ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್ ಮಸೂದೆಗೆ ಯಾಕೆ ವಿರೋಧ? ರೈತರು, ಜನಸಾಮಾನ್ಯರ ಆತಂಕವೇನು?

|
Google Oneindia Kannada News

ನವದೆಹಲಿ, ಆಗಸ್ಟ್ 8: ಕೇಂದ್ರ ಸರಕಾರ ಮತ್ತೊಮ್ಮೆ ವಿದ್ಯುತ್ ಮಸೂದೆ ಹಿಡಿದು ಕೂತಿದೆ. ಸೋಮವಾರ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಮಂಡಿಸಲಿದೆ.

ಶಕ್ತಿ ಸಂರಕ್ಷಣೆ ತಿದ್ದುಪಡಿ ಮಸೂದೆ ಎಂದೂ ಕರೆಯಲಾಗುವ ಈ ಮಸೂದೆಯು ಕಾಯ್ದೆಯಾದರೆ ವಿದ್ಯುಚ್ಛಕ್ತಿ ವಿತರಣಾ ವಲಯಕ್ಕೆ ಪ್ರವೇಶಿಸಲು ಖಾಸಗಿ ಕಂಪನಿಗಳಿಗೆ ಮುಕ್ತ ಅವಕಾಶ ಸಿಗಲಿದೆ. ಮೂಲ ಎಲೆಕ್ಟ್ರಿಸಿಟಿ ಕಾಯ್ದೆಯ 62ನೇ ಸೆಕ್ಷನ್ ಸೇರಿದಂತೆ ಕೆಲ ಕಡೆ ತಿದ್ದುಪಡಿಗಳನ್ನು ತರಲಾಗಿದೆ.

ವಿದ್ಯುತ್‌ ವ್ಯತ್ಯಯ ಶೇ.50ರಷ್ಟು ಕಡಿತ ಮಾಡಿದ ಬೆಸ್ಕಾಂ!ವಿದ್ಯುತ್‌ ವ್ಯತ್ಯಯ ಶೇ.50ರಷ್ಟು ಕಡಿತ ಮಾಡಿದ ಬೆಸ್ಕಾಂ!

ಕುತೂಹಲವೆಂದರೆ, ಒಂದೇ ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ಡಿಸ್ಕಾಂಗಳು ಕಾರ್ಯನಿರ್ವಹಿಸಲು ಈ ಮಸೂದೆ ಅವಕಾಶ ಮಾಡಿಕೊಡುತ್ತದೆ. ಹಾಗೆಯೇ ವರ್ಷಕ್ಕೊಮ್ಮೆ ದರ ಪರಿಷ್ಕರಣೆಗೆ ಅವಕಾಶ ನೀಡಲಾಗುತ್ತದೆ.

ಇದೇ ವೇಳೆ,ವಿದ್ಯುತ್ ತಿದ್ದುಪಡಿ ಮಸೂದೆಗೆ ಭಾರೀ ವಿರೋಧವೂ ವ್ಯಕ್ತವಾಗಿದೆ. ವಿರೋಧದ ಮದ್ಯೆ ಲೋಕಸಭೆಯಲ್ಲಿ ಮಸೂದೆಯ ಮಂಡನೆಯಾಗಿದೆ. ಹಾಗೆಯೇ, ಮಸೂದೆಯ ಪರಾಮರ್ಶೆಗೆ ಸ್ಥಾಯಿ ಸಮಿತಿಯೊಂದಕ್ಕೆ ಕಳುಹಿಸಿಕೊಡಲಾಗಿದೆ.

ಪಂಜಾಬ್‌ ನಂತರ ಈಗ ಜಾರ್ಖಾಂಡ್‌ನಲ್ಲೂ ಬಡವರಿಗೆ ಉಚಿತ ವಿದ್ಯುತ್‌ಪಂಜಾಬ್‌ ನಂತರ ಈಗ ಜಾರ್ಖಾಂಡ್‌ನಲ್ಲೂ ಬಡವರಿಗೆ ಉಚಿತ ವಿದ್ಯುತ್‌

ಕೇಂದ್ರ ಸರಕಾರ ಬಹಳ ಆಸಕ್ತಿ ವಹಿಸಿ ರೂಪಿಸಿರುವ ವಿದ್ಯುತ್ ಮಸೂದೆಯಲ್ಲಿ ಏನಿದೆ? ಯಾಕೆ ಇಷ್ಟು ವಿರೋಧ ಇದೆ? ಮಸೂದೆ ಜಾರಿಯಾದರೆ ಯಾರಿಗೆ ಲಾಭ, ನಷ್ಟ, ಇತ್ಯಾದಿ ವಿವರ ಇಲ್ಲಿದೆ.

ವಿದ್ಯುತ್ ತಿದ್ದುಪಡಿ ಮಸೂದೆ

ವಿದ್ಯುತ್ ತಿದ್ದುಪಡಿ ಮಸೂದೆ

ಕೇಂದ್ರ ಸರಕಾರಕ್ಕೆ ಭಾರೀ ನಷ್ಟ ತರುತ್ತಿರುವ ಕ್ಷೇತ್ರಗಳಲ್ಲಿ ವಿದ್ಯುತ್ ವಿತರಣೆಯೂ ಒಂದು. ಇಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರಕಾರ ಖಾಸಗೀಕರಣ ಮಾಡುತ್ತಿದೆ. ಸರಕಾರಿ ಸ್ವಾಮ್ಯದ ಡಿಸ್ಕಾಂಗಳ ಜೊತೆಗೆ ಖಾಸಗಿ ವಿದ್ಯುತ್ ವಿತರಣಾ ಕಂಪನಿಗಳಿಗೂ ಅವಕಾಶ ಮಾಡಿಕೊಡಲಾಗುವಂತೆ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆ ರೂಪಿಸಲಾಗಿದೆ.

ಕನಿಷ್ಠ ವಿದ್ಯುತ್ ದರ ಮತ್ತು ಗರಿಷ್ಠ ವಿದ್ಯುತ್ ದರ ನಿಗದಿ ಮಾಡಲಾಗುತ್ತದೆ. ಕನಿಷ್ಠ ವಿದ್ಯುತ್ ದರ ನಿಗದಿ ಮಾಡುವುದರಿಂದ ಡಿಸ್ಕಾಂಗಳು ತೀರಾ ಹೆಚ್ಚು ಬೆಲೆ ಇಳಿಕೆ ಮಾಡಲು ಅವಕಾಶ ಇರುವುದಿಲ್ಲ. ಹಾಗೆಯೇ ಗರಿಷ್ಠ ದರ ನಿಗದಿಯಿಂದಾಗಿ ನಿಗದಿತ ಮಟ್ಟಕ್ಕಿಂತ ಹೆಚ್ಚು ದರ ಏರಿಸಲು ಸಾಧ್ಯವಾಗುವುದಿಲ್ಲ.

ಡಿಸ್ಕಾಂಗಳು (ವಿದ್ಯುತ್ ವಿತರಣಾ ಕಂಪನಿಗಳು) ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಸಾಕಷ್ಟು ಹಣ ಬಾಕಿ ಉಳಿಸಿಕೊಂಡಿವೆ. ಇದನ್ನು ತಪ್ಪಿಸುವ ಉದ್ದೇಶದಿಂದ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗಿದೆ. ಅದರಂತೆ ಡಿಸ್ಕಾಂ ಸಂಸ್ಥೆಯು ವಿದ್ಯುತ್ ಉತ್ಪಾದನಾ ಘಟಕಕ್ಕೆ ನಿಗದಿತ ಪ್ರಮಾಣದಲ್ಲಿ ಬ್ಯಾಂಕ್ ಗ್ಯಾರಂಟಿಯನ್ನು ನೀಡದೇ ಹೋದರೆ ಆ ಡಿಸ್ಕಾಂಗೆ ವಿದ್ಯುತ್ ಪೂರೈಕೆ ನಿಲ್ಲಿಸುವ ಅಧಿಕಾರವನ್ನು ಲೋಡ್ ಡಿಸ್‌ಪ್ಯಾಚ್ ಸೆಂಟರ್‌ಗಳಿಗೆ ಇರಲಿದೆ.

ಹಾಗೆಯೇ, ಈ ತಿದ್ದುಪಡಿ ಮಸೂದೆಯು ವಿದ್ಯುಚ್ಛಕ್ತಿ ಪ್ರಾಧಿಕಾರಗಳಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ. ಸಿವಿಲ್ ಕೋರ್ಟ್‌ಗೆ ಇರುವ ಅಧಿಕಾರ ಈ ಪ್ರಾಧಿಕಾರಗಳಿಗೆ ಸಿಗುತ್ತದೆ. ಅಂದರೆ ಯಾವುದಾದರೂ ವ್ಯಾಜ್ಯದಲ್ಲಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಇವುಗಳಿಗೆ ಇರುತ್ತದೆ.

ನಿಯಮಿತವಾಗಿ ವಿದ್ಯುತ್ ದರಗಳನ್ನು ಪರಿಷ್ಕರಿಸಲು ಪ್ರಾಧಿಕಾರಗಳಿಗೆ ಹಚ್ಚಿನ ಅಧಿಕಾರ ನೀಡಲಾಗುತ್ತದೆ. ಡಿಸ್ಕಾಂ ಪರವಾನಿಗೆಗೆ ಯಾರಾದರೂ ಅರ್ಜಿ ಸಲ್ಲಿಸಿದಲ್ಲಿ ಅದನ್ನು ಪ್ರಾಧಿಕಾರ ನಿರ್ಧರಿಸಲು ವಿಫಲವಾದರೆ ಆ ಅರ್ಜಿಯನ್ನು ಊರ್ಜಿತ ಎಂದು ಪರಿಗಣಿಸಲಾಗುತ್ತದೆ. ಅಂದರೆ ನಿಗದಿತ ಅವಧಿಯೊಳಗೆ ಅರ್ಜಿಯ ವಿಲೇವಾರಿ ಅಗದೇ ಇದ್ದಲ್ಲಿ ಅರ್ಜಿ ಸಲ್ಲಿಸಿದವರಿಗೆ ಡಿಸ್ಕಾಂ ಲೈಸೆನ್ಸ್ ಸಿಕ್ಕಂತೆಯೇ.

ಮಸೂದೆಗೆ ಯಾಕೆ ವಿರೋಧ?

ಮಸೂದೆಗೆ ಯಾಕೆ ವಿರೋಧ?

ಸರಕಾರಿ ಸ್ವಾಮ್ಯದ ಡಿಸ್ಕಾಂಗಳು ಪ್ರತಿಯೊಬ್ಬರಿಗೂ ವಿದ್ಯುತ್ ಪೂರೈಸುವ ಬಾಧ್ಯತೆ ಹೊಂದಿರುತ್ತವೆ. ಖಾಸಗಿ ಕಂಪನಿಗಳು ತಮ್ಮಿಚ್ಛೆಯ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶ ಪಡೆಯುತ್ತವೆ. ಹೆಚ್ಚು ಆದಾಯ ಬರುವ ಕೈಗಾರಿಕೆ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಮಾತ್ರ ಖಾಸಗಿಯವರು ವಿದ್ಯುತ್ ಪೂರೈಕೆ ಮಾಡುತ್ತಾರೆ ಎಂಬುದು ಅಖಿಲ ಭಾರತ ವಿದ್ಯುತ್ ಎಂಜಿನಿಯರ್‌ಗಳ ಒಕ್ಕೂಟ (ಎಐಪಿಇಎಫ್) ಛೇರ್ಮನ್ ಶೈಲೇಂದ್ರ ದುಬೇ ಆರೋಪ.

"ಆದಾಯ ತರುವ ಪ್ರದೇಶಗಳು ಸರಕಾರಿ ಡಿಸ್ಕಾಂಗಳ ಕೈ ಜಾರಲಿವೆ. ಆದಾಯ ಬರದ ಗ್ರಾಮೀಣ ಭಾಗಗಳಿಗೆ ಈ ಡಿಸ್ಕಾಂಗಳು ಸೀಮಿತವಾಗಬೇಕು. ಅಂತಿಮವಾಗಿ ಇವು ನಷ್ಟಕ್ಕೆ ದೂಡುತ್ತವೆ. ಕೊನೆಗೆ ವಿದ್ಯುತ್ ಉತ್ಪಾದಕರಿಂದ ಖರೀದಿಸು ಇವುಗಳ ಬಳಿಲ ಹಣ ಇಲ್ಲದಂತಾಗುತ್ತದೆ" ಎಂದು ದುಬೇ ಹೇಳುತ್ತಾರೆ.

"ಗ್ರಾಹಕರಿಗೆ ನಿಗದಿ ಮಾಡುವ ವಿದ್ಯುತ್ ದರದಲ್ಲಿ ವಿದ್ಯುತ್ ಖರೀದಿ ಒಪ್ಪಂದದ ವೆಚ್ಚವೂ ಇರುತ್ತದೆ. ಈ ಒಪ್ಪಂದಗಳು ೨೫ ವರ್ಷಗಳವರೆಗೆ ಇರುವುದರಿಂದ ವಿದ್ಯುತ್ ದರವನ್ನು ಇಳಿಸುವ ಪ್ರಮೇಯವೇ ಇರುವುದಿಲ್ಲ. ಈ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಇರುತ್ತದೆ, ಅದರ ಪರಿಣಾಮವಾಗಿ ವಿದ್ಯುತ್ ದರ ಕಡಿಮೆ ಆಗುತ್ತದೆ ಎಂದು ಹೇಳುವುದು ಬರೀ ಸುಳ್ಳು ಭರವಸೆ ಮಾತ್ರ" ಎಂದು ದುಬೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಬ್ಸಿಡಿಗೆ ಸಂಚಕಾರ

ಸಬ್ಸಿಡಿಗೆ ಸಂಚಕಾರ

ವಿದ್ಯುತ್ ಮಸೂದೆ ಬಗ್ಗೆ ಇನ್ನೊಂದು ಗಂಭೀರ ಆರೋಪ ಎಂದರೆ ಕೃಷಿಕರಿಗೆ ಸರಕಾರ ನೀಡುತ್ತಿದ್ದ ವಿದ್ಯುತ್ ಸಬ್ಸಿಡಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು. ಸಬ್ಸಿಡಿಯನ್ನು ಕೈಬಿಡಲು ಸರಕಾರ ನಡೆಸಿರುವ ಹುನ್ನಾರ ಎಂದು ಹಲವು ರೈತ ಸಂಘಟನೆಗಳು ಆರೋಪಿಸುತ್ತಿವೆ.

ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಬ್ಸಿಡಿ ನೀಡಲಾಗುತ್ತಿದೆ. ಭಾಗ್ಯ ಜ್ಯೋತಿ, ಕುಠೀರ ಜ್ಯೋತಿ ಯೋಜನೆಗಳಿಗೆ ಸಬ್ಸಿಡಿ ಕೊಡಲಾಗುತ್ತಿದೆ. ಹಾಗೆಯೇ, ಸಣ್ಣ ಕೈಗಾರಿಕೆಗಳಿಗೂ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಈಗ ಸರಕಾರ ಕನಿಷ್ಠ ಮತ್ತು ಗರಿಷ್ಠ ದರ ನಿಗದಿ ಮಾಡುವ ಮೂಲಕ ಸಬ್ಸಿಡಿಯನ್ನು ಕೈಬಿಡುವ ಪ್ರಯತ್ನ ಮಾಡುತ್ತಿದೆ ಎಂದು ರೈತ ನಾಯಕರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಕ್ಷಾಂತರ ಜನರಿಂದ ಹೋರಾಟ

ಲಕ್ಷಾಂತರ ಜನರಿಂದ ಹೋರಾಟ

ಸರಕಾರ ಜಾರಿಗೆ ತರಲು ಹೊರಟಿರುವ ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರೈತ ಸಂಘಟನೆಗಳು ಮತ್ತು ವಿದ್ಯುತ್ ವಲಯದ ಉದ್ಯೋಗಿಗಳು ದೇಶಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.

ವಿದ್ಯುತ್ ವಲಯದಲ್ಲಿರುವ 27 ಲಕ್ಷ ಉದ್ಯೋಗಿಗಳು ಮತ್ತು ಎಂಜಿನಿಯರ್‌ಗಳು ಖಾಸಗಿಕರಣ ವಿರೋಧಿಸಿ ಪ್ರತಿಭಟಿಸಲಿದ್ದಾರೆ. ಹಾಗೆಯೇ, ವರ್ಷದ ಹಿಂದೆ ಹಲವು ದಿನಗಳ ಕಾಲ ನಿರಂತರ ರೈತ ಪ್ರತಿಭಟನೆ ಆಯೋಜಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಕೂಡ ಪ್ರತಿಭಟನೆಗೆ ಮುಂದಾಗಿದೆ.

ರೈತ ಪ್ರತಿಭಟನೆ ನಡೆಸುವಾಗ ಕಿಸಾನ್ ಸಂಯುಕ್ತ ಮೋರ್ಚಾ ಮುಂದಿಟ್ಟಿದ್ದ ಬೇಡಿಕೆಗಳಲ್ಲಿ ವಿದ್ಯುತ್ ಮಸೂದೆ ಕೈಬಿಡುವುದೂ ಒಂದು. ಸರಕಾರ ಭರವಸೆ ಕೊಟ್ಟ ಕಾರಣಕ್ಕೆ ಪ್ರತಿಭಟನೆ ನಿಲ್ಲಿಸಿದ್ದೆವು. ಈಗ ಮತ್ತೆ ಸರಕಾರ ಮಸೂದೆ ಜಾರಿಗೆ ತರಲು ಹೊರಟಿದೆ. ಒಂದು ವೇಳೆ ಈ ಮಸೂದೆ ಮಂಡನೆಯಾದಲ್ಲಿ ಅಥವಾ ಜಾರಿಯಾದಲ್ಲಿ ಕೂಡಲೇ ದೇಶಾದ್ಯಂತ ಪ್ರತಿಭಟನೆ ಆರಂಭಿಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದೆ.

ಕಾಂಗ್ರೆಸ್, ಟಿಎಂಸಿ, ಡಿಎಂಕೆ ಹಾಗು ಎಡಪಕ್ಷಗಳು ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಿವೆ.

ಸಬ್ಸಿಡಿ ನಿಲ್ಲಲ್ಲ

ಸಬ್ಸಿಡಿ ನಿಲ್ಲಲ್ಲ

ವಿದ್ಯುತ್ ಸಚಿವ ಆರ್ ಕೆ ಸಿಂಗ್ ಈ ಮಸೂದೆಗೆ ಆಗುತ್ತಿರುವ ವಿರೋಧಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷಗಳು ಮಸೂದೆ ವಿರುದ್ಧ ತಪ್ಪು ಕಲ್ಪನೆಗಳನ್ನು ಜನರಲ್ಲಿ ಬಿತ್ತಿ ದಾರಿ ತಪ್ಪಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಹಾಗೆಯೇ, ರೈತರಿಗೆ ನೀಡುತ್ತಿರುವ ಸಬ್ಸಿಡಿಯನ್ನು ಕೈಬಿಡಲಾಗುತ್ತದೆ ಎಂಬ ಆರೋಪವನ್ನೂ ಆರ್ ಕೆ ಸಿಂಗ್ ತಳ್ಳಿಹಾಕಿದ್ದಾರೆ.

"ರೈತರಿಗೆ ಸದ್ಯ ನೀಡಲಾಗುತ್ತಿರುವ ಸಬ್ಸಿಡಿಯನ್ನು ಹಿಂಪಡೆಯುವ ಅವಕಾಶ ಈ ಮಸೂದೆಯಲ್ಲಿ ಇಲ್ಲ. ರೈತರಿಗೆ ಉಚಿತ ವಿದ್ಯುತ್ ಪೂರೈಕೆ ವ್ಯವಸ್ಥೆ ಮುಂದುವರಿಯುತ್ತದೆ. ಸಬ್ಸಿಡಿ ನಿಲ್ಲುವುದಿಲ್ಲ" ಎಂದು ವಿದ್ಯುತ್ ಸಚಿವರು ಸ್ಪಷ್ಟಪಡಿಸಿದ್ದಾರೆ.

"ಒಂದೇ ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ಡಿಸ್ಕಾಂ ಲೈಸೆನ್ಸ್ ನೀಡಲಾಗುತ್ತೆ ಎಂಬ ವಿಪಕ್ಷಗಳ ಆಕ್ಷೇಪದ ಬಗ್ಗೆ ಹೇಳುವುದಾದರೆ, ಇದು ೨೦೦೩ರ ಮೂಲ ಕಾನೂನಿನಲ್ಲೂ ಇಂಥದ್ದು ಇದೆ. ಅವರು ಸುಮ್ಮನೆ ಜನರ ದಾರಿ ತಪ್ಪಿಸುತ್ತಿದ್ದಾರೆ. ನಾವು ಎಲ್ಲಾ ರಾಜ್ಯಗಳು ಮತ್ತು ಸಂಬಂಧಿತರೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಇದು ಜನಪರ ಮತ್ತು ರೈತಪರ ಇರುವ ಮಸೂದೆಯಾಗಿದೆ" ಎಂದು ಆರ್ ಕೆ ಸಿಂಗ್ ಹೇಳಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Govt again brought Electricity Amendment Bill, causing furore among farmer organisations and power sector employees. Here is few highlights of this bill and oppositions view on it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X