಯೂರಿಟಿ ಗಾರ್ಡ್ ಇದ್ದಾರೆ ಎಂದು ಹೇಳಿದ್ದು ಬಹುಶಃ ಬೈಜು ಬಗ್ಗೆ ಇರಬಹುದು.

ಅಲಂಕಾರ್ ಸವಾಯಿ

ಅಲಂಕಾರ್ ಸವಾಯಿ

ರಾಹುಲ್ ಗಾಂಧಿಯ ದಿನನಿತ್ಯ ಚಟುವಟಿಕೆಗಳನ್ನು ನೋಡಿಕೊಳ್ಳುವ ಮತ್ತು ಅವರ ವೈಯಕ್ತಿಕ ಸಿಬ್ಬಂದಿಯ ಪ್ರಮುಖ ಸದಸ್ಯರಾಗಿರುವವರು ಅಲಂಕಾರ್ ಸವಾಯಿ. ಐಸಿಐಸಿಐ ಬ್ಯಾಂಕ್‌ನ ಮಾಜಿ ಅಧಿಕಾರಿಯಾದ ಅಲಂಕಾರ್ ಸವಾಯಿ ರಾಹುಲ್ ಗಾಂಧಿಯ ಸೋಷಿಯಲ್ ಮೀಡಿಯಾ ಖಾತೆಗಳನ್ನು ಒಂದು ಕಾಲದಲ್ಲಿ ನಿಭಾಯಿಸುತ್ತಿದ್ದವರು.

ರಾಹುಲ್ ಗಾಂಧಿಯನ್ನು ಭೇಟಿಯಾಗಬೇಕೆಂದರೆ ಮೊದಲು ಅಲಂಕಾರ್ ಸವಾಯಿಯನ್ನು ದಾಟಿ ಹೋಗಬೇಕು. ಅಷ್ಟು ಸುಲಭಕ್ಕೆ ರಾಹುಲ್ ಭೇಟಿ ಸಾಧ್ಯವಿಲ್ಲ. ಹೀಗಾಗಿ ಅನೇಕ ಹಿರಿಯ ನಾಯಕರಿಗೆ ಅಲಂಕಾರ್ ಸವಾಯ್ ಎಂದರೆ ಸಹ್ಯ ಅಲ್ಲ.

ರಾಹುಲ್ ಗಾಂಧಿಯ ಬಹುತೇಕ ರಾಜಕೀಯ ಕಾರ್ಯಕ್ರಮಗಳಿಗೆ ಜೊತೆಯಲ್ಲಿ ಅಲಂಕಾರ್ ಕೂಡ ಹೋಗುತ್ತಾರೆ. ಮಾಧ್ಯಮಗಳೊಂದಿಗೆ ರಾಹುಲ್ ಮಾತನಾಡುವಾಗ ಅಲಂಕಾರ್ ಸಹಾಯಕರಾಗಿರುತ್ತಾರೆ.

ಕಾನಿಷ್ಕ ಸಿಂಗ್

ಕಾನಿಷ್ಕ ಸಿಂಗ್

ಅಮೆರಿಕದಲ್ಲಿ ಎಂಬಿಎ ಓದಿರುವ ಕಾನಿಷ್ಕ ಸಿಂಗ್ 2003ರಲ್ಲಿ ದೊಡ್ಡ ಕೆಲಸ ತೊರೆದು ಭಾರತದಲ್ಲಿ ರಾಜಕೀಯ ಜೀವನ ಆರಂಭಿಸಿದರು. ಕಾಂಗ್ರೆಸ್ ಸೇರಿದ ಅವರು ಮೊದಲು ಶೀಲಾ ದೀಕ್ಷಿತ್ ಜೊತೆ ಕೆಲಸ ಮಾಡಿದರು. 2004ರಲ್ಲಿ ಅವರು ಸೋನಿಯಾ ಗಾಂಧಿಯನ್ನು ಅಮೆರಿಕದ ರಾಜಕಾರಣಿ ಜಾನ್ ಕೆರಿಗೆ ಹೋಲಿಕೆ ಮಾಡಿ, ಗಾಂಧಿ ಗೆಲುವಿನ ಭವಿಷ್ಯ ನುಡಿದಿದ್ದರು. ಆಗಿನಿಂದಲೂ ಅವರು ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಬಹಳ ಮಂದಿ ಕಾನಿಷ್ಕಾ ಸಿಂಗ್‌ರನ್ನು ರಾಹುಲ್ ಗಾಂಧಿಯ ಸ್ನೇಹಿತ ಎಂದೇ ಪರಿಗಣಿಸುತ್ತಾರೆ.

ಸಚಿನ್ ರಾವ್

ಸಚಿನ್ ರಾವ್

ಕಾನಿಷ್ಕ ಸಿಂಗ್‌ರಂತೆ ಸಚಿನ್ ರಾವ್ ಕೂಡ ಅಮೆರಿಕದಲ್ಲಿ ಓದಿದವರು. ಮಿಶಿಗನ್ ಬಿಸಿನೆಸ್ ಸ್ಕೂಲ್‌ನಲ್ಲಿ ಎಂಬಿಎ ಓದಿದ ಇವರು ಸದ್ಯ ಸಿಬ್ಬಂದಿ ತರಬೇತಿಯ ಉಸ್ತುವಾರಿ ಆಗಿದ್ಧಾರೆ. ಹಿಂದೆ ಯುವ ಕಾಂಗ್ರೆಸ್ ಮತ್ತು ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಅನ್ನು ಇವರು ಮುನ್ನಡೆಸಿದ್ದರು.

2007-09ರಲ್ಲಿ ಯೂತ್ ಕಾಂಗ್ರೆಸ್ ಮತ್ತು ವಿದ್ಯಾರ್ಥಿ ಕಾಂಗ್ರೆಸ್ ಸಂಘಟನೆಗಳಿಗೆ ಮೊದಲ ಬಾರಿಗೆ ಆಂತರಿಕ ಚುನಾವಣೆಗಳು ನಡೆದಿದ್ದವು. ಅದರ ಹಿಂದಿನ ಐಡಿಯಾ ಸಚಿನ್ ರಾವ್ ಅವರದ್ದು.

ಕೆ ರಾಜು

ಕೆ ರಾಜು

ಆಂಧ್ರದ ಮಾಜಿ ಐಎಎಸ್ ಅಧಿಕಾರಿ ಕೆ ರಾಜು 2009ರಿಂದಲೂ ಕಾಂಗ್ರೆಸ್ ಜೊತೆ ಇದ್ದಾರೆ. ವೈಎಸ್ ರಾಜಶೇಖರ್ ರೆಡ್ಡಿ ಮೂಲಕ ಕೈ ಪಾಳಯ ಪ್ರವೇಶಿಸಿದ್ದ ರಾಜು ಇದೀಗ ರಾಹುಲ್ ಗಾಂಧಿಯ ಮುಖ್ಯ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಜಾತಿ ರಾಜಕಾರಣ, ಸಾಮಾಜಿಕ ಕಲ್ಯಾಣ, ಅಲ್ಪಸಂಖ್ಯಾತ ಇತ್ಯಾದಿ ವಿಚಾರಗಳಲ್ಲಿ ರಾಹುಲ್ ಗಾಂಧಿಗೆ ನೆರವಾಗುವುದು ಇವರೆಯೇ.

ಪ್ರವೀಣ್ ಚಕ್ರವರ್ತಿ
ಇವರೂ ಕೂಡ ಅಮೆರಿಕದ ವಾರ್ಟನ್‌ನಲ್ಲಿ ಎಂಬಿಎ ಮಾಡಿದ್ದಾರೆ. ಸದ್ಯ ಕಾಂಗ್ರೆಸ್ ಪಕ್ಷದ ಡಾಟಾ ಅಂಡ್ ಅನಾಲಿಟಿಕ್ಸ್ ವಿಭಾಗದ ಅಧ್ಯಕ್ಷರಾಗಿರುವ ಇವರು ಆರ್ಥಿಕ ನೀತಿ ವಿಚಾರಗಳಲ್ಲಿ ರಾಹುಲ್ ಗಾಂಧಿಗೆ ಮಾಹಿತಿ ನೀಡುತ್ತಿರುತ್ತಾರೆ.

2019ರಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ ವೇತನ ಖಾತ್ರಿಪಡಿಸುವ ನ್ಯಾಯ್ ಯೋಜನೆಯ ಹಿಂದಿನ ಪ್ರಮುಖ ತಲೆಗಳಲ್ಲಿ ಪ್ರವೀಣ್ ಚಕ್ರವರ್ತಿಯದೂ ಒಂದು.

ವೇಣುಗೋಪಾಲ್, ಸುರ್ಜೆವಾಲ

ವೇಣುಗೋಪಾಲ್, ಸುರ್ಜೆವಾಲ

ಕೆಸಿ ವೇಣುಗೋಪಾಲ್ ನಮ್ಮ ರಾಜ್ಯದ ಮಂದಿಗೆ ಚಿರಪರಿಚಿತರೇ. ಕಾಂಗ್ರೆಸ್‌ನ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಉಸ್ತುವಾರಿಯಾಗಿದ್ದಾರೆ. ಕೇರಳದ ಕೆ.ಸಿ. ವೇಣುಗೋಪಾಲ್ ರಾಹುಲ್ ಗಾಂಧಿಯ ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರು.

ಇನ್ನು, ರಣದೀಪ್ ಸುರ್ಜೆವಾಲ ಕೂಡ ರಾಜಕೀಯದಲ್ಲಿ ಅನುಭವಿ. 2017ರಿಂದ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಹರ್ಯಾಣದ ಇವರು ಕಳೆದ ಎರಡು ಚುನಾವಣೆಗಳಲ್ಲಿ ಸೋಲನುಭವಿಸಿದರೂ ಅವರನ್ನು ರಾಜಸ್ಥಾನದಿಂದ ರಾಜ್ಯಸಭೆಗೆ ಆರಿಸಿ ಕಳುಹಿಸಲಾಗಿದೆ.

ತಮಿಳುನಾಡಿನ ಸಂಸದ ಮಾಣಿಕಂ ಠಾಗೋರ್ ತೆಲಂಗಾಣ ಕಾಂಗ್ರೆಸ್‌ನ ಕಾರ್ಯದರ್ಶಿ ಉಸ್ತುವಾರಿಯಾಗಿದ್ದಾರೆ. ರಾಹುಲ್ ಗಾಂಧಿ ಹೆಚ್ಚು ನಂಬುವ ನಾಯಕರಲ್ಲಿ ಇವರೂ ಇದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Many leaders have left Congress alleging sycophants coterie of Rahul Gandhi. Know who are all in the Rahul Gandhi's core team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X